ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ ಸಿ.ಡಿ ‘ಗುಮ್ಮ’

ಬಿಎಸ್‌ವೈಗೆ ಸೆಡ್ಡು ಹೊಡೆದ ಶಾಸಕರು * ಸದ್ಯದಲ್ಲೇ ಸಿ.ಡಿ ಬಿಡುಗಡೆ – ವಿಶ್ವನಾಥ್
Last Updated 14 ಜನವರಿ 2021, 19:31 IST
ಅಕ್ಷರ ಗಾತ್ರ

ಬೆಂಗಳೂರು: ಸಂಪುಟ ವಿಸ್ತರಣೆಯಲ್ಲಿ ಸ್ಥಾನ ಸಿಗದ ಬಿಜೆಪಿಯ ಕೆಲವು ಶಾಸಕರ ಆಕ್ರೋಶ ಗುರುವಾರ ಮತ್ತಷ್ಟು ತೀವ್ರ ಸ್ವರೂಪ ಪಡೆದಿದೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಗಂಭೀರ ಎಚ್ಚರಿಕೆಯ ಮಾತುಗಳಿಗೂ ಸೊಪ್ಪು ಹಾಕದೆ ಈ ಶಾಸಕರು ಸೆಡ್ಡು ಹೊಡೆದಿದ್ದಾರೆ.

ಈ ಮಧ್ಯೆ, ಯಡಿಯೂರಪ್ಪ ಅವರ ಕುರಿತ ಸಿ.ಡಿ ವಿಚಾರ ಪುನಃ ಮುನ್ನೆಲೆಗೆ ಬಂದಿದ್ದು, ಕಾಂಗ್ರೆಸ್‌ ನಾಯಕರು ಅದನ್ನು ‘ಅಸ್ತ್ರ’ವನ್ನಾಗಿ
ಬಳಸಿಕೊಳ್ಳಲು ಮುಂದಾಗಿದ್ದಾರೆ. ಸಿ.ಡಿ ತಮ್ಮ ಬಳಿ ಇದ್ದಿದ್ದರೆ ಉಪಮುಖ್ಯಮಂತ್ರಿ ಆಗುತ್ತಿದ್ದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದರೆ, ಸದ್ಯದಲ್ಲೇ ಸಿ.ಡಿ ಬಹಿರಂಗವಾಗಲಿದೆ ಎಂದು ವಿಧಾನಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಹೇಳಿದ್ದಾರೆ.

ವರಿಷ್ಠರಿಗೆ ದೂರು ನೀಡಲಿ: ಸಂಪುಟ ವಿಸ್ತರಣೆ ಕುರಿತಂತೆ ಶಾಸಕರ ಅಸಮಾಧಾನಗಳ ಬಗ್ಗೆ ದಾವಣಗೆರೆಯಲ್ಲಿ ಪ್ರತಿಕ್ರಿಯಿಸಿದ ಯಡಿಯೂರಪ್ಪ, ‘ಅತೃಪ್ತ ಶಾಸಕರು ನನ್ನ ವಿರುದ್ಧ ಮಾಡುತ್ತಿರುವ ಆರೋಪಗಳು ಸತ್ಯವಾಗಿದ್ದರೆ ಪಕ್ಷದ ಕೇಂದ್ರ ನಾಯಕರಿಗೆ ದೂರು ನೀಡಲಿ’ ಎಂದು ಸವಾಲು ಹಾಕಿದರು.

‘ನನ್ನ ಇತಿಮಿತಿಯಲ್ಲಿ ಸಂಪುಟ ವಿಸ್ತರಣೆ ಮಾಡಿದ್ದೇನೆ. ಕೇಂದ್ರದ ನಾಯಕರ ಅಪೇಕ್ಷೆಯಂತೆ ಒಂದು ಸ್ಥಾನವನ್ನು ಖಾಲಿ ಇಟ್ಟುಕೊಂಡಿದ್ದೇನೆ. ತಮ್ಮನ್ನು ಮಂತ್ರಿ ಮಾಡಿಲ್ಲ ಎಂದು 10–12 ಶಾಸಕರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಅವರು ಇಲ್ಲಿ ಆರೋಪ ಮಾಡುವ ಬದಲು ಕೇಂದ್ರದ ನಾಯಕರ ಬಳಿಗೆ ಹೋಗಿ ಮಾತನಾಡಲಿ. ಅವರಿಗೆ ಯಾರೂ ಅಡ್ಡಿ ಮಾಡುವುದಿಲ್ಲ. ಈ ರೀತಿ ಹೇಳಿಕೆ ಕೊಡುವ ಮೂಲಕ ಗೊಂದಲ ಸೃಷ್ಟಿಸಿ ವಾತಾವರಣ ಕೆಡಿಸುವ ಪ್ರಯತ್ನ ಮಾಡುವುದು ಪಕ್ಷದ ಶಿಸ್ತಿಗೆ ಧಕ್ಕೆ ತಂದಂತಾಗುತ್ತದೆ’ ಎಂದು ಹೇಳಿದರು.

‘ಮುಂದಿನ ಎರಡೂಕಾಲು ವರ್ಷಗಳ ಅವಧಿಯಲ್ಲಿ ಮುಖ್ಯಮಂತ್ರಿಯಾಗಿ ರಾಜ್ಯದ ಅಭಿವೃದ್ಧಿಗೆ ವಿಶೇಷ ಗಮನ ಕೊಡುತ್ತೇನೆ. ಅದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಕೇಂದ್ರದ ನಾಯಕರ ಆಶೀರ್ವಾದ ನನ್ನ ಮೇಲಿದೆ. ಹಣಕಾಸಿನ ಇತಿಮಿತಿಯಲ್ಲಿ ರೈತಪರ ಬಜೆಟ್‌ ನೀಡಲು ಪ್ರಯತ್ನಿಸುತ್ತೇನೆ’ ಎಂದೂ ಹೇಳಿದರು.

ಸಿ.ಡಿ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ, ‘ಏನೇ ಆರೋಪ ಮಾಡುವುದಿದ್ದರೂ ಕೇಂದ್ರದ ನಾಯಕರಿಗೆ ದೂರು ಕೊಡಲಿ’ ಎಂದು ಪುನರುಚ್ಚರಿಸಿದರು.

ಬಿಜೆಪಿಯಲ್ಲಿ ‘ಸನ್‌ಸ್ಟ್ರೋಕ್’: ವಿಧಾನಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ವಾಗ್ದಾಳಿ ಮುಂದುವರಿಸಿದ್ದು,‘ಬಿಜೆಪಿಯಲ್ಲಿ ಸನ್‌ಸ್ಟ್ರೋಕ್ (ಪುತ್ರಬಾಧೆ) ಆಗಿರುವ ಪರಿಣಾಮ ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವಸಿ.ಪಿ. ಯೋಗೇಶ್ವರ್‌ಗೆ ಸಚಿವ ಸ್ಥಾನ ನೀಡಲಾಗಿದೆ’ ಎಂದು ಕಿಡಿಕಾರಿದರು.

‘ವಿಜಯೇಂದ್ರ ಕಾರಣದಿಂದ ಯಡಿಯೂರಪ್ಪ ಅವರು ವಂಚನೆ ಆರೋಪಿ ಯೋಗೇಶ್ವರ್‌ಗೆ ಸಚಿವ ಸ್ಥಾನ ನೀಡಿರುವುದು ಸರಿಯಲ್ಲ. ನನಗೆ ಸಚಿವ ಸ್ಥಾನ ಕೊಡದಿರುವುದಕ್ಕೆ ಬೇಸರವಿಲ್ಲ. ಆದರೆ, ಭ್ರಷ್ಟಾಚಾರಿಗೆ ಸಚಿವ ಸ್ಥಾನ ನೀಡಿರುವುದು ಅಸಮಾಧಾನ ತಂದಿದೆ’ ಎಂದು ರಾಯಚೂರಿನಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

‘ರಾಜ್ಯದಲ್ಲಿ ಪ್ರಾದೇಶಿಕ ಪಕ್ಷಗಳು ಸನ್‌ಸ್ಟ್ರೋಕ್ ಹಾಗೂ ಫ್ಯಾಮಿಲಿ ಸ್ಟ್ರೋಕ್‍ನಿಂದ ಹಾಳಾಗಿವೆ. ಕಾಂಗ್ರೆಸ್ ಪಕ್ಷವೂ ಸನ್‍ ಸ್ಟ್ರೋಕ್‍ನಿಂದ ಹಾಳಾಗಿದೆ. ಸಮ್ಮಿಶ್ರ ಸರ್ಕಾರದಲ್ಲಿ ಕ್ಷಿಪ್ರಕ್ರಾಂತಿ ಮಾಡಿ 17 ಮಂದಿ ಹೊರಬಂದೆವು. ಈಗ ನಡೆಯುತ್ತಿರುವ ಬೆಳವಣಿಗೆಗಳಿಂದ ತೀವ್ರ ಬೇಸರವಾಗಿದೆ’ ಎಂದರು.

‘ಸದ್ಯದಲ್ಲೇ ಸಿ.ಡಿ.ಯೊಂದನ್ನು ಬಿಡುಗಡೆ ಮಾಡಲಾಗುತ್ತಿದೆ. ಯಾರು ಬಿಡುಗಡೆ ಮಾಡುತ್ತಾರೆ ಎನ್ನುವುದು ಗುಟ್ಟಾಗಿದೆ. ಸಿ.ಡಿ ಬಿಡುಗಡೆ ನಂತರ ಸತ್ಯಾಸತ್ಯತೆ ಬಹಿರಂಗವಾಗಲಿದೆ’ ಎಂದೂ ಅವರು ಹೇಳಿದರು.

ದೆಹಲಿಗೆ ರೇಣುಕಾಚಾರ್ಯ: ಮಂತ್ರಿಸ್ಥಾನ ಸಿಗದೇ ಸಿಟ್ಟಿಗೆದ್ದಿರುವ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರು ವರಿಷ್ಠರನ್ನು ಭೇಟಿ ಮಾಡಲು ದೆಹಲಿಗೆ ತೆರಳಿದರು.‘ನೂತನ ಸಚಿವರಾಗಿ ಪದಗ್ರಹಣ ಮಾಡಿರುವವರೊಬ್ಬರು ಈ ಹಿಂದೆ ಭ್ರಷ್ಟಾಚಾರ ಮಾಡಿರುವ ದಾಖಲೆ ಇದ್ದು, ಅವುಗಳನ್ನು ವರಿಷ್ಠರಿಗೆ ನೀಡುತ್ತೇನೆ’ ಎಂದು ಬೆಂಗಳೂರು ವಿಮಾನನಿಲ್ದಾಣದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಹೌದಪ್ಪಗಳಿಗೆ ಪಟ್ಟ: ‘ಹಿರಿತನ, ಪಕ್ಷನಿಷ್ಠೆ, ಸಿದ್ಧಾಂತಕ್ಕೆ ಬದ್ಧರಾಗಿರುವರಿಗೆ ಸಚಿವ ಸ್ಥಾನ ಕೊಟ್ಟಿಲ್ಲ. ಗಾಡ್‌ಫಾದರ್ ಬೆಂಬಲವಿಲ್ಲದೇ ಪಕ್ಷವನ್ನು ಎಲ್ಲ ಹಂತದಲ್ಲಿ ಅಧಿಕಾರಕ್ಕೆ ತರುವಂತಹವರು, ಪಕ್ಷದ ಆದೇಶ ಪಾಲನೆ ಮಾಡುವ, ಪಕ್ಷಕ್ಕಾಗಿ ಯಾವ ತ್ಯಾಗಕ್ಕೂ ಸಿದ್ಧರಿರುವವರಿಗೆ ಯಾವುದೇ ಸ್ಥಾನಮಾನ ಕೊಡದೇ ಹೌದಪ್ಪಗಳಿಗೆ ಈ ದಿನಗಳಲ್ಲಿ ಪಟ್ಟ ಕಟ್ಟುವ ಚಾಳಿ ಬೆಳೆಯುತ್ತಿದೆ’ ಎಂದು ರಾಜ್ಯ ನೇಕಾರ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆದ ತೇರದಾಳ ಶಾಸಕ ಸಿದ್ದು ಸವದಿ ಫೇಸ್‌ಬುಕ್‌ನಲ್ಲಿ ನೋವು ತೋಡಿಕೊಂಡಿದ್ದಾರೆ.

‘ಸಿ.ಡಿ ಇದ್ದಿದ್ದರೆ ಡಿಸಿಎಂ ಆಗುತ್ತಿದ್ದೆ’:‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಂಬಂಧಿಸಿದ ಸಿ.ಡಿ ಇಟ್ಟುಕೊಂಡು ರಾಜ್ಯದ ಕಾಂಗ್ರೆಸ್ ನಾಯಕರು ಬ್ಲ್ಯಾಕ್‌ಮೇಲ್‌ ಮಾಡಿ ತಮ್ಮ ಕೆಲಸಗಳನ್ನು ಸಾಧಿಸಿಕೊಳ್ಳುತ್ತಿದ್ದಾರೆ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದರು. ಕೂಡಲಸಂಗಮದಲ್ಲಿ ಮಾತನಾಡಿದ ಅವರು, ‘ಯಡಿಯೂರಪ್ಪ ಅವರಿಗೆ ಸೇರಿರುವ ಕಣ್ಣಿನಲ್ಲಿ ನೋಡಲಾರದಂತಹ ಸಿ.ಡಿ ಇದೆ. ಅದನ್ನು ಅವರ ಮನೆಯಲ್ಲಿ ಮೊಮ್ಮಗನೇ ಚಿತ್ರೀಕರಣ ಮಾಡಿದ್ದಾನೆ.ಅದೇ ಸಿ.ಡಿ ನನ್ನ ಬಳಿ ಇದ್ದಿದ್ದರೆ ನಾನು ಉಪಮುಖ್ಯಮಂತ್ರಿ ಆಗಿರುತ್ತಿದ್ದೆ’ ಎಂದು ಹೇಳಿದರು.

‘ಸಿ.ಡಿ ಮುಂದಿಟ್ಟುಕೊಂಡು ಯಡಿಯೂರಪ್ಪ ಅವರನ್ನು ಬೆದರಿಸುತ್ತಿರುವ ಕಾಂಗ್ರೆಸ್ ನಾಯಕರು, ತಮ್ಮ ಕ್ಷೇತ್ರಗಳಿಗೆ ಬಿಜೆಪಿ ಶಾಸಕರಿಗಿಂತ ಹೆಚ್ಚಿನ ಅನುದಾನ ಪಡೆಯುತ್ತಿದ್ದಾರೆ.ನಾವು (ಬಿಜೆಪಿಯವರು) ಅನುದಾನ ಕೇಳಿದರೆ ವಿಷ ಕುಡಿಯಲು ಹಣವಿಲ್ಲ ಎನ್ನುತ್ತಾರೆ. ಆದರೆ ಜಮೀರ್ ಅಹಮದ್, ಸಿದ್ದರಾಮಯ್ಯ, ಕೆ.ಜೆ.ಜಾರ್ಜ್, ಲಕ್ಷ್ಮಿ ಹೆಬ್ಬಾಳಕರ ಕ್ಷೇತ್ರಗಳಿಗೆ ಹೆಚ್ಚಿನ ನೆರವು ಸಿಗುತ್ತಿದೆ. ಇನ್ನೊಂದೆಡೆ ಸಿಎಂ ಪುತ್ರ ವಿಜಯೇಂದ್ರ ಚೇಲಾಗಳಿಗೆ ಹುದ್ದೆಗಳು ಸಿಗುತ್ತಿವೆ’ ಎಂದು ಆರೋಪಿಸಿದರು.

ನ್ಯಾಯಾಂಗ ತನಿಖೆಗೆ ಕಾಂಗ್ರೆಸ್‌ ಆಗ್ರಹ:ಸಿ.ಡಿ ತೋರಿಸಿ ಬ್ಲಾಕ್‌ಮೇಲ್‌ ಮಾಡಿದವರು ಮತ್ತು ಲಂಚ ನೀಡಿದವರಿಗೆ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ ಎಂದು ಬಿಜೆಪಿ ಶಾಸಕರು, ಮುಖಂಡರು ಮಾಡಿರುವ ಆರೋಪಗಳ ಕುರಿತು ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಒತ್ತಾಯಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಯಾವ ಸಿ.ಡಿಯನ್ನು ತೋರಿಸಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಬೆದರಿಸಲಾಗಿದೆ? ಸಿ.ಡಿಯಲ್ಲಿ ಅಂತಹ ವಿಚಾರ ಏನಿದೆ? ಸಚಿವರಾದವರು ಯಾರಿಗೆ ಎಷ್ಟು ಲಂಚ ನೀಡಿದ್ದಾರೆ ಎಂಬ ಸಂಗತಿಗಳ ಕುರಿತು ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು.

‘ಬಿ.ಎಸ್‌.ಯಡಿಯೂರಪ್ಪ ಅವರಿಗೆ ಬ್ಲ್ಯಾಕ್‌ಮೇಲ್‌ ಮಾಡಿ ಕೆಲವರು ಮಂತ್ರಿ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಅದೇ ಪಕ್ಷದವರು ಆರೋಪ ಮಾಡಿದ್ದಾರೆ. ಬ್ಲ್ಯಾಕ್‌ಮೇಲ್‌ ಮಾಡಿದವರ ವಿರುದ್ಧ ಅವರು ಕ್ರಿಮಿನಲ್‌ ಪ್ರಕರಣ ಹಾಕಲಿ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT