ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ್‌ ಜೋಡೊ ಯಾತ್ರೆ: ಕಾಂಗ್ರೆಸ್‌ ಶಾಸಕರ ಸಂಕಟ, ಮೊಗಸಾಲೆಯಲ್ಲಿ ಗೊಣಗಾಟ

Last Updated 24 ಸೆಪ್ಟೆಂಬರ್ 2022, 5:34 IST
ಅಕ್ಷರ ಗಾತ್ರ

ಬೆಂಗಳೂರು: ರಾಹುಲ್‌ಗಾಂಧಿಯವರ ‘ಭಾರತ್ ಜೋಡೊ’ ಯಾತ್ರೆಗೆ ಪಕ್ಷದ ಪ್ರತಿಯೊಬ್ಬ ಶಾಸಕ ತಲಾ 5,000 ಜನರನ್ನು ಕರೆದು ತರಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸಂಖ್ಯೆ ನಿಗದಿ ಮಾಡಿರುವ ಬಗ್ಗೆ ಆ ಪ‍ಕ್ಷದ ಶಾಸಕರೇ ಅಪಸ್ವರ ತೆಗೆದಿದ್ದಾರೆ.

ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ಶುಕ್ರವಾರ ಬೆಳಿಗ್ಗೆ ನಡೆದ ಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಹಲವು ಶಾಸಕರು ತಮಗಿರುವ ಸಮಸ್ಯೆಗಳನ್ನು ಹೇಳಿಕೊಂಡರು. ಯಾವುದೇ ಸಬೂಬು ಇಲ್ಲದೇ ನಿಗದಿ ಮಾಡಿದ ಸಂಖ್ಯೆಯಷ್ಟು ಜನರನ್ನು ಕರೆ ತರಲೇಬೇಕು ಎಂದು ಅವರು ತಾಕೀತು ಮಾಡಿದರೆಂದು ಮೂಲಗಳು ಹೇಳಿವೆ.

ವಿಧಾನಸಭೆಯ ಮೊಗಸಾಲೆಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಕಾಂಗ್ರೆಸ್‌ನ ಕೆಲವು ಶಾಸಕರು ತಮ್ಮ ಅಸಹಾಯಕತೆ ತೋಡಿಕೊಂಡರು. ‘ಇಷ್ಟು ದೊಡ್ಡ ಸಂಖ್ಯೆಯ ಜನರನ್ನು ತರುವುದು ಬಹಳ ಕಷ್ಟ. ಯಾತ್ರೆಯ ಸಂದರ್ಭದಲ್ಲಿ ಸರಿಯಾದ ಸಮಯಕ್ಕೆ ಜನರನ್ನು ಕರೆದು ತರಬೇಕು ಎಂದೂ ಹೇಳಿದ್ದಾರೆ. ಸಮಯಪಾಲನೆ ಮತ್ತು ಅದಕ್ಕೆ ಆಗುವ ಖರ್ಚು ವೆಚ್ಚ ಹೊಂದಿಸುವುದು ಎಲ್ಲ ಶಾಸಕರಿಗೂ ಕಷ್ಟ’ ಎಂದು ಶಾಸಕರೊಬ್ಬರು ಹೇಳಿದರು.

‘ಯಾತ್ರೆಗಾಗಿ ಕರೆದುಕೊಂಡು ಬಂದ ಜನರಿಗೆ ಊಟ, ತಿಂಡಿ ವ್ಯವಸ್ಥೆ, ಸ್ನಾನ– ಶೌಚದ ವ್ಯವಸ್ಥೆ ಮಾಡಬೇಕು. ಸರಿಯಾದ ವ್ಯವಸ್ಥೆ ಮಾಡಿಲ್ಲವೆಂದರೆ, ಜನ ಸಿಟ್ಟಿಗೇಳುತ್ತಾರೆ. ಅವರನ್ನು ನಿಭಾಯಿಸುವುದು ಕಷ್ಟವಾಗುತ್ತದೆ’ ಎಂದು ಮತ್ತೊಬ್ಬ ಶಾಸಕರು ಹೇಳಿದರು.

‘ಈ ವಿಷಯ ಸಿದ್ದರಾಮಯ್ಯ ಅವರಿಗೆ ಹೇಳಿದರೆ ಅರ್ಥವಾಗುತ್ತದೆ. ಅಧ್ಯಕ್ಷರಿಗೆ ಅರ್ಥವೂ ಆಗುವುದಿಲ್ಲ ಯಾರ ಮಾತೂ ಕೇಳುವುದಿಲ್ಲ’ ಎಂದು ಶಾಸಕರು ಅಸಹಾಯಕತೆ ವ್ಯಕ್ತಪಡಿಸಿದರು.

‘5,000 ಜನರಿಗೆ 200 ಬಸ್‌ ಬೇಕು’
‘5,000 ಜನರನ್ನು ಕರೆದುಕೊಂಡು ಬರಬೇಕು ಎಂದರೆ ಕನಿಷ್ಠ 200 ಬಸ್ಸುಗಳು ಬೇಕು. ಅಷ್ಟು ಬಸ್ಸುಗಳನ್ನು ಹೊಂದಿಸುವುದು ಎಲ್ಲಿಂದ. ಉತ್ತರ ಕರ್ನಾಟಕ ಭಾಗದಲ್ಲಿ ಅಷ್ಟು ಸಂಖ್ಯೆಯ ಬಸ್ಸುಗಳೂ ಸಿಗುವುದಿಲ್ಲ. ರಾಹುಲ್‌ಗಾಂಧಿ ಪ್ರತಿ ದಿನ ಬೆಳಿಗ್ಗೆ 6.45 ಕ್ಕೆ ಸರಿಯಾಗಿ ಪಾದಯಾತ್ರೆ ಹೊರಡುತ್ತಾರೆ. ನಾವು ರಾತ್ರಿ ನೂರಾರು ಕಿ.ಮಿ ಬಸ್‌ನಲ್ಲಿ ಪ್ರಯಾಣ ಮಾಡಿಸಿ ಜನರನ್ನು ಆ ಸಮಯಕ್ಕೆ ಸರಿಯಾಗಿ ಕರೆತರಬೇಕು. ತಡವಾದರೆ ಯಾತ್ರೆ ಮುಂದಕ್ಕೆ ಹೋಗುತ್ತಾರೆ. ಆ ರೀತಿ ಆದರೆ ಕರೆತಂದದ್ದು ವ್ಯರ್ಥವಾಗುತ್ತದೆ’ ಎಂದು ಶಾಸಕರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT