ಭಾನುವಾರ, ಸೆಪ್ಟೆಂಬರ್ 19, 2021
28 °C

13ರಂದು ವಿಧಾನಸೌಧ ಮುತ್ತಿಗೆ, 27ರಂದು ಕರ್ನಾಟಕ ಬಂದ್: ಕೋಡಿಹಳ್ಳಿ ಚಂದ್ರಶೇಖರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕೇಂದ್ರದ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಇದೇ 13ರಂದು ವಿಧಾನಸೌಧ ಮುತ್ತಿಗೆ ಹಮ್ಮಿಕೊಳ್ಳಲಾಗಿದೆ’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ರೈತ ವಿರೋಧಿ ಕಾಯ್ದೆಗಳನ್ನು ಕೂಡಲೇ ಹಿಂದಕ್ಕೆ ಪಡೆಯಬೇಕು ಎಂದು ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದೇವೆ. ಅದಕ್ಕೆ ಅವರಿಂದ ಯಾವ ಪ್ರತಿಕ್ರಿಯೆಯೂ ಬಂದಿಲ್ಲ. ಹೀಗಾಗಿ ವಿಧಾನಸೌಧ ಮುತ್ತಿಗೆಗೆ ಮುಂದಾಗಿದ್ದೇವೆ. 13ರಂದು ಬೆಳಿಗ್ಗೆ 10 ಗಂಟೆಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಪ್ರತಿಭಟನಾ ಮೆರವಣಿಗೆ ಹೊರಡಲಿದೆ. ರಾಜ್ಯದ ವಿವಿಧ ಭಾಗಗಳ ರೈತರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದರು. 

‘ಮಣ್ಣಿನ ಮಕ್ಕಳು ಎಂದು ಹೇಳುತ್ತಿರುವವರು ಸದನದ ಹೊರಗೆ ಕೃಷಿ ಮಸೂದೆಗಳನ್ನು ವಿರೋಧಿಸುವ ಮಾತುಗಳನ್ನು ಆಡಿದ್ದರು. ಮಸೂದೆ ಜಾರಿಯ ವೇಳೆ ಬಿಜೆಪಿಗೆ ಬೆಂಬಲ ಸೂಚಿಸಿದರು. ಆ ಮೂಲಕ
ರೈತರಿಗೆ ವಿಷ ಉಣಿಸುವ ಕೆಲಸ ಮಾಡಿದರು. ಇದನ್ನು ಯಾರೂ ಮರೆಯುವುದಿಲ್ಲ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಪರೋಕ್ಷವಾಗಿ ಕುಟುಕಿದರು.     

‘ಕೃಷಿ ತಿದ್ದುಪಡಿ ವಿಧೇಯಕ ಜಾರಿ ನಂತರ ಶೇ 80ರಷ್ಟು ಎಪಿಎಂಸಿಗಳು ಬಾಗಿಲು ಮುಚ್ಚಿವೆ. ಅವುಗಳಿಂದ ಬರುತ್ತಿದ್ದ ಆದಾಯ ಕೂಡ ಕಡಿಮೆಯಾಗಿದೆ’ ಎಂದರು.

27ರಂದು ಕರ್ನಾಟಕ ಬಂದ್

‘ನೂತನ ಕೃಷಿ ಕಾಯ್ದೆಗಳನ್ನು ರದ್ದುಮಾಡುವಂತೆ ಕೋರಿ ನವದೆಹಲಿಯ ಗಡಿಗಳಲ್ಲಿ ರೈತರು ಕಳೆದ 9 ತಿಂಗಳುಗಳಿಂದ ಹೋರಾಟ ನಡೆಸುತ್ತಿದ್ದಾರೆ. ಸರ್ಕಾರ ಮಾತ್ರ ತನಗೆ ಸಂಬಂಧವೇ ಇಲ್ಲದಂತೆ ನಡೆದುಕೊಳ್ಳುತ್ತಿದೆ. ಕೇಂದ್ರಕ್ಕೆ ಬಿಸಿ ಮುಟ್ಟಿಸುವ ಉದ್ದೇಶದಿಂದ ರೈತ ಸಂಘಟನೆಗಳು ಇದೇ 27ರಂದು ಭಾರತ್‌ ಬಂದ್‌ಗೆ ಕರೆ ನೀಡಿವೆ. ಅದೇ ದಿನ ಕರ್ನಾಟಕದಲ್ಲೂ ಬಂದ್‌ ನಡೆಸಲು ತೀರ್ಮಾನಿಸಲಾಗಿದೆ’ ಎಂದು ತಿಳಿಸಿದರು.  

‘ಕೇಂದ್ರ ಸರ್ಕಾರಕ್ಕೆ ರೈತರಿಗಿಂತಲೂ ಕಾರ್ಪೊರೇಟ್‌ ಕಂಪನಿಗಳ ಹಿತವೇ ಮುಖ್ಯವಾಗಿದೆ’ ಎಂದು ದೂರಿದರು.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು