ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮ ಪಂಚಾಯಿತಿ ಚುನಾವಣೆ: ಮತದಾನ ಬಹಿಷ್ಕಾರ, ಲಾಠಿ ಪ್ರಹಾರ

ಕೆಲ ಅಭ್ಯರ್ಥಿಗಳ ಚಿಹ್ನೆ ಬದಲು, ಪಟ್ಟಿಯಲ್ಲಿ ಹೆಸರು ನಾಪತ್ತೆ
Last Updated 27 ಡಿಸೆಂಬರ್ 2020, 20:18 IST
ಅಕ್ಷರ ಗಾತ್ರ
ADVERTISEMENT
""

ಹುಬ್ಬಳ್ಳಿ: ಉತ್ತರ ಕರ್ನಾಟಕದ ಹಲವೆಡೆ ಕೊನೆಯ ಹಂತದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅವ್ಯವಸ್ಥೆಗಳು ಕಂಡು ಬಂದವು.

ಅಭ್ಯರ್ಥಿಯ ಚಿಹ್ನೆ ತಪ್ಪಾಗಿ ಮುದ್ರಣ, ಮತದಾರರ ಪಟ್ಟಿಯಲ್ಲಿ ಗೊಂದಲ, ಕ್ಷೇತ್ರ ವ್ಯಾಪ್ತಿಯ ಬದಲಾವಣೆ, ಮತದಾನ ಬಹಿಷ್ಕರಿಸಿ ಪ್ರತಿಭಟನೆಗಳು ಹಾಗೂ ಉದ್ರಿಕ್ತ ಜನರನ್ನು ಚದುರಿಸಲು ಪೊಲೀಸರು ಲಾಠಿ ಬೀಸಬೇಕಾಯಿತು.

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಸಾಲಹಳ್ಳಿ ಗ್ರಾಮ ಪಂಚಾಯಿತಿ ವಾರ್ಡ್‌ ನಂ. 6ರಲ್ಲಿ ಅಭ್ಯರ್ಥಿ ಒಬ್ಬರ ‘ಬಕೆಟ್‌’ ಚಿಹ್ನೆಯ ಬದಲಾಗಿ ‘ಬೀರು’ ಚಿಹ್ನೆ ಮತಪತ್ರದಲ್ಲಿ ಮುದ್ರಣವಾಗಿತ್ತು. ಮತದಾನವನ್ನು ಡಿ.29ಕ್ಕೆ ಮುಂದೂಡಲಾಗಿದೆ.

ಚಿಕ್ಕೋಡಿ ತಾಲ್ಲೂಕಿನ ಬಂಬಲವಾಡ ಮತ್ತು ಬೆಳಕೂಡ ಮತಗಟ್ಟೆಗಳ ಎದುರು ಜಮಾಯಿಸಿದ್ದ ಜನರನ್ನು ಚದುರಿಸಲು ಪೊಲೀಸರು ಲಘುವಾಗಿ ಲಾಠಿ ಬೀಸಿದರು.

ಬಳ್ಳಾರಿಯ ಹಗರಿಬೊಮ್ಮನಹಳ್ಳಿಯಲ್ಲಿ ಮೃತರ ಹೆಸರನ್ನು ಬಿಟ್ಟು, ಜೀವಿತ ಮಗನ ಹೆಸರನ್ನು ಮತ ಪಟ್ಟಿಯಿಂದ ತೆಗೆಯಲಾಗಿತ್ತು. ಹರಪನಹಳ್ಳಿ ತಾಲ್ಲೂಕಿನ ಮತ್ತಿಹಳ್ಳಿಯ 3 ಮತ್ತು 4 ನೇ ವಾರ್ಡ್‌ನ ಮತಪತ್ರಗಳು ಅದಲು ಬದಲಾಗಿವೆ ಎಂದು ಆರೋಪಿಸಿ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದರು.

ಇದೇ ತಾಲ್ಲೂಕಿನ ಮೊರಬ ಗ್ರಾಮಕ್ಕೆ ಮತದಾನಕ್ಕೆ ತೆರಳುತ್ತಿದ್ದ ನಾಗರಾಜ ಮತ್ತು ಸೋಮಶೇಖರ್‌ ಅವರಬೈಕ್ ಅಪಘಾತಕ್ಕೆ ಈಡಾಗಿ ನಾಗರಾಜ್‌ ಸ್ಥಳದಲ್ಲೇ ಮೃತಪಟ್ಟರು.

ಹುಬ್ಬಳ್ಳಿ ಗ್ರಾಮೀಣ ತಾಲ್ಲೂಕಿನ ಕಟ್ನೂರು ಗ್ರಾಮ ಪಂಚಾಯಿತಿಯಲ್ಲಿ ವಾರ್ಡ್‌ಗಳ ಮೀಸಲಾತಿ, ವ್ಯಾಪ್ತಿ ಹಾಗೂ ಮತದಾರರ ಪಟ್ಟಿಯಲ್ಲಿನ ಗೊಂದಲದಿಂದಾಗಿ ಗ್ರಾಮಸ್ಥರು ಹಾಗೂ ಅಭ್ಯರ್ಥಿಗಳು ಮತದಾನ ಬಹಿಷ್ಕರಿಸಿದ್ದರು. ಕೋಳಿವಾಡ ಗ್ರಾಮ ಪಂಚಾಯಿತಿ ವ್ಯಾಪ್ತಿ ಮಲ್ಲಿಗ ವಾಡ ಗ್ರಾಮದಲ್ಲಿ ಪ್ರತ್ಯೇಕ ಪಂಚಾಯಿತಿಗೆ ಒತ್ತಾಯಿಸಿ ಸತತ 6ನೇ ಚುನಾವಣೆಯನ್ನೂ ಗ್ರಾಮಸ್ಥರು ಬಹಿಷ್ಕರಿಸಿದರು.

ನವಲಗುಂದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಅವರ ಊರಾದ ಅಮರಗೋಳ ದಲ್ಲೂ ಇಂತಹದ್ದೇ ಸಮಸ್ಯೆ ಎದುರಾಯಿತು. ವಾರ್ಡ್‌ ವಿಂಗಡನೆ ಸಮರ್ಪಕವಾಗಿ ಆಗಿಲ್ಲ ಎಂದು ಅಭ್ಯರ್ಥಿಗಳು ಆರೋಪಿಸಿ ಮತದಾನದಿಂದ ದೂರ ಉಳಿದರು.

ಮಾತಿನ ಚಕಮಕಿ: ಬೆಳವಟಗಿಯಲ್ಲಿ ಪೊಲೀಸರು ಹಾಗೂ ಮತ ದಾರರ ನಡುವೆ ಮಾತಿನ ಚಕಮಕಿ ನಡೆಯಿತು. ಮೊರಬ ಗ್ರಾಮ ಪಂಚಾಯಿತಿಯ 2ಹಾಗೂ 3ನೇ ವಾರ್ಡ್‌ನಲ್ಲಿ ಮತ ದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿರುವುದಕ್ಕೆ ಕೆಲವರು ಗಲಾಟೆ ನಡೆಸಿದರು.

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಕುಟುಕನಕೇರಿ ಗ್ರಾಮ ಪಂಚಾಯಿತಿಯಲ್ಲೂ ಮತದಾನ ಬಹಿಷ್ಕರಿಸಲಾಗಿತ್ತು.

ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಮೆಣಸಗಿ ಗ್ರಾಮದ ಮತಗಟ್ಟೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ, ಬಿಜೆಪಿಯ ಶಿವಕುಮಾರ ನೀಲಗುಂದ ಅವರ ಮೇಲೆ ಕೆಲ ವ್ಯಕ್ತಿಗಳು ಹಲ್ಲೆ ಮಾಡಿದರು. ಕೆಲಕಾಲ ಮತದಾನ ಸ್ಥಗಿತವಾಗಿತ್ತು. ಹಲ್ಲೆ ಮಾಡಿದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಲಾಠಿ ಪ್ರಹಾರ: ವಿಜಯಪುರ ಜಿಲ್ಲೆಯ ಚಟ್ಟರಕಿ ಗ್ರಾಮ ಪಂಚಾಯಿತಿಯ ಮತಗಟ್ಟೆಯಲ್ಲಿ ಎರಡು ಗುಂಪುಗಳ ನಡುವೆ ವಾಗ್ವಾದ ಏರ್ಪಟ್ಟು, ಉದ್ರಿಕ್ತ ಜನರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.

ಮದಲೂರು: ದಾಂಪತ್ಯಕ್ಕೆ ಬೆಸುಗೆ ಹಾಕಿದ ಮತದಾನ!
ತುಮಕೂರು: ಭಾನುವಾರ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯ ಎರಡನೇ ಹಂತದ ಮತದಾನವು ದೂರವಾಗಿದ್ದ ಸತಿ–ಪತಿಯನ್ನು ಒಗ್ಗೂಡಿಸಿದ ಅಪರೂಪದ ಪ್ರಸಂಗಕ್ಕೆ ಸಾಕ್ಷಿಯಾಯಿತು.

ಶಿರಾ ತಾಲ್ಲೂಕು ಮದಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಳಿಗೆರೆಯ ಗೋವಿಂದಪ್ಪ ಮತ್ತು ಸೀಗಲಹಳ್ಳಿಯ ಗುರುಶಾಂತಮ್ಮ ವಿವಾಹ ಐದು ವರ್ಷಗಳ ಹಿಂದೆ ನಡೆದಿತ್ತು. ಆರೇಳು ತಿಂಗಳ ಹಿಂದೆ ದಾಂಪತ್ಯದಲ್ಲಿ ಬಿರುಕು ಮೂಡಿದ ಪರಿಣಾಮ ಗುರುಶಾಂತಮ್ಮ ತವರು ಮನೆ ಸೇರಿದ್ದರು.

ಮತ ನೀಡುವಂತೆ ಅಭ್ಯರ್ಥಿಯೊಬ್ಬರು ಗುರುಶಾಂತಮ್ಮ ಅವರನ್ನು ಕೋರಿದ್ದರು. ಅದಕ್ಕಾಗಿ ಭಾನುವಾರ ಮತ ಚಲಾಯಿಸಲು ಹುಳಿಗೆರೆಗೆ ಗುರುಶಾಂತಮ್ಮ ಬಂದಿದ್ದರು.

ಇದೇ ವೇಳೆ ಗೋವಿಂದಪ್ಪ ಸಹ ಮತಗಟ್ಟೆಗೆ ಬಂದಿದ್ದಾರೆ. ಆಗ ಮತಗಟ್ಟೆಯಲ್ಲಿ ಇಬ್ಬರೂ ಮುಖಾಮುಖಿಯಾಗಿದ್ದಾರೆ. ಮುನಿಸು ಮರೆತ ದಂಪತಿ ಮತ್ತೆ ಒಂದಾಗುವ ಮನಸ್ಸು ಮಾಡಿದರು. ಮತದಾನ ಮಾಡಿದ ಗುರುಶಾಂತಮ್ಮ ಪತಿ ಜತೆಗೂಡಿ ನೇರವಾಗಿ ಮನೆ ಸೇರಿದರು.

‘ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿ ಚಂದ್ರಶೇಖರ್ ಅವರು ನಮ್ಮನ್ನು ಒಂದು ಮಾಡಲು ಮೂರು ಸಲ ಪ್ರಯತ್ನಿಸಿದ್ದರು. ಆದರೂ ಸಾಧ್ಯವಾಗಿರಲಿಲ್ಲ. ಪಂಚಾಯಿತಿ ಚುನಾವಣೆಯಲ್ಲಿ ಮತ ನೀಡಲು ನನ್ನ ಪತ್ನಿ ಬಂದಾಗ ನಾನೂ ಅಲ್ಲೇ ಇದ್ದೆ. ಪತ್ನಿಯ ಮುಖ ನೋಡಿದ ತಕ್ಷಣ ಮನಸ್ಸು ಬದಲಾಯಿತು. ಇಬ್ಬರಿಗೂ ತಪ್ಪುಗಳು ಅರಿವಾದವು. ಒಂದಾದೆವು. ನನಗೆ ಹೆಚ್ಚಿನ ಖುಷಿ ಆಗಿದೆ. ಇನ್ನು ಮುಂದೆ ಸಂಸಾರದಲ್ಲಿ ಸಾಮರಸ್ಯದಿಂದ ಬದುಕುತ್ತೇವೆ’ ಎಂದು ಗೋವಿಂದಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಮತದಾನ ಮುನ್ನಾ ದಿನ ಮಗುವಿಗೆ ಜನ್ಮ ನೀಡಿದ ಅಭ್ಯರ್ಥಿ
ಕಲಬುರ್ಗಿ: ಚಿತ್ತಾಪುರ ತಾಲ್ಲೂಕಿನ ವಾಡಿ ಸಮೀಪದ ಇಂಗಳಗಿ ಗ್ರಾಮದಲ್ಲಿ ಗ್ರಾಮಪಂಚಾಯಿತಿ ಚುನಾವಣಾ ಅಭ್ಯರ್ಥಿ ಮಂಜುಳಾ ಗುಡುಬಾ ಅವರು ಮತದಾನದ ಮುನ್ನಾ ದಿನ ಶನಿವಾರ ರಾತ್ರಿ 10ಕ್ಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ವಿಶೇಷವೆಂದರೆ, ಮಂಜುಳಾ ಅವರು ವಾರ್ಡ್‌ 3 ರಿಂದ ಸ್ಪರ್ಧಿಸಿದ್ದರೆ, ಅವರ ಅತ್ತೆ ರಮಾಬಾಯಿ ವಾರ್ಡ್‌ ಸಂಖ್ಯೆ 4ರಿಂದ ಸ್ಪರ್ಧಿಸಿದ್ದಾರೆ.

ಚಿತ್ತಾಪುರ ತಾಲ್ಲೂಕಿನ ದಂಡಗುಂಡ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮತ ಚಲಾಯಿಸಲು ಮತಗಟ್ಟೆಯೊಳಗೆ ಮತದಾರನ ಹಿಂದೆ ಬಂದ ಅಭ್ಯರ್ಥಿಯೊಬ್ಬರು ಮತಪತ್ರ ಕಸಿದುಕೊಂಡು ಹರಿದು ಹಾಕಿದ ಘಟನೆ ಜರುಗಿತು. ಚುನಾವಣೆ ನಿಯಮ ಉಲ್ಲಂಘನೆ ಆರೋಪದ ಮೇಲೆ ಅಭ್ಯರ್ಥಿಯ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದು ತಹಶೀಲ್ದಾರ್ ಉಮಾಕಾಂತ್ ಹಳ್ಳೆ ತಿಳಿಸಿದ್ದಾರೆ.

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಗುಂಡು ಮುಣುಗು ಗ್ರಾಮದಲ್ಲಿ ಎರಡೂ ಕೈ ಇಲ್ಲದ ಲಕ್ಷ್ಮಿದೇವಿ ಕಾಲಿನಿಂದಲೇ ಮತದಾನ ಮಾಡಿದರು.

ಪಡಸಲನತ್ತ ಗ್ರಾಮದಲ್ಲಿ ಬಹಿಷ್ಕಾರ
ಚಾಮರಾಜನಗರ: ಜಿಲ್ಲೆಯಲ್ಲಿ ಭಾನುವಾರ ನಡೆದ ಎರಡನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ, ಮಹದೇಶ್ವರ ಬೆಟ್ಟ ವ್ಯಾಪ್ತಿಯ ಪಡಸಲನತ್ತ ಗ್ರಾಮದಲ್ಲಿ ಮತದಾನ ಬಹಿಷ್ಕರಿಸಿದರೆ; ಕೊಳ್ಳೇಗಾಲ ತಾಲ್ಲೂಕಿನ ಸಿದ್ದಯ್ಯನಪುರದಲ್ಲಿ ಗ್ರಾಮಸ್ಥರು ಐದೂ ಮುಕ್ಕಾಲು ಗಂಟೆ ಮತದಾನದಿಂದ ದೂರ ಉಳಿದರು.

ಪಡಸಲನತ್ತ ಗ್ರಾಮದ ವ್ಯಕ್ತಿಯೊಬ್ಬರು ಶನಿವಾರ ಮೇವು ತರುವುದಕ್ಕೆ ಕಾಡಿಗೆ ಹೋಗಿದ್ದ ಸಂದರ್ಭದಲ್ಲಿ ಆನೆ ದಾಳಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿ ಆಳದ ಹೊಂಡಕ್ಕೆ ಬಿದ್ದು ಮೃತಪಟ್ಟಿದ್ದರು. ಅವರ ಕುಟುಂಬಕ್ಕೆ ತಕ್ಷಣವೇ ಪರಿಹಾರ ನೀಡಬೇಕು ಎಂದು ಆಗ್ರಹಿಸಿ, ಗ್ರಾಮಸ್ಥರು ಮತಗಟ್ಟೆಯತ್ತ ಸುಳಿಯಲಿಲ್ಲ. ಅಧಿಕಾರಿಗಳ ಮನವೊಲಿಕೆಯ ಪ್ರಯತ್ನವೂ ಫಲಿಸಲಿಲ್ಲ.

ಕೊಳ್ಳೇಗಾಲ ತಾಲ್ಲೂಕಿನ ಸಿದ್ದಯ್ಯನಪುರದ ವಾರ್ಡ್–1ರಲ್ಲಿ ನಾಲ್ಕು ಮತ ಹಾಕಲು ಅವಕಾಶ ನೀಡಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಐದು ಮುಕ್ಕೂಲು ಗಂಟೆ ಮತದಾನದಿಂದ ದೂರ ಉಳಿದರು. ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ತಿಳಿವಳಿಕೆ ಹೇಳಿದ ಬಳಿಕ, 12.45ರ ಬಳಿಕ ಮತದಾನಕ್ಕೆ ಮುಂದಾದರು.

ಚಳ್ಳಕೆರೆ: ಶತಾಯುಷಿಗೆ ವಾಹನದಲ್ಲೇ ಕುಳಿತು ಮತದಾನಕ್ಕೆ ಅವಕಾಶ
ಚಿತ್ರದುರ್ಗ:
ಚಳ್ಳಕೆರೆ ತಾಲ್ಲೂಕಿನ ಕಮ್ಮತ್‌ ಮರಕುಂಟೆ ಹಾಗೂ ಹೆಗ್ಗೆರೆಯ ಮತಗಟ್ಟೆಗೆ ಸಿದ್ಧವಾಗಿದ್ದ ಮತಪತ್ರದಲ್ಲಿ ದೋಷ ಕಾಣಿಸಿಕೊಂಡಿದ್ದರಿಂದ ಮತಪತ್ರವನ್ನು ಮರುಮುದ್ರಣ ಮಾಡಲಾಗಿದೆ. ಚಿಕ್ಕಮಧುರೆ ಗ್ರಾಮದ ಮತಗಟ್ಟೆಯಲ್ಲಿ ಶತಾಯುಷಿಯೊಬ್ಬರಿಗೆ ವಾಹನದಲ್ಲೇ ಕುಳಿತು ಮತದಾನ ಮಾಡಲು ಚುನಾವಣಾ ಸಿಬ್ಬಂದಿ ಅವಕಾಶ ಮಾಡಿಕೊಟ್ಟರು.

ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಮತ್ತಿಹಳ್ಳಿ ಗ್ರಾಮ ಪಂಚಾಯಿತಿಯ ಅಡ್ವೆಹಳ್ಳಿಯಲ್ಲಿ 800ಕ್ಕೂ ಅಧಿಕ ಮತದಾರರಿದ್ದರೂ ಶೇ 10ರಷ್ಟು ಮಂದಿಯೂ ಮತದಾನ ಮಾಡದೇ ಅಚ್ಚರಿ ಮೂಡಿಸಿದರು.

ಹರಿಹರ ತಾಲ್ಲೂಕಿನ ಮರಳಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ ಕಾರಣ ಒಂದು ಸ್ಥಾನದ ಚುನಾವಣೆ ನಡೆಯಲಿಲ್ಲ.ಮಲೇಬೆನ್ನೂರು ಸಮೀಪದ ನಿಟ್ಟೂರು ಗ್ರಾಮದಲ್ಲಿ ಒಂದೇ ಕುಟುಂಬದ ಮೂವರು ಅಭ್ಯರ್ಥಿಗಳು ಕಣದಲ್ಲಿ ಇದ್ದ ಕಾರಣ ಬೇಸರಗೊಂಡ ಗ್ರಾಮಸ್ಥರು ಕೆಲ ಕಾಲ ಮತದಾನದಿಂದ ದೂರ ಉಳಿದರು. ಬಳಿಕ ತಹಶೀಲ್ದಾರ್‌ ಸೇರಿ ಅಧಿಕಾರಿಗಳು ಗ್ರಾಮಸ್ಥರ ಮನವೊಲಿಸಿದರು.

ಸಾಗರ ತಾಲ್ಲೂಕಿನ ಪಡವಗೋಡು ಗ್ರಾಮ ಪಂಚಾಯಿತಿಯ ಬೆಳ್ಳಿಕೊಪ್ಪ ಗ್ರಾಮಸ್ಥರು ಮದ್ಯದ ಅಂಗಡಿ ತೆರೆಯುವುದನ್ನು ವಿರೋಧಿಸಿ ಮತದಾನ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ತಹಶೀಲ್ದಾರ್ ಚಂದ್ರಶೇಖರ್ ನಾಯಕ್ ಭೇಟಿ ನೀಡಿ ಗ್ರಾಮಸ್ಥರ ಮನವೊಲಿಸಿದ ನಂತರ ಗ್ರಾಮಸ್ಥರು ಮತದಾನ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT