ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯಕೀಯ ಸಮೂಹವನ್ನೇ ದಾರಿ ತಪ್ಪಿಸುತ್ತಿದೆ ಕೊರೊನಾ: ಆರೋಗ್ಯ ಸಚಿವ ಕೆ.ಸುಧಾಕರ್

‘ರೋಗಲಕ್ಷಣ ಇಲ್ಲದವರನ್ನು ದಾಖಲಿಸಿಕೊಂಡ ಆಸ್ಪತ್ರೆಗಳ ವಿರುದ್ಧ ಕ್ರಮ’
Last Updated 24 ಏಪ್ರಿಲ್ 2021, 7:52 IST
ಅಕ್ಷರ ಗಾತ್ರ

ಬೆಂಗಳೂರು: ‘ಕೋವಿಡ್‌ ಎರಡನೇ ಅಲೆಯಲ್ಲಿ ರೂಪಾಂತರಗೊಂಡಿರುವ ವೈರಸ್‌ನ ಸ್ವಭಾವ ವೈದ್ಯಕೀಯ ಸಮೂಹವನ್ನೇ ದಾರಿ ತಪ್ಪಿಸುವಂತೆ ಬದಲಾಗಿದೆ ಎಂದು ಆರೋಗ್ಯ ಸಚಿವ ಕೆ. ಸುಧಾಕರ್‌ ಹೇಳಿದರು.

ಸುದ್ದಿಗಾರರ ಜೊತೆ ಶನಿವಾರ ಬೆಳಿಗ್ಗೆ ಮಾತನಾಡಿದ ಅವರು, ‘ಮೊದಲಿನ ಅಲೆಗೆ ಹೋಲಿಸಿದರೆ, ಎರಡನೇ ಅಲೆ ಬಹಳ ತೀಕ್ಷ್ಣವಾಗಿದೆ. ಬಹಳ ವೇಗವಾಗಿ ಹರಡುತ್ತದೆ. ಅದಕ್ಕೆ ಕಾರಣ ರೂಪಾಂತರಗೊಂಡಿರುವ ವೈರಸ್‌ ಸ್ವಭಾವ’ ಎಂದರು.

‘ಬೇರೆ ದೇಶಗಳಲ್ಲಿಯೂ ಎರಡನೇ ಅಲೆ ಬಂದಿದೆ. ಆದರೆ, ಭಾರತದಲ್ಲಿರುವ ವೈರಸ್‌ಗೆ ಬ್ರಿಟನ್‌, ಬ್ರೆಜಿಲ್‌ ವೈರಸ್‌ನ ಸ್ವಭಾವವೂ ಇಲ್ಲ. ಬೇರೆ ಯಾವುದೇ ದೇಶದಲ್ಲಿರುವ ವೈರಸ್‌ನ ಸ್ವಭಾವ ಇಲ್ಲಿ ಕಾಣಿಸುತ್ತಿಲ್ಲ. ಹೊರ ದೇಶಗಳು ಇದನ್ನು ಭಾರತದ ವೈರಸ್‌ ಎಂದು ವ್ಯಾಖ್ಯಾನ ಮಾಡುತ್ತಿವೆ. ಇದರ ಗುಣಲಕ್ಷಣಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವ ಯತ್ನ ನಡೆಯುತ್ತಿದೆ’ ಎಂದರು.

‘ಎರಡನೇ ಅಲೆಯಲ್ಲಿ ಹೆಚ್ಚು ಜನರು ಸೋಂಕಿತರಾದರೂ, ಕರ್ನಾಟಕದಲ್ಲಿ ಸಾವಿನ ಪ್ರಮಾಣ ಶೇ 0.44ರಿಂದ 0.45 ಇದೆ. ಹೆಚ್ಚು ಜನರಿಗೆ ಸೋಂಕು ಬಂದಿರುವುದರಿಂದ ಸಂಖ್ಯೆ ಹೆಚ್ಚು ಕಾಣುತ್ತಿದೆ. ಈ ಕಾರಣದಿಂದ ಸರ್ಕಾರ ಬಿಗಿಯಾದ ಮಾರ್ಗಸೂಚಿ ಹೊರಡಿಸಿದೆ. ಜನರು ಮನೆಯಿಂದ ಅನಗತ್ಯವಾಗಿ ಹೊರಗೆ ಬರಬಾರದು. ಗುಂಪು ಸೇರುವುದನ್ನು ತಪ್ಪಿಸಬೇಕು. ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಬೇಕು. ಶುಚಿತ್ವ ಕಾಪಾಡಿಕೊಂಡು, ಗುಣಮಟ್ಟದ ಪೌಷ್ಟಿಕ ಆಹಾರ ಸೇವಿಸಬೇಕು’ ಎಂದರು.

‘ಲಸಿಕೆ ಲಭ್ಯವಿರುವುದು ನಮ್ಮೆಲ್ಲರ ಅದೃಷ್ಟ. ಫೆಬ್ರುವರಿಯಲ್ಲಿ ಈ ರೋಗಾಣು ಪತ್ತೆಯಾದ ಬಳಿಕ ಲಸಿಕೆ ಬಂದಿದೆ. ಈ ಲಸಿಕೆಯನ್ನು ತೆಗೆದುಕೊಳ್ಳುವುದರಲ್ಲಿ ನಾವು ಮೊದಲಿಗರಾಗಬೇಕು’ ಎಂದರು.

‘ಯಾವುದೇ ರೂಪಾಂತರಗೊಂಡ ವೈರಸ್‌, ನಿರಂತರ ಬದಲಾವಣೆ ಆಗುತ್ತಲೇ ಹೋಗುತ್ತಿದೆ. ಈ ವೈರಸ್‌, ಚೆಸ್‌ ರೀತಿ ಆಟವಾಡುತ್ತಿದೆ ಎಂದು ಏಮ್ಸ್‌ ಅಧ್ಯಕ್ಷ ಗುಲೇರಿಯಾ ಹೇಳಿದ್ದಾರೆ. ನಾವು ಒಂದು ಪಾನ್‌ ಮೂವ್‌ ಮಾಡಿದರೆ ವೈರಸ್‌ಬೇರೆ ರೀತಿಯಲ್ಲಿ ಮೂವ್‌ ಮಾಡುತ್ತದೆ. ಹೀಗಾಗಿ, ವೈದ್ಯಕೀಯ ಜಗತನ್ನೇ ತಲ್ಲಣಗೊಳಿಸುವಂಥದ್ದು. ಸವಾಲು ಆಗುವಂತೆ ಪರಿಣಾಮ ಬೀರುತ್ತಿದೆ’ ಎಂದರು.

‘ಮೊದಲ ಅಲೆ ಸಂದರ್ಭದಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನರಿಗೆ ಆಮ್ಲಜನಕ ಅಗತ್ಯ ಬಂದಿರಲಿಲ್ಲ. ಈ ಬಾರಿ ಹೆಚ್ಚಿನ ಜನರಿಗೆ ಆಮ್ಲಜನಕ ಬೇಕಾಗಿ ಬಂದಿದೆ. ಕಳೆದ ಬಾರಿ ಈ ಸಮಯದಲ್ಲಿ 300ರಿಂದ 350 ಟನ್‌ ಆಮ್ಲಜನಕ ಲೆಕ್ಕ ಹಾಕಿದ್ದೆವು. ಈ ಬಾರಿ ಈಗಲೇ 500 ಟನ್ ದಾಟಿದೆ. ಇದೇ ರೀತಿ ಏರಿಕೆಯಾದರೆ, ಮೇ 1ರ ವೇಳೆಗೆ 1,414 ಟನ್‌ ಬೇಕಾಗಬಹುದು ಎಂದು ಅಂದಾಜು ಮಾಡಲಾಗಿದೆ. ಆಮ್ಲಜನಕ ಪೂರೈಕೆ ಮಾಡುವಂತೆ ಪ್ರಧಾನಿಗೆ ಮುಖ್ಯಮಂತ್ರಿ ಮನವಿ ಮಾಡಿದ್ದಾರೆ’ ಎಂದರು.

‘ಅಲ್ಲದೆ, ವಿಶೇಷವಾಗಿ ಬೆಂಗಳೂರಿನಲ್ಲಿ ಹೆಚ್ಚುವರಿಯಾಗಿ 2,000 ಐಸಿಯು ಬೆಡ್‌ಗಳನ್ನು ವೆಂಟಿಲೇಟರ್‌ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಮೈಸೂರು, ಹುಬ್ಬಳ್ಳಿ ಬೀದರ್‌, ಬೆಳಗಾವಿ, ಶಿವಮೊಗ್ಗದಲ್ಲಿ 200ರಿಂದ 250 ಹಾಸಿಗೆ ಸಾಮರ್ಥ್ಯದ ಐಸಿಯು ಆಸ್ಪತ್ರೆಗಳನ್ನು 15 ದಿನಗಳ ಒಳಗೆ ಆರಂಭಿಸಲು ತೀರ್ಮಾನಿಸಿದ್ದೇವೆ. ಈ ಎಲ್ಲ ಪ್ರಯತ್ನಗಳು ಸಮರೋಪಾದಿಯಲ್ಲಿ ನಡೆಯುತ್ತಿದೆ’ ಎಂದರು.

‘ಎಲ್ಲರ ನಿರೀಕ್ಷೆ ಮೀರಿ ಸೋಂಕಿನ ಸ್ವಭಾವ ಬದಲಾಗಿದೆ. ಎಲ್ಲರಿಗೂ ಇದು ಸವಾಲಾಗಿದೆ. ದಿಲ್ಲಿ, ಮುಂಬೈಯಲ್ಲಿ, ಸೂರತ್‌ನಲ್ಲಿ ಏನಾಗುತ್ತಿದೆ, ಗಂಗಾರಾಂ ಆಸ್ಪತ್ರೆಯಲ್ಲಿ ನಡೆದ ದುರಂತ ಎಲ್ಲವನ್ನೂ ಅರಿತುಕೊಂಡು ಯಾವುದೇ ಕೊರತೆ ಆಗದಂತೆ ರಾಜ್ಯದಲ್ಲಿ ವೈದ್ಯಕೀಯ ಸೌಲಭ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ನಡೆದಿದೆ’ ಎಂದರು.

’ಖಾಸಗಿ ವೈದ್ಯಕೀಯ ಕಾಲೇಜು ಶೇ 50ರಷ್ಟು ಬೆಡ್‌ಗಳನ್ನು ಸೋಕಿತರಿಗೆ ಮೀಸಲಿಡಬೇಕು. ಇದೀಗ ಆ ಪ್ರಮಾಣವನ್ನು ಶೇ 80ಕ್ಕೆ ಏರಿಸುವಂತೆ ಆದೇಶ ಮಾಡುತ್ತೇವೆ’ ಎಂದೂ ಹೇಳಿದರು.

‘ಕೋವಿಡ್‌ ಬಂದರೆ ಸಾವು ಆಗುತ್ತದೆ ಎಂಬ ತಪ್ಪು ಕಲ್ಪನೆ ಜನರಲ್ಲಿದೆ. ಅದು ತಪ್ಪು. ಶೇ 3ರಿಂದ 4ರಷ್ಟು ಮಂದಿಗೆ ಮಾತ್ರ ಬೆಡ್‌, ಆಮ್ಲಜನಕ ಅಗತ್ಯವಾಗಿದೆ. ರೋಗಲಕ್ಷಣ ಇಲ್ಲದವರು ಅಥವಾ ಕಡಿಮೆ ರೋಗಲಕ್ಷಣ ಇರುವವರು ಆಸ್ಪತ್ರೆ ಸೇರಿದರೆ, ನಿಜವಾಗಿ ಬೆಡ್‌, ಆಮ್ಲಜನಕ ಸಹಿತ ಚಿಕಿತ್ಸೆ ಸಿಗಬೇಕಾದವರಿಗೆ ಅನ್ಯಾಯ ಮಾಡಿದಂತೆ. ಅವರ ಜೀವಕ್ಕೆ ತೊಂದರೆ ಮಾಡಿದಂತೆ. ಹೀಗಾಗಿ, ಜೀವ ಉಳಿಸುವ ಕೆಲಸವನ್ನು ಎಲ್ಲರೂ ಮಾಡಬೇಕು’ ಎಂದು ಮನವಿ ಮಾಡಿದರು.

’ಹೀಗಾಗಿ, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ವೈದ್ಯರಿಗೆ ಸ್ಪಷ್ಟ ಸೂಚನ ನೀಡಿದ್ದೇವೆ. ಆಸ್ಪತ್ರೆಯಲ್ಲಿ ದಾಖಲು ಮಾಡಿಕೊಳ್ಳುವ ಸಂದರ್ಭದಲ್ಲಿ, ಕಡಿಮೆ ರೋಗಲಕ್ಷಣ ಇರುವವರನ್ನು ದಾಖಲು ಮಾಡಿಕೊಳ್ಳಲು ಅವಕಾಶ ಇಲ್ಲ. ಸರ್ಕಾರ ಹಣ ನಿಗದಿಪಡಿಸಿದೆ ಎಂದು ರೋಗಲಕ್ಷಣ ಇಲ್ಲದವರನ್ನು ಆಸ್ಪತ್ರೆಗೆ ಸೇರಿಸಿಕೊಂಡರೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಯಾವುದೇ ಕಾರಣಕ್ಕೂ ಆಸ್ಪತ್ರೆಯವರು, ರಾಜಕಾರಣಿಗಳು, ಅಧಿಕಾರಿಗಳ ಪ್ರಭಾವ, ಒತ್ತಡಕ್ಕೆ ಮಣಿದು ರೋಗಲಕ್ಷಣ ಇಲ್ಲದವರನ್ನೂ ಆಸ್ಪತ್ರೆಗೆ ಸೇರಿಸಿಕೊಂಡು ಚಿಕಿತ್ಸೆ ನೀಡಬಾರದು’ ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT