ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವಗಿರಿ: ಬಿಎಸ್‌ವೈಗೆ ಶಾಸಕರ ಮೊರೆ

Last Updated 3 ಆಗಸ್ಟ್ 2021, 21:39 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲಿ ಸ್ಥಾನ ಗಿಟ್ಟಿಸಲು ಶತಾಯಗತಾಯ ಯತ್ನಿಸುತ್ತಿರುವ ಹಲವು ಶಾಸಕರು, ಮಂಗಳವಾರವೂ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಮೇಲೆ ಒತ್ತಡ ಹೇರುವ ಪ್ರಯತ್ನ ಮಾಡಿದರು.

ದೆಹಲಿಯಲ್ಲಿ ಸಂಭಾವ್ಯ ಸಚಿವರ ಪಟ್ಟಿ ಸಿದ್ಧಗೊಂಡಿದ್ದರೂ ಕೊನೆಯ ಕ್ಷಣದ ಪ್ರಯತ್ನವನ್ನು ಶಾಸಕರು ಮುಂದುವರಿಸಿದರು. ತಮ್ಮ ಮಾತು ನಡೆಯುವುದಿಲ್ಲ ಎಂದು ಯಡಿಯೂರಪ್ಪ ಹೇಳಿದರೂ ಅದನ್ನು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಶಾಸಕರು ಇರಲಿಲ್ಲ. ಆದರೆ ಯಡಿಯೂರಪ್ಪ ಅವರು ಯಾರಿಗೂ ಭರವಸೆ ನೀಡುವ ಗೋಜಿಗೆ ಹೋಗಲಿಲ್ಲ ಎಂದು ಮೂಲಗಳು ತಿಳಿಸಿವೆ.

ಶಾಸಕರಾದ ಎಂ.ಪಿ.ರೇಣುಕಾಚಾರ್ಯ, ಬೆಳ್ಳಿ ‍ಪ್ರಕಾಶ್‌, ಪರಣ್ಣ ಮುನವಳ್ಳಿ, ರಾಮಪ್ಪ ಲಮಾಣಿ, ನೆಹರು ಓಲೇಕಾರ, ಎ.ಎಸ್‌.ಪಾಟೀಲ ನಡಹಳ್ಳಿ, ಹರತಾಳು ಹಾಲಪ್ಪ ಅವರೆಲ್ಲ ಸಚಿವ ಸ್ಥಾನಕ್ಕೆ ಶಿಫಾರಸು ಮಾಡುವಂತೆ ಯಡಿಯೂರಪ್ಪ ಅವರಿಗೆ ದುಂಬಾಲು ಬಿದ್ದರು. ‘ಸಚಿವ ಸ್ಥಾನ ನಿರ್ಧರಿಸುವುದು ನಾನಲ್ಲ. ವರಿಷ್ಠರ ತೀರ್ಮಾನವೇ ಅಂತಿಮ’ ಎಂದು ಯಡಿಯೂರಪ್ಪ ಹೇಳಿದರು. ಇದರಿಂದ ಶಾಸಕರು ಸಮಾಧಾನಗೊಳ್ಳಲಿಲ್ಲ ಎಂದು ಮೂಲಗಳು ತಿಳಿಸಿವೆ.

ಹಾವೇರಿ ಶಾಸಕ ನೆಹರು ಓಲೇಕಾರ್‌ ಅವರು ತಮ್ಮ ಬೆಂಬಲಿಗರೊಂದಿಗೆ ‘ಕಾವೇರಿ’ ನಿವಾಸಕ್ಕೆ ಬಂದಿದ್ದರು. ‘ಓಲೇಕಾರ್‌ ಅವರನ್ನು ಸಚಿವರನ್ನಾಗಿ ಮಾಡಬೇಕು, ಒಂದು ವೇಳೆ ಸಚಿವ ಸ್ಥಾನ ನೀಡದೇ ಇದ್ದರೆ, ನೂತನ ಮುಖ್ಯಮಂತ್ರಿಯವರಿಗೆ ಹಾವೇರಿ ಜಿಲ್ಲೆಯಲ್ಲಿ ಓಡಾಡಲು ಬಿಡುವುದಿಲ್ಲ’ ಎಂದು ಎಚ್ಚರಿಕೆ ನೀಡಿದ್ದೂ ಅಲ್ಲದೆ, ಪ್ರತಿಭಟನೆಯನ್ನೂ ನಡೆಸಿದರು. ಬಳಿಕ ಪೊಲೀಸರು ಅವರನ್ನು ಸಮಾಧಾನ ಪಡಿಸಿ ಅಲ್ಲಿಂದ ಕಳುಹಿಸಿದರು.

ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರೂ ಸಚಿವ ಸ್ಥಾನಕ್ಕಾಗಿ ಪ್ರಯತ್ನ ನಡೆಸಿದ್ದಾರೆ. ಕಾಗೇರಿ ಅವರು ಸಂಘ ಪರಿವಾರದ ಮುಖಂಡರನ್ನು ನೆಚ್ಚಿಕೊಂಡಿದ್ದಾರೆ. ಒಂದು ವೇಳೆ ಕಾಗೇರಿ
ಸಚಿವರಾದರೆ, ಸುರೇಶ್‌ ಕುಮಾರ್‌ ಅವರಿಗೆ ವಿಧಾನಸಭಾಧ್ಯಕ್ಷ ಪಟ್ಟ ಕಟ್ಟಬಹುದು ಎಂದು ಪಕ್ಷದ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT