ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಖರ್ಗೆ ಸಾಬ್’ಗೆ ಒಲಿದ ಅಧ್ಯಕ್ಷ ಹುದ್ದೆ

ಬುದ್ಧ, ಬಸವ, ಅಂಬೇಡ್ಕರ್ ತತ್ವಗಳನ್ನು ಪಾಲಿಸುವ ನಾಯಕ
Last Updated 19 ಅಕ್ಟೋಬರ್ 2022, 21:21 IST
ಅಕ್ಷರ ಗಾತ್ರ

ಕಲಬುರಗಿ: ಉರ್ದು ಮಿಶ್ರಿತ ಕನ್ನಡದಲ್ಲಿ ಮಾತನಾಡುವ ಕಲ್ಯಾಣ ಕರ್ನಾಟಕದ ಕಲಬುರಗಿ, ಬೀದರ್ ಮತ್ತು ಯಾದಗಿರಿ ಸೀಮೆಯಲ್ಲಿ ಅಪಾರ ಬೆಂಬಲಿಗರು, ಪಕ್ಷದ ಕಾರ್ಯಕರ್ತರು ಮತ್ತು ಸಾರ್ವಜನಿಕರು ‘ಖರ್ಗೆ ಸಾಬ್ (ಸಾಹೇಬ)’ ಎಂದೇ ಕರೆಯುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ದೇಶದ ಅತ್ಯಂತ ಹಳೆಯ ರಾಜಕೀಯ ಪಕ್ಷ ಕಾಂಗ್ರೆಸ್‌ನ ಅಧ್ಯಕ್ಷ ಹುದ್ದೆ ಒಲಿದಿದೆ.

ಸದಾ ಗಂಭೀರ ಮುಖಮುದ್ರೆಯ ಖರ್ಗೆ ಅವರು ಒಮ್ಮೊಮ್ಮೆ ಲಹರಿಯಲ್ಲಿದ್ದಾಗ ಹಲವು ರಸಪ್ರಸಂಗಗಳನ್ನು ಆಲಿಸುವುದೇ ಸೊಗಸು. ಅದರಲ್ಲೂ ಅವರು ಉರ್ದು ಭಾಷೆಯಲ್ಲಿ ಆಡುವ ಮಾತುಗಳನ್ನು ಕೇಳುವುದೇ ಚಂದ.

ಬುದ್ಧ, ಬಸವ, ಡಾ.ಬಿ.ಆರ್. ಅಂಬೇಡ್ಕರ್ ಅವರ ತತ್ವಗಳನ್ನು ಪಾಲಿಸುವ ಅವರು ಕಲಬುರಗಿಯಲ್ಲಿ ಬುದ್ಧ ವಿಹಾರ ಸ್ಥಾಪಿಸಿ, ಬುದ್ಧನ ಚಿಂತನೆಗಳನ್ನು ಪಸರಿಸಿದ್ದಾರೆ. ಪ್ರತಿ ವರ್ಷ ಬುದ್ಧ ಪೂರ್ಣಿಮೆಗೆ ಅವರು ಪತ್ನಿ ರಾಧಾಬಾಯಿ ಖರ್ಗೆ ಜೊತೆಗೆ ಬುದ್ಧ ವಿಹಾರಕ್ಕೆ ಬಂದು ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುತ್ತಾರೆ.

ಕೌಟುಂಬಿಕ ಹಿನ್ನೆಲೆ: ಬೀದರ್ ಜಿಲ್ಲೆ ಭಾಲ್ಕಿ ತಾಲ್ಲೂಕಿನ ವರವಟ್ಟಿ ಗ್ರಾಮದ ಖರ್ಗೆ ಅವರ ತಂದೆ ಮಾಪಣ್ಣ ಅವರು ಕಲಬುರಗಿಯ ಅಂದಿನ ಪ್ರಸಿದ್ಧ ಬಟ್ಟೆ ಗಿರಣಿಯಾದ ಎಂಎಸ್‌ಕೆ ಮಿಲ್‌ನಲ್ಲಿ ಕಾರ್ಮಿಕರಾಗಿದ್ದರು. ಹೀಗಾಗಿ, ಖರ್ಗೆ ಅವರೂ ತಮ್ಮ ಶಾಲಾ, ಕಾಲೇಜು ಶಿಕ್ಷಣವನ್ನು ಕಲಬುರಗಿಯಲ್ಲಿ ಪೂರೈಸಿದರು. ಕಾರ್ಮಿಕ ನಾಯಕರಾಗಿ, ವಿದ್ಯಾರ್ಥಿ ನಾಯಕರಾಗಿ ವ್ಯಕ್ತಿತ್ವ ರೂಪಿಸಿಕೊಂಡರು.

ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ 371 (ಜೆ) ಕಲಂ ಅನುಷ್ಠಾನಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ ಅವರು
ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಚಿವರಾಗಿ ಪ್ರಮುಖ ಪಾತ್ರ ವಹಿಸಿದರು. ಸಚಿವರು ಮತ್ತು ಶಾಸಕರಾಗಿ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಶ್ರಮಿಸಿದರು ಎಂದು ಕಾಂಗ್ರೆಸ್ ನಾಯಕರು ಹೇಳುತ್ತಾರೆ.

ಅಪಾರ ಓದು, ವಿದ್ವತ್ತಿನ ಮಿತಭಾಷಿ: ಬಿಡುವಿಲ್ಲದ ಕೆಲಸಗಳ ಮಧ್ಯೆಯೂ ಮಲ್ಲಿಕಾರ್ಜುನ ಖರ್ಗೆ ಅವರು ನಿತ್ಯ ದಿನಪತ್ರಿಕೆಗಳು, ನಿಯತಕಾಲಿಕೆಗಳನ್ನು ಓದುತ್ತಾರೆ. ಪ್ರಯಾಣದಲ್ಲಿ ಯಾವಾಗಲೂ ಓದಲು ಪುಸ್ತಕಗಳನ್ನು ಜೊತೆಯಾಗಿ ಇರಿಸಿಕೊಳ್ಳುವ ಅವರು ಭಾಷಣಗಳಲ್ಲಿ ಇಂಗ್ಲಿಷ್ ಸಾಹಿತಿಗಳ ಬರಹಗಳನ್ನು ಉದಾಹರಿಸುತ್ತಾರೆ ಮತ್ತು ಆಪ್ತಮಿತ್ರ ದಿ. ಎನ್.ಧರ್ಮಸಿಂಗ್ ಅವರಂತೆ ಉರ್ದು ಭಾಷೆ ಮಾತನಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT