ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಜಾಬ್ ವಿವಾದದ ಪರಿಸ್ಥಿತಿ ನಿಭಾಯಿಸಿ: ಕರ್ನಾಟಕ ಹೈಕೋರ್ಟ್‌ ಸರ್ಕಾರಕ್ಕೆ ತಾಕೀತು

ಹಿಜಾಬ್‌ಗೆ ಲಗಾಮು ಸಲ್ಲ: ಅರ್ಜಿದಾರರ ವಾದ
Last Updated 8 ಫೆಬ್ರುವರಿ 2022, 21:00 IST
ಅಕ್ಷರ ಗಾತ್ರ

ಬೆಂಗಳೂರು: ‘ಹಿಜಾಬ್‌ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯದಾದ್ಯಂತ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಅಶಾಂತಿ ಸೃಷ್ಟಿಗೆ ಮುಂದಾಗಬಾರದು. ಈ ರಾಜ್ಯದ ಜನರು ಮತ್ತು ವಿದ್ಯಾರ್ಥಿಗಳು ಒಳ್ಳೆಯವರಿದ್ದಾರೆ. ಆದರೆ, ಕೆಲವೇ ಕೆಲವು ದುರುಳರಿಂದ ಅಶಾಂತಿ ಸೃಷ್ಟಿಸುವ ಪ್ರಯತ್ನ ನಡೆಯುತ್ತಿದೆ. ಆದ್ದರಿಂದ, ರಾಜ್ಯ ಸರ್ಕಾರ ಶಾಂತಿ ಮತ್ತು ಕಾನೂನು ಪಾಲನೆ ಹೊಣೆಯನ್ನು ಸಮರ್ಥವಾಗಿ ನಿಭಾಯಿಸುವ ಅಗತ್ಯವಿದೆ’ ಎಂದು ಹೈಕೋರ್ಟ್‌ ‍ಪ್ರತಿಪಾದಿಸಿದೆ.

‘ಹಿಜಾಬ್‌ ಧರಿಸಿ ಕಾಲೇಜು ತರಗತಿ ಪ್ರವೇಶಿಸಬಾರದು‘ ಎಂದು ಉಡುಪಿಯ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜುಆಡಳಿತ ಮಂಡಳಿ ಹೇರಿರುವ ನಿರ್ಬಂಧ ಹಾಗೂ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಇದೇ 5ರಂದು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ಪ್ರಶ್ನಿಸಿದಂತೆ ಸಲ್ಲಿಸಲಾಗಿರುವ ಹಲವು ರಿಟ್‌ ಅರ್ಜಿಗಳನ್ನು ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ದಿನದ ಕಲಾಪದ ಅಂತ್ಯಕ್ಕೆ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ಕೆ.ನಾವದಗಿ, ‘ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಹಿಜಾಬ್‌ಗೆ ಸಂಬಂಧಿಸಿದಂತೆ ಯಾವುದೇ ಪ್ರತಿಭಟನೆ ನಡೆಸದಂತೆ ಆದೇಶ ನೀಡಬೇಕು‘ ಎಂದು ಕೋರಿದರು. ಈ ಕೋರಿಕೆಯನ್ನು ಸಾರಾಸಗಟಾಗಿ ನಿರಾಕರಿಸಿದ ನ್ಯಾಯಪೀಠ, ‘ರಸ್ತೆಗಳಲ್ಲಿ ಪ್ರತಿಭಟನೆ ನಡೆಸುತ್ತಿರುವವರು ಅರ್ಜಿದಾರರಲ್ಲ. ಸರ್ಕಾರವು ಕಾನೂನು ಮತ್ತು ಶಾಂತಿ ಪಾಲನೆಯ ತನ್ನ ಜವಾಬ್ದಾರಿಯನ್ನು ಗಂಭೀರವಾಗಿ ನಿಭಾಯಿಸಬೇಕು‘ ಎಂದು ತಾಕೀತು ಮಾಡಿತು.

ಅರ್ಜಿದಾರರ ಪರ ಸುದೀರ್ಘ ವಾದ ಮಂಡಿಸಿದ ಹಿರಿಯ ವಕೀಲ ದೇವದತ್ತ ಕಾಮತ್‌, ‘ವಸ್ತ್ರಸಂಹಿತೆ ಹೆಸರಿನಲ್ಲಿ ಸರ್ಕಾರ ಹೊರಡಿಸಿರುವ ಆದೇಶ ಕಾನೂನು ಬಾಹಿರ. ಹಿಜಾಬ್‌ ಧರಿಸಿ ಕಾಲೇಜು ತರಗತಿಗೆ ಪ್ರವೇಶಿಸುವುದನ್ನು ತಡೆಯವುದು, ಸಂವಿಧಾನ ಈ ದೇಶದ ಪ್ರತಿಯೊಬ್ಬ ಪ್ರಜೆಗೆ ಕೊಡಮಾಡಿರುವ ಮೂಲಭೂತ ಹಕ್ಕಿನ ಉಲ್ಲಂಘನೆ. ಹಿಜಾಬ್‌ಗೆ ಲಗಾಮು ಹಾಕುವ ಮೂಲಕ ಮುಸ್ಲಿಂ ವಿದ್ಯಾರ್ಥಿನಿಯರ ಅಗತ್ಯ ಧಾರ್ಮಿಕ ಆಚರಣೆಯ ಹಕ್ಕನ್ನು ಕಸಿದುಕೊಂಡಂತಾಗಿದೆ’ ಎಂದು ಆಕ್ಷೇಪಿಸಿದರು.

‘ಹಿಜಾಬ್‌ ಧರಿಸುವುದು ಸಂವಿಧಾನದ 19 (1) ಎ ವಿಧಿಯ ಅನುಸಾರ ಅಭಿವ್ಯಕ್ತಿ ಹಾಗೂ 25ನೇ ವಿಧಿಯ ಪ್ರಕಾರ ವೈಯಕ್ತಿಕ ಸ್ವಾತಂತ್ರ್ಯದ ವ್ಯಾಪ್ತಿಗೆ ಒಳಪಟ್ಟ ವಿಚಾರ. ಹೀಗಾಗಿ, ಈ ಅಂಶಕ್ಕೆ ಪೂರಕವಾಗಿ ಕೇರಳ, ಮದ್ರಾಸ್‌ ಮತ್ತು ಬಾಂಬೆ ಹೈಕೋರ್ಟ್‌ಗಳು ನೀಡಿರುವ ತೀರ್ಪುಗಳನ್ನು ನ್ಯಾಯಪೀಠ ಪರಿಗಣಿಸಬೇಕು’ ಎಂದು ಕೋರಿದರು. ವಿಚಾರಣೆಯನ್ನು ಬುಧವಾರ ಮಧ್ಯಾಹ್ನದ ಕಲಾಪಕ್ಕೆ ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT