ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವ ಜ್ಞಾನೇಂದ್ರ ಯಡವಟ್ಟು: ಸಾಮರಸ್ಯ ಕದಡುವ ಆರಗ ಹೇಳಿಕೆಗೆ ಆಕ್ರೋಶ

ಯುವಕನ ಕೊಲೆ: ಸಾಮರಸ್ಯ ಕದಡುವ ಆರಗ ಹೇಳಿಕೆಗೆ ಆಕ್ರೋಶ
Last Updated 6 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ಬೆಂಗಳೂರು: ಜೆ.ಜೆ.ನಗರದ ಚಂದ್ರಶೇಖರ್ ಕೊಲೆಗೆ ಸಂಬಂಧಿಸಿದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಕೋಮು ಸೌಹಾರ್ದ ಕದಡುವ ರೀತಿಯಲ್ಲಿ ನೀಡಿದ ಹೇಳಿಕೆ ಕುರಿತು ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಪೇಚಿಗೆ ಸಿಲುಕಿದ ಅವರು ಕಡೆಗೆ ತಪ್ಪೊಪ್ಪಿಕೊಂಡಿದ್ದಾರೆ.

ರಾಜ್ಯದಲ್ಲಿ ಹಿಜಾಬ್‌ ಮುಂದಿಟ್ಟು ಕೊಂಡು ಶುರುಮಾಡಿದ ವಿವಾದಗಳ ಸರಣಿ ಹಲಾಲ್‌, ಜಾತ್ರೆ– ಹಬ್ಬಗಳಲ್ಲಿ ಮುಸ್ಲಿಮ್ ವರ್ತಕರಿಗೆ ಬಹಿಷ್ಕಾರ, ಮಸೀದಿಗಳ ಧ್ವನಿವರ್ಧಕ ಬಳಕೆಗೆ ತಕರಾರು ಹೀಗೆ ದಿನಕ್ಕೊಂದು ವಿವಾದ ತಲೆ ಎತ್ತುತ್ತಲೇ ಇದೆ. ಇದರ ಮಧ್ಯೆಯೇ, ಬೆಂಗಳೂರಿನ ಜೆ.ಜೆ.ನಗರದಲ್ಲಿ ಸೋಮವಾರ ರಾತ್ರಿ ಬೈಕ್‌ ಡಿಕ್ಕಿ ವಿಚಾರಕ್ಕೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯಕಂಡಿತ್ತು.

ಈ ವಿಷಯವನ್ನು ಶಾಂತಿಯುತವಾಗಿ ಇತ್ಯರ್ಥ ಮಾಡಬೇಕಾದ ಗೃಹ ಸಚಿವರೇ, ಕೋಮುದ್ವೇಷಕ್ಕೆ ಕುಮ್ಮಕ್ಕು ನೀಡುವಂತೆ ಮಾತನಾಡಿದ್ದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್‌, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಮತ್ತು ಕನ್ನಡ ಚಳವಳಿ ನಾಯಕ ವಾಟಾಳ್‌ ನಾಗರಾಜ್‌ ಅವರು ಗೃಹ ಸಚಿವರ ನಡವಳಿಕೆಯನ್ನು ಖಂಡಿಸಿದ್ದು, ‘ಅಜ್ಞಾನ ಪ್ರದರ್ಶಿಸಿರುವ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದೂ ಆಗ್ರಹಿಸಿದ್ದಾರೆ.

ಸಚಿವರು ಮೊದಲು ಹೇಳಿದ್ದು:‌ ‘ಚಂದ್ರು ಹತ್ಯೆಯಾಗಿದೆ. ಮಾಹಿತಿ ತೆಗೆದುಕೊಂಡಿದ್ದೇನೆ. ಉರ್ದು ಮಾತನಾಡಲಿಕ್ಕೆ ಹೇಳಿದಾಗ ಆತ ಆ ಭಾಷೆ ಬರಲ್ಲ ಎಂದ. ಕನ್ನಡ ಬಿಟ್ಟು ಬೇರೆ ಭಾಷೆ ಬರಲ್ಲ ಎಂದು ಹೇಳಿದಾಗ ಚೂರಿಯಿಂದ ಚುಚ್ಚಿ ಚುಚ್ಚಿ ಅಮಾನುಷವಾಗಿ ಕೊಂದಿದ್ದಾರೆ. ಅವನೊಬ್ಬ ದಲಿತ ಯುವಕ. ಇದರಲ್ಲಿ ಭಾಗಿಯಾಗಿದ್ದ ಕೆಲವು ವ್ಯಕ್ತಿಗಳನ್ನು ಬಂಧಿಸಲಾಗಿದೆ’.

ಬದಲಾದ ಹೇಳಿಕೆ: ‘ಚೂರಿ ಇರಿತದ ಘಟನೆಯ ಬಗ್ಗೆ ಬೆಳಿಗ್ಗೆ ಆ ಕ್ಷಣದಲ್ಲಿ ಯಾವ ಮಾಹಿತಿ ಸಿಕ್ಕಿತೋ ಅದನ್ನು ಹೇಳಿ ಬಿಟ್ಟೆ. ಆದರೆ, ಈಗ ವಿಸ್ತೃತ ವರದಿ ಬಂದಿದೆ. ಅದರ ಪ್ರಕಾರ ಎರಡು ವಾಹನಗಳ ನಡುವೆ ಡಿಕ್ಕಿ ಆಗಿದೆ. ಇದರಿಂದ ವಾಗ್ವಾದ ನಡೆದು, ಚಂದ್ರುವಿನ ತೊಡೆಗೆ ಚೂರಿಯಿಂದ ಇರಿಯಲಾಗಿದೆ. ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗಲೇ ತೀರಿಕೊಂಡಿದ್ದಾನೆ. ನಾನು ಮೊದಲು ಮಾತನಾಡುವ ಸಂದರ್ಭದಲ್ಲಿ ಭಾಷೆಯ ಬಗ್ಗೆ ಮಾತುಗಳನ್ನು ಆಡಿದ್ದೆ. ಆ ರೀತಿ ಏನೂ ಇಲ್ಲ. ಬೆಳಿಗ್ಗೆ ಆ ಕ್ಷಣದಲ್ಲಿ ಸಿಕ್ಕಿದ ಮೂಲಗಳ ಮಾಹಿತಿಯಿಂದ ಹೇಳಿದೆ. ಅದು ತಪ್ಪಾಗಿದೆ. ಈಗ ಪೂರ್ಣ ಮಾಹಿತಿ ತರಿಸಿಕೊಂಡು ಹೇಳಿದ್ದೇನೆ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT