ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟರಿಗೆ ಸಿಂಹಸ್ವಪ್ನವಾಗಿದ್ದ ಲೋಕಾಯುಕ್ತ: ಜೈಲು ಸೇರಿದವರಾರು? ಇಲ್ಲಿದೆ ವಿವರ

Last Updated 12 ಆಗಸ್ಟ್ 2022, 7:48 IST
ಅಕ್ಷರ ಗಾತ್ರ

ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳ ಸ್ಥಾಪನೆಯಾಗುವವರೆಗೂದೇಶಕ್ಕೆ ಮಾದರಿಯಾಗುವ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದ ಕರ್ನಾಟಕ ಲೋಕಾಯುಕ್ತ ಭ್ರಷ್ಟರ ಪಾಲಿಗೆ ಸಿಂಹಸ್ವಪ್ನದಂತೆ ಕಾರ್ಯನಿರ್ವಹಿಸಿತ್ತು. ನ್ಯಾಯಮೂರ್ತಿ ವೆಂಕಟಾಚಲ ಅವರು ಲೋಕಾಯುಕ್ತದ ಶಕ್ತಿಯನ್ನು ತೋರಿಸಿದ್ದರೆ, ನ್ಯಾಯಮೂರ್ತಿ ಸಂತೋಷ ಹೆಗ್ಡೆ ಅವರು ಅದರ ಪರಾಕ್ರಮವನ್ನು ಜಗಜ್ಜಾಹೀರುಗೊಳಿಸಿದ್ದರು.

ನ್ಯಾ.ಸಂತೋಷ ಹೆಗ್ಡೆ ಅವರು ಲೋಕಾಯುಕ್ತರಾಗಿದ್ದಾಗ ಬಲಿಷ್ಠ ತಂಡ ಅವರ ಜತೆಗಿತ್ತು.

- ಕರ್ನಾಟಕದಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆ ಕುರಿತು ನಾಲ್ಕು ಸಾವಿರ ಪುಟಗಳ ಪ್ರಧಾನ ವರದಿ ಸಲ್ಲಿಕೆಯಾಗಿತ್ತು. ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದ ಯಡಿಯೂರಪ್ಪ ಕೊನೆಗೆ ಜೈಲಿಗೂ ಹೋದರು.

- ಈಗ ಸಚಿವರಾಗಿರುವ ಆನಂದ್ ಸಿಂಗ್‌, ಹಿಂದೆ ಸಚಿವರಾಗಿದ್ದ ಜನಾರ್ದನ ರೆಡ್ಡಿ, ಮಾಜಿ ಶಾಸಕ ಸುರೇಶಬಾಬು, ಹಾಲಿ ಶಾಸಕ ಬಿ. ನಾಗೇಂದ್ರ ಕೂಡಾ ಅಕ್ರಮ ಗಣಿ ಗಾರಿಕೆ–ಅದಿರು ಸಾಗಣೆ ಪ್ರಕರಣದಲ್ಲಿ ಜೈಲುವಾಸ ಅನುಭವಿಸಿದ್ದರು.

- 2008–2013ರ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಮಾಲೂರು ಕೃಷ್ಣಯ್ಯ ಶೆಟ್ಟಿ ಭೂ ಅಕ್ರಮದಲ್ಲಿ ಜೈಲು ಕಂಡಿದ್ದರು.

- ಮಾಜಿ ಮುಖ್ಯಮಂತ್ರಿಗಳಾಗಿದ್ದ ಎಚ್‌.ಡಿ. ದೇವೇಗೌಡ, ಧರಂಸಿಂಗ್‌, ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಚಿವರಾಗಿರುವ ಆರ್.ವಿ. ದೇಶಪಾಂಡೆ, ಡಿ.ಕೆ.ಶಿವಕುಮಾರ್, ಸಿ.ಟಿ.ರವಿ, ಆರ್. ರೋಷನ್‌ಬೇಗ್‌, ಅರವಿಂದ ಲಿಂಬಾವಳಿ, ಬಾಬುರಾವ್ ಚಿಂಚನಸೂರು, ಖಮರುಲ್ ಇಸ್ಲಾಂ, ಈಗಲೂ ಸಚಿವರಾಗಿರುವ ಆರ್. ಅಶೋಕ, ಮುರುಗೇಶ ನಿರಾಣಿ, ವಿ. ಸೋಮಣ್ಣ, ಮುನಿರತ್ನ ಸೇರಿದಂತೆ 66 ಜನ ಶಾಸಕರು ಲೋಕಾಯುಕ್ತರ ವಿಚಾರಣೆ ಎದುರಿಸಿದ್ದರು.

- ಬಿಜೆಪಿ ಶಾಸಕರಾಗಿದ್ದ ಕೆಜಿಎಫ್‌ನ ವೈ. ಸಂಪಂಗಿ ಅವರು ಶಾಸಕರ ಭವನದಲ್ಲಿ ಲಂಚ ಸ್ವೀಕರಿಸುವಾಗಲೇ ಲೋಕಾಯುಕ್ತ ದಾಳಿಗೆ ಸಿಕ್ಕಿಬಿದ್ದಿದ್ದರು.

- ಮುಖ್ಯಕಾರ್ಯದರ್ಶಿಯಾಗಿದ್ದವರೂ ಸೇರಿದಂತೆ 28 ಐಎಎಸ್‌, ಎಂಟು ಜನ ಐಪಿಎಸ್ ಅಧಿಕಾರಿಗಳು ವಿಚಾರಣೆ ಎದುರಿಸಿದ್ದರು.

- 1986 ರಿಂದ ಆರಂಭವಾದ ಲೋಕಾಯುಕ್ತ ಸಂಸ್ಥೆಯು 5,294 ಪ್ರಕರಣಗಳನ್ನು ವಿಲೇವಾರಿ ಮಾಡಿದೆ. ಈ ಪೈಕಿ 1,046 ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾಗಿದ್ದರೆ, 3,636 ಪ್ರಕರಣಗಳಲ್ಲಿ ಆರೋಪಿಗಳು ಖುಲಾಸೆಯಾಗಿದ್ದಾರೆ. 240 ಪ್ರಕರಣಗಳನ್ನು ಕೈಬಿಡಲಾಗಿದ್ದು, ಆರೋಪಿಗಳು ಮೃತಪಟ್ಟ ಕಾರಣಕ್ಕೆ 266 ಪ್ರಕರಣಗಳು ಖುಲಾಸೆಯಾಗಿವೆ. 106 ಪ್ರಕರಣಗಳಲ್ಲಿ ಎಫ್ಐಆರ್ ರದ್ದಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT