ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆ ಶುರು: ಕೆಲವೆಡೆ ವಾಗ್ವಾದ, ಹಿಜಾಬ್ ಧರಿಸಿ ಬಂದಿದ್ದ ವಿದ್ಯಾರ್ಥಿಗಳ ಮನವೊಲಿಕೆ

ಮುಂಜಾಗ್ರತೆಯಾಗಿ ಪೊಲೀಸ್‌ ಭದ್ರತೆ
Last Updated 14 ಫೆಬ್ರುವರಿ 2022, 19:38 IST
ಅಕ್ಷರ ಗಾತ್ರ

ಬೆಂಗಳೂರು: ಹಿಜಾಬ್‌–ಕೇಸರಿ ಶಾಲು ಕುರಿತ ಹೈಕೋರ್ಟ್‌ ಮಧ್ಯಂತರ ಆದೇಶದ ನಡುವೆಯೇ ರಾಜ್ಯದಾದ್ಯಂತ ಪ್ರೌಢಶಾಲಾ ತರಗತಿಗಳು ಸೋಮವಾರ ಪುನರಾರಂಭವಾದವು. ಮೊದಲ ದಿನ ಅಲ್ಲಲ್ಲಿ ವಿದ್ಯಾರ್ಥಿಗಳು, ಕೆಲ ಶಿಕ್ಷಕಿಯರು ಹಿಜಾಬ್ ಧರಿಸಿ ಬಂದಿದ್ದರು. ಇದು ವಾಗ್ವಾದಕ್ಕೆ ಕಾರಣವಾಯಿತು. ಕೆಲವೆಡೆ ವಿದ್ಯಾರ್ಥಿಗಳು ಹಿಜಾಬ್‌ ತೆಗೆದಿಟ್ಟು ತರಗತಿಗೆ ತೆರಳಿದರೆ, ಇನ್ನು ಕೆಲವೆಡೆ ನಿರಾಕರಿಸಿ ಪೋಷಕರೊಡನೆ ಮನೆಗೆ ಹಿಂತಿರುಗಿದರು.

ಶಾಲೆಗಳ ಗೇಟ್ ಬಳಿಯೇ ವಿದ್ಯಾರ್ಥಿಗಳನ್ನು ಅಡ್ಡಗಟ್ಟಿ ಹಿಜಾಬ್‌ ತೆಗೆಸುತ್ತಿದ್ದ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದವು. ವಿದ್ಯಾರ್ಥಿನಿಯರಿಂದ ಸಾರ್ವಜನಿಕವಾಗಿ ಹಿಜಾಬ್ ತೆಗೆಸಿದ್ದು ಸರಿಯಲ್ಲ ಎಂಬ ಆಕ್ಷೇಪಗಳು ಕೇಳಿಬಂದವು.

ಮಂಗಳೂರು, ಉಡುಪಿ ಸೇರಿದಂತೆ ಬಹುತೇಕ ಕಡೆ ಶಾಲೆಗಳ ಬಳಿ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿತ್ತು. ಸಣ್ಣ ಮಟ್ಟಿಗೆ ವಾಗ್ವಾದ ಘಟನೆಗಳನ್ನು ಹೊರತುಪಡಿಸಿದರೆ ಪರಿಸ್ಥಿತಿ ಬಹುತೇಕ ಶಾಂತಿಯುತವಾಗಿತ್ತು.

ಶಿವಮೊಗ್ಗದಲ್ಲಿ ಸರ್ಕಾರಿ ಪ್ರೌಢಶಾಲೆಯ 13 ವಿದ್ಯಾರ್ಥಿನಿಯರು ಹಿಜಾಬ್‌ ತೆಗೆಯಲು ನಿರಾಕರಿಸಿದ್ದು, ಎಸ್‌ಎಸ್‌ಎಲ್‌ಸಿ ಸಿದ್ಧತಾ ಪರೀಕ್ಷೆಗೂ ಹಾಜರಾಗದೇ ವಾಪಸಾದರು. ‘ನಾವುಹೈಕೋರ್ಟ್‌ನ ಅಂತಿಮ ಆದೇಶದವರೆಗೂ ಕಾಯುತ್ತೇವೆ’ ಎಂದು ಈ ವಿದ್ಯಾರ್ಥಿಗಳು ತಿಳಿಸಿದರು.

‘ವಿದ್ಯಾರ್ಥಿನಿಯರ ಮನವೊಲಿಸುವ ಶಿಕ್ಷಕರ ಯತ್ನ ವಿಫಲವಾಯಿತು. ಪರೀಕ್ಷೆ ಮುಖ್ಯ. ಈ ಹಿಂದೆ ಬರುತ್ತಿದ್ದಂತೆ ಹಿಜಾಬ್‌ ಧರಿಸದೇ ಬನ್ನಿ ಎಂದು ಮಕ್ಕಳಿಗೆ ಮನವಿ ಮಾಡುತ್ತೇನೆ’ಎಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡಅವರು ಪ್ರತಿಕ್ರಿಯಿಸಿದರು.

ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಹಿಜಾಬ್‌ ತೆಗೆಯಲು ನಿರಾಕರಿಸಿ ಇಬ್ಬರು ವಿದ್ಯಾರ್ಥಿನಿಯರು ಮನೆಗೆ ವಾಪಸಾದರು. 16 ವಿದ್ಯಾರ್ಥಿಗಳು ಬಂದಿದ್ದು, 14 ವಿದ್ಯಾರ್ಥಿನಿಯರು ಹಿಜಾಬ್ ತೆಗೆದು ತರಗತಿಗೆ ಹಾಜರಾದರು.

ಉಡುಪಿಯ ಬಾಲಕಿಯರ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿಯರು ಹಿಜಾಬ್‌ ತೆಗೆದಿರಿಸಿ ತರಗತಿಗೆ ಹಾಜರಾದರು. ‘ಹಿಜಾಬ್‌ ಗೊಂದಲದಿಂದ ಪಾಠಕ್ಕೆ ಅಡ್ಡಿಯಾಗಿದೆ. ತರಗತಿ ಆರಂಭಿಸಿ’ ಎಂದು ಕಾಲೇಜಿನ ವಿದ್ಯಾರ್ಥಿನಿ ಶಿಲ್ಪಾ, ಪ್ರಾಚಾರ್ಯರಿಗೆ ವಿನಂತಿಸಿದರು.

ಚಿಕ್ಕಮಗಳೂರಿನ ಉಪ್ಪಳ್ಳಿಯ ಯುನೈಟೆಡ್‌ ಶಾಲೆಯ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್‌ ತೆಗೆಯಲು ನಿರಾಕರಿಸಿದ್ದು, ವಾಪಸ್‌ ತೆರಳಿದರು. ಸೋಮವಾರ ಶಾಲೆಗೆ ರಜೆ ಘೋಷಿಸಲಾಗಿತ್ತು.

‘ಶಾಲೆಯಲ್ಲಿ ಎಲ್ಲರೂ ಮುಸ್ಲಿಂ ವಿದ್ಯಾರ್ಥಿಗಳು. ಬುಧವಾರ ಪೋಷಕರ ಸಭೆ ನಡೆಸಲು ನಿರ್ಧರಿಸಿದ್ದೇವೆ. ಸಭೆಯಲ್ಲಿ ವಿಷಯವನ್ನು ಪೋಷಕರಿಗೆ ಮನದಟ್ಟು ಮಾಡುತ್ತೇವೆ’ ಎಂದು ಶಾಲೆಯ ಪ್ರಾಂಶಪಾಲಎಂದು ಪ್ರಾಚಾರ್ಯ ಜಮೀರ್ ಅಹಮ್ಮದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಮಂಡ್ಯ, ಮೈಸೂರು, ಕೊಡಗು ಜಿಲ್ಲೆಯ ವಿವಿಧೆಡೆಯೂ ಹಿಜಾಬ್‌ ವಿಷಯ ವಾಗ್ವಾದಕ್ಕೆ ಕಾರಣವಾಯಿತು.

ಮೈಸೂರು ತಾಲ್ಲೂಕಿನ ಕೆ.ಆರ್.ಮಿಲ್‌ ಬಳಿ ಸರ್ಕಾರಿ ಪ್ರೌಢಶಾಲೆಯ 6 ಮಕ್ಕಳು,ಕೊಡಗು ಜಿಲ್ಲೆ ಸಿದ್ದಾಪುರ ಸಮೀಪದ ನೆಲ್ಯಹುದಿಕೇರಿಯ ಕರ್ನಾಟಕ ಪಬ್ಲಿಕ್ ಶಾಲೆಗೆ 31 ವಿದ್ಯಾರ್ಥಿನಿಯರಿಗೆ ಹಿಜಾಬ್‌ ಧರಿಸಿದ್ದಕ್ಕೆ ಶಾಲೆಗೆ ಪ್ರವೇಶ ನಿರಾಕರಿಸಿ ಮನೆಗೆ ವಾಪಸ್‌ ಕಳುಹಿಸಲಾಯಿತು.

ಸಿದ್ದಾಪುರದ ಇಕ್ರಾ ಪಬ್ಲಿಕ್ ಖಾಸಗಿ ಶಾಲೆಯಲ್ಲಿ ವಿದ್ಯಾರ್ಥಿನಿಯರು ಹಿಂದಿನಿಂದಲೂ ಶಿರವಸ್ತ್ರ ಧರಿಸುತ್ತಿದ್ದು, ಆಡಳಿತ ಮಂಡಳಿ ನಿರ್ಣಯ ಮಾಡಿದೆ ಎಂದು ಶಿಕ್ಷಕರು ಶಾಲೆಗೆ ಭೇಟಿ ನೀಡಿದ್ದ ತಹಶೀಲ್ದಾರ್‌ ಅವರಿಗೆ ಮಾಹಿತಿ ನೀಡಿದರು.

ಚಾಮರಾಜನಗರ ಜಿಲ್ಲೆಯ ಕೆಲ ಶಾಲೆಗಳಲ್ಲಿ ಕೆಲವು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿದ್ದರೂ ಯಾರೂ ಆಕ್ಷೇಪಿಸಲಿಲ್ಲ. ಹಾಸನ ನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಹಿಜಾಬ್ ಧರಿಸಿದ್ದ ಮಕ್ಕಳ ಮನವೊಲಿಸಿದ ಶಿಕ್ಷಕರು ಅದನ್ನು ತೆಗೆಸಿದರು.

ಬೆಳಗಾವಿ, ಬಾಗಲಕೋಟೆ, ವಿಜಯಪುರ, ಹುಬ್ಬಳ್ಳಿ–ಧಾರವಾಡ, ಹಾವೇರಿ, ಗದಗ, ಉತ್ತರ ಕನ್ನಡ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಶಾಲೆಗಳು ‌ಸೋಮವಾರ ಶಾಂತಿಯುತವಾಗಿ ಪುನರಾರಂಭಗೊಂಡಿವೆ. ಬೆರಳೆಣಿಕೆಯಷ್ಟು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿದ್ದರು. ಬೆಳಗಾವಿಯಲ್ಲಿ ಹಿಜಾಬ್‌, ಬುರ್ಕಾ ತೆಗೆಸಿ ತರಗತಿಗೆ ಪ್ರವೇಶ ನೀಡಲಾಯಿತು.

‘ಬಹುತೇಕ ಕಡೆಗಳಲ್ಲಿ ಶಾಲೆಗಳಲ್ಲಿ ಹಾಜರಾತಿ ಪ್ರಮಾಣ ಸರಾಸರಿಗಿಂತ ಶೇ 25ರಷ್ಟು ಕಡಿಮೆ ಇತ್ತು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.

ಹಿಜಾಬ್‌ ಧರಿಸಿದ ಶಿಕ್ಷಕಿಯರು, ವಾಗ್ವಾದ:

ಕುಣಿಗಲ್: ತಾಲ್ಲೂಕಿನ ಭಕ್ತರಹಳ್ಳಿಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಶಿಕ್ಷಕಿಯೊಬ್ಬರು ಹಿಜಾಬ್ ಧರಿಸಿ ಕರ್ತವ್ಯಕ್ಕೆ ಹಾಜರಾಗಿದ್ದು, ಗೊಂದಲಕ್ಕೆ ಕಾರಣವಾಯಿತು.

ಮುಖ್ಯಶಿಕ್ಷಕ ಮತ್ತು ಸ್ಥಳದಲ್ಲಿದ್ದ ಪೊಲೀಸರು ಹಿಜಾಬ್ ತೆಗೆಯಲು ಸೂಚಿಸಿದರು. ಶಿಕ್ಷಕಿ ಸೂಚನೆ ಧಿಕ್ಕರಿಸಿದರು. ಸ್ಥಳಕ್ಕೆ ಬಂದ ಬಿಇಒ ತಿಮ್ಮರಾಜು, ಶಿಕ್ಷಕಿಗೆ ನೋಟಿಸ್ ನೀಡಿದ್ದು, ನಂತರ ಹಿಜಾಬ್ ತೆಗೆದಿಟ್ಟು ಅವರು ಕರ್ತವ್ಯಕ್ಕೆ ತೆರಳಿದರು.ಮಂಡ್ಯ ನಗರದ ರೋಟರಿ ಶಾಲೆಯಲ್ಲಿಯೂ ಹಿಜಾಬ್, ಬುರ್ಖಾ ಧರಿಸಿ ಬಂದಿದ್ದ ಶಿಕ್ಷಕಿಯರಿಗೆ ಶಾಲೆಗೆ ಪ್ರವೇಶಿಸಲು ಅವಕಾಶ ನೀಡಲಿಲ್ಲ. ಮಂಡ್ಯದ ರೋಟರಿ ಶಾಲೆಯಲ್ಲಿ ನಾಲ್ವರು ಶಿಕ್ಷಕಿಯರು ಕೆಲಸ ಮಾಡುತ್ತಿದ್ದು ಹಿಜಾಬ್‌, ಬುರ್ಖಾ ತೆಗೆದು ಶಾಲೆಯ ಆವರಣ ಪ್ರವೇಶಿಸಿದರು.

‘ಕೋರ್ಟ್‌ನ ಆದೇಶ ಮಕ್ಕಳಿಗೆ ಮಾತ್ರ ಎಂದು ಜಿಲ್ಲಾಧಿಕಾರಿ, ಡಿಡಿಪಿಐ ತಿಳಿಸಿದ್ದಾರೆ. ಹೀಗಾಗಿ, ಈ ಬಗ್ಗೆ ಶಿಕ್ಷಕಿಯರಿಗೆ ಒತ್ತಾಯ ಮಾಡುವುದಿಲ್ಲ’ ಎಂದು ಶಾಲೆ ಆಡಳಿತ ಮಂಡಳಿ ಕಾರ್ಯದರ್ಶಿ ಕೆ.ಪ್ರಭಾಕರ್‌ ಸಂಜೆ ಸ್ಪಷ್ಟಪಡಿಸಿದರು.

ಹಳೆಯ ವಿಡಿಯೊ ಮೂಡಿಸಿದ ಗೊಂದಲ

ಮಂಗಳೂರಿನ ಕಾಲೇಜೊಂದರಲ್ಲಿ ಹಿಂದೂ ಹಾಗೂ ಮುಸ್ಲಿಂ ವಿದ್ಯಾರ್ಥಿಗಳ ಗುಂಪು ಘೋಷಣೆ ಕೂಗುತ್ತಿರುವ ವಿಡಿಯೊ ಜಾಲತಾಣದಲ್ಲಿ ಹರಿದಾಡಿದ್ದು, ಗೊಂದಲ ಮೂಡಿಸಿತ್ತು.

ಪೊಲೀಸ್ ಕಮಿಷನರ್‌ ಎನ್‌.ಶಶಿಕುಮಾರ್ ಅವರು, ‘ಇದು, ಬೇರೆ ಯಾವುದೋ ಊರಿನ ಹಳೆಯ ವಿಡಿಯೊ. ನಗರದಲ್ಲಿ ಅಂತಹ ಯಾವುದೇ ಘಟನೆ ನಡೆದಿಲ್ಲ. ತರಗತಿಗಳು ಸುಸೂತ್ರವಾಗಿ ನಡೆದಿವೆ’ ಎಂದು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT