ಭಾನುವಾರ, ಜೂನ್ 26, 2022
21 °C

ಉಂಡ ಮನೆಗೆ ದ್ರೋಹ ಬಗೆಯುವುದಕ್ಕೆ ಸೂಕ್ತ ಉದಾಹರಣೆ ಸಿದ್ದರಾಮಯ್ಯ: ಬಿಜೆಪಿ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಉಂಡ ಮನೆಗೆ ದ್ರೋಹ ಬಗೆಯುವುದಕ್ಕೆ ಸೂಕ್ತ ಉದಾಹರಣೆ ಎಂದರೆ ಅದು ಸಿದ್ದರಾಮಯ್ಯ’ ಎಂದು ಬಿಜೆಪಿ ಟೀಕಿಸಿದೆ.

ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ಜಿ. ಪರಮೇಶ್ವರ ವಿರುದ್ಧ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬೆಂಬಲಿಗರು ಕೆಲಸ ಮಾಡುತ್ತಿದ್ದಾರೆ ಎಂಬ ವರದಿಯೊಂದನ್ನು ಉಲ್ಲೇಖಿಸಿ ಬಿಜೆಪಿಯ ರಾಜ್ಯ ಘಟಕವು ಸರಣಿ ಟ್ವೀಟ್ ಮಾಡಿದ್ದು, ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದೆ.

‘ರಾಜಕಾರಣದಲ್ಲಿ ನಂಬಿಕೆದ್ರೋಹಿಗಳು ಹಾಗೂ ಬೆನ್ನಿಗೆ ಚೂರಿ ಹಾಕುವ ವ್ಯಕ್ತಿತ್ವವನ್ನು ಪ್ರತಿಬಿಂಬಿಸುವ ಕೆಲವು ಸೃಷ್ಟಿಗಳಿವೆ. ಮಹಾಭಾರತದ ಶಕುನಿ, ಬ್ರಿಟಿಷ್‌ ಕಾಲದ ಮೀರ್ ಸಾದಿಕ್, ಚನ್ನಮ್ಮನಿಗೆ ದ್ರೋಹ ಬಗೆದ ಮಲ್ಲಪ್ಪ ಇತ್ಯಾದಿ. ಇವರೆಲ್ಲರಿಗೂ ಸರಿಸಮನಾಗಿ ನಿಲ್ಲಬಲ್ಲ ವ್ಯಕ್ತಿ ಎಂದರೆ ಅದು ಸಿದ್ದರಾಮಯ್ಯ!’ ಎಂದು ಬಿಜೆಪಿ ಟೀಕಿಸಿದೆ.

‘2013ರ ಚುನಾವಣೆಯಲ್ಲಿ ಮುಖ್ಯಮಂತ್ರಿ ರೇಸ್‌ಗೆ ಅಡ್ಡಿಯಾಗುತ್ತಾರೆಂಬ ಕಾರಣಕ್ಕೆ ಅಂದಿನ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ಅವರನ್ನು ಸಿದ್ದರಾಮಯ್ಯ ಕುತಂತ್ರದಿಂದ ಸೋಲಿಸಿದರು.‌ 2023ಕ್ಕೂ ನಿಮ್ಮದು ಇದೇ ತಂತ್ರವೇ? ಇದು ಮೀರ್‌ ಸಾದಿಕ್‌ತನವಲ್ಲದೆ ಮತ್ತೇನು ಸಿದ್ದರಾಮಯ್ಯನವರೇ’ ಎಂದು ಬಿಜೆಪಿ ಪ್ರಶ್ನಿಸಿದೆ.

‘ತನ್ನ ರಾಜಕೀಯ ಉತ್ಕರ್ಷಕ್ಕೆ ಕಾರಣರಾದ ರಾಮಕೃಷ್ಣ ಹೆಗಡೆಯವರನ್ನು ವಂಚಿಸಿದ ಸಿದ್ದರಾಮಯ್ಯ ದೇವೇಗೌಡರ ಬಣ ಸೇರಿದರು. ಆ ಬಳಿಕ ಗೌಡರಿಗೆ ದ್ರೋಹ ಬಗೆದು ಕಾಂಗ್ರೆಸ್ ಸೇರಿದರು. ಅಲ್ಲಿ ಸಿದ್ದರಾಮಯ್ಯ ಅವರ ಮೋಸದ ಜಾಲಕ್ಕೆ ಮೊದಲು ಬಲಿಯಾದವರು ಮಲ್ಲಿಕಾರ್ಜುನ ಖರ್ಗೆ. ಉಂಡಮನೆಗೆ ದ್ರೋಹ ಬಗೆಯುವುದಕ್ಕೆ ಸೂಕ್ತ ಉದಾಹರಣೆ ಎಂದರೆ ಅದು ಸಿದ್ದರಾಮಯ್ಯ’ ಎಂದು ಮತ್ತೊಂದು ಟ್ವೀಟ್‌ನಲ್ಲಿ ಬಿಜೆಪಿ ಉಲ್ಲೇಖಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು