ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇತಿಹಾಸ ತಿಳಿಯದವರಿಗೆ ಭವಿಷ್ಯವಿಲ್ಲ: ರಾಹುಲ್‌ ಗಾಂಧಿ ವಿರುದ್ಧ ಶ್ರೀರಾಮುಲು ಕಿಡಿ

Last Updated 11 ಅಕ್ಟೋಬರ್ 2022, 16:57 IST
ಅಕ್ಷರ ಗಾತ್ರ

ಚಿತ್ರದುರ್ಗ: ಇತಿಹಾಸ ತಿಳಿಯದವರಿಗೆ ಭವಿಷ್ಯವಿಲ್ಲ ಎಂಬ ಮಾತು ನಿಮಗೆ ಅನ್ವಯವಾಗದಿರಲಿ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿರುದ್ಧ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಶ್ರೀರಾಮುಲು ವಾಗ್ದಾಳಿ ನಡೆಸಿದ್ದಾರೆ.

ಪರಿಶಿಷ್ಟ ಜಾತಿ ಹಾಗೂ ಪಂಗಡದ ಮೀಸಲಾತಿ ಪ್ರಮಾಣ ಹೆಚ್ಚಿಸದೇ ಎರಡೂವರೆ ವರ್ಷ ಕಾಲಹರಣ ಮಾಡಿದ ರಾಜ್ಯ ಬಿಜೆಪಿ ಸರ್ಕಾರ, ಪರಿಶಿಷ್ಟರ ವಿರೋಧಿ ಎಂಬುದನ್ನು ನಿರೂಪಿಸಿದೆ ಎಂಬ ರಾಹುಲ್‌ ಗಾಂಧಿ ಹೇಳಿಕೆಗೆ ಬಿ.ಶ್ರೀರಾಮುಲು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪರಿಶಿಷ್ಟ ಜಾತಿ ಹಾಗೂ ಪಂಗಡದ ಮೀಸಲಾತಿ ವಿಚಾರ ಪ್ರಸ್ತಾಪಿಸಿ ಸರಣಿ ಟ್ವೀಟ್ ಮಾಡಿರುವ ಅವರು, ‘ಭಾರತ್ ಜೋಡೊ ಯಾತ್ರೆ ಮಾಡುತ್ತಿರುವ ರಾಹುಲ್‌ ಗಾಂಧಿ ಅವರೇ ಬಿಜೆಪಿ ದಲಿತರ ವಿರೋಧಿ ಎಂದು ಯಾವ ಬಾಯಲ್ಲಿ ಹೇಳಿದಿರೋ ಅಥವಾ ಯಾರಾದರೂ ಹೇಳುವಂತೆ ನಿಮಗೆ ಬಲವಂತ ಮಾಡಿದರೋ ಗೊತ್ತಿಲ್ಲ. ಆದರೆ, ನಿಮ್ಮ ಹೇಳಿಕೆಗೆ ನನ್ನ ಕನಿಕರವಿದೆ’ ಎಂದು ವ್ಯಂಗ್ಯವಾಡಿದ್ದಾರೆ.

‘ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ವಿಶ್ವದ ಶ್ರೇಷ್ಠ ದಾರ್ಶನಿಕ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಘೋಷಣೆ ಮಾಡಿದ್ದು, ನಮ್ಮ ಬಿಜೆಪಿ ಸರ್ಕಾರವೇ ಹೊರತು ಕಾಂಗ್ರೆಸ್ ಪಕ್ಷ ಅಲ್ಲ ಎಂಬುದನ್ನು ನಿಮ್ಮ ಗಮನಕ್ಕೆ ತರಲು ಇಚ್ಛಿಸುತ್ತೇನೆ’ ಎಂದಿದ್ದಾರೆ.

‘ಇಷ್ಟು ಮಾತ್ರವಲ್ಲದೇ, ವಾಲ್ಮೀಕಿ ಪ್ರಶಸ್ತಿ ಘೋಷಣೆ ಪ್ರಥಮ ಬಾರಿಗೆ ರಾಜ್ಯದ ಎಲ್ಲೆಡೆ ವಾಲ್ಮೀಕಿ ಸಮುದಾಯ ಭವನ ನಿರ್ಮಾಣ, ಪ್ರತ್ಯೇಕ ವಾಲ್ಮೀಕಿ ಅಭಿವೃದ್ಧಿ ನಿಗಮ ಮಾಡಿದ್ದು ಯಾವ ಸರ್ಕಾರ? ಇದರ ಬಗ್ಗೆ ನಿಮಗೆ ಮಾಹಿತಿ ಇಲ್ಲದಿದ್ದರೆ, ನಿಮ್ಮ ಜೊತೆಗೆ ಜೋಡೊ ಯಾತ್ರೆ ನಾಟಕ ಮಾಡುತ್ತಿರುವ ಹಕ್ಕ- ಬುಕ್ಕರಿಂದ ತಿಳಿಯಬಹುದಿತ್ತು’ ಎಂದು ಕಾಂಗ್ರೆಸ್‌ ನಾಯಕರ ವಿರುದ್ಧ ಶ್ರೀರಾಮುಲು ಕಿಡಿಕಾರಿದ್ದಾರೆ.

‘ವಾಲ್ಮೀಕಿ ಜಯಂತಿಗೆ ಸರ್ಕಾರಿ ರಜೆ ಘೋಷಣೆ, ಕೇಂದ್ರ ಹಾಗೂ ರಾಜ್ಯ ಎರಡೂ ಕಡೆ ಪ್ರತ್ಯೇಕ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ರಚಿಸಿದ್ದು ಇದೇ ಬಿಜೆಪಿ ಸರ್ಕಾರ. 5 ವರ್ಷ ಆಡಳಿತ ನಡೆಸಿದ್ದ ಸ್ವಯಂ ಘೋಷಿತ ಯಶಸ್ವಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಈ ಅಲೋಚನೆ ಏಕೆ‌ ಬರಲಿಲ್ಲ’ ಎಂದು ಶ್ರೀರಾಮುಲು ಪ್ರಶ್ನಿಸಿದ್ದಾರೆ.

‘ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ನಾಯಕ ಸಮುದಾಯದ 36 ವರ್ಷಗಳ ಬೇಡಿಕೆಯಾಗಿದ್ದ ಪರಿವಾರ ಮತ್ತು ತಳವಾರ ಸಮಸ್ಯೆ ಇತ್ಯರ್ಥ ಪಡಿಸಿದ್ದು ವಿಶ್ವವೇ ಮೆಚ್ಚಿದ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರ. ಹತ್ತು ವರ್ಷ ಕೇಂದ್ರದಲ್ಲಿ ‌ಯುಪಿಎ ಸರ್ಕಾರ ಅಧಿಕಾರದಲ್ಲಿ ಈ ಸಮುದಾಯಕ್ಕೆ ನೀವು ನ್ಯಾಯ ಕೊಡಿಸಬಹುದಿತ್ತಲ್ಲವೇ’ ಎಂದು ಶ್ರೀರಾಮುಲು ಕುಟುಗಿದ್ದಾರೆ.

ಮೈಸೂರು ಮಹಾನಗರ ಪಾಲಿಕೆಗೆ ಮೊದಲ ಬಾರಿಗೆ ನಾಯಕ ಸಮುದಾಯಕ್ಕೆ ಮಹಾಪೌರರ (ಮೇಯರ್) ಸ್ಥಾನ ಅತ್ಯಂತ ಹಿಂದುಳಿದ ಸಿದ್ಧಿ ಸಮುದಾಯದ ಸಾಮಾನ್ಯ ಕಾರ್ಯಕರ್ತನಿಗೆ ವಿಧಾನ ಪರಿಷತ್ತಿಗೆ ನಾಮಕರಣ ಮಾಡಿದ್ದು ಬಿಜೆಪಿಯೇ ಹೊರೆತು ಕಾಂಗ್ರೆಸ್ ಪಕ್ಷವಲ್ಲ ಎಂಬುದನ್ನು ನಿಮ್ಮ ಗಮನಕ್ಕೆ ತರುತ್ತೇನೆ ಎಂದಿದ್ದಾರೆ.

ಇಷ್ಟು ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಜಾರಿಗೆ ತಂದಿರುವ ಬಿಜೆಪಿ ಸರ್ಕಾರ ಎಸ್‌ಸಿ, ಎಸ್‌ಟಿ ಪರವಾಗಿ ಇದಿಯೋ ಇಲ್ಲವೋ? ಏನೂ ಮಾಡದೆ ಈ ಎರಡೂ ಸಮುದಾಯದ ಮೂಗಿಗೆ ತುಪ್ಪ ಸವರಿದ್ದೇ ಕಾಂಗ್ರೆಸ್ ಎಂದು ಶ್ರೀರಾಮುಲು ಗುಡುಗಿದ್ದಾರೆ.

ಕಳೆದ 2018 ಹಾಗೂ 2019ರ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಎಸ್‌ಸಿ, ಎಸ್‌ಟಿ ಹಿಂದುಳಿದ ಸಮುದಾಯದವರು ಕಾಂಗ್ರೆಸ್ ಪಕ್ಷದಿಂದ ಏಕೆ ದೂರವಾದರು ಎಂಬುದನ್ನು ಆತ್ಮವಲೋಕನ ಮಾಡಿಕೊಂಡಿದ್ದರೆ ಬಿಜೆಪಿ ಬಗ್ಗೆ ಮಾತನಾಡುವ ಪ್ರಮಯವೇ ಬರುತ್ತಿರಲಿಲ್ಲ ಎಂದು ಶ್ರೀರಾಮುಲು ಕಿಚಾಯಿಸಿದ್ದಾರೆ.

‘ಕಡೆ ಪಕ್ಷ ಕಾಂಗ್ರೆಸ್ ಪಕ್ಷದಲ್ಲಿರುವ ದಲಿತ ನಾಯಕರಾದ ಡಾ.ಜಿ.ಪರಮೇಶ್ವರ್, ಮಲಿಕಾರ್ಜುನ ಖರ್ಗೆ, ಶ್ರೀನಿವಾಸ್ ಪ್ರಸಾದ್, ಹಿಂದುಳಿದ ವಿಶ್ವನಾಥ್ ಅವರ ಬೆನ್ನಿಗೆ ಚೂರಿ ಹಾಕಿದ್ದು ಯಾರು ಎಂದು ನಿಮ್ಮ ಪಕ್ಕದಲ್ಲಿರುವವರನ್ನೇ ಕೇಳಿದರೆ ಚೆನ್ನಾಗಿರುತ್ತಿತ್ತು. ಇತಿಹಾಸ ತಿಳಿಯವದರಿಗೆ ಭವಿಷ್ಯವಿಲ್ಲ ಎಂಬ ಮಾತು ನಿಮಗೆ ಅನ್ವಯವಾಗದಿರಲಿ’ ಎಂದು ಶ್ರೀರಾಮುಲು ಛೇಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT