ಸೋಮವಾರ, ಜೂನ್ 21, 2021
27 °C

ಮಂತ್ರಿಗಳಿಗೆ ಬೆಡ್‌ ಸಿಗ್ತಿಲ್ಲ, ಸಾಮಾನ್ಯರ ಸ್ಥಿತಿ ಇನ್ನೂ ಭೀಕರ: ಕಾಂಗ್ರೆಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ರಾಜ್ಯದಲ್ಲಿ ಮಂತ್ರಿಗಳಿಗೆ ಬೆಡ್‌ ಸಿಗುತ್ತಿಲ್ಲ. ಸಾಮಾನ್ಯರ ಸ್ಥಿತಿ ಇನ್ನೂ ಭೀಕರ’ ಎಂದು ರಾಜ್ಯ ಸರ್ಕಾರವನ್ನು ಕಾಂಗ್ರೆಸ್‌ ಟೀಕಿಸಿದೆ.

ಈ ವಿಚಾರವಾಗಿ ಸರಣಿ ಟ್ವೀಟ್‌ ಮಾಡಿರುವ ಕಾಂಗ್ರೆಸ್‌, ‘ಸಚಿವರಾದ ಎಂಟಿಬಿ ನಾಗರಾಜ್‌ ಅವರು ತಮಗೇ ಬೆಡ್ ಸಿಗುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ಇತ್ತ ಮಾಧುಸ್ವಾಮಿ ಪ್ರಭಾವಕ್ಕೂ ಬೆಡ್ ಸಿಗಲಿಲ್ಲ. ಮಂತ್ರಿಗಳಿಗೆ ಹೀಗಾದರೆ ಜನ ಸಾಮಾನ್ಯರ ಸ್ಥಿತಿ ಇನ್ನೂ ಭೀಕರ’ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

‘ಕಳೆದ ವರ್ಷದ 10,000 ಬೆಡ್‌ಗಳ ಬಿಐಇಸಿ ಕೋವಿಡ್ ಸೆಂಟರ್ ಎಲ್ಲಿ ಹೋಯ್ತು? ಇಷ್ಟೆಲ್ಲ ಸಮಸ್ಯೆ ಇದ್ದರೂ ಅದರ ಬಗ್ಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತುಟಿ ಬಿಚ್ಚುತ್ತಿಲ್ಲವೇಕೆ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

‘ಬಿಜೆಪಿ ಸರ್ಕಾರದ ಬೌದ್ಧಿಕ ದಿವಾಳಿತನ ಹಾಗೂ ಪೂರ್ವ ತಯಾರಿ ಇಲ್ಲದ ಏಕಾಏಕಿಯ ಲಾಕ್‌ಡೌನ್‌ನಿಂದಾಗಿ ಸೋಂಕು ನಿಯಂತ್ರಿಸುವ ಬದಲಿಗೆ ಇನ್ನಷ್ಟು ಹಬ್ಬಿಸಲು ಕಾರಣವಾಗಲಿದೆ. ಹೆಚ್ಚುವರಿಯಾಗಿ ಬಿಎಂಟಿಸಿ ಬಸ್‌ಗಳನ್ನು ಉಪಯೋಗಿಸಿಕೊಂಡು ಶೇ 50ರಷ್ಟು ನಿಯಮ ಪಾಲನೆಯಲ್ಲಿ ಸಾರಿಗೆ ವ್ಯವಸ್ಥೆ ನಿರ್ಮಿಸಬಹುದಿತ್ತು. ಆದರೆ, ಸರ್ಕಾರ ಕಂಬಳಿ ಹೊದ್ದು ಮಲಗಿದೆ’ ಎಂದು ಕಾಂಗ್ರೆಸ್ ಟೀಕಿಸಿದೆ.

‘ಆಶಾ ಕಾರ್ಯಕರ್ತೆಯರನ್ನು ಬಳಸಿಕೊಂಡು ಹಳ್ಳಿಗಳಿಗೆ ತೆರಳಿದವರಿಗೆ ಕಡ್ಡಾಯ ಕ್ವಾರಂಟೈನ್ ಹಾಗೂ ಸೋಂಕು ಪರೀಕ್ಷೆ ನಿಯಮ ರೂಪಿಸಿಲ್ಲ. ನಗರಗಳಲ್ಲಿ, ಕಿಕ್ಕಿರಿದು ತುಂಬಿದ ಬಸ್ಸುಗಳಲ್ಲಿ ಅಂಟಿದ ಸೋಂಕು ಹಳ್ಳಿ ಹಳ್ಳಿಗಳಿಗೆ ತಲುಪಲಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಸೋಂಕನ್ನು ರಾಜ್ಯದಾದ್ಯಂತ ಹಬ್ಬಿಸುವ ಹರಕೆಯನ್ನು ಯಾವ ದೇವರಿಗೆ ಹೊತ್ತಿದ್ದೀರಿ?’ ಎಂದು ಕಾಂಗ್ರೆಸ್‌ ಕಿಡಿಕಾರಿದೆ.

ಇದನ್ನೂ ಓದಿ... ಕೋವಿಡ್‌: 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ, ಇಂದಿನಿಂದ ನೋಂದಣಿ–ಇಲ್ಲಿದೆ ಮಾಹಿತಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು