ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ: ಉಕ್ಕಿದ ನದಿಗಳು, ಭೂಕುಸಿತ, ಪ್ರವಾಹ ಭೀತಿ

ಮೈಸೂರು, ಉಡುಪಿ: ಇಬ್ಬರು ಸಾವು, ಉತ್ತರ ಕನ್ನಡ ಜಿಲ್ಲೆಯಲ್ಲಿ ನೀರಿನಲ್ಲಿ ಕೊಚ್ಚಿ ಹೋದ ವ್ಯಕ್ತಿ
Last Updated 5 ಆಗಸ್ಟ್ 2020, 20:46 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ವಿವಿಧೆಡೆ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಲವೆಡೆ ನದಿಗಳು ಉಕ್ಕಿಹರಿಯುತ್ತಿವೆ. ಮಳೆಯಿಂದ ಇಬ್ಬರು ಸಾವಿಗೀಡಾಗಿದ್ದು, ಮೂವರು ಗಾಯಗೊಂಡಿದ್ದಾರೆ. ಕೆಲವೆಡೆ ರಸ್ತೆಗಳು ಕೊಚ್ಚಿ ಹೋಗಿದ್ದು, ಸೇತುವೆಗಳು ಹಾಗೂ ಗದ್ದೆಗಳು ಪ್ರವಾಹದಲ್ಲಿ ಮುಳುಗಿವೆ.

ಮೈಸೂರು ಜಿಲ್ಲೆಯಲ್ಲಿ ಎಚ್.ಡಿ.ಕೋಟೆ ತಾಲ್ಲೂಕಿನ ಅಣ್ಣೂರಿನಲ್ಲಿ ಮಳೆಯಿಂದ ರಕ್ಷಣೆ ಪಡೆಯಲು ಮರದಡಿ ನಿಂತಿದ್ದ ಮಹದೇವೇಗೌಡ (50)ಎಂಬುವರ ಮೇಲೆ ಮರ ಉರುಳಿ ಅವರು ಸಾವಿಗೀಡಾಗಿದ್ದಾರೆ. ಹನುಮಂತ ಶೆಟ್ಟಿ ಹಾಗೂ ನಂಜುಂಡಸ್ವಾಮಿ ಎಂಬುವರು ಗಾಯಗೊಂಡಿದ್ದಾರೆ.

ಉಡುಪಿ ಜಿಲ್ಲೆಯ ನಿಟ್ಟೂರು ಹನುಮಂತನಗರ ರಸ್ತೆಯಲ್ಲಿ ಹೋಗುತ್ತಿದ್ದ ಗುಲಾಬಿ (60) ಎಂಬುವರು ಮಳೆ ನೀರು ತುಂಬಿ ಹರಿಯುತ್ತಿದ್ದ ಚರಂಡಿಗೆ ಬಿದ್ದು ಮೃತಪಟ್ಟಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆ ಹಾರ ಸಮೀಪ ದೇವನಗೂಲ್‌ನಲ್ಲಿ ಮನೆ ಮೇಲೆ ಮರ ಬಿದ್ದಿದ್ದು, ಪುಷ್ಪಾ ಎಂಬುವರಿಗೆ ಗಾಯಗಳಾಗಿವೆ.

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನಲ್ಲಿ ಗಂಗಾವಳಿ ನದಿಯು ಉಕ್ಕಿ ಹರಿಯುತ್ತಿದೆ. ಗುಳ್ಳಾಪುರ ಸೇತುವೆಯ ಬಳಿ ನೀರಿನಲ್ಲಿ ಬೈಕ್ ತಳ್ಳಿಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರು ಕೊಚ್ಚಿಕೊಂಡು ಹೋಗಿದ್ದಾರೆ.

ಭೂಕುಸಿತ: ಮಡಿಕೇರಿ ತಾಲ್ಲೂಕಿನ ಕತ್ತಲೆಕಾಡು ಬಳಿ ದೊಡ್ಡ ಪ್ರಮಾಣದಲ್ಲಿ ಭೂಕುಸಿತವಾಗಿದೆ. ಕರಡಿಗೋಡು ಗ್ರಾಮದಲ್ಲಿ ಸ್ಥಳೀಯರನ್ನು ಸ್ಥಳಾಂತರಿಸಲಾಗಿದೆ. ಕೊಡಗು ಜಿಲ್ಲೆಯಲ್ಲಿ ಕಾವೇರಿ ಹಾಗೂ ಲಕ್ಷ್ಮಣತೀರ್ಥ ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿವೆ.

50 ಸಾವಿರ ಕ್ಯುಸೆಕ್‌ ನೀರು ಹೊರಕ್ಕೆ: ಕಬಿನಿ ಜಲಾಶಯದಿಂದ 50 ಸಾವಿರ ಕ್ಯುಸೆಕ್‌ ನೀರನ್ನು ಹೊರಬಿಡಲಾಗುತ್ತಿದ್ದು, ಕಪಿಲಾ ನದಿ ಪಾತ್ರದಲ್ಲಿ ಪ್ರವಾಹ ಭೀತಿ ಸೃಷ್ಟಿಯಾಗಿದೆ.

ಹುಬ್ಬಳ್ಳಿ: ಉತ್ತರ ಕರ್ನಾಟಕದಲ್ಲಿ ಬುಧವಾರ ಭಾರಿ ಮಳೆಯಾಗಿದ್ದು, ಬೆಳಗಾವಿ ಜಿಲ್ಲೆಯಲ್ಲಿ 7 ಬ್ರಿಡ್ಜ್‌ ಕಮ್‌ ಬ್ಯಾರೇಜ್‌ಗಳು ಜಲಾವೃತವಾಗಿವೆ. ಹುಬ್ಬಳ್ಳಿಯಲ್ಲಿ 7 ಮನೆಗಳು ಕುಸಿದಿದ್ದು, ಹಾವೇರಿ ಜಿಲ್ಲೆಯಲ್ಲಿ 35 ಮನೆಗಳಿಗೆ ಹಾನಿಯಾಗಿದೆ. ಹಾವೇರಿ ಜಿಲ್ಲೆಯ ಹಾನಗಲ್‌ ತಾಲ್ಲೂಕಿನಲ್ಲಿ ವರದಾ ನದಿ ತುಂಬಿ ಹರಿಯುತ್ತಿದೆ. ಹುಬ್ಬಳ್ಳಿಯಲ್ಲಿ ಉಣಕಲ್‌ ಕೆರೆ ಕೋಡಿ ಹರಿದಿದೆ.

ಚಾರ್ಮಾಡಿ ಘಾಟ್ ಬಂದ್: ಕರಾವಳಿ, ಮಲೆನಾಡಿನಲ್ಲಿ ಮಳೆ ಅಬ್ಬರ ಮುಂದುವರಿದಿದ್ದು, ಚಾರ್ಮಾಡಿ ಘಾಟಿಯಲ್ಲಿ ಮಣ್ಣು ಕುಸಿದು, ರಸ್ತೆ ಸಂಚಾರ ಸ್ಥಗಿತವಾಗಿದೆ.

‘ರೆಡ್‌ ಅಲರ್ಟ್’: ಶಿವಮೊಗ್ಗ ಜಿಲ್ಲೆಯ ತುಂಗಾ ಜಲಾಶಯದಿಂದ 59 ಸಾವಿರ ಕ್ಯುಸೆಕ್‌ ನೀರು ಹೊರಬಿಡಲಾಗುತ್ತಿದೆ. ಜಿಲ್ಲಾಡಳಿತ ನದಿ ಪಾತ್ರದಲ್ಲಿ ‘ರೆಡ್‌ ಅಲರ್ಟ್‌’ ಘೋಷಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT