ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಕಿನಿ ಪದ ಬಳಸಿದ ಪ್ರಿಯಾಂಕಾ ಮಹಿಳೆಯರ ಕ್ಷಮೆ ಕೋರಲಿ: ರೇಣುಕಾಚಾರ್ಯ

'ಮಹಿಳೆಯರ ಉಡುಪು ನೋಡಿ ಉದ್ರೇಕದಿಂದ ಅತ್ಯಾಚಾರ ಹೆಚ್ಚಳ'
Last Updated 9 ಫೆಬ್ರುವರಿ 2022, 8:36 IST
ಅಕ್ಷರ ಗಾತ್ರ

ನವದೆಹಲಿ: ಬಿಕಿನಿ ಅಥವಾ ಹಿಜಾಬ್ ಧರಿಸುವುದು‌ ಮಹಿಳೆಯರ ಹಕ್ಕು ಎಂಬ ಹೇಳಿಕೆ‌ ನೀಡಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಸಮಸ್ತ ಮಹಿಳಾ ಸಮುದಾಯದ ಕ್ಷಮೆ‌ ಕೋರಬೇಕು ಎಂದು ಹೊನ್ನಾಳಿ ಶಾಸಕ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎಂ.ಪಿ.‌ ರೇಣುಕಾಚಾರ್ಯ ಕೋರಿದರು.

ಬುಧವಾರ ಇಲ್ಲಿನ ಕರ್ನಾಟಕ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಿಳೆಯರು ಧರಿಸುವ ಬಟ್ಟೆಯ ಕುರಿತು ಹೇಳಿಕೆ ನೀಡುವ ಭರದಲ್ಲಿ ಪ್ರಿಯಾಂಕಾ ಅವರು ಬಿಕನಿ ಧರಿಸುವುದೂ‌ ಹಕ್ಕು ಎಂಬ ಹೇಳಿಕೆ ನೀಡಿರುವುದು ಸಮಂಜಸವಲ್ಲ ಎಂದರು.

ವಿದ್ಯಾರ್ಥಿನಿಯರು ಮೈತುಂಬ ಬಟ್ಟೆ ಹಾಕಿಕೊಳ್ಳುತ್ತಾರೆ. ಭಾರತೀಯ ಸಂಸ್ಕೃತಿಯನ್ನು ಅನುಸರಿಸುವ ಮಹಿಳೆಯರು ಬಿಕನಿ ಧರಿಸಲಿ ಎಂದಿರುವುದು ಅತ್ಯಂತ ಕೀಳುಮಟ್ಟದ ಹೇಳಿಕೆ. ವಿದ್ಯಾರ್ಥಿನಿಯರು ಮೈತುಂಬ ಬಟ್ಟೆ ಹಾಕಿಕೊಳ್ಳಬೇಕು. ಯಾಕೆಂದರೆ ಮಹಿಳೆಯರು ಧರಿಸುವ ಉಡುಪುಗಳನ್ನು ನೋಡಿ ಪುರುಷರು ಉದ್ರೇಕಗೊಳ್ಳುತ್ತಾರೆ. ಅದರಿಂದ ಅತ್ಯಾಚಾರ ಪ್ರಕರಣಗಳೂ ಹೆಚ್ಚಲು ಕಾರಣವಾಗಿದೆ. ಇಂಥ ಹೇಳಿಕೆ ನೀಡಿದ್ದು ಒಳ್ಳೆಯದಲ್ಲ. ಬಿಕನಿ ಅನ್ನೋ ಕೀಳು ಮಟ್ಟದ ಶಬ್ದ ಬಳಸಿರುವ ಪ್ರಿಯಾಂಕಾ ಆ ಹೇಳಿಕೆ ಹಿಂದೆ ಪಡೆಯಬೇಕು ಎಂದು ಅವರು ಆಗ್ರಹಿಸಿದರು.

'ಮಹಿಳೆಯರು ಮತ್ತು ವಿದ್ಯಾರ್ಥಿನಿಯರ‌ ಮೇಲಿನ ಗೌರವದಿಂದಲೇ ನಾನು ಈ ಒತ್ತಾಯ ಮಾಡುತ್ತಿದ್ದೇನೆ. ಸೀರೆ ಉಟ್ಟು, ಮೂಗುಬೊಟ್ಟು ತೊಟ್ಟು, ಕುಂಕುಮ ಧರಿಸುವುದು ನಮ್ಮ ಸಂಸ್ಖೃತಿ. ಅದನ್ನು ಬಿಡುವುದರಿಂದಲೇ ಅನಾಹುತ ಆಗುತ್ತದೆ. ಹಾಗಾಗಿ ಬಿಕಿನಿ ಹಾಕುವಂತಹ ಪ್ರಚೋದನಾತ್ಮಕ ಹೇಳಿಕೆ ನೀಡುವುದು ಸರಿಯಲ್ಲ. ಕೂಡಲೇ ಕ್ಷಮೆ ಕೋರಬೇಕು ಎಂದು ಅವರು ಸ್ಪಷ್ಟಪಡಿಸಿದರು.

'ನಮ್ಮ ದೇಶದಲ್ಲಿ ಮಹಿಳೆಯರ ಬಗ್ಗೆ ವಿಶೇಷ ಗೌರವ ಇದೆ. ಅವರಿಗೆ ತಾಯಿ ಸ್ಥಾನ ಇದೆ. ಪ್ರಿಯಾಂಕಾ ಅವರಿಗೆ ನಮ್ಮ‌ ದೇಶದ ಧರ್ಮ, ಸಂಸ್ಕೃತಿ, ಪರಂಪರೆ ಅರ್ಥವಾಗಿಲ್ಲ. ಹೇಳಿಕೇಳಿ ಅವರ ತಾಯಿಯದ್ದು ಇಟಲಿ ಸಂಸ್ಕೃತಿ. ಅವರು ಮದುವೆ ಆಗಿದ್ದು ವೈಯಕ್ತಿಕ. ಈ ರೀತಿ ಹೇಳುತ್ತ ಹೋದರೆ ಸಾಕಷ್ಟು ಅರ್ಥ ಬರುತ್ತದೆ. ಹಾಗಾಗಿ ಅದು ಒಳ್ಳೆಯದಲ್ಲ ಎಂದು ಅವರು ಅಭಿಪ್ರಾಯಪಟ್ಟರು.

'ರಾಜ್ಯದ ಕಾನೂನು ಸುವ್ಯವಸ್ಥೆ ಹಾಳುಗೆಡವಿ, ಸರ್ಕಾರದ ವರ್ಚಸ್ಸು ಕಡಿಮೆ ಮಾಡುವ‌ ಉದ್ದೇಶದಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಯೋತ್ಪಾದನೆ, ದೇಶವಿರೋಧಿ ಚಟುವಟಿಕೆ ನಡೆಸುವವರು ಕುಂದಾಪುರದ ಒಂದು ಕಾಲೇಜಿನಲ್ಲಿ ನಡೆದಿದ್ದ ಹಿಜಾಬ್ ಘಟನೆಯನ್ನು ರಾಜ್ಯವ್ಯಾಪಿ ಹಬ್ಬಿಸುತ್ತಿವೆ' ಎಂದು ಅವರು ದೂರಿದರು.

ಕೇಸರಿ ಶಾಂತಿಯ ಸಂಕೇತ ಆದರೂ ಇಂಥ ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್ ಪಕ್ಷ ಶಾಂತಿ ಕದಡುತ್ತಿದೆ. ಈ ವಿವಾದ ಹೆಚ್ಚಲು ಕಾರಣವಾದ ಎಸ್ ಡಿಪಿಐ ಮತ್ತು ಪಿಎಫ್ಐ ಸಂಘಟನೆಗಳನ್ನು ನಿಷೇಧಿಸುವಂತೆ ಮುಖ್ಯಮಂತ್ರಿ ಬೊಮ್ಮಾಯಿ ಅವರಲ್ಲಿ ಮನವಿ ಮಾಡುವೆ' ಎಂದು ಅವರು ತಿಳಿಸಿದರು.

ದಲಿತರನ್ನು, ಹಿಂದುಳಿದವರನ್ನು ಓಲೈಸುವ ರಾಜಕಾರಣ ಮಾಡಿದ್ದರಿಂದ ಕಾಂಗ್ರೆಸ್ ನಿಂದ ಅವರೆಲ್ಲ ದೂರವಾಗಿದ್ದಾರೆ. ಇದೀಗ ಅಲ್ಪಸಂಖ್ಯಾತರೂ ಅವರನ್ನು ದೂರ ಮಾಡಲಿದ್ದಾರೆ ಎಂದು ಅವರು ಹೇಳಿದರು.

'ದೇಶದ್ರೋಹದ ಹೇಳಿಕೆ‌ ನೀಡುವವರನ್ನು ಪಾಕಿಸ್ತಾನಕ್ಕೆ ತೆರಳುವಂತೆ ಕೆಲವರು ಆಗ್ರಹಿಸಿದ್ದಾರೆ. ಇಲ್ಲಿರುವ ಮುಸ್ಲಿಮರು ಒರಿಜಿನಲ್ ಮುಸ್ಲಿಮರಲ್ಲ. ನಮ್ಮ ದೇಶದ ಗಾಳಿ, ನೀರು ಸೇವಿಸಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗುವ ಕೆಲವರನ್ನು ಪಾಕಿಸ್ತಾನದವರೂ ನಂಬುವುದಿಲ್ಲ. ಅವರು ಪಾಕ್‌ ಪರ ಮಾತಾಡೋದರಿಂದ ಅನಿವಾರ್ಯವಾಗಿ ಅಲ್ಲಿಗೆ ಹೋಗಿ ಎಂದು ಹೇಳಲಾಗುತ್ತದೆ. ಅಲ್ಲಿಗೆ ಹೋಗಿ ಅನ್ನೋ ಬದಲು ಬೇರೆ ಎಲ್ಲಿಗೆ ಹೋಗಿ ಎಂದು ಹೇಳಕ್ಕಾಗತ್ತೆ? ಎಂದು ಅವರು ಪ್ರಶ್ನಿಸಿದರು.

'ನಮ್ಮ ಮಕ್ಕಳ ನಡುವೆ ವಿಷಬೀಜ ಬಿತ್ತುವ ಕಾಂಗ್ರೆಸ್ ನವರು, ಬಿಜೆಪಿಯವರು ಕೇಸರೀಕರಣ ಮಾಡುತ್ತಿದ್ದಾರೆ ಎಂದು ದೂರುತ್ತಾರೆ. ನಾವು ರಾಜಕಾರಣದಲ್ಲಿ ಕೇಸರೀಕರಣ ಮಾಡುತ್ತೇವೆ ನಿಜ. ಶಿಕ್ಷಣದಲ್ಲಿ ಮಾಡುವುದಿಲ್ಲ' ಎಂದು ರೇಣುಕಾಚಾರ್ಯ ನುಡಿದರು.

'ಹಿಂದು, ಮುಸ್ಲಿಂ, ಕ್ರೈಸ್ತರೆಲ್ಲರೂ ಭಾರತ ಮಾತೆಯ ಮಕ್ಕಳು. ಸಮಾನತೆ ಬೇಕು. ಹಾಗಾಗಿ, ಶಾಲೆ- ಕಾಲೇಜುಗಳಲ್ಲಿ ಸಮವಸ್ತ್ರ ಧರಿಸುವಂತೆ ಆದೇಶ ಹೊರಡಿಸಲಾಗಿದೆ. ಹೈಕೋರ್ಟ್ ನೀಡುವ ತೀರ್ಪನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಅವರು ಮನವಿ ಮಾಡಿದರು.

'ಅತ್ಯಾಚಾರ‌ ಪ್ರಕರಣಗಳು ಹೆಚ್ಚಲು ಮಹಿಳೆಯರ ಉಡುಪೇ ಕಾರಣ ಎಂಬ ಹೇಳಿಕೆ‌ ನೀಡಿರುವುದು ದುರುದ್ದೇಶದಿಂದ ಅಲ್ಲ. ಈ ಹೇಳಿಕೆಯಿಂದ ಮಹಿಳೆಯರಿಗೆ ನೋವಾದಲ್ಲಿ ಕ್ಷಮೆ‌ ಕೋರುವೆ' ಎಂದು ಅವರು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT