ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕರಿಗೆ ‘ಸಿಹಿ’: ಕನಿಷ್ಠ ವೇತನ ಶೇ 10ರಷ್ಟು ಹೆಚ್ಚಳ

ಸಮ ಪ್ರಮಾಣದ ಕೆಲಸಕ್ಕೆ ಎಲ್ಲರಿಗೂ ಸಮಾನ ವೇತನ
Last Updated 4 ಆಗಸ್ಟ್ 2022, 21:30 IST
ಅಕ್ಷರ ಗಾತ್ರ

ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಪಂಚಾಯತ್‌ರಾಜ್‌ ಸಂಸ್ಥೆಗಳಲ್ಲಿ ಉದ್ಯೋಗದಲ್ಲಿರುವ ಮತ್ತು ಆ ವ್ಯಾಪ್ತಿಯ ಉದ್ದಿಮೆಗಳಲ್ಲಿ ದುಡಿಯುವ ಕಾರ್ಮಿಕರ ಕನಿಷ್ಠ ವೇತನವನ್ನು ರಾಜ್ಯ ಸರ್ಕಾರ ಪರಿಷ್ಕರಿಸಿದೆ.

ಸಾಮಾನ್ಯವಾಗಿ ಐದು ವರ್ಷಕ್ಕೊಮ್ಮೆ ಕನಿಷ್ಠ ವೇತನ ಪರಿಷ್ಕರಿಸಲಾಗುತ್ತದೆ. ಕನಿಷ್ಠ ವೇತನ ಕಾಯ್ದೆ 1948ರ ಅಡಿ 2016ರಲ್ಲಿ ಕೊನೆಯದಾಗಿ ವೇತನ ಪರಿಷ್ಕರಿಸಲಾಗಿತ್ತು. ಕಳೆದ ಐದು ವರ್ಷಗಳಲ್ಲಿ ಅನೇಕ ಬದಲಾವಣೆಗಳು ಸಂಭವಿಸಿದ್ದು, ಜೀವನನಿರ್ವಹಣೆ ವೆಚ್ಚ ಗಣನೀಯವಾಗಿ ಹೆಚ್ಚಾಗಿದೆ. ಹೀಗಾಗಿ, ಕನಿಷ್ಠ ವೇತನ ಪರಿಷ್ಕರಿಸುವಂತೆ ಕಾರ್ಮಿಕ ಸಂಘಟನೆಗಳು ಒತ್ತಾಯಿಸುತ್ತಲೇ ಬಂದಿದ್ದವು.

ಕನಿಷ್ಠ ವೇತನ ದರಗಳನ್ನು ಪರಿಷ್ಕರಿಸಲು ಕರಡು ಪ್ರಸ್ತಾವನೆಯನ್ನು 2021ರ ಡಿ. 31ರಂದು ರಾಜ್ಯಪತ್ರದಲ್ಲಿ ಪ್ರಕಟಿಸಿ, ಸಲಹೆ, ಆಕ್ಷೇಪಣೆ ಸಲ್ಲಿಸಲು ಎರಡು ತಿಂಗಳ ಕಾಲಾವಕಾಶ ನೀಡಲಾಗಿತ್ತು. ಕಾರ್ಮಿಕ ಇಲಾಖೆಯ ಆಯುಕ್ತ ಅಕ್ರಂ ಪಾಷಾ ಅಧ್ಯಕ್ಷತೆಯಲ್ಲಿ ಜೂನ್‌ 21ರಂದು ನಡೆದ ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿಯ ಸಭೆಯಲ್ಲಿ‌ ಚರ್ಚಿಸಿ, ವೇತನ ಪರಿಷ್ಕರಣೆ ಸಂಬಂಧ ಸರ್ಕಾರಕ್ಕೆ ವರದಿಸಲ್ಲಿಸಲಾಗಿತ್ತು.

ಕನಿಷ್ಠ ವೇತನಕ್ಕೆ ತುಟ್ಟಿ ಭತ್ಯೆ (ವಿಡಿಎ), ಭವಿಷ್ಯ ನಿಧಿ ಶೇ 12, ಇಎಸ್‌ಐ (ಕಾರ್ಮಿಕ ರಾಜ್ಯ ವಿಮೆ) ಶೇ 3.5 ಸೇರಿಸಿ ಕಾರ್ಮಿಕರ ಮಾಸಿಕ ವೇತನ‌ ನಿಗದಿಪಡಿಸಲಾಗುತ್ತದೆ.

ತುಟ್ಟಿಭತ್ಯೆಯನ್ನು ವರ್ಷಕ್ಕೊಮ್ಮೆ ಲೆಕ್ಕಾಚಾರ ಮಾಡಲಾಗುತ್ತದೆ. ಆಯಾ ವರ್ಷ ಹೆಚ್ಚಾಗುವ ಅಥವಾ ಕಡಿಮೆಯಾಗುವ ಗ್ರಾಹಕ ಬೆಲೆ ಸೂಚ್ಯಂಕದ ಸರಾಸರಿಯನ್ನು ಗಮನದಲ್ಲಿಟ್ಟುಕೊಂಡು ವಾರ್ಷಿಕ ಆಧಾರದ ಮೇಲೆ ತುಟ್ಟಿಭತ್ಯೆಯನ್ನು ಉದ್ಯೋಗದಾತರು ಪರಿಷ್ಕರಿಸಬೇಕು. ಸದ್ಯದ ಗ್ರಾಹಕ ಬೆಲೆ ಸೂಚ್ಯಂಕದ ಪ್ರಕಾರ, ₹ 17,555 ಕನಿಷ್ಠ ವೇತನಕ್ಕೆ ₹ 900 ತುಟ್ಟಿಭತ್ಯೆ, ಪಿಎಫ್‌ ₹ 2,100, ಇಎಸ್‌ಐ ₹ 550 ಸೇರಿ ₹ 22,505 ಮಾಸಿಕ ವೇತನ ಆಗುತ್ತದೆ.

2016ಕ್ಕೆ ಹೋಲಿಸಿದರೆ ಪರಿಷ್ಕೃತ ಕನಿಷ್ಠ ವೇತನ ಸರಾಸರಿ ಶೇ 10ರಷ್ಟು ಹೆಚ್ಚಳವಾಗಿದೆ. ಪರಿಷ್ಕರಣೆಯ ಪ್ರಮಾಣವು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಇತರ ಮಹಾನಗರಪಾಲಿಕೆಗಳ ವ್ಯಾಪ್ತಿಯಲ್ಲಿ ಹೆಚ್ಚು, ಇತರ ಸಣ್ಣ ಪಟ್ಟಣಗಳಲ್ಲಿ (ನಗರಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿ ವ್ಯಾಪ್ತಿ) ಕಡಿಮೆ ಇರುತ್ತದೆ.

ಉದ್ಯೋಗದಾತರು ಒಂದೇ ರೀತಿಯ ಹಾಗೂ ಸಮ ಪ್ರಮಾಣದ ಕೆಲಸ ನಿರ್ವಹಿಸಿದ ಮಹಿಳೆಯರು, ಪುರುಷರು, ತೃತೀಯ ಲಿಂಗಿಗಳು ಮತ್ತ ಅಂಗವಿಕಲರಿಗೆ ಎಲ್ಲರಿಗೂ ಸಮಾನ ವೇತನ ನೀಡಬೇಕು. ಅಧಿಸೂಚನೆಯಲ್ಲಿ ನಮೂದಿಸದೆ ಇರುವ ವರ್ಗಗಳ ಕಾರ್ಮಿಕರಿಗೆ ಅದೇ ಸ್ವರೂಪದ ಕೆಲಸ ನಿರ್ವಹಿಸುತ್ತಿರುವ ಇತರ ವರ್ಗದ ಕಾರ್ಮಿಕರಿಗೆ ಪಾವತಿಸುವ ವೇತನವನ್ನೇ ನೀಡಬೇಕು ಎಂದೂ ಸರ್ಕಾರ ಸ್ಪಷ್ಟಪಡಿಸಿದೆ.

‘ವಿವಿಧ ಇಲಾಖೆಗಳಲ್ಲಿ ಕಂಪ್ಯೂಟರ್‌ ಆಪರೇಟರ್‌, ಡಾಟಾ ಎಂಟ್ರಿ ಆಪರೇಟರ್‌ಗಳು, ಚಾಲಕ ಹುದ್ದೆಗಳಿಗೆ ಕಾಯಂ ನೇಮಕಾತಿಗೆ ಮುಂದಾಗ ಸರ್ಕಾರ, ಹೊರಗುತ್ತಿಗೆಯಲ್ಲಿ ನೇಮಿಸಿಕೊಳ್ಳಲು ಅವಕಾಶ ಕಲ್ಪಿಸಿದೆ. ಆದರೆ, ಏಜೆನ್ಸಿಗಳಮೂಲಕ ನೇಮಕಗೊಳ್ಳುವ ಈ ನೌಕರರಿಗೆ ಕನಿಷ್ಠ ವೇತನವನ್ನೂ ಪಾವತಿಸದೆ ಶೋಷಣೆಗೆ ಒಳಪಡಿಸುವ ಆರೋಪಗಳಿವೆ. ಈ ನೌಕರರಿಗೂ ಪರಿಷ್ಕೃತ ಕನಿಷ್ಠ ವೇತನ ಅನ್ವಯವಾಗಲಿದೆ’ ಎಂದು ಕಾರ್ಮಿಕ ಇಲಾಖೆ ಮೂಲಗಳು ತಿಳಿಸಿವೆ.

****

ರಾಜ್ಯ ಕನಿಷ್ಠ ವೇತನಾ ಸಲಹಾ ಮಂಡಳಿಯಲ್ಲಿ ಚರ್ಚಿಸಿ, ಕನಿಷ್ಠ ವೇತನ ಬಗ್ಗೆ ಸರ್ಕಾರಕ್ಕೆ ವರದಿ ನೀಡಲಾಗಿತ್ತು. ಆಗಸ್ಟ್‌ ತಿಂಗಳಿನಿಂದಲೇ ಪರಿಷ್ಕೃತ ಕನಿಷ್ಠ ವೇತನ ಜಾರಿಗೆ ಬರಲಿದೆ.

-ಅಕ್ರಂ ಪಾಷಾ, ಆಯುಕ್ತ, ಕಾರ್ಮಿಕ ಇಲಾಖೆ

****

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT