ಅಧಿಕಾರಕ್ಕೆ ಬಂದರೆ ಅಲ್ಪಸಂಖ್ಯಾತರ ಅಭಿವೃದ್ಧಿಗೆ ₹10,000 ಕೋಟಿ: ಸಿದ್ದರಾಮಯ್ಯ

ಬೀದರ್: ‘ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅಲ್ಪಸಂಖ್ಯಾತರ ಅಭಿವೃದ್ಧಿಗೆ ₹ 10 ಸಾವಿರ ಕೋಟಿ ಹಾಗೂ ಕಲ್ಯಾಣ ಕರ್ನಾಟಕದ 41 ವಿಧಾನಸಭಾ ಕ್ಷೇತ್ರಗಳ ಅಭಿವೃದ್ಧಿಗೆ ₹ 5 ಸಾವಿರ ಕೋಟಿ ಕೊಡಲಾಗುವುದು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭರವಸೆ ನೀಡಿದರು.
ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಪ್ರಯುಕ್ತ ನಗರದ ಗಣೇಶ ಮೈದಾನದಲ್ಲಿ ಆಯೋಜಿಸಿದ್ದ ಬೀದರ್ ಹಾಗೂ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಸಾರ್ವಜನಿಕ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಯಾವುದೇ ಧರ್ಮ, ಜಾತಿಯ ಬಡವರಿದ್ದರೂ ಮನೆಯ ಯಜಮಾನಿಗೆ ಪ್ರತಿ ತಿಂಗಳಿಗೆ ₹ 2 ಸಾವಿರದಂತೆ ವರ್ಷಕ್ಕೆ ₹ 24 ಸಾವಿರ ಆರ್ಥಿಕ ನೆರವು ಒದಗಿಸಲಾಗುವುದು. ಪ್ರತಿ ಮನೆಗೆ 200 ಯುನಿಟ್ ವಿದ್ಯುತ್ ಹಾಗೂ ಬಡವರಿಗೆ 10 ಕೆ.ಜಿ. ಅಕ್ಕಿ ಉಚಿತವಾಗಿ ಕೊಡಲಾಗುವುದು’ ಎಂದು ತಿಳಿಸಿದರು.
‘ಬಿಜೆಪಿ ಸರ್ಕಾರ ಅಲ್ಪಸಂಖ್ಯಾತರನ್ನು ದ್ವೇಷಿಸಿಕೊಂಡೇ ರಾಜಕೀಯ ಮಾಡುತ್ತಿದೆ. ನೂರಾರು ವರ್ಷಗಳಿಂದ ನಡೆದು ಬಂದ ಆಜಾನ್‌ಗೆ ವಿರೋಧ ವ್ಯಕ್ತಪಡಿಸುತ್ತಿದೆ. ಸಂತೆ, ಜಾತ್ರೆಗಳಲ್ಲಿ ಅಲ್ಪಸಂಖ್ಯಾತರು ವ್ಯಾಪಾರ ಮಾಡದಂತೆ ತಡೆಯುತ್ತಿದೆ. ವ್ಯಾಪಾರ ವಹಿವಾಟು ನಡೆಸುವವರಿಗೆ ನಿರ್ಬಂಧ ವಿಧಿಸಿದರೆ ಅವರ ಹೊಟ್ಟೆ ಹೇಗೆ ತುಂಬಬೇಕು’ ಎಂದು ಪ್ರಶ್ನಿಸಿದರು.
‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ ಜೋಕರ್ ಇದ್ದ ಹಾಗೆ. ರಸ್ತೆ, ಗಟಾರ ನಿರ್ಮಾಣಕ್ಕಿಂತ ಲವ್ ಜಿಹಾದ್ ವಿರೋಧಿಸುವುದು ಮಹತ್ವದ್ದು ಎಂದು ಈಚೆಗೆ ಹೇಳಿಕೆ ಕೊಟ್ಟಿದ್ದಾರೆ. ಜನರನ್ನು ಎತ್ತಿ ಕಟ್ಟುವುದೇ ಅವರ ಕೆಲಸವಾಗಿದೆ. ನಾಡಿನ ಅಭಿವೃದ್ಧಿ ಚಿಂತನೆ ಮಾಡದವರಿಗೆ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಬೇಕು’ ಎಂದು ಮನವಿ ಮಾಡಿದರು.
‘ರಾಜ್ಯದ ಜನ ಬಿಜೆಪಿ ಆಡಳಿತದಿಂದ ಬೇಸತ್ತಿದ್ದಾರೆ. ದ್ವೇಷದ, ಹಿಂದುತ್ವದ, ಕೋಮುವಾದದ, ಸಮಾಜ ಒಡೆಯುವ ರಾಜಕಾರಣವೇ ಇದಕ್ಕೆ ಕಾರಣ’ ಎಂದು ಹೇಳಿದರು.
‘ಬಿಜೆಪಿಯವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ. ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ಶ್ರೇಷ್ಠ ಸಂವಿಧಾನ ರಚಿಸಿದ್ದಾರೆ. ಆದರೆ, ಸಂವಿಧಾನ ರಚನೆಯಾದ ಮೇಲೆ ಹೆಗಡೆವಾರ, ವಿ.ಡಿ. ಸಾವರಕರ್, ಗೋಲವಾಲ್ಕರ್ ಹಾಗೂ ಘೋಡಸೆ ಅವರು ಸಂವಿಧಾನದ ವಿರುದ್ಧವಾಗಿಯೇ ಮಾತನಾಡಿದ್ದಾರೆ. ಬಿಜೆಪಿಗೆ ಇಂಥವರೇ ಆರಾಧ್ಯ ದೈವಗಳು. ಮಹಾತ್ಮರನ್ನು ಕೊಂದವರನ್ನೇ ಪೂಜೆ ಮಾಡುತ್ತಿದೆ. ಬಿಜೆಪಿಯವರು ಇವರ ವಂಶಸ್ಥರೇ ಆಗಿದ್ದಾರೆ’ ಎಂದು ಮೊಣಚಾದ ಮಾತಿನಿಂದ ಚುಚ್ಚಿದರು.
‘ರಾಜ್ಯದಲ್ಲಿ ಶೇಕಡ 24.1 ರಷ್ಟು ಎಸ್‌ಸಿ, ಎಸ್‌ಟಿ ಸಮುದಾಯದವರಿದ್ದಾರೆ. ಅವರ ಜನಸಂಖ್ಯೆಗೆ ಅನುಗುಣವಾಗಿ ಎಸ್‌ಇಪಿ, ಟಿಎಸ್‌ಪಿ ಕಾನೂನು ಮಾಡಿ ಹಣ ಕಾಯ್ದಿರಿಸಲಾಯಿತು. ಕಾಂಗ್ರೆಸ್ ಕೊನೆಯ ಬಜೆಟ್ ಮಂಡಿಸಿದಾಗ ಪರಿಶಿಷ್ಟರ ಅನುದಾನ ₹ 30 ಸಾವಿರ ಕೋಟಿ ಇತ್ತು. ಬಿಜೆಪಿ ₹ 11 ಸಾವಿರ ಕೋಟಿ ಮಾತ್ರ ಖರ್ಚು ಮಾಡಿದೆ’ ಎಂದು ತಿಳಿಸಿದರು.
‘ಗೊಂಡ, ರಾಜಗೊಂಡ, ಕುರುಬರು, ಕೋಲಿ ಸಮಾಜದವರನ್ನು ಎಸ್‌ಟಿಗೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಮೂರು ಬಾರಿ ಶಿಫಾರಸು ಮಾಡಿದ್ದೆ. ಆದರೆ, ಡಬಲ್ ಎಂಜಿನ್ ಸರ್ಕಾರ ಇನ್ನೂ ಅನುಮೋದನೆ ಕೊಟ್ಟಿಲ್ಲ. ನಿಮಗೆ ಸ್ವಾಭಿಮಾನ ಇದ್ದರೆ ಒಂದು ಮತವನ್ನೂ ಬಿಜೆಪಿಗೆ ಮತ ಕೊಡಬೇಡಿ’ ಎಂದು ಮನವಿ ಮಾಡಿದರು.
ಮೋದಿ ಅವರು ಮಾಡುವುದೊಂದು, ಹೇಳುವುದು ಇನ್ನೊಂದು. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂದು ಹೇಳುತ್ತಿದ್ದಾರೆ. ಆದರೆ, ವಿಜಯಪುರದ ಶಾಸಕ ಬಸವರಾಜ ಪಾಟೀಲ ಯತ್ನಾಳ ಟೋಪಿ ಹಾಕಿಕೊಂಡವರು ನಮ್ಮ ಕಚೇರಿಗೆ ಬರಬೇಡಿ ಎಂದು ಹೇಳುತ್ತಾರೆ. ಬಿಜೆಪಿ ಎಂದರೆ ಸುಳ್ಳಿನ ದೊಡ್ಡ ಫ್ಯಾಕ್ಟರಿ’ ಎಂದು ಕಟುವಾಗಿ ಟೀಕಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.