ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

61 ಸಾಹಿತಿ, ಮುಖಂಡರ ದುರ್ಮರಣ ಸತ್ಯ: ಅಪರಿಚಿತರಿಂದ ಬೆದರಿಕೆ ಪತ್ರ

ಲಲಿತಾ ನಾಯಕ್‌ಗೆ ಪತ್ರ l ಕ್ರಮ ಕೈಗೊಳ್ಳದ್ದಕ್ಕೆ ಹಲವರ ಅಸಮಾಧಾನ
Last Updated 17 ಜುಲೈ 2022, 18:30 IST
ಅಕ್ಷರ ಗಾತ್ರ

ಬೆಂಗಳೂರು: ‘ಸೈನಿಕರ ಬಗ್ಗೆ ಹಗುರವಾಗಿ ಮಾತನಾಡಿದ್ದೀರಾ. ಕೂಡಲೇ ಕ್ಷಮೆ ಕೇಳಬೇಕು. ಇಲ್ಲದಿದ್ದರೆ, ಅತಿ ಬೇಗ ತಿಥಿ ಆಗಬಹುದು’ ಎಂಬುದಾಗಿ ಲೇಖಕಿ ಬಿ.ಟಿ. ಲಲಿತಾ ನಾಯಕ್‌ ಅವರಿಗೆ ‘ಸಹಿಷ್ಣು ಹಿಂದೂ’ ಹೆಸರಿನಲ್ಲಿ ಅಪರಿಚಿತರು ಬೆದರಿಕೆ ಪತ್ರ ಬರೆದಿದ್ದಾರೆ.

ಸಾಹಿತಿಗಳಾದ ದೇವನೂರು ಮಹಾದೇವ, ಬರಗೂರು ರಾಮಚಂದ್ರಪ್ಪ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಕೀಲ ಕಪಿಲ್ ಸಿಬಲ್, ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಸಾಹಿತಿ ಎಸ್‌.ಜಿ. ಸಿದ್ದರಾಮಯ್ಯ, ಸಿನಿಮಾ ನಿರ್ದೇಶಕಿ ಲೀನಾ ಮಣಿಮೇಕಲೈ ಹಾಗೂ ಸಂಸದೆ ಮಹುವಾ ಮೊಹಿತ್ರಾ ಅವರ ಫೋಟೊಗಳನ್ನು ‘ಸಂತಸ ಶ್ರದ್ಧಾಂಜಲಿ' ಶೀರ್ಷಿಕೆಯಡಿ ಪತ್ರದಲ್ಲಿ ಮುದ್ರಿಸಲಾಗಿದೆ.

‘ಭಯೋತ್ಪಾದಕರು, ನಕ್ಸಲರು, ಮಾವೋವಾದಿಗಳು, ಮತಾಂಧ ಮುಸ್ಲಿಮರು, ಮತಾಂತರಿ ಕ್ರೈಸ್ತರನ್ನು ಬೆಂಬಲಿಸುವ ನೀವು ಹಾಗೂ ಫೋಟೊದಲ್ಲಿರುವ ಎಲ್ಲರ ತಿಥಿ ಬೇಗ ಆಗಬಹುದು. ನಿಮಗೆ ಇಂಥ ಪದ ಬಳಸಲು ನನಗೆ ಇಷ್ಟವಿಲ್ಲ. ಕ್ಷಮೆ ಕೇಳಿ ತಾಯಿ ಎಂದು ಈ ಹಿಂದೆ ಪತ್ರ ಬರೆದಿದ್ದೆ. ಆದರೆ, ನೀವು ಕೊಲೆ ಬೆದರಿಕೆ ಎಂದು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಿರಾ. ಅದಕ್ಕೆ ಈಗ ನಿಜವಾಗಿಯೂ ಬೆದರಿಕೆ ಹಾಕುತ್ತಿದ್ದೇನೆ. ನಮ್ಮ ವೀರ ಸೈನಿಕರನ್ನು ಅವಮಾನ ಮಾಡಿರುವ ನೀವು, ಕೂಡಲೇ ಕ್ಷಮೆ ಕೇಳಿ. ನಿಮಗೆ ಸಾಕಷ್ಟು ಸಮಯವಿದೆ. ಬದಲಾಗಿ’ ಎಂದೂ ಪತ್ರದಲ್ಲಿ ಬರೆಯಲಾಗಿದೆ.

‘ಸೈನಿಕರು, ಪೊಲೀಸರು, ದೇಶದ ನಾಗರಿಕರ ಮೇಲೆ ಮತಾಂಧ ಮುಸ್ಲಿಮರಿಂದ ಹಾಗೂ ಭಯೋತ್ಪಾದಕರಿಂದ ದಾಳಿ ನಡೆದರೆ ನೀವೆಲ್ಲ ಉಸಿರು ಬಿಡುವುದಿಲ್ಲ. ಈಗ ಪಠ್ಯದಲ್ಲಿ ಭಗವದ್ಗೀತೆಯನ್ನು ಸೇರಿಸಿದರೆ ನಿಮಗೆ ಉರಿ, ಉರಿ. 61 ಎಡಬಿಡಂಗಿ ಸಾಹಿತಿಗಳು, ನೀಚ ರಾಜಕಾರಣಿಗಳು ಮುಂದಿನ ದಿನಗಳಲ್ಲಿ ದುರ್ಮರಣಕ್ಕೆ ಬಲಿಯಾಗುವುದು ಸತ್ಯ’ ಎಂದೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಪೊಲೀಸರು ಮೌನ: ಬಿ.ಟಿ. ಲಲಿತಾ ನಾಯಕ್ ಅವರಿಗೆ ಮೇಲಿಂದ ಮೇಲೆ ಬೆದರಿಕೆ ಪತ್ರಗಳು ಬರುತ್ತಿದ್ದು, ಈ ಬಗ್ಗೆ ಸಂಜಯನಗರ ಠಾಣೆಗೆ ದೂರು ನೀಡಿದ್ದಾರೆ. ಆದರೆ, ಪೊಲೀಸರು ಆರೋಪಿಗಳನ್ನು ಪತ್ತೆ ಮಾಡುತ್ತಿಲ್ಲವೆಂದು ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT