ಬೆಂಗಳೂರು: ಹುಬ್ಬಳ್ಳಿ– ಧಾರವಾಡ, ಬೆಳಗಾವಿ ಮತ್ತು ಕಲಬುರ್ಗಿ ಮಹಾನಗರ ಪಾಲಿಕೆಗಳ ಚುನಾವಣೆ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಕಾಂಗ್ರೆಸ್ ನಾಯಕರ ನಡೆ ಕುರಿತು ಬಿಜೆಪಿ ಟೀಕಿಸಿದೆ.
ಇದೇ ವಿಚಾರವಾಗಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಡಿ.ಕೆ.ಶಿವಕುಮಾರ್ ಅವರೇ, ಪಕ್ಷ ಸಂಘಟನೆಗೆ ನೀವು ಎಷ್ಟೇ ಬೆವರು ಹರಿಸಿದರೂ ಫಲಿತಾಂಶ ಶೂನ್ಯ ಎಂಬುದು ಈಗಲಾದರೂ ಅರ್ಥವಾಯ್ತೇ? ಚುನಾವಣೆಗೆ ಮುನ್ನ ಜಾತಿ ಜಪ, ಚುನಾವಣೆ ಹತ್ತಿರ ಬರುತ್ತಿದ್ದಂತೆ ಪ್ರಕೃತಿ ಚಿಕಿತ್ಸೆ. ಒಟ್ಟಿನಲ್ಲಿ ಡಿ.ಕೆ.ಶಿವಕುಮಾರ್ ಅವರ ಬಗಲಿನಲ್ಲೇ ಶತ್ರು ಪಡೆ ಬೇರೂರಿರುವುದು ಮತ್ತೊಮ್ಮೆ ಸಾಬೀತಾಗಿದೆ’ ಎಂದು ವ್ಯಂಗ್ಯವಾಡಿದೆ.
‘ಸಿದ್ದರಾಮಯ್ಯನವರೇ, ನೀವು ಕಾಂಗ್ರೆಸ್ ಪಕ್ಷದ ಗೆಲುವಿಗೆ ತಂತ್ರಗಾರಿಕೆ ರೂಪಿಸುತ್ತೀದ್ದೀರೋ ಅಥವಾ ಭ್ರಷ್ಟಾಧ್ಯಕ್ಷ ಡಿಕೆಶಿ ಪದಚ್ಯುತಿಗೆ ಪ್ರಯತ್ನಿಸುತ್ತಿದ್ದೀರೋ? ನಿಮ್ಮ ಉದ್ದೇಶ ಸ್ಪಷ್ಟಪಡಿಸಿ’ ಎಂದು ಬಿಜೆಪಿ ಮತ್ತೊಂದು ಟ್ವೀಟ್ ಮಾಡಿದೆ.
ಸೆ.3 ರಂದು ನಡೆದ ಪಾಲಿಕೆಗಳ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿ ಅಲ್ಪತೃಪ್ತಿಗೆ ಸಮಾಧಾನ ಹೊಂದಿದ್ದರೆ, ಕಾಂಗ್ರೆಸ್ ಹಿನ್ನಡೆ ಅನುಭವಿಸಿದೆ. ಜೆಡಿಎಸ್ ಆಘಾತ ಅನುಭವಿಸಿದೆ.
ಹುಬ್ಬಳ್ಳಿ– ಧಾರವಾಡ ಮಹಾನಗರಪಾಲಿಕೆಯಲ್ಲಿ ಈ ಹಿಂದೆ ಆಡಳಿತ ನಡೆಸಿದ್ದ ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಗಳಿಸಿದೆ. ಆದರೆ, ಮುಖ್ಯಮಂತ್ರಿ, ಕೇಂದ್ರ ಸಚಿವರು, ಹಲವು ಪ್ರಮುಖ ನಾಯಕರ ಹಿಡಿತ ನಗರದಲ್ಲಿ ಇದ್ದರೂ ಬಹುಮತದ ‘ಮ್ಯಾಜಿಕ್ ಸಂಖ್ಯೆ’ 42 ತಲುಪಲು ಬಿಜೆಪಿ ವಿಫಲವಾಗಿದೆ.
ಆದರೆ, ಬೆಳಗಾವಿಯಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಬಾರಿಸಿದೆ. ಕಲಬುರ್ಗಿಯಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದ್ದು, ಯಾವುದೇ ಪಕ್ಷಕ್ಕೂ ಬಹುಮತ ಸಿಗದೇ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.