ಬೆಂಗಳೂರು: ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ರೀಡೂ ಹೆಸರಿನಲ್ಲಿ ₹35 ಸಾವಿರ ಕೋಟಿಯಷ್ಟು ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಅವರು ಆರೋಪಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ ನೋಟಿಫಿಕೇಷನ್ ಎನ್ನುವುದಕ್ಕೆ ರೀಡೂ ಎನ್ನುವ ಹೊಸ ಪದವನ್ನೇ ಸೃಷ್ಟಿ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಈ ಮೂಲಕ ಬೆಂಗಳೂರಿನ 10 ಸಾವಿರ ನಿವಾಸಿಗಳಿಗೆ ಅನ್ಯಾಯ ಮಾಡಿದ್ದಾರೆ. 900 ಎಕರೆಗೂ ಹೆಚ್ಚು ಭೂಮಿಯನ್ನು ರೀಡೂ ಹೆಸರಿನಲ್ಲಿ ಡಿನೋಟಿಫಿಕೇಷನ್ ಮಾಡಿದ್ದಾರೆ ಎಂದು ಹೇಳಿದರು.
ಆಗ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ಕೆ.ಜೆ.ಜಾರ್ಜ್ ಅವರು ಕಾಂಗ್ರೆಸ್‌ನ ಭ್ರಷ್ಟಾಚಾರಗಳಿಗೆ ನೆರವಾಗಿದ್ದರು. ₹292 ಕೋಟಿ ವೈಟ್ ಟಾಪಿಂಗ್ ಅಂದಾಜು ಇತ್ತು. ಅದನ್ನು ₹374 ಕೋಟಿಗೆ ಹೆಚ್ಚಿಸಿದರು. ಶೇ 25 ರ ಹೆಚ್ಚಳಕ್ಕೆ ಏಕೆ ಅನುಮತಿ ನೀಡಿದರು? 9.47 ಕಿ.ಮೀ ಟೆಂಡರ್‌ಶ್ಯೂರ್ ರಸ್ತೆ ನಿರ್ಮಿಸಲು ಖಾಸಗಿ ಸಂಸ್ಥೆಯೊಂದು ₹75 ಕೋಟಿ ಅಂದಾಜು ಕೊಟ್ಟಿತ್ತು. ಆದರೆ ಇವರ ಸರ್ಕಾರ ₹115 ಕೋಟಿ ಪಾವತಿ ಮಾಡಿತ್ತು. ಅಂದಾಜಿಗಿಂತ ಶೇ 53 ರಷ್ಟು ಹೆಚ್ಚು ಮೊತ್ತ ಪಾವತಿ ಮಾಡಿದ್ದಾರೆ. ಆದರೆ, ಶೇ 50 ರಷ್ಟು ಟೆಂಡರ್ ಪ್ರೀಮಿಯಂ ತೆಗೆದುಕೊಂಡ ಕಾಂಗ್ರೆಸ್ ನಮ್ಮ ಸರ್ಕಾರದ ಮೇಲೆ ಶೇ 40 ಕಮಿಷನ್ ಆರೋಪ ಮಾಡುತ್ತಿದೆ ಎಂದು ಸುಧಾಕರ್ ಕಿಡಿ ಕಾರಿದರು.
ಸಿದ್ದರಾಮಯ್ಯ ಅವರ ಆಪ್ತನ ಮನೆ ಮೇಲೆ 2017ರಲ್ಲಿ ದಾಳಿ ಆದಾಗ ಸಿಕ್ಕ ಡೈರಿಯಲ್ಲಿ ₹1000 ಕೋಟಿ ರೂಪಾಯಿ ಹೈಕಮಾಂಡ್‌ಗೆ ಹೋದ ಬಗ್ಗೆ ಉಲ್ಲೇಖವಿದೆ. ಆದರೆ ಇದು ಯಾರ ಹಣ? ಬಜೆಟ್ ಮೂಲಕವೇ ಸ್ಪೆಷಲ್ ಅನೌನ್ಸ್‌ಮೆಂಟ್ ಆಗಿತ್ತಾ ಎಂದು ಪ್ರಶ್ನಿಸಿದರು.
ಇಂದಿರಾ ಕ್ಯಾಂಟೀನ್ ಆರಂಭಿಸಿ ಬಡವರಿಗೆ ಕೊಡುವ ಊಟದಲ್ಲೂ ಕಮಿಷನ್ ಹೊಡೆದ ಖ್ಯಾತಿ ಇವರದು. ಅಲ್ಪಸಂಖ್ಯಾತರು, ದಲಿತರಿಗೆ, ವಿದ್ಯಾರ್ಥಿಗಳಿಗೆ ನ್ಯಾಯ ಕೊಡಲಿಲ್ಲ. ಅಲ್ಪಸಂಖ್ಯಾತರಿಗೆ ಉದ್ಧಾರ ಮಾಡುತ್ತೇವೆ ಎನ್ನುವ ಇವರು ಅಲ್ಪಸಂಖ್ಯಾತರಿಗೆ ಸೇರಿದ 2900 ಎಕರೆ ಜಮೀನು ನುಂಗಿ ಹಾಕಿದ್ದಾರೆ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.