ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳದ ಆಟಿಕೆ ಕ್ಲಸ್ಟರ್ ನನ್ನ ಸರ್ಕಾರದ ಯೋಜನೆ: ಕುಮಾರಸ್ವಾಮಿ ಸರಣಿ ಟ್ವೀಟ್

Last Updated 9 ಜನವರಿ 2021, 11:42 IST
ಅಕ್ಷರ ಗಾತ್ರ

ಬೆಂಗಳೂರು: ‘ಚೀನಾ ಹಿಡಿತದಲ್ಲಿರುವ ಜಾಗತಿಕ ಉತ್ಪಾದನೆ ಮಾರುಕಟ್ಟೆಯಲ್ಲಿ ಭಾರತವೂ ಪಾಲು ಪಡೆಯಬೇಕೆಂಬ ಉದ್ದೇಶದಿಂದ ನಾನು ಮುಖ್ಯಮಂತ್ರಿ ಆಗಿದ್ದಾಗ ‘ಚೀನಾ ಜೊತೆ ಸ್ಪರ್ಧೆ’ ರೂಪಿಸಲಾಗಿತ್ತು. ಇದಕ್ಕಾಗಿ ಕೊಪ್ಪಳದಲ್ಲಿ ಆಟಿಕೆ ಕ್ಲಸ್ಟರ್‌ ರಚಿಸಿ, ₹ 500 ಕೋಟಿ ನೀಡಲಾಗಿತ್ತು. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಆ ಕ್ಲಸ್ಟರ್‌ಗೆ ಇಂದು ಮರು ಚಾಲನೆ ನೀಡುತ್ತಿದ್ದಾರೆ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಸರಣಿ ಟ್ವೀಟ್‌ ಮಾಡಿರುವ ಅವರು, ‘ಕೇಂದ್ರ ಸರ್ಕಾರದ ಆತ್ಮನಿರ್ಭರ ಯೋಜನೆ ಅಡಿಯಲ್ಲಿ ಆಟಿಕೆ ಉತ್ಪಾದನಾ ಘಟಕ ಆರಂಭಿಸುತ್ತಿರುವುದಾಗಿ ರಾಜ್ಯ ಸರ್ಕಾರ ಹೇಳುತ್ತಿದೆ. ಆದರೆ, ಕೇಂದ್ರ ಸರ್ಕಾರ ‘ಆತ್ಮನಿರ್ಭರ’ ಕಲ್ಪನೆ ಜಾರಿಗೆ ತರುವುದಕ್ಕೂ ಮೊದಲೇ ನನ್ನ ಸರ್ಕಾರ ಸ್ವಾವಲಂಬಿ ಕಲ್ಪನೆ ಹೊಂದಿತ್ತು. ಅದರ ಭಾಗವಾಗಿಯೇ ಚೀನಾಕ್ಕೆ ಸೆಡ್ಡು ಹೊಡೆಯುವ ಯೋಜನೆಗಳನ್ನು ರೂಪಿಸಲಾಗಿತ್ತು’ ಎಂದಿದ್ದಾರೆ,

‘₹ 7 ಲಕ್ಷ ಕೋಟಿ ಮೊತ್ತದ ಜಾಗತಿಕ ಆಟಿಕೆ ಮಾರುಕಟ್ಟೆಯಲ್ಲಿ ಚೀನಾ ಪ್ರಬಲ ಹಿಡಿತ ಹೊಂದಿದೆ. ಇದರಲ್ಲಿ ಅಲ್ಪ ಪಾಲು ಕಸಿದರೂ ನಮ್ಮವರಿಗೆ ಉದ್ಯೋಗ ನೀಡಬಹುದು, ಆದಾಯ ಕೊಡಿಸಬಹುದು ಎಂಬುದು ನನ್ನ ಸರ್ಕಾರದ ದೂರದೃಷ್ಟಿಯಾಗಿತ್ತು. ಅದಕ್ಕೆ ಮರು ಚಾಲನೆ ನೀಡುತ್ತಿರುವ, ನನ್ನ ಯೋಜನೆಯನ್ನು ಅನುಸರಿಸುತ್ತಿರುವ ಯಡಿಯೂರಪ್ಪ ಅವರಿಗೆ ಆಭಿನಂದನೆಗಳು’ ಎಂದಿದ್ದಾರೆ.

‘ನನ್ನ ಸರ್ಕಾರದ ಅವಧಿಯಲ್ಲಿ ಇಂಥ ಹಲವು ಕಾರ್ಯಕ್ರಮಗಳನ್ನು ಕೊಡಲಾಗಿದೆ. ಅವುಗಳಲ್ಲಿ ಈ ನೆಲದ ಸ್ವಾಭಿಮಾನ ಸಾರುವ ಯೋಜನೆಗಳೂ ಇವೆ ಎಂಬುದು ಗಮನಾರ್ಹ. ಅವುಗಳನ್ನು ಮರಳಿ ಜಾರಿಗೆ ತರುವುದರ ಕಡೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಚಿಂತನೆ ನಡೆಸುವುದು ಅತ್ಯಗತ್ಯ. ನನ್ನ ಯೋಜನೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ, ಆದಾಯ ಸಿಗುವ ಅಂಶಗಳು ಪ್ರಧಾನ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT