ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಲಸಿಕೆ ಕುರಿತು ವಿರೋಧ ಪಕ್ಷಗಳಿಂದ ತಪ್ಪು ಪ್ರಚಾರ: ಅಶ್ವತ್ಥನಾರಾಯಣ

Last Updated 14 ಏಪ್ರಿಲ್ 2021, 15:27 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ಲಸಿಕೆಗಳ ಕೊರತೆ ಇಲ್ಲ. ಆದರೆ, ಲಸಿಕೆಯ ಕೊರತೆ ಇದೆ ಎಂದು ವಿರೋಧಪಕ್ಷಗಳು ತಪ್ಪು ಪ್ರಚಾರ ನಡೆಸುವುದನ್ನು ನಿಲ್ಲಿಸಬೇಕು ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಹೇಳಿದ್ದಾರೆ.

ನಗರದ ಬಿಜೆಪಿ ಕಚೇರಿ ‘ಜಗನ್ನಾಥ ಭವನ’ದಲ್ಲಿ ಡಾ.ಅಂಬೇಡ್ಕರ್‌ ಜಯಂತಿ ಕಾರ್ಯಕ್ರಮದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಕೋವಿಡ್‌ ಲಸಿಕೆ ಕೊರತೆಯಾಗಿದೆ ಎಂದು ಸಾರ್ವಜನಿಕರ ದಾರಿ ತಪ್ಪಿಸುವ ಕೆಲಸ ನಡೆದಿದೆ ಎಂದು ಹೇಳಿದರು.

ಕೋವಿಡ್‌ ಲಸಿಕೆಯನ್ನು ರಫ್ತು ಮಾಡಿದ್ದರಿಂದಲೇ ದೇಶದಲ್ಲಿ ಕೊರತೆ ಉಂಟಾಗಲು ಕಾರಣ ಎಂದು ಎಚ್.ಡಿ.ಕುಮಾರಸ್ವಾಮಿ ಮಾಡಿರುವ ಆರೋಪ ಮಾಡಿದ್ದಾರೆ. ಸರಿಯಾದ ಮಾಹಿತಿ ಇಲ್ಲದೆ ಆಧಾರರಹಿತ ಆರೋಪ ಮಾಡಿದ್ದಾರೆ. ದೊಡ್ಡ ಸ್ಥಾನದಲ್ಲಿ ಇರುವವರು ಮತ್ತು ಜವಾಬ್ದಾರಿಯುತ ವ್ಯಕ್ತಿಗಳು ಇಂತಹ ಹೇಳಿಕೆಗಳನ್ನು ಕೊಡುವುದು ಸರಿಯಲ್ಲ ಎಂದರು.

ಲಾಕ್‌ಡೌನ್‌ ಈಗಿನ ಸಂದರ್ಭಕ್ಕೆ ಸರಿ ಹೊಂದುವುದಿಲ್ಲ. ಅದರ ಅಗತ್ಯವಿಲ್ಲ. ಹೊರಗಿನಿಂದ ಬೆಂಗಳೂರಿಗೆ ಬರುತ್ತಿರುವ ಪ್ರತಿಯೊಬ್ಬರು ಕೋವಿಡ್‌ ತಪಾಸಣೆಗೆ ಒಳಗಾಗಬೇಕು. ಈಗ ಜೀವ ಉಳಿಯುವುದರ ಜತೆಗೆ ಜೀವನವೂ ನಡೆಯಬೇಕು. ಕಳೆದ ಒಂದು ವರ್ಷದಿಂದ ಜನರು ಸಾಕಷ್ಟು ಕಷ್ಟ ಅನುಭವಿಸಿದ್ದಾರೆ. ಮತ್ತೆ ಸಂಕಷ್ಟಕ್ಕೆ ಸಿಲುಕುವುದು ಬೇಡ ಎಂದು ಅಶ್ವತ್ಥನಾರಾಯಣ ಹೇಳಿದರು.

ಕೋವಿಡ್‌ ವಿಚಾರದಲ್ಲಿ ವಿರೋಧ ಪಕ್ಷಗಳು ರಾಜಕೀಯ ಮಾಡುವ ಬದಲು ಸಂಕಷ್ಟದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಯಾರೂ ಸೂಪರ್‌ಮ್ಯಾನ್‌ ಅಲ್ಲ. ನನಗೇನೂ ಆಗಿಲ್ಲ, ಚೆನ್ನಾಗಿದ್ದೇನೆ ಗಟ್ಟಿ ಮುಟ್ಟಾಗಿದ್ದೇನೆ ಎಂಬ ಆತಿಯಾದ ಆತ್ಮವಿಶ್ವಾಸ ಬೇಡ. ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಅಂಗನವಾಡಿ ಕೇಂದ್ರಗಳು ಸೇರಿ ಎಲ್ಲ ಕಡೆಗಳಲ್ಲೂ ಉಚಿತ ಪರೀಕ್ಷೆ ಮಾಡಲಾಗುತ್ತಿದೆ ಎಂದರು.

ಕೋವಿಡ್‌ ಎರಡನೇ ಅಲೆಯ ಅಪಾಯದ ತೀವ್ರತೆ ಕಡಿಮೆ. ಆದರೆ, ವೇಗವಾಗಿ ಹರಡುತ್ತಿದೆ. ಯುವ ಜನರು, ಮಧ್ಯ ವಯಸ್ಕರಿಗೆ ಹೆಚ್ಚು ಅಪಾಯವಿದೆಎಂದೂ ಅಶ್ವತ್ಥನಾರಾಯಣ ಹೇಳಿದರು.

‘ಕಾಂಗ್ರೆಸ್‌ ಅಂಬೇಡ್ಕರ್‌ ಕ್ಷಮೆ ಕೇಳಬೇಕು’
ಡಾ.ಅಂಬೇಡ್ಕರ್ ಅವರ ರಾಜಕೀಯ ಶ್ರೇಷ್ಠತೆ ಸಹಿಸದ ಕಾಂಗ್ರೆಸ್‌ ಮುಖಂಡರು ಎರಡು ಬಾರಿ ಲೋಕಸಭಾ ಚುನಾವಣೆಯಲ್ಲಿ ಸೋಲಿಸಿದ್ದರು. ರಾಷ್ಟ್ರಪತಿ ಮತ್ತು ಪ್ರಧಾನಿ ಆಗುವ ಅರ್ಹತೆ ಇತ್ತು. ಕಾಂಗ್ರೆಸ್‌ ಅದನ್ನು ಸಹಿಸಲಿಲ್ಲ ಎಂದು ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ಹೇಳಿದರು.

ಅಂಬೇಡ್ಕರ್‌ ಅವರನ್ನು ಕೆಟ್ಟದಾಗಿ ನಡೆಸಿಕೊಂಡ ಕಾಂಗ್ರೆಸ್‌ನವರಿಗೆ ಆ ಬಗ್ಗೆ ಪಶ್ಚಾತಾಮ ಇಲ್ಲ. ಈಗಲಾದರೂ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

ಪ್ರಪಂಚದ 150 ದೇಶಗಳಲ್ಲಿ ಡಾ.ಅಂಬೇಡ್ಕರ್‌ ಜಯಂತಿ ಆಚರಿಸಲಾಗುತ್ತಿದೆ. ಅವರೊಬ್ಬ ಸಾಧಕ ಮತ್ತು ಮೇಧಾವಿ ಎಂಬ ಕಾರಣಕ್ಕೆ ಆ ಗೌರವ ಸಿಗುತ್ತಿದೆ ಎಂದು ಬಿಜೆಪಿ ಎಸ್‌ಸಿ ಮೋರ್ಚಾದ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT