ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಕೆಶಿ ಕುಡುಕ, ಕಲೆಕ್ಷನ್ ಗಿರಾಕಿ ಎಂದ ಕಾಂಗ್ರೆಸ್ ವಿಡಿಯೊ ವೈರಲ್: ಬಿಜೆಪಿ ಲೇವಡಿ

Last Updated 13 ಅಕ್ಟೋಬರ್ 2021, 12:21 IST
ಅಕ್ಷರ ಗಾತ್ರ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕುಡುಕ, ದೊಡ್ಡ ಸ್ಕ್ಯಾಮ್, ಕಲೆಕ್ಷನ್ ಗಿರಾಕಿ ಎಂದು ಕಾಂಗ್ರೆಸ್ ನಾಯಕರಾದ ವಿ.ಎಸ್. ಉಗ್ರಪ್ಪ ಹಾಗೂ ಸಲೀಂ ಮಾತನಾಡಿಕೊಳ್ಳುತ್ತಿರುವ ವಿಡಿಯೊ ವೈರಲ್ ಆಗಿದ್ದು, ಬಿಜೆಪಿ ಲೇವಡಿ ಮಾಡಿದೆ.

ವಿ.ಎಸ್. ಉಗ್ರಪ್ಪ ಹಾಗೂ ಸಲೀಂ ಮಾತನಾಡಿಕೊಂಡಿದ್ದಾರೆ ಎನ್ನಲಾದ ವಿಡಿಯೊವನ್ನು ಲಗತ್ತಿಸಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ ‘ಕೈ’ ನಾಯಕರ ವಿರುದ್ಧ ಹರಿಹಾಯ್ದಿದೆ.

‘ಕೆಪಿಸಿಸಿ ಕಚೇರಿಯಲ್ಲೇ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಭ್ರಷ್ಟಾಚಾರವನ್ನು ಕಾಂಗ್ರೆಸ್ ಪಕ್ಷದ ರಾಜ್ಯ ಪದಾಧಿಕಾರಿಗಳು ತೆರೆದಿಟ್ಟಿದ್ದಾರೆ. ಭ್ರಷ್ಟಾಚಾರಕ್ಕೆ ಕಾಂಗ್ರೆಸ್‌ ಪಕ್ಷ ತವರು ಮನೆಯಾಗಿದೆ’ ಎಂದು ಟ್ವೀಟ್‌ನಲ್ಲಿ ಬಿಜೆಪಿ ಉಲ್ಲೇಖಿಸಿದೆ.

‘ಶಿವಕುಮಾರ್ ಅವರೇ, ಸೀಸರ್‌ನ ಪತ್ನಿ ಅನುಮಾನಕ್ಕೆ ಅತೀತವಾಗಿರಬೇಕೆಂಬ ಮಾತಿದೆ. ಆದರೆ ಕೆಪಿಸಿಸಿ ಪಕ್ಷದ ವೇದಿಕೆಯಲ್ಲೇ, ನಿಮ್ಮವರೇ ನಿಮ್ಮ ಬಗ್ಗೆ ಆಡಿರುವ ಅಧಿಕೃತ ಮಾತುಗಳ ಬಗ್ಗೆ ನೀವು ಸ್ಪಷ್ಟನೆ ನೀಡಲೇಬೇಕಲ್ಲವೇ’ ಎಂದು ಪ್ರಶ್ನಿಸಿದೆ.

ಡಿ.ಕೆ.ಶಿವಕುಮಾರ್ ಅವರ ಮೇಲೆ ನಡೆದ ಐ.ಟಿ, ಇ.ಡಿ ದಾಳಿ ರಾಜಕೀಯ ಪ್ರೇರಿತ ಎನ್ನುವ ಕಾಂಗ್ರೆಸಿಗರೇ, ನಿಮ್ಮ ಭ್ರಷ್ಟಾಧ್ಯಕ್ಷನ ಧನ ಸಂಪಾದನೆಯ ಮಾರ್ಗ ಯಾವುದೆಂದು ನಾಯಕ ಉಗ್ರಪ್ಪ ಹಾಗೂ ಸಲೀಂ ಅವರು ಸ್ಪಷ್ಟಪಡಿಸಿದ್ದಾರೆ. ಈಗಲೂ ಐಟಿ ದಾಳಿ ರಾಜಕೀಯ ಪ್ರೇರಿತ ಎನ್ನುತ್ತೀರಾ’ ಎಂದು ಬಿಜೆಪಿ ಪ್ರಶ್ನಿಸಿದೆ.

‘ಮುಖ್ಯಮಂತ್ರಿಯಾಗುವ ಡಿಕೆಶಿ ಕನಸಿಗೆ ಕಾಂಗ್ರೆಸ್ ಪಕ್ಷದ ನಾಯಕರೇ ಎಳ್ಳು ನೀರು ಬಿಟ್ಟಿದ್ದಾರೆ. ನಿಮ್ಮ ಅಧ್ಯಕ್ಷಗಿರಿಯ ತಕ್ಕಡಿ ಏಳುತ್ತಲೇ ಇಲ್ಲ ಎಂದು‌ ಸ್ವಪಕ್ಷೀಯರೇ ಷರಾ ಬರೆದುಬಿಟ್ಟಿದ್ದಾರೆ. ಈ ಮಾತುಗಳು, ಸಿದ್ದರಾಮಯ್ಯ ಅವರ ಬಹುದಿನಗಳ ‘ಡಿಕೆಶಿ ಪದಚ್ಯುತಿ’ ಎಂಬ ಮಾಸ್ಟರ್‌ ಪ್ಲ್ಯಾನ್‌ನ ಭಾಗವೇ? ಡಿಕೆಶಿ ಅವರೇ, ನಿಮ್ಮ ಹುಡುಗರ ಬಳಿ ₹50ರಿಂದ ₹100 ಕೋಟಿ ಇದೆಯಂತೆ, ಹಾಗಾದರೆ ಕೆಪಿಸಿಸಿ ಅಧ್ಯಕ್ಷರಾದ ನಿಮ್ಮ ಬಳಿ ಎಷ್ಟಿರಬಹುದು? ಇದು ಕೆಪಿಸಿಸಿ ಕಚೇರಿಯಿಂದಲೇ ಎದ್ದಿರುವ ಅಧಿಕೃತ ಅನುಮಾನ. ಈ ಪ್ರಶ್ನೆ ರಾಜ್ಯದ ಜನತೆಯನ್ನೂ ಕಾಡುತ್ತಿದೆ. ಇದಕ್ಕೆ ನೀವಲ್ಲದೆ ಇನ್ಯಾರು ಉತ್ತರಿಸುತ್ತಾರೆ’ ಎಂದು ಟ್ವೀಟ್‌ನಲ್ಲಿ ಬಿಜೆಪಿ ಉಲ್ಲೇಖಿಸಿದೆ.

‘ಪ್ರತಿ ಬಾರಿ ದೆಹಲಿ ಭೇಟಿಯ ಬಳಿಕ ಡಿಕೆಶಿ ಅವರ ಪದಚ್ಯುತಿಗೆ ಸಿದ್ದರಾಮಯ್ಯ ತಂತ್ರ‌ ಹೆಣೆಯುತ್ತಾರೆ. ತಂತ್ರದ ಭಾಗವಾಗಿ ಇಂದಿನ ಪ್ರಹಸನ ಬಿಡುಗಡೆಯಾಗಿದೆ. ಡಿಕೆಶಿ ಅವರ ಬಗ್ಗೆ ಇಂದು ಕೆಪಿಸಿಸಿ ಕಚೇರಿಯಲ್ಲಿ ಸತ್ಯ ಬಿಚ್ಚಿಟ್ಟವರು ಸಿದ್ದರಾಮಯ್ಯ ಅವರ ಶಿಷ್ಯರು!’ ಎಂದು ಬಿಜೆಪಿ ಟೀಕಿಸಿದೆ.

‘ಡಿಕೆಶಿ ಅವರೇ, ನೀವು ಕುಡುಕರೇ, ನೀವು ಭ್ರಷ್ಟರೇ? ಕಾಂಗ್ರೆಸ್ ಕಚೇರಿಯಲ್ಲೇ ಎದ್ದಿರುವ ಅನುಮಾನಗಳನ್ನು ಬಗೆಹರಿಸಿ’ ಎಂದು ಬಿಜೆಪಿ ಆಗ್ರಹಿಸಿದೆ. ಜತೆಗೆ, ಸಿದ್ದರಾಮಯ್ಯ ಖಡಕ್, ಶಿವಕುಮಾರ್ ಕುಡುಕ, ಕಳ್ಳರು ಕಳ್ಳರು ಸೇರಿ ಸಂತೆಗೆ ಹೊರಟಂತಾಗಿದೆ ಎಂದು ವ್ಯಂಗ್ಯವಾಡಿದೆ.

‘ಭ್ರಷ್ಟಾಧ್ಯಕ್ಷ, ಬಹುಕೋಟಿ ಮೊತ್ತದ ಬಹುಭಾಷಾ ರಾಜಕೀಯ ಚಲನಚಿತ್ರದ ಚಿತ್ರೀಕರಣ ಆರಂಭಗೊಂಡಿದೆ. ನಿರ್ಮಾಣ, ನಿರ್ದೇಶನ ಸಿದ್ದರಾಮಯ್ಯ ಅವರದ್ದು. ತಾರಾಗಣ ಉಗ್ರಪ್ಪ, ಸಲೀಂ. ಅಕ್ರಮ ಸಂಪಾದನೆಯ ಅಸಲಿ ಕಥೆಯ ಟ್ರೈಲರ್‌ ಕೆಪಿಸಿಸಿ ಕಚೇರಿಯಿಂದಲೇ ಬಿಡುಗಡೆಯಾಗಿದೆ. ಭ್ರಷ್ಟಾಧ್ಯಕ್ಷರೇ, ನಿಮ್ಮ ಥಿಯೇಟರ್‌ನಲ್ಲೇ ಸಿನಿಮಾ ಬಿಡುಗಡೆಯಾಗಲಿದೆಯೇ?’ ಎಂದು ಬಿಜೆಪಿ ಲೇವಡಿ ಮಾಡಿದೆ.

‘ಕೆಪಿಸಿಸಿ ಕಚೇರಿಯಲ್ಲಿ ಉಗ್ರಪ್ಪ ಹಾಗೂ ಸಲೀಂ ಅವರು ತಮ್ಮ ಅಧ್ಯಕ್ಷರ ಮೇಲೆ ಭ್ರಷ್ಟಾಚಾರ ಹಾಗೂ ವಿಫಲ ನಾಯಕತ್ವದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಪಸಂಖ್ಯಾತರಾದ ಸಲೀಂ ಅವರನ್ನು ಪಕ್ಷವು ಅಮಾನತು ಮಾಡಿದೆ. ಆದರೆ ಉಗ್ರಪ್ಪ ಅವರಿಗೆ ರಾಜಮರ್ಯಾದೆ ನೀಡಿದೆ. ಸಿಎಂ ಇಬ್ರಾಹಿಂ ಹೇಳಿದ ಮಾತುಗಳನ್ನು ಕರ್ನಾಟಕ ಕಾಂಗ್ರೆಸ್ ನಿಜ ಮಾಡಿದೆ’ ಎಂದು ಮತ್ತೊಂದು ಟ್ವೀಟ್‌ನಲ್ಲಿ ಬಿಜೆಪಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT