ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಮಕ್ಕಳ ಮೇಲೆ ಸಾಲದ ಹೊರೆ ಹೊರಿಸಿದ್ದೇಕೆ: ಸಿದ್ದರಾಮಯ್ಯಗೆ ಬಿಜೆಪಿ ಪ್ರಶ್ನೆ

Last Updated 17 ಮೇ 2021, 8:22 IST
ಅಕ್ಷರ ಗಾತ್ರ

ಬೆಂಗಳೂರು: ಅನೇಕ‌ ದಶಕಗಳಿಂದ ರಾಜ್ಯ ಕಾಯ್ದುಕೊಂಡು ಬಂದ ವಿತ್ತೀಯ ಶಿಸ್ತನ್ನು ನಾಲ್ಕೇ ವರ್ಷದಲ್ಲಿ ಅಸ್ತವ್ಯಸ್ತಗೊಳಿಸಿದ ಕೀರ್ತಿ‌ ಸಿದ್ದರಾಮಯ್ಯ ಅವರಿಗೆ ಸಲ್ಲಬೇಕು ಎಂದು ರಾಜ್ಯ ಬಿಜೆಪಿ ವಾಗ್ದಾಳಿ ನಡೆಸಿದೆ.

ಈ ವಿಚಾರವಾಗಿ ಸೋಮವಾರ ಸರಣಿ ಟ್ವೀಟ್‌ ಮಾಡಿರುವ ಬಿಜೆಪಿ, 'ಮಾನ್ಯ ಸಿದ್ದರಾಮಯ್ಯ ಅವರೇ, ವಾಸ್ತವಾಂಶಗಳನ್ನು ತೆರೆದಿಟ್ಟರೆ ಅದನ್ನೇ ಸುಳ್ಳು‌ ಮಾಹಿತಿ ನೀಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದೀರಿ. ನಿಮ್ಮ ಸಾಲ ಸಾಧನೆಯ ಬಗ್ಗೆ ಇನ್ನಷ್ಟು ಮಾಹಿತಿ ನೀಡುತ್ತೇವೆ. ಜಾರಿಕೊಳ್ಳುವ ಪ್ರಯತ್ನ ಮಾಡದೆ, ವಾಸ್ತವವನ್ನು ಒಪ್ಪಿಕೊಳ್ಳಿ' ಎಂದು ಹೇಳಿದೆ.

'2012-13 ರ ಕೊನೆಯಲ್ಲಿ ರಾಜ್ಯದ ಒಟ್ಟಾರೆ ಸಾಲ ಎತ್ತುವಳಿ 1 ಲಕ್ಷ ಕೋಟಿ. ರಾಜ್ಯದ ಒಟ್ಟಾರೆ ಸಾಲದ ಮೊತ್ತ ಈ ಪ್ರಮಾಣ ತಲುಪುವುದಕ್ಕೆ ಬೇಕಾದ ಸಮಯ 62 ವರ್ಷ. ಸಿದ್ದರಾಮಯ್ಯ ಸರ್ಕಾರದ ಮೊದಲ 4 ವರ್ಷದ ಸಾಲ ಎತ್ತುವಳಿ 2 ಲಕ್ಷ ಕೋಟಿ. ಕೊನೆಯ ವರ್ಷ ಹಾಗೂ ಮೈತ್ರಿ ಸರ್ಕಾರದ ಅವಧಿಯ ಸಾಲ ಪ್ರಮಾಣ 3 ಲಕ್ಷ ಕೋಟಿ' ಎಂದು ಬಿಜೆಪಿ ಹರಿಹಾಯ್ದಿದೆ.

ರಾಜ್ಯಕ್ಕೆ ಸಾಲದ ಹೊರೆ ಹೊರಿಸಿದವರು ಯಾರೆಂಬುದನ್ನು ಈಗಲಾದರೂ ಒಪ್ಪಿಕೊಳ್ಳುವಿರಾ ಎಂದು ಸಿದ್ದರಾಮಯ್ಯನವರನ್ನು ಪ್ರಶ್ನಿಸಿರುವ ಬಿಜೆಪಿ, 'ಅನೇಕ‌ ದಶಕಗಳಿಂದ ರಾಜ್ಯ ಕಾಯ್ದುಕೊಂಡು ಬಂದ ವಿತ್ತೀಯ ಶಿಸ್ತನ್ನು ನಾಲ್ಕೇ ವರ್ಷದಲ್ಲಿ ಅಸ್ತವ್ಯಸ್ತಗೊಳಿಸಿದ ಕೀರ್ತಿ‌ ಸಿದ್ದರಾಮಯ್ಯ ಅವರಿಗೆ ಸಲ್ಲಬೇಕು. ನಮ್ಮ ಮಕ್ಕಳ ಮೇಲೆ ಸಾಲದ ಹೊರೆ ಹೊರಿಸಿದ್ದೇಕೆ?' ಎಂದು ಟ್ವೀಟ್‌ ಮಾಡಿದೆ.

'ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಹಾಗೂ ಮೈತ್ರಿ ಸರ್ಕಾರದ ಅವಧಿಯ ಒಟ್ಟು 7 ವರ್ಷದಲ್ಲಿ ರಾಜ್ಯದ ಒಟ್ಟಾರೆ ಸಾಲ ಪ್ರಮಾಣ 3 ಪಟ್ಟು ಹೆಚ್ಚಳವಾಗಿದೆ. ಟ್ವಿಟ್ಟರ್ ಪ್ರವಚನಕಾರ ಸಿದ್ದರಾಮಯ್ಯ ರಾಜ್ಯದ ಮೇಲೆ‌ ಸಾಲದ ಹೊರೆ ಹೊರಿಸಿ ನನ್ನ ಮಕ್ಕಳ ಲಸಿಕೆ ಎಲ್ಲಿದೆ ಎಂದು ಬೂಟಾಟಿಕೆ ಮಾಡುತ್ತಿದ್ದಾರೆ' ಎಂದು ಬಿಜೆಪಿ ಟೀಕಿಸಿದೆ.

'ನನ್ನ ಅವಧಿಯಲ್ಲಿ 'ಒಂದು ಬಾರಿಯೂ ವಿತ್ತೀಯ ಕೊರತೆ ಆಗಿಲ್ಲ' ಎನ್ನುವ ಸಿದ್ದರಾಮಯ್ಯ ಅವರೇ, ನಿಮ್ಮ ಆಡಳಿತದ 5 ವರ್ಷಗಳಲ್ಲಿ ಸಾಲದ ಪ್ರಮಾಣ ದುಪ್ಪಟ್ಟಾಗಿತ್ತು. ಅಕ್ಕಿ ಕೊಟ್ಟೆ, ಮೊಟ್ಟೆ ಕೊಟ್ಟೆ ಎಂದು ಬಡಾಯಿ ಕೊಚ್ಚಿಕೊಳ್ಳುವ ನೀವು ರಾಜ್ಯದ ಜನತೆಯ ತಲೆಯ ಮೇಲೆ ಸಾಲವನ್ನು ಹೊರಿಸಿದರ ಬಗ್ಗೆ ಹೇಳಿಕೊಳ್ಳುವಿರಾ?' ಎಂದು ಬಿಜೆಪಿ ಪ್ರಶ್ನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT