ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ನೇತೃತ್ವದ ಮೇಕೆದಾಟು 2.0 ನಡಿಗೆಗೆ 27ರಂದು ಚಾಲನೆ

Last Updated 18 ಫೆಬ್ರುವರಿ 2022, 20:00 IST
ಅಕ್ಷರ ಗಾತ್ರ

ರಾಮನಗರ: ಮೇಕೆದಾಟು ಪಾದಯಾತ್ರೆಯ ಎರಡನೇ ಆವೃತ್ತಿಗೆ ಇದೇ 27ರಂದು ಚಾಲನೆ ದೊರೆಯುವುದು ನಿಶ್ಚಿತವಾಗಿದ್ದು, ನಡಿಗೆ ಮೊಟಕುಗೊಂಡ ಜಾಗದಿಂದಲೇ ಮತ್ತೆ ಆರಂಭ ಆಗಲಿರುವುದು ವಿಶೇಷ.
ಪಾದಯಾತ್ರೆಯ ಐದನೇ ದಿನದಂದು ರಾಮನಗರ ಜಿಲ್ಲಾ ಕಾಂಗ್ರೆಸ್ ಕಚೇರಿ ಮುಂಭಾಗ ನೀರಿಗಾಗಿ ನಡಿಗೆ ಕಾರ್ಯಕ್ರಮವನ್ನು ಸ್ಥಗಿತಗೊಳಿಸಲಾಗಿತ್ತು. ಇದೇ ನೆಲದಿಂದಲೇ ಮತ್ತೆ ನಡಿಗೆ ಆರಂಭಿಸುತ್ತೇವೆ ಎಂದು ಕಾಂಗ್ರೆಸ್ ನಾಯಕರು ಭರವಸೆ ನೀಡಿದ್ದರು. ಅದರಂತೆ ಕಾಂಗ್ರೆಸ್ ಕಚೇರಿ ಮುಂಭಾಗದಿಂದಲೇ ನಡಿಗೆಗೆ ಮತ್ತೆ ಚಾಲನೆ ದೊರೆಯಲಿದೆ.

ಒಂದು ದಿನ ಮೊಟಕು: ಜ. 9ರಂದು ಕನಕಪುರ ತಾಲ್ಲೂಕಿನ ಸಂಗಮದಲ್ಲಿ ಮೇಕೆದಾಟು ಪಾದಯಾತ್ರೆಗೆ ಚಾಲನೆ ದೊರೆತಿತ್ತು. ಕನಕಪುರ, ರಾಮನಗರ, ಬಿಡದಿ, ಕೆಂಗೇರಿ ಮೂಲಕ ಬೆಂಗಳೂರಿಗೆ ಒಟ್ಟು 11 ದಿನಗಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಸಂಗಮದಿಂದ ರಾಮನಗರದವರೆಗೆ 4 ದಿನಗಳ ನಡಿಗೆ ಸಂಪೂರ್ಣವಾಗಿತ್ತು.

ಇನ್ನುಳಿದಿರುವ 7 ದಿನಗಳ ಬದಲು 6 ದಿನಗಳಲ್ಲಿ ಪಾದಯಾತ್ರೆ ಮುಗಿಸಲು ಕಾಂಗ್ರೆಸ್ ತೀರ್ಮಾನಿಸಿದೆ. ಈ ಬಾರಿ ರಾಮನಗರದಿಂದ ಬಿಡದಿ, ಕೆಂಗೇರಿ ಮಾರ್ಗವಾಗಿ ಹೊರಟು ಬೆಂಗಳೂರಿನ ವಿವಿಧ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸಂಚರಿಸಿ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಸಮಾವೇಶಗೊಳ್ಳಲಿದೆ. ಭಾನುವಾರ ರಾಮನಗರದಲ್ಲಿ ಪಾದಯಾತ್ರೆಯ ಪೂರ್ವಭಾವಿ ಸಭೆ ನಡೆಯಲಿದ್ದು, ಅಲ್ಲಿ ಮಾರ್ಗದ ಬಗ್ಗೆ ಅಂತಿಮ ತೀರ್ಮಾನ ಆಗಲಿದೆ.

ನಾಲ್ಕು ದಿನಗಳ ಪಾದಯಾತ್ರೆಯಲ್ಲಿ ವಿವಿಧ ಜಿಲ್ಲೆಗಳ ಲಕ್ಷಾಂತರಮಂದಿ ಭಾಗಿಯಾಗಿದ್ದರು. ಅದರಲ್ಲೂ ಹಳೇ ಮೈಸೂರು ಭಾಗದ ಅಸಂಖ್ಯಾತ ಕಾರ್ಯಕರ್ತರು ಹೆಜ್ಜೆ ಹಾಕಿದ್ದರು. ಈ ಬಾರಿಯ ಯಾತ್ರೆಯಲ್ಲಿ ಮೊದಲ ದಿನ ರಾಮನಗರದಲ್ಲಿ ಸ್ಥಳೀಯರ ಜೊತೆಗೆ ಮಂಡ್ಯ ಜಿಲ್ಲೆಯ ಕಾರ್ಯಕರ್ತರನ್ನು ಆಹ್ವಾನಿಸಲಾಗುತ್ತಿದೆ.

ಬೃಹತ್‌ ಸಮಾವೇಶ ಆಯೋಜನೆ ಮೂಲಕ ಕಾರ್ಯಕ್ರಮಕ್ಕೆ ಮತ್ತೆ ಚಾಲನೆ ನೀಡಬೇಕೋ, ಇಲ್ಲವೇ ಮೊಟಕು
ಗೊಂಡ ಸ್ಥಳದಿಂದ ನಡಿಗೆ ಮುಂದುವರಿಸಬೇಕೋ ಎಂಬುದು ಸದ್ಯದಲ್ಲೇ ನಿರ್ಧಾರವಾಗಲಿದೆ. ಚುನಾವಣೆ ಹೊಸ್ತಿಲಲ್ಲಿ ನಡೆದಿರುವ ಈ ಕಾರ್ಯಕ್ರಮವು ಕಾಂಗ್ರೆಸ್‌ನ ಶಕ್ತಿ ಪ್ರದರ್ಶನಕ್ಕೂ ವೇದಿಕೆ ಆಗಲಿದೆ. ರಾಜ್ಯ ಬಜೆಟ್‌ಗೆ ಮುನ್ನ ನಡೆಯಲಿರುವ ಪಾದಯಾತ್ರೆಯನ್ನು ಹಿಂದಿಗಿಂತ ಅದ್ದೂರಿಯಾಗಿ ಸಂಘಟಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ಉತ್ಸುಕರಾಗಿದ್ದಾರೆ.

ಸಿದ್ಧತೆಗೆ ಸೂಚನೆ

ಪಾದಯಾತ್ರೆಗೆ ಬೇಕಾದ ಸಿದ್ಧತೆ ಆರಂಭಿಸುವಂತೆ ಕಾಂಗ್ರೆಸ್ ಜಿಲ್ಲಾ ಘಟಕಕ್ಕೆ ಕೆಪಿಸಿಸಿಯಿಂದ ಈಗಾಗಲೇ ಸಂದೇಶ ರವಾನೆ ಆಗಿದೆ. ಮೊದಲ ದಿನ ರಾಮನಗರದಿಂದ ಬಿಡದಿವರೆಗೆ 15 ಕಿ.ಮೀ ನಡಿಗೆ ಹಾಗೂ ಎರಡನೇ ದಿನ ಬಿಡದಿಯಿಂದ ಕೆಂಗೇರಿವರೆಗೆ ನಡಿಗೆ ಮುಂದುವರಿಯಲಿದೆ. ಈ ಎರಡೂ ದಿನ ಗಣ್ಯರು ಹಾಗೂ ಪಾದಯಾತ್ರಿಗಳ ಊಟೋಪಚಾರ ಹಾಗೂ ವಸತಿಗೆ ಬೇಕಾದ ಸ್ಥಳಗಳ ಆಯ್ಕೆ ಈಗಾಗಲೇ ಅಂತಿಮಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT