ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಹ ಪರಿಸ್ಥಿತಿ ಚರ್ಚಿಸಲು ವಿಶೇಷ ಅಧಿವೇಶನ ಕರೆಯಬೇಕು: ಸಿದ್ದರಾಮಯ್ಯ

ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ತಕ್ಷಣ ಪರಿಹಾರ ಒದಗಿಸುವಂತೆ ಆಗ್ರಹಿಸಿ ಮುಖ್ಯಮಂತ್ರಿಗೆ ಪತ್ರ
Last Updated 29 ಅಕ್ಟೋಬರ್ 2020, 8:51 IST
ಅಕ್ಷರ ಗಾತ್ರ

ಬೆಂಗಳೂರು: ‘ಉತ್ತರ ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ತಕ್ಷಣ ಪರಿಹಾರ ಒದಗಿಸುವ ಜೊತೆಗೆ ಹಾನಿಗೊಳಗಾಗಿರುವ ಎಲ್ಲ ಮೂಲಸೌಕರ್ಯಗಳನ್ನು ಮರು ನಿರ್ಮಿಸಬೇಕು’ ಎಂದು ಆಗ್ರಹಿಸಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.

‘ಬೀದರ್, ಕಲಬುರ್ಗಿ ಹಾಗೂ ಯಾದಗಿರಿ ಜಿಲ್ಲೆಯ ಪ್ರವಾಹಪೀಡಿತ ಪ್ರದೇಶಗಳಿಗೆ ಸಿದ್ದರಾಮಯ್ಯ ಇತ್ತೀಚೆಗೆ ಭೇಟಿ ನೀಡಿದ್ದರು. ಅಲ್ಲಿಯ ಪರಿಸ್ಥಿತಿ ಆಧರಿಸಿ ಅವರು ಈ ಪತ್ರ ಬರೆದಿದ್ದಾರೆ. ಪ್ರವಾಹ ಪರಿಸ್ಥಿತಿಯ ಕಾರಣ ಸರ್ಕಾರ ಕೈಗೊಂಡಿರುವ ಹಾಗೂ ಕೈಗೊಳ್ಳಬೇಕಾದ ಕ್ರಮಗಳನ್ನು ಚರ್ಚಿಸಲು ತುರ್ತಾಗಿ ವಿಧಾನಸಭೆಯ ವಿಶೇಷ ಅಧಿವೇಶನ ಕರೆಯಬೇಕು ಎಂದೂ ಅವರು ಒತ್ತಾಯಿಸಿದ್ದಾರೆ.

‘ಸರ್ಕಾರ ಪ್ರವಾಹ ನಿರ್ವಹಣೆಯನ್ನು ಸಂಪೂರ್ಣ ನಿರ್ಲಕ್ಷಿಸಿದೆ. ಜನರು ತಮ್ಮ ಜೀವನ ಕಳೆದುಕೊಂಡು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಸರ್ಕಾರ ಜನರನ್ನು ಶತ್ರುಗಳು ಎಂದು ನೋಡದೆ ಅವರ ಸಂಕಷ್ಟಕ್ಕೆ ಸ್ಪಂದಿಸಿ ಬದುಕು ಕಟ್ಟಿಕೊಳ್ಳಲು ನೆರವಾಗಬೇಕು. ಸಂಕಷ್ಟದಲ್ಲಿರುವ ಜನರಿಗೆ ತಕ್ಷಣ ಪರಿಹಾರ ಬಿಡುಗಡೆ ಮಾಡಬೇಕು. ನಿಮಗೆ ಆ ಧೈರ್ಯವಿರದಿದ್ದರೆ ವಿರೋಧ ಪಕ್ಷದ ಮುಖಂಡರನ್ನು ಒಳಗೊಂಡ ನಿಯೋಗವನ್ನು ಪ್ರಧಾನಿ ಬಳಿಗೆ ಕರೆದುಕೊಂಡು ಹೋಗಿ, ನಾವು ಕೇಳುತ್ತೇವೆ. ನಾವು ನಿಂತು, ಹಣ ಬಿಡುಗಡೆ ಮಾಡುವಂತೆ ಒತ್ತಡ ಹಾಕುತ್ತೇವೆ’ ಎಂದೂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

‘ರಾಜ್ಯ ಸರ್ಕಾರವು ₹ 90,000 ಕೋಟಿಗೂ ಹೆಚ್ಚು ಮೊತ್ತದ ಸಾಲ ಮಾಡುತ್ತಿದೆ. ರಾಜ್ಯದ ಜನ ಮತ್ತು ರಾಜ್ಯದ ಆಸ್ತಿಯನ್ನು ಒತ್ತೆ ಇಟ್ಟು ತರುವ ಸಾಲ ಜನರ ಕಣ್ಣೀರು ಒರೆಸಬೇಕಲ್ಲದೇ ಭ್ರಷ್ಟಾಚಾರಕ್ಕೆ ಬಳಕೆಯಾಗಬಾರದು. ಜನರ ಸಂಕಷ್ಟ ಪರಿಹರಿಸಲು ಬಳಕೆಯಾಗದ ಸಾಲವನ್ನು ರಾಜ್ಯದ ಜನ ಸಹಿಸುವುದಿಲ್ಲ. ಅತ್ಯಂತ ತುರ್ತಾಗಿ ಪ್ರವಾಹ ಸಂತ್ರಸ್ಥರಿಗೆ ಪರಿಹಾರ ನೀಡಬೇಕೆಂದು ಹಾಗೂ ಹಾನಿಗೊಳಗಾಗಿರುವ ಎಲ್ಲ ಮೂಲಸೌಕರ್ಯಗಳನ್ನು ಪುನರ್ ನಿರ್ಮಿಸಬೇಕು’ ಎಂದೂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಪತ್ರದಲ್ಲಿ ಏನಿದೆ?: ‘ಅ. 19 ಮತ್ತು 20 ರಂದು ಬಾದಾಮಿ ಕ್ಷೇತ್ರದ ಅನೇಕ ಗ್ರಾಮಗಳಿಗೆ ಹಾಗೂ 25 ಮತ್ತು 26ರಂದು ಬೀದರ್, ಕಲಬುರ್ಗಿ, ಯಾದಗಿರಿ ಜಿಲ್ಲೆಗಳ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪ್ರವಾಸ ಮಾಡಿದ್ದೇನೆ. ಸಂತ್ರಸ್ತ ಪ್ರದೇಶಗಳ ಜನಪ್ರತಿನಿಧಿಗಳು, ಮುಖಂಡರು ನನ್ನ ಜೊತೆಯಲ್ಲಿ ಭಾಗವಹಿಸಿದ್ದರು. ನನ್ನ ಅನುಭವದ ಪ್ರಕಾರ ಈ ವರ್ಷದ ಹಾನಿ ಹಿಂದೆಂದಿಗಿಂತಲೂ ದುಪ್ಪಟ್ಟು ಪ್ರಮಾಣದಲ್ಲಿದೆ’

‘ಕೊರೊನಕ್ಕೆ ತುತ್ತಾಗಿ ಜೀವನವನ್ನು ಕಳೆದುಕೊಂಡು ಹಳ್ಳಿಗಳಿಗೆ ಬಂದ ಜನ ವ್ಯವಸಾಯದಲ್ಲಿ ತೊಡಗಿಸಿಕೊಂಡಿದ್ದಾರೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ 30 ಕ್ಕಿಂತ ಅಧಿಕ ಬಿತ್ತನೆಯಾಗಿದೆ. ಬೆಳೆಯೂ ಕೈಗೆ ಬರುವ ಕಾಲವಿದು. ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕದಲ್ಲಿ ಭೀಕರ ಮಳೆಯಾಗಿದೆ. ಉಳಿದ ಜಿಲ್ಲೆಗಳ ಜನರ ದು:ಖವೂ ಭಿನ್ನವಾಗಿಲ್ಲ. ಶೇಂಗಾ, ಈರುಳ್ಳಿ, ಅಡಿಕೆ, ಭತ್ತ, ಕಾಫಿ, ಮೆಣಸು, ಜೋಳ, ಹಲವು ದ್ವಿದಳ ಧಾನ್ಯಗಳು, ಹತ್ತಿ, ಮೆಣಸು, ಮೆಣಸಿನಕಾಯಿ, ರಾಗಿ, ಸಜ್ಜೆ ಮುಂತಾದ ಬೆಳೆಗಳೆಲ್ಲ ಕೊಳೆತು ಹೋಗಿವೆ.’

‘ನಗರಗಳಿಗೆ ವ್ಯಾಪಕವಾಗಿ ವಲಸೆ ಹೋಗುವ ಕಲ್ಯಾಣ ಕರ್ನಾಟಕದ ರೈತಾಪಿ ಮಕ್ಕಳು, ಬಡವರ ಬದುಕು ಮಳೆಯಿಂದಾಗಿ ಕೊಚ್ಚಿ ಹೋಗಿದೆ. ಕಳೆದ ವರ್ಷ ಬಿದ್ದ ಮಳೆಯಿಂದಾಗಿ ಹಾನಿಯಾದ ಸುಮಾರು ಒಂದು ಲಕ್ಷಕ್ಕೂ ಹೆಚ್ಚಿನ ಮನೆಗಳಿಗೆ ಇದುವರೆಗೂ ಪರಿಹಾರ ನೀಡಿಲ್ಲ. ಕೇಂದ್ರ ಸರ್ಕಾರಕ್ಕೆ 2,47,000 ಮನೆಗಳಿಗೆ ಹಾನಿಯಾಗಿದೆ ಎಂದು ಕೇಂದ್ರಕ್ಕೆ ಮನವಿ ಸಲ್ಲಿಸಿದೆ. ಆದರೆ ಪರಿಹಾರ ನೀಡಿರುವುದು ಕೇವಲ 1,24,000 ಮನೆಗಳಿಗೆ ಮಾತ್ರ. ಅದೂ ಸಹ ಅಲ್ಪ ಸ್ವಲ್ಪ ಪ್ರಮಾಣದಲ್ಲಿ. ಪೂರ್ಣ ಹಾನಿಯಾದ ಮನೆಗಳಿಗೆ ₹ 5.00 ಲಕ್ಷ ನೀಡುವುದಾಗಿ ಹೇಳಿ ಇದುವರೆಗೆ ಕೇವಲ ₹ 1 ಲಕ್ಷಗಳನ್ನು ನೀಡಲಾಗಿದೆ. ಕೊಚ್ಚಿ ಹೋದ ಭೂಮಿಗೆ, ಕೊಳೆತು ಹೋದ ಬೆಳೆಗಳಿಗೆ ಇನ್ನೂ ಪರಿಹಾರವನ್ನೇ ನೀಡಿಲ್ಲವೆಂದು ನಾನು ಭೇಟಿಕೊಟ್ಟ ಗ್ರಾಮಗಳ ರೈತರು ಪದೇ ಪದೇ ಹೇಳುತ್ತಿದ್ದಾರೆ. ಕಳೆದ ವರ್ಷವಾದರೂ ನದಿ ಪಾತ್ರಗಳ ಗ್ರಾಮಗಳ ಜನರು ತೀವ್ರ ನೋವು ಅನುಭವಿಸಿದರು. ಕಳೆದ ವರ್ಷ ಮಳೆ ಮತ್ತು ನದಿಗಳು ಉಕ್ಕಿ ಹರಿದಿದ್ದರಿಂದ ಸುಮಾರು 10 ಲಕ್ಷ ಹೆಕ್ಟೇರ್ ಭೂಮಿ ಹಾನಿಗೊಳಗಾಗಿತ್ತು’

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಅದರ ಎರಡರಿಂದ ಎರಡೂವರೆ ಪಟ್ಟು ಹೆಚ್ಚು ಹಾನಿಯಾಗಿದೆ. ಆಗಸ್ಟ್ ತಿಂಗಳಲ್ಲಿ 4 ರಿಂದ 8 ಮತ್ತು 15 ರಿಂದ 18 ರವರೆಗೆ ರಾಜ್ಯದ 23 ಜಿಲ್ಲೆಗಳ 130 ತಾಲ್ಲೂಕುಗಳಲ್ಲಿ ಸುರಿದ ಮಳೆಯಿಂದಾಗಿ ಸುಮಾರು 4.60 ಲಕ್ಷ ಹೆಕ್ಟೇರ್ ಭೂಮಿಯಲ್ಲಿದ್ದ ಬೆಳೆಗಳು ಹಾನಿಗೊಳಗಾಗಿದ್ದವು. 13,573 ಮನೆಗಳು ಹಾನಿಯಾಗಿದ್ದವು. 30,455 ಕಿ.ಮೀ. ರಸ್ತೆ, 5080 ಸರ್ಕಾರಿ ಕಟ್ಟಡಗಳು, 3,481 ಸೇತುವೆ, 1,659 ಕೆರೆಗಳು, 30,000 ಮನೆಗಳು ಹಾನಿಗೊಳಗಾಗಿದ್ದವು.

‘ಸೆಪ್ಟೆಂಬರ್ ಅಂತ್ಯದವರೆಗೆ ರಾಜ್ಯದಲ್ಲಿ 8.68 ಲಕ್ಷ ಹೆಕ್ಟೇರ್ ಕೃಷಿ ಬೆಳೆ, 0.88 ಲಕ್ಷ ಹೆಕ್ಟೇರ್ ತೋಟಗಾರಿಕೆ ಬೆಳೆಗಳು ಹಾನಿಯಾಗಿವೆ. ಅಂದರೆ 11 ಲಕ್ಷ ಹೆಕ್ಟೇರ್ಗಳಲ್ಲಿ ಬೆಳೆದ ಬೆಳೆ ಸೆಪ್ಟೆಂಬರ್‌ವರೆಗೆ ಹಾನಿಯಾಗಿದೆ. ಈಗ ಅಕ್ಟೋಬರ್ ತಿಂಗಳಲ್ಲಿ ಬಿದ್ದ ಮಳೆಯಿಂದಾಗಿ ಮುಕ್ಕಾಲು ರಾಜ್ಯವೇ ಕಂಗೆಟ್ಟು ಕೂತಿದೆ. ರೈತ ಬೆಳೆದ ಬೆಳೆ ಕೈಗೆ ಬರದೆ ನೀರು ಪಾಲಾಗಿದೆ. ಕರ್ನಾಟಕ ರೆಡ್ ಗ್ರಾಂ ಬೆಳೆಗಾರರ ಸಂಘದ ಅಂದಾಜಿನಂತೆ 7.55 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದರೆ ಅದರಲ್ಲಿ ಸುಮಾರು 60 ಕ್ಕಿಂತ ಹೆಚ್ಚು ಪ್ರದೇಶದಲ್ಲಿ ಬಿತ್ತನೆಯಾದ ದ್ವಿದಳ ಧಾನ್ಯಗಳ ಬೆಳೆಗಳು ನಷ್ಟವಾಗಿವೆ. ಬೀದರ್ ಜಿಲ್ಲೆಯ ಕೃಷಿ ಇಲಾಖೆಯ ಪ್ರಕಾರ ಬಿತ್ತನೆಯಾದ 3,70,982 ಹೆಕ್ಟೇರ್‌ಗಳಲ್ಲಿ 2,47,209 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಬೆಳೆ ಮಳೆಯಿಂದ ಸಂಪೂರ್ಣ ಹಾನಿಯಾಗಿದೆ. ಅಂದರೆ ಸುಮಾರು ಶೇ 66.64 ಎಂದಾಯಿತು’.

‘ನನಗಿರುವ ಅಧಿಕೃತ ಮಾಹಿತಿಯ ಪ್ರಕಾರ ಕಲಬುರ್ಗಿಯಲ್ಲಿ ಜುಲೈ, ಆಗಸ್ಟ್ ತಿಂಗಳಲ್ಲಿ 85 ಸಾವಿರ ಹೆಕ್ಟೇರ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳುಗಳ ಮೊದಲ ವಾರದವರೆಗೆ 1.90 ಸಾವಿರ ಹೆಕ್ಟೇರ್ ಹಾನಿಯಾಗಿದ್ದರೆ, ಅಕ್ಟೋಬರ್ 12 ರಿಂದ 15 ರವರೆಗೆ ಮೂರು ದಿನಗಳ ಅವಧಿಯವರೆಗೆ ಸುಮಾರು 1.54 ಲಕ್ಷ ಹೆಕ್ಟೇರ್ ಬೆಳೆ ನಾಶವಾಗಿದೆ. ಒಟ್ಟು 3,44,085 ಹೆಕ್ಟೇರ್ ಇದರಲ್ಲಿ 1.12 ಲಕ್ಷ ಹೆಕ್ಟೇರ್ ತೊಗರಿ, ಸುಮಾರು 34 ಸಾವಿರ ಹೆಕ್ಟೇರ್ ಹತ್ತಿ ನಾಶವಾಗಿದೆ. ಒಟ್ಟು ಬಿತ್ತನೆ ಮಾಡಿದ ಪ್ರದೇಶದಲ್ಲಿ ಶೇ.60 ರಷ್ಟು ಬೆಳೆ ನಾಶವಾಗಿದೆ. ಇದರೊಂದಿಗೆ ಜನರ ಸಂಪೂರ್ಣ ಜೀವನ ಬದುಕು ನೀರು ಪಾಲಾಗಿದೆ. ಇದಿನ್ನೂ ಪ್ರಾಥಮಿಕ ಸಮೀಕ್ಷೆಯ ಮಾಹಿತಿಯಷ್ಟೆ. ಸಮೀಕ್ಷೆ ಪೂರ್ಣಗೊಂಡರೆ 4.50 ಲಕ್ಷ ಹೆಕ್ಟೇರ್ ಅನ್ನು ಮೀರುತ್ತದೆ’

ವಿಜಯಪುರ ಜಿಲ್ಲೆಯಲ್ಲಿ ಅ. 13 ರಿಂದ 20ರವರೆಗೆ 1,60,739 ಹೆಕ್ಟೇರ್ ಕೃಷಿ ಬೆಳೆಗಳು ಮತ್ತು 11,929 ಹೆಕ್ಟೇರ್ ತೋಟದ ಬೆಳೆಗಳು ಒಟ್ಟು 1,72,668 ಹೆಕ್ಟೇರ್ ನಾಶವಾಗಿದೆ ಎಂದು ಪ್ರಾಥಮಿಕ ಸಮೀಕ್ಷೆಗಳು ಹೇಳುತ್ತಿವೆ. ನಾನು ಭೇಟಿ ಕೊಟ್ಟಿದ್ದಾಗಲೂ ಹೊಲಗಳಲ್ಲಿ ಸುಮಾರು 2 ಅಡಿ ನೀರು ನಿಂತಿದೆ. ಕಪ್ಪು ಎರೆ ಮಣ್ಣಿನ ಭೂಮಿಯಾದ್ದರಿಂದ ನೀರು ನಿಂತ ಕೂಡಲೇ ಬೆಳೆಗಳು ಕೊಳೆಯಲಾರಂಭಿಸುತ್ತವೆ. ಕೆರೆಗಳು ಒಡೆದು ಹೋಗಿವೆ. ಜಾನುವಾರುಗಳು ಕೊಚ್ಚಿ ಹೋಗಿವೆ. ಅನೇಕರು ಅಸು ನೀಗಿದ್ದಾರೆ. ಸುಮಾರು ಒಂದು ಲಕ್ಷ ಮನೆಗಳಿಗೆ ಹಾನಿಯಾಗಿದೆ. ಗುಲ್ಬರ್ಗ ಜಿಲ್ಲಾಧಿಕಾರಿ ಪ್ರಕಾರ ಪ್ರಾಥಮಿಕ ಸಮೀಕ್ಷೆಯಂತೆ, ಗುಲ್ಬರ್ಗ ಜಿಲ್ಲೆಯೊಂದರಲ್ಲೇ ಸುಮಾರು 20 ಸಾವಿರ ಮನೆಗಳಿಗೆ ಹಾನಿಯಾಗಿದೆ. ದವಸ ಧಾನ್ಯ, ಬಟ್ಟೆ ಬರೆ, ಪುಸ್ತಕ ಕೊಚ್ಚಿ ಹೋಗಿವೆ. ಜನರಿಗೆ ರೋಗ ರುಜಿನಗಳು ಬಾಧಿಸುತ್ತಿವೆ. ಔಷಧಿಗಳಿಲ್ಲ. ಇದೇ ಪರಿಸ್ಥಿತಿ ನಾನು ಭೇಟಿ ಮಾಡಿದ ಎಲ್ಲಾ ಪ್ರದೇಶಗಳಲ್ಲೂ ಇದೆ.

‘ರಾಯಚೂರಿನಲ್ಲಿ 3 ದಿನಗಳ ಮಳೆಗೆ ಸುಮಾರು 80 ಸಾವಿರ ಹೆಕ್ಟೇರ್, ಯಾದಗಿರಿಯಲ್ಲಿ 50 ಸಾವಿರ ಹೆಕ್ಟೇರ್, ಕೊಪ್ಪಳ 8,000 ಹೆಕ್ಟೇರ್, ಬಳ್ಳಾರಿಯಲ್ಲೂ ಸಾವಿರಾರು ಹೆಕ್ಟೇರ್‌ ಪ್ರದೇಶಗಳಲ್ಲಿ ಬೆಳೆದ ಬೆಳೆ ಕೊಳೆತು ಹೋಗಿದೆ ಇಲ್ಲ ಕೊಚ್ಚಿ ಹೋಗಿದೆ. ಕರಾವಳಿ, ಮಲೆನಾಡು, ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಭಾಗಗಳಲ್ಲಿ ಬೆಳೆದ ಬಹುಪಾಲು ಬೆಳೆಗಳು ಹಾನಿಗೊಳಗಾಗಿವೆ. ಕೊರೋನಾದಿಂದಾಗಿ ಕಂಗೆಟ್ಟು ಕೂತಿದ್ದ ರೈತರು ಮತ್ತು ಜನ ಸಾಮಾನ್ಯರ ಮೇಲೆ ಪ್ರವಾಹ ಮಾರಣಾಂತಿಕ ಹೊಡೆತ ನೀಡಿದೆ. ಜಿಲ್ಲಾಡಳಿತಗಳು ಇನ್ನು ಸಂಪೂರ್ಣವಾಗಿ ಸಮೀಕ್ಷೆಯನ್ನೇ ಮಾಡಿಲ್ಲ. ಸರ್ಕಾರದ ಸಚಿವರುಗಳು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಸಂಪೂರ್ಣ ನಿರ್ಲಕ್ಷಿಸಿದ ಮೇಲೆ ತಹಶೀಲ್ದಾರ್, ಡಿ.ಸಿ.ಗಳು ಇನ್ಯಾವ ಮಟ್ಟಿಗೆ ಜನರ ಜೊತೆ ನಿಲ್ಲಲು ಸಾಧ್ಯ’

‘ಮುಖ್ಯವಾಗಿ ಕಲ್ಯಾಣ ಕರ್ನಾಟಕ ಭಾಗದ ಜನ ಈ ಶತಮಾನ ಕಂಡರಿಯದಷ್ಟು ಭೀಕರ ಪ್ರಮಾಣದ ಅತಿವೃಷ್ಟಿಯಿಂದಾಗಿ ತಮ್ಮ ಸಂಪೂರ್ಣ ಬದುಕನ್ನು ಕಳೆದುಕೊಂಡಿದ್ದಾರೆ. ಸರ್ಕಾರದ ಸಂಪೂರ್ಣ ನಿರ್ಲಕ್ಷ್ಯ, ಬೇಜವಾಬ್ದಾರಿತನಗಳಿಂದಾಗಿ ವ್ಯವಸ್ಥೆಯ ಮೇಲೆ ನಂಬಿಕೆ ಕಳೆದು ಕೊಳ್ಳುವಂಥ ಸ್ಥಿತಿಗೆ ತಲುಪಿದ್ದಾರೆ. ಮುಖ್ಯಮಂತ್ರಿಗಳು ವೈಮಾನಿಕ ಸಮೀಕ್ಷೆ ನಡೆಸಿದ್ದಾರೆಯೇ ಹೊರತು ಜನರ, ಜನಪ್ರತಿನಿಧಿಗಳೊಂದಿಗೆ ಮಾತನಾಡಿ ಅವರ ಸಮಸ್ಯೆಗಳನ್ನು ಅರಿಯುವ ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ’

‘ಜಿಲ್ಲಾ ಉಸ್ತುವಾರಿ ಸಚಿವರುಗಳು ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು ಚುನಾವಣಾ ಪ್ರಚಾರಕ್ಕೆ ಹೋದರೆ ಹೊರತು ಪ್ರವಾಹ ಪರಿಸ್ಥಿತಿಯನ್ನು ಪರಿಶೀಲಿಸಲಿಲ್ಲ. ಕಂದಾಯ ಸಚಿವರು ಕಾಟಾಚಾರಕ್ಕೆ ಹೋಗಿ ಭೇಟಿ ಕೊಟ್ಟಂತೆ ಮಾಡಿದರು. ಅವರ ವರ್ತನೆಯ ಕುರಿತು ಜನ ವ್ಯಾಪಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮೇಲಿಂದ ಮೇಲೆ ಬಂದೊದಗುತ್ತಿರುವ ಪ್ರಾಕೃತಿಕ ವಿಕೋಪಗಳನ್ನು ಎದುರಿಸಲಾಗದೆ ಜನ ಅಸಹಾಯಕರಾಗಿ ಕಂಗೆಟ್ಟು ಕೂತಿದ್ದಾರೆ. ಇಂಥ ಹೊತ್ತಿನಲ್ಲಿ ಸರ್ಕಾರ ಜನರ ಜೊತೆ ನಿಲ್ಲಬೇಕಿತ್ತು. ಸರ್ಕಾರಕ್ಕೆ ಚುನಾವಣೆಗಳು ಆದ್ಯತೆಯಾಗಿವೆಯೇ ಹೊರತು ಜನರ ಸಂಕಷ್ಟಗಳಲ್ಲ. ಇದು ಜನರಿಂದ ಆಯ್ಕೆಯಾದ ಸರ್ಕಾರದ ಕ್ರೂರ, ದುಷ್ಟ ಸರ್ಕಾರ ಎನ್ನದೆ ಬೇರೆ ದಾರಿಗಳೇ ಇಲ್ಲ’ ಎಂದೂ ಪತ್ರದಲ್ಲಿ ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT