ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಜಾಬ್ ವಿವಾದ: ತರಗತಿ ಬಹಿಷ್ಕರಿಸಿದ ವಿದ್ಯಾರ್ಥಿನಿಯರು

ಹಿಜಾಬ್‌: ಕೆಲವೆಡೆ ಪ್ರತಿಭಟನೆ, ಮುಂದುವರಿದ ವಾಕ್ಸಮರ
Last Updated 16 ಫೆಬ್ರುವರಿ 2022, 20:32 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಬುಧವಾರ ಮತ್ತೆ ಆರಂಭಗೊಂಡ ಪದವಿಪೂರ್ವ ಮತ್ತು ಪದವಿ ಕಾಲೇಜುಗಳಿಗೆ ಕೆಲ ಜಿಲ್ಲೆಗಳಲ್ಲಿ ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಿಕೊಂಡು ಬಂದಿದ್ದರು. ಹಿಜಾಬ್‌ ಧರಿಸಿ ತರಗತಿಗಳಿಗೆ ಹಾಜರಾಗಲು ಅವಕಾಶ ನಿರಾಕರಿಸಿದ್ದರಿಂದ, ಹಲವೆಡೆ ಕಾಲೇಜು ಆಡಳಿತ ಮಂಡಳಿಗಳು, ಬೋಧಕರೊಂದಿಗೆ ವಿದ್ಯಾರ್ಥಿನಿಯರು ವಾಗ್ವಾದಕ್ಕೆ ಇಳಿದರು. ಆನಂತರ ಪ್ರತಿಭಟನೆ ಕೂಡ ನಡೆಸಿದರು.

ಹಿಜಾಬ್‌ ಧರಿಸಲು ಅವಕಾಶ ಸಿಗದೇ ಇದ್ದುದು, ಹಿಜಾಬ್‌ ತೆಗೆ ಯಲು ನಿರಾಕರಿಸಿದ ಕಾರಣ
ಗಳಿಂದಾಗಿ ವಿದ್ಯಾರ್ಥಿನಿಯರು ವಾಪಸ್ ಹೋಗಿದ್ದಾರೆ.

ಪೋಷಕರು ಹಾಗೂ ಕೆಲ ಮುಸ್ಲಿಂ ಸಂಘ–ಸಂಸ್ಥೆಗಳ ಪದಾಧಿ ಕಾರಿಗಳು ವಿದ್ಯಾರ್ಥಿನಿಯರ ಬೆಂಬಲಕ್ಕೆ ನಿಂತಿದ್ದು, ಹಿಜಾಬ್‌ ಧರಿಸಲು ಅವಕಾಶಕ್ಕೆ ಪಟ್ಟು ಹಿಡಿದರು.

ಪ್ರತ್ಯೇಕ ಕೊಠಡಿ

ಮಂಡ್ಯದ ಪಿಇಎಸ್‌ ಎಂಜಿನಿಯರಿಂಗ್‌ ಕಾಲೇಜು ಆಡಳಿತ ಮಂಡಳಿಯು, ‘ಬುರ್ಖಾ, ಹಿಜಾಬ್‌ ಧರಿಸಿದವರಿಗೆ ಕಾಲೇಜು ಪ್ರವೇಶಿಸಲು ಅವಕಾಶವಿಲ್ಲ. ಆದರೆ ಹಿಜಾಬ್‌, ಬುರ್ಖಾ ತೆಗೆಯಲು ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದ್ದು ಅಲ್ಲಿ ತೆಗೆದು ಬರಬಹುದು’ ಎಂದು ತಿಳಿಸಿದೆ. ಬುರ್ಖಾ, ಹಿಜಾಬ್‌ ಧರಿಸಿದ್ದ ನಾಲ್ವರನ್ನು ಬುಧವಾರ ಕಾಲೇಜು ಗೇಟ್‌ನಲ್ಲಿ ಭದ್ರತಾ ಸಿಬ್ಬಂದಿ ತಡೆದರು. ‘ಪದವಿ ಕಾಲೇಜುಗಳಿಗೆ ಸಮವಸ್ತ್ರದ ನಿಯಮವಿಲ್ಲ ಎಂದು ಉನ್ನತ ಶಿಕ್ಷಣ ಸಚಿವರೇ ಸ್ಪಷ್ಟಪಡಿಸಿದ್ದಾರೆ. ಗುರುವಾರದಿಂದ ಪರೀಕ್ಷೆ ಇದ್ದು ಹಾಲ್‌ ಟಿಕೆಟ್‌ ಪಡೆದುಕೊಳ್ಳಲು ಒಳಗೆ ಬಿಡದೆ ದಬ್ಬಾಳಿಕೆ ಮಾಡಲಾಗುತ್ತಿದೆ’ ಎಂದು ವಿದ್ಯಾರ್ಥಿನಿಯರು ಅಸಮಾಧಾನ ವ್ಯಕ್ತಪಡಿಸಿ, ಹಾಲ್‌ ಟಿಕೆಟ್‌ ಪಡೆಯದೆ ತೆರಳಿದರು.

ಪ್ರತಿಭಟನೆ:
ಹಿಜಾಬ್‌ ಧರಿಸಿ ಬಂದ ವಿದ್ಯಾರ್ಥಿನಿಯರಿಗೆ ಪ್ರವೇಶ ನಿರಾಕರಿಸಿದ್ದರಿಂದ ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಲಿಂಗರಾಜು ಪಿಯು ಕಾಲೇಜು, ಚಿಕ್ಕಮಗಳೂರಿನ ಎಂಇಎಸ್‌ ಮತ್ತು ಮೌಂಟನ್ ವ್ಯೂ ಕಾಲೇಜಿನ ಕೆಲವು ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದರು.

ಹುಬ್ಬಳ್ಳಿಯ ಜೆ.ಸಿ. ನಗರದ ಮೂರುಸಾವಿರ ಮಠ ವಿದ್ಯಾವರ್ಧಕ ಸಂಘದ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ 10ಕ್ಕೂ ಹೆಚ್ಚು ಪದವಿ ವಿದ್ಯಾರ್ಥಿನಿಯರು ‘ಹಿಜಾಬ್ ಧರಿಸಿಯೇ ತರಗತಿಗೆ ಹೋಗುತ್ತೇವೆ’ ಎಂದು ಪಟ್ಟು ಹಿಡಿದಿದ್ದರಿಂದ ಕಾಲೇಜು ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ನಂತರ ಕಾಲೇಜಿಗೆ ಅನಿರ್ದಿಷ್ಟಾವಧಿ ರಜೆ ಘೋಷಣೆ ಮಾಡಲಾಯಿತು. ಚಿತ್ರದುರ್ಗ ಜಿಲ್ಲೆ ಹೊಸದುರ್ಗದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 6 ಹಾಗೂ ಉರ್ದು ಶಾಲೆಯಲ್ಲಿ 40 ವಿದ್ಯಾರ್ಥಿನಿಯರು ಗೈರುಹಾಜರಾದರು.

ರಾಮನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 40ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ತರಗತಿಯಿಂದ ಹೊರಗೆ ಉಳಿದರು. ಕೋಲಾರ ಹಾಗೂ ಬಂಗಾರಪೇಟೆಯ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಸಹ ತರಗತಿ ಬಹಿಷ್ಕರಿಸಿ ಪೋಷಕರೊಂದಿಗೆ ಮನೆಯತ್ತ ಹೆಜ್ಜೆ ಹಾಕಿದರು.

ತುಮಕೂರು ನಗರದ ಎಂಪ್ರೆಸ್ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಬಾಲಕಿಯರು ಪ್ರತಿಭಟನೆ ನಡೆಸಿದರು. ಹಿಜಾಬ್ ತೆಗೆದುಬಂದರೆ ಮಾತ್ರ ಪ್ರವೇಶ ನೀಡಲಾಗುವುದು. ಇಲ್ಲವಾದರೆ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದರು. ಇದಕ್ಕೆ ಒಪ್ಪದಿದ್ದಾಗ ‘ಅಲ್ಲಾಹು ಅಕ್ಬರ್’ ಎಂದು ಘೋಷಣೆ ಕೂಗಿದರು.

ಕಲಬುರಗಿಯ ಐವಾನ್ ಇ ಶಾಹಿ ಬಡಾವಣೆಯ ಪಾಲಿಟೆಕ್ನಿಕ್ ಕಾಲೇಜಿನ 15, ಯಾದಗಿರಿ ಕನ್ನಡ ಪದವಿ ಪೂರ್ವ ಕಾಲೇಜಿನ 15 ಹಾಗೂ ಶಹಾಪುರದಲ್ಲಿ 25 ವಿದ್ಯಾರ್ಥಿನಿಯರು ಕಾಲೇಜಿನಿಂದ ಹೊರ ನಡೆದರು.

ರಾಯಚೂರಿನ ಅನುದಾನಿತ ಎಸ್‌ಎಸ್‌ಆರ್‌ಜಿ ಪದವಿ ಮಹಿಳಾ ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ‘ಹಿಜಾಬ್‌ ನಮ್ಮ ಹಕ್ಕು’ ಎಂದು ಘೋಷಣೆ ಕೂಗುತ್ತಾ ಪ್ರತಿಭಟಿಸಿದರು. ಮಾನ್ವಿಯ ಬಾಷುಮಿಯಾ ಸಾಹುಕಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಜಾಬ್ ಧರಿಸಿದ್ದ 15 ವಿದ್ಯಾರ್ಥಿನಿಯರನ್ನು ತರಗತಿಯಿಂದ ಹೊರಗಡೆ ಕಳುಹಿಸಲಾಯಿತು.

ಹಿಜಾಬ್‌ ತೆಗೆದು ತರಗತಿಗೆ:
ಉಡುಪಿಯ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಆರು ವಿದ್ಯಾರ್ಥಿನಿಯರು ಬುಧವಾರ ಕಾಲೇಜಿಗೆ ಗೈರಾಗಿದ್ದರು. ಇತರ ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜು ಆವರಣಕ್ಕೆ ಹಿಜಾಬ್ ಧರಿಸಿ ಬಂದರು. ಬಳಿಕ ಅದನ್ನು ತೆಗೆದು ತರಗತಿಗೆ ತೆರಳಿದರು.

ಗದುಗಿನ ಗಂಗೀಮಡಿಯಲ್ಲಿರುವ ಉರ್ದು ಶಾಲೆ, ಲಕ್ಷ್ಮೇಶ್ವರದ ಸರ್ಕಾರಿ ಪದವಿಪೂರ್ವ ಕಾಲೇಜಿ
ನಲ್ಲಿಯೂ ಹಿಜಾಬ್‍ಗೆ ಸಂಬಂಧಿಸಿ ಕೆಲ ಹೊತ್ತು ಗೊಂದಲ ನಿರ್ಮಾಣವಾಗಿತ್ತು. ಬಳಿಕ ಪರಿಸ್ಥಿತಿ ತಿಳಿಯಾಗಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯರು ಹಿಜಾಬ್ ತೆಗೆದು ತರಗತಿಗೆ ತೆರಳಿ ಪೂರಕ ಪರೀಕ್ಷೆ ಬರೆದರು.

ಹೊಸಪೇಟೆಯ ಥಿಯೋಸಫಿಕಲ್‌ ಕಾಲೇಜಿನ ಕೆಲ ವಿದ್ಯಾರ್ಥಿನಿಯರು ಹಿಜಾಬ್‌ ತೆಗೆದು ತರಗತಿಗಳಿಗೆ ಹಾಜರಾದರು. ಚಿತ್ರದುರ್ಗ ಜಿಲ್ಲೆ ಹೊಸದುರ್ಗದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಾಲ್ವರು ಮಾತ್ರ ತರಗತಿಗೆ ಹಾಜರಾಗಿದ್ದರು. ಹಿರಿಯೂರು, ಮೊಳಕಾಲ್ಮುರು, ಚಳ್ಳಕೆರೆ, ಹೊಳಲ್ಕೆರೆಯಲ್ಲಿ ಎಂದಿನಂತೆ ತರಗತಿಗಳು ನಡೆದಿವೆ.

ರಿಪ್ಪನ್‌ಪೇಟೆಯಲ್ಲೂ ಹಲವು ವಿದ್ಯಾರ್ಥಿನಿಯರು ಕಾಲೇಜಿಗೆ ಗೈರಾಗಿದ್ದರೆ, ಭದ್ರಾವತಿಯ ಸಂಚಿಹೊನ್ನಮ್ಮ ಪ್ರೌಢಶಾಲೆಯ 70 ವಿದ್ಯಾರ್ಥಿನಿಯರು ಹಿಜಾಬ್‌ ತೆಗೆಯಲು ನಿರಾಕರಿಸಿ ಶಾಲಾ ಆವರಣದಲ್ಲೇ ಸಮಯ ಕಳೆದರು.

ಶಿರಾಳಕೊಪ್ಪದ ಬಾಲಕಿಯರ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಹೈಕೋರ್ಟ್ ಮಧ್ಯಂತರ ಆದೇಶದ ಪ್ರತಿಯನ್ನು ಓದಿ ಹೇಳಿದರೂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಲು ಅನುಮತಿ ನೀಡಬೇಕು ಎಂದು ಪಟ್ಟು ಹಿಡಿದರು.

ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರಿನ ರಥಬೀದಿ ಸರ್ಕಾರಿ ಪದವಿ ಕಾಲೇಜಿನ ಇಬ್ಬರು, ಮೂಲ್ಕಿಯ ಪೊಂಪೈ ಪದವಿ ಕಾಲೇಜಿನ 26 ಹಾಗೂ ವಿಟ್ಲ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನ 11 ವಿದ್ಯಾರ್ಥಿನಿಯರು ಹಿಜಾಬ್‌ ತೆಗೆಯಲು ನಿರಾಕರಿಸಿ, ಮನೆಗೆ ವಾಪಸಾದರು. ಚಿಕ್ಕಮಗಳೂರು ಜಿಲ್ಲೆ ಕಡೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 14, ಎನ್‌.ಆರ್‌. ಪುರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಎಂಟು ವಿದ್ಯಾರ್ಥಿನಿಯರು ವಾಪಸ್‌ ಹೋದರು.

ಉಡುಪಿಯ ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಕೆಲ ವಿದ್ಯಾರ್ಥಿನಿಯರು ತರಗತಿಗೆ ಹಾಜರಾಗದೆ ಮನೆಗೆ ತೆರಳಿದರೆ, ಇನ್ನು ಕೆಲವರನ್ನು ವಿಶ್ರಾಂತಿ ಕೊಠಡಿಯಲ್ಲಿ ಕೂರಿಸಲಾಗಿತ್ತು.

ಶಿರಸಿ ತಾಲ್ಲೂಕಿನ ಚೈತನ್ಯ ಪದವಿಪೂರ್ವ ಕಾಲೇಜು, ಎಂ.ಇ.ಎಸ್. ಪದವಿಪೂರ್ವ ಕಾಲೇಜು, ಪ್ರೊಗ್ರೆಸ್ಸಿವ್ ಪದವಿಪೂರ್ವ ಕಾಲೇಜು, ಚಿಪಗಿಯ ಜೆ.ಎಂ.ಜೆ. ಪದವಿ ಪೂರ್ವ ಕಾಲೇಜು, ಬನವಾಸಿಯ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ 62 ವಿದ್ಯಾರ್ಥಿನಿಯರು ಹಿಜಾಬ್ ತೆಗೆಯಲು ಒಪ್ಪಲಿಲ್ಲ.

ಹೊಸಪೇಟೆ ನಗರದ ಕೆಎಸ್‌ಪಿಎಲ್‌ ಕಾಲೇಜಿನ 12 ವಿದ್ಯಾರ್ಥಿನಿಯರು ಹಿಜಾಬ್ ತೆಗೆಯಲು ನಿರಾಕರಿಸಿ ತರಗತಿಗಳಿಗೆ ಗೈರಾದರು.

ಮೈಸೂರಿನ ರಾಜೀವ್‌ ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನ 14 ವಿದ್ಯಾರ್ಥಿನಿಯರು, ಹಾಸನ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನ 11 ವಿದ್ಯಾರ್ಥಿನಿಯರು, ಬೇಲೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ 39 ವಿದ್ಯಾರ್ಥಿನಿಯರು, ಕೊಡಗು ಜಿಲ್ಲೆಯನೆಲ್ಯಹುದಿಕೇರಿಯ ಕರ್ನಾಟಕ ಪಬ್ಲಿಕ್ ಶಾಲೆಯ 38 ವಿದ್ಯಾರ್ಥಿನಿಯರು, ಶನಿವಾರಸಂತೆ ಪಟ್ಟಣದ ಭಾರತಿ ವಿದ್ಯಾಸಂಸ್ಥೆ ಪ್ರಥಮ ದರ್ಜೆ ಕಾಲೇಜಿನ ಆರು ವಿದ್ಯಾರ್ಥಿನಿಯರು ಕಾಲೇಜಿಗೆ ಪ್ರವೇಶಿಸದೆ ಮನೆಗೆ ಹಿಂದಿರುಗಿದರು.

‘ನಾವೇನೂ ಕೊಲೆ ಮಾಡಲು ಬಂದಿಲ್ಲ, ಓದೋಕೆ ಬಂದಿರೋದು’

ಶಿವಮೊಗ್ಗದ ಡಿವಿಎಸ್‌ ಕಾಲೇಜಿನಲ್ಲಿ ಹಿಜಾಬ್ ಧರಿಸಿ ಬಂದಿದ್ದ ವಿದ್ಯಾರ್ಥಿನಿಗೆ ಹಿಜಾಬ್‌ ತೆಗೆದು ಕಾಲೇಜು ಒಳಗೆ ಪ್ರವೇಶ ಮಾಡುವಂತೆ ಉಪನ್ಯಾಸಕರು ಸೂಚಿಸಿದರು. ಇದರಿಂದ ಸಿಟ್ಟಿಗೆದ್ದ ವಿದ್ಯಾರ್ಥಿನಿ, ‘ನಾನು ಕೊಲೆ ಮಾಡಲು ಬಂದಿಲ್ಲ, ಓದುವುದಕ್ಕೆ ಬಂದಿರೋದು. ಹಿಜಾಬ್‌ ನಮ್ಮ ಹೆಮ್ಮೆ, ನಾನು ತೆಗೆಯಲ್ಲ’ ಎಂದು ಆಕ್ರೋಶ ಹೊರಹಾಕಿದ್ದಾರೆ. ಇನ್ನು ಹಿಜಾಬ್‌ ತೆಗೆಯಲು ಒಪ್ಪದಹಲವು ವಿದ್ಯಾರ್ಥಿನಿಯರು ಮನೆಗೆ ತೆರಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT