ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ವಿಚಾರದಲ್ಲಿ ಕನ್ನಡಿಗರಿಗೆ ತಾರತಮ್ಯ: ಎಚ್‌ಡಿಕೆ

Last Updated 6 ಮೇ 2021, 6:39 IST
ಅಕ್ಷರ ಗಾತ್ರ

ಬೆಂಗಳೂರು: 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ವಿಚಾರದಲ್ಲಿ ಕನ್ನಡಿಗರಿಗೆ ತಾರತಮ್ಯವಾಗುತ್ತಿರುವುದು, ಗುಜರಾತ್‌ ಮೇಲೆ ಅತಿಯಾದ ಪ್ರೀತಿ ತೋರುತ್ತಿರುವುದು ಬಹಿರಂಗವಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಈ ವಿಚಾರವಾಗಿ ಸರಣಿ ಟ್ವೀಟ್‌ ಮಾಡಿರುವ ಅವರು, ‘18-44 ವಯೋಮಾನದವರಿಗೆ ಲಸಿಕೆ ಹಾಕುವ ಅಭಿಯಾನ ಮೇ 1ರಿಂದ ಆರಂಭವಾಗಿದೆ. ದೇಶದಲ್ಲಿ ಮಂಗಳವಾರದ ಹೊತ್ತಿಗೆ 6 ಲಕ್ಷಕ್ಕೂ ಅಧಿಕ ಮಂದಿಗೆ ಲಸಿಕೆ ನೀಡಲಾಗಿದೆ. ಈ ಪೈಕಿ ಗುಜರಾತ್‌ನಲ್ಲಿ 1,61,000 ಜನರಿಗೆ ಲಸಿಕೆ ಹಾಕಲಾಗಿದ್ದರೆ, ಕರ್ನಾಟಕದಲ್ಲಿ ಕೇವಲ 3475 ಜನರಿಗೆ ಮಾತ್ರ ಲಸಿಕೆ ನೀಡಲಾಗಿದೆ. ಇದು ಕೇಂದ್ರದ ತಾರತಮ್ಯವೋ, ರಾಜ್ಯದ ವೈಫಲ್ಯವೋ?’ ಎಂದು ಪ್ರಶ್ನಿಸಿದ್ದಾರೆ.

‘ರಾಜ್ಯಕ್ಕೆ ಕೇಂದ್ರ ಸರ್ಕಾರ ಲಸಿಕೆ ನೀಡುತ್ತಿಲ್ಲವೇ? ರಾಜ್ಯಕ್ಕೆ ಏನು ಬೇಕೋ ಅದನ್ನು ಕೇಳಿ ಪಡೆಯಲು ರಾಜ್ಯ ಸರ್ಕಾರಕ್ಕೆ ಶಕ್ತಿ ಇಲ್ಲವೇ? ಇತರ ರಾಜ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದನ್ನು ಪ್ರಶ್ನಿಸಲು ನಮ್ಮವರಿಗೆ ಬಾಯಿಲ್ಲವೇ? ಇದೆಲ್ಲ ಗಮನಿಸುತ್ತಿದ್ದರೆ, ಕನ್ನಡರಿಗರನ್ನು ಈ ಸರ್ಕಾರಗಳು ಹಣೆಬರಹಕ್ಕೆ ಬಿಟ್ಟಂತೆ ಕಾಣುತ್ತಿದೆ’ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

‘ಕರ್ನಾಟಕ ಮತ್ತು ಕನ್ನಡಿಗರಿಗೆ ತಾರತಮ್ಯವಾಗುತ್ತಿರುವುದು, ಗುಜರಾತ್‌ ಮೇಲೆ ಅತಿಯಾದ ಪ್ರೀತಿ ತೋರುತ್ತಿರುವುದು ಕೇಂದ್ರದ ಆರೋಗ್ಯ ಇಲಾಖೆ ನೀಡಿರುವ ಅಂಕಿ ಅಂಶಗಳಿಂದಲೇ ಬಹಿರಂಗವಾಗಿದೆ. ಈ ಸಂಕಷ್ಟದ ಪರಿಸ್ಥಿತಿಯಲ್ಲೂ ಕೇಂದ್ರದಿಂದ ಆಗುತ್ತಿರುವ ಈ ತಾರತಮ್ಯ ಮನುಷ್ಯತ್ವ ವಿರೋಧಿ. ಕನ್ನಡಿಗರಿಗಾಗಿ ಸೊಲ್ಲೆತ್ತದ ರಾಜ್ಯ ಸರ್ಕಾರದ ಪರಮ ವೈಫಲ್ಯ’ ಎಂದಿದ್ದಾರೆ.


‘ರಾಜ್ಯದ ಬಿಜೆಪಿ ಸರ್ಕಾರ ಹಾಗೂ ಸಂಸದರು ಮೊದಲು ಈ ತಾರತಮ್ಯದ ವಿರುದ್ಧ ಹೋರಾಡಬೇಕು. ಜನರ ಜೀವ ಉಳಿಸಲು ಬೇಕಾಗಿರುವುದನ್ನು ಕೇಂದ್ರದಿಂದ ಕೇಳಿ ಪಡೆದುಕೊಳ್ಳಬೇಕಾದದ್ದು ಈ ಹೊತ್ತಿನ ಅಗತ್ಯವಾಗಿದೆ. ಲಸಿಕೆ ಅಭಿಯಾನದಲ್ಲಿ ಆಗುತ್ತಿರುವ ಈ ತಾರತಮ್ಯ, ವೈಫಲ್ಯಗಳನ್ನು ರಾಜ್ಯದ ಜನರೂ ಪ್ರಶ್ನೆ ಮಾಡಬೇಕಾಗಿದೆ. ಇಲ್ಲವಾದಲ್ಲಿ ಅಪಾಯದ ದಿನಗಳು ಮುಂದಿವೆ’ ಎಂದು ಕುಮಾರಸ್ವಾಮಿ ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT