ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಷೇಧಾಜ್ಞೆ ವಿಧಿಸಿದರೆ ಐದೈದು ಜನ ಪಾದಯಾತ್ರೆ ಮಾಡುತ್ತೇವೆ: ಸಿದ್ದರಾಮಯ್ಯ

Last Updated 8 ಜನವರಿ 2022, 7:22 IST
ಅಕ್ಷರ ಗಾತ್ರ

ಬೆಂಗಳೂರು: ‘ನಾವು ಪಾದಯಾತ್ರೆ ಮಾಡೇ ಮಾಡುತ್ತೇವೆ. ನಿಷೇಧಾಜ್ಞೆ ವಿಧಿಸಿದರೆ ಐದೈದು ಜನ ಹೋಗಿ ಮಾಡುತ್ತೇವೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪುನರುಚ್ಚರಿಸಿದರು.

ಸುದ್ದಿಗಾರರ ಜೊತೆ ತಮ್ಮ ನಿವಾಸದಲ್ಲಿ ಶನಿವಾರ ಮಾತನಾಡಿದ ಅವರು, ‘ಕೋವಿಡ್ ನಿಯಮ ಪಾಲಿಸಿಕೊಂಡೇ ಪಾದಯಾತ್ರೆ ಮಾಡುತ್ತೇವೆ. ರಾಮನಗರಕ್ಕೆ ಮಾತ್ರ ಯಾಕೆ ನಿಷೇಧಾಜ್ಞೆ ಹಾಕಿದ್ದಾರೆ. ಇದರ ಅರ್ಥ ಏನು. ಇದು ನಮ್ಮ ಪಾದಯಾತ್ರೆ ಹತ್ತಿಕ್ಕುವ ಹುನ್ನಾರ’ ಎಂದು ಕಿಡಿಕಾರಿದರು.

‘ಎರಡೂವರೆ ವರ್ಷದಿಂದ ಬಿಜೆಪಿ ಸರ್ಕಾರ ಏನೂ ಮಾಡಿಲ್ಲ. ಸುಳ್ಳು ಜಾಹೀರಾತು ನೀಡಿ ಹಾದಿ ತಪ್ಪಿಸುವ ಹುನ್ನಾರ ಮಾಡಿದೆ. ಯೋಜನೆಯ ವಿಷಯದಲ್ಲಿ ಬಿಜೆಪಿಯಿಂದ ವಿಳಂಬ ದ್ರೋಹ ಆಗಿದೆ. ಯಾವುದೇ ಅಡೆತಡೆ ಇಲ್ಲದಿದ್ದರೂ ಯಾಕೆ ಕೆಲಸ ಆರಂಭಿಸಿಲ್ಲ. ಕೇಂದ್ರಕ್ಕೆ ಒತ್ತಾಯ ಮಾಡೇ ಇಲ್ಲ. ಯಾಕೆ ರಾಜಕೀಯ ಬಣ್ಣ ನೀಡುವ ಪ್ರಯತ್ನ ಮಾಡುತ್ತಿದೆ. ಬಿಜೆಪಿ ಸರ್ಕಾರ ಇನ್ನೊಬ್ಬರ ಮೇಲೆ ಗೂಬೆ ಕೂರಿಸುತ್ತಿದೆ’ ಎಂದು ಟೀಕಿಸಿದರು.

‘2008ರಿಂದ ಕಾರಜೋಳ ಮಂತ್ರಿ ಆಗಿದ್ದರು.ಬಸವರಾಜ ಬೊಮ್ಮಾಯಿ ನೀರಾವರಿ ಸಚಿವರಾಗಿದ್ದರು. ಅವರು ಏನು ಮಾಡಿದ್ದರು? ಅನಗತ್ಯವಾಗಿ ಗೊಂದಲ ಸೃಷ್ಟಿಸಲು ಸರ್ಕಾರ 144 ಸೆಕ್ಷನ್‌ ಹಾಕಿದೆ. ನಾವು 15 ಜನ ಪಾದಯಾತ್ರೆ ಮಾಡಿದರೆ ಬಿಡುತ್ತೇವೆ ಎಂದು ಕಾರಜೋಳ ಹೇಳುತ್ತಾರೆ. 15 ಜನ ನಡೆದರೆ 144 ಸೆಕ್ಷನ್‌ ಉಲ್ಲಂಘನೆ ಆಗುವುದಿಲ್ಲವೇ? ನಾವು ನಿಯಮದ ಪ್ರಕಾರ ಪಾದಯಾತ್ರೆ ಮಾಡುತ್ತೇವೆ. ಎಲ್ಲೂ ಇಲ್ಲದ 144 ಸೆಕ್ಷನ್‌ ರಾಮನಗರಕ್ಕೆ ಮಾತ್ರ ಯಾಕೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕಾಂಗ್ರೆಸ್ ನಾಯಕರಂತೆ ಕೋವಿಡ್‌ ನಿಯಮಾವಳಿ ಉಲ್ಲಂಘಿಸಿ ಹಟಕ್ಕೆ ಬಿದ್ದು ಯಾತ್ರೆ ಮಾಡುವುದಿಲ್ಲ’ ಎಂಬ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹೇಳಿಕೆ ಪ್ರತಿಕ್ರಿಯಿಸಿದ ಅವರು, ‘ಕುಮಾರಸ್ವಾಮಿ ಹತಾಶರಾಗಿದ್ದಾರೆ. ಹೀಗಾಗಿ ಏನೇನೋ ಮಾತನಾಡುತ್ತಿದ್ದಾರೆ. ಅವರ ಹೇಳಿಕೆಗಳ ಬಗ್ಗೆ ಸುಮ್ಮನೆ ಯಾಕೆ ಮಾತನಾಡಬೇಕು. ಅವರ ಬಗ್ಗೆ ಏನೂ ಮಾತನಾಡುವುದಿಲ್ಲ’ ಎಂದರು.

ಹೊಸ ಶೂ ಖರೀದಿ: ಭಾನುವಾರದಿಂದ (ಜ. 9) ಹತ್ತು ದಿನಗಳ ಕಾಲ ನಡೆಯಲಿರುವ ಪಾದಯಾತ್ರೆ ವೇಳೆ ಧರಿಸಲು ಸಿದ್ದರಾಮಯ್ಯ ಹೊಸ ನಾಲ್ಕು ಜೊತೆ ಶೂ ಖರೀದಿಸಿದ್ದಾರೆ. ನಗರದಿಂದ ಮಧ್ಯಾಹ್ನ 3 ಗಂಟೆಗೆ ಅವರುವ ಶಿವಾನಂದ ವೃತ್ತದ ಬಳಿ ಇರುವ ತಮ್ಮ ಸರ್ಕಾರಿ ನಿವಾಸದಿಂದ ಕನಕಪುರಕ್ಕೆ ಪ್ರಯಾಣ ಬೆಳೆಸಲಿದ್ದು. ಅಲ್ಲಿ ನಡೆಯಲಿರುವ ಪಕ್ಷದ ನಾಯಕರ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT