ಬೆಂಗಳೂರು: ‘ಪ್ರಸಕ್ತ ಸಾಲಿನ (2022-23 ) ಬಜೆಟ್‌ನಲ್ಲಿ ಅಬಕಾರಿ ಇಲಾಖೆಗೆ ಹೊಸ ಸ್ವರೂಪ ನೀಡಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬಜೆಟ್ ಸಿದ್ಧತೆಗೆ ಪೂರ್ವಭಾವಿಯಾಗಿ ಇಲಾಖಾವಾರು ಸಭೆ ನಡೆಸಿದ ಅವರು, ‘ಅಬಕಾರಿ ಉದ್ಯಮ ವ್ಯಾಪ್ತಿ ಹೆಚ್ಚಿಸಿಕೊಂಡಿದೆ. ಯಾವುದೇ ಉದ್ಯಮ ವ್ಯಾಪ್ತಿ ಹೆಚ್ಚಿಸಿಕೊಂಡಾಗ ಬದಲಾವಣೆ ಆಗಲು ಸಮಯ ಬೇಕಾಗುತ್ತದೆ’ ಎಂದರು.
‘ರಾಜ್ಯದಲ್ಲಿ ನಕಲಿ ಮದ್ಯ ತಯಾರಿ ಮತ್ತು ಹೊರರಾಜ್ಯದಿಂದ ಬರುವ ನಕಲಿ ಮದ್ಯ ತಡೆಗೆ ಈಗಾಗಲೇ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಸರ್ಕಾರಕ್ಕೆ ಆದಾಯ ಕೂಡ ಬರುತ್ತದೆ. ನಕಲಿ ಜಾಲದ ಹಿಂದೆ ಯಾರೇ ಭಾಗಿಯಾದರೂ ಮುಲಾಜಿಲ್ಲದೆ ಅಮಾನತು ಮಾಡುವಂತೆ ಆಯುಕ್ತರಿಗೆ ಸೂಚಿಸಿದ್ದೇನೆ’ ಎಂದರು.
‘ಅಬಕಾರಿ ಇಲಾಖೆಯಲ್ಲಿ ನಡೆಯುತ್ತಿರುವ ಕಿರುಕುಳ ತಪ್ಪಿಸಲು ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ಒಟ್ಟು ವ್ಯವಸ್ಥೆಯಲ್ಲಿ ಬದಲಾವಣೆ ತರಲು ಇಲಾಖೆಗೆ ಹೊಸ ಸ್ವರೂಪ ನೀಡಲಾಗುವುದು. ಆರ್ಥಿಕ ಮಿತಿಗಳನ್ನು ನೋಡಿಕೊಂಡು ನೌಕರರಿಗೆ ಸೌಲಭ್ಯ ನೀಡಲಾಗುವುದು. ಅಲ್ಲದೆ, ಕಾನೂನುಗಳನ್ನು ಬದಲಾಯಿಸುವ ಬಗ್ಗೆಯೂ ಗಮನಹರಿಸಲಾಗುವುದು’ ಎಂದರು.
‘ಸಿಎಲ್ –7, ಸಿಎಲ್– 9 ವಿಚಾರದಲ್ಲಿ ಸಾಕಷ್ಟು ದೂರುಗಳು ಬಂದಿವೆ. ಅದೆಲ್ಲವನ್ನೂ ಸರಿಪಡಿಸುವ ಕೆಲಸ ಆಗಬೇಕು. ವ್ಯಾಪಾರ, ಆದಾಯ ಮೂರು ಮುಖ್ಯ ಅಂಶಗಳನ್ನು ಇಟ್ಟುಕೊಂಡು ಕೆಲಸ ಮಾಡುವಂತೆಯೂ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದರು.
‘ಮದ್ಯ ದರ ಹೆಚ್ಚಳ ಚಿಂತನೆ ಇಲ್ಲ’
ಬೆಂಗಳೂರು: ‘ರಾಜ್ಯದಲ್ಲಿ ಮದ್ಯದ ದರ ಹೆಚ್ಚಿಸುವ ಚಿಂತನೆ ಮಾಡಿಲ್ಲ’ ಎಂದು ಅಬಕಾರಿ ಸಚಿವ ಕೆ. ಗೋಪಾಲಯ್ಯ ಹೇಳಿದರು.
ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಬಜೆಟ್ ಪೂರ್ವಭಾವಿ ಸಭೆಯ ಬಳಿಕ ಮಾತನಾಡಿದ ಅವರು, ‘ಆರ್ಥಿಕ ಇಲಾಖೆಯ ಕಾರ್ಯದರ್ಶಿ ಮತ್ತು ಮುಖ್ಯಮಂತ್ರಿ ಜೊತೆ ಶುಕ್ರವಾರ (ಫೆ. 25) ಸಭೆ ನಡೆಯಲಿದೆ. ಈ ಸಭೆಯಲ್ಲಿ ಇಲಾಖೆಯ ಸ್ಥಿತಿಗತಿ ಬಗ್ಗೆ ಚರ್ಚಿಸಲಾಗುವುದು’ ಎಂದರು.
‘ಪ್ರಸಕ್ತ ವರ್ಷ ಈಗಾಗಲೇ ಇಲಾಖೆ ₹ 23,247 ಕೋಟಿ ತೆರಿಗೆ ಸಂಗ್ರಹಿಸಿದ್ದು, ಆರ್ಥಿಕ ವರ್ಷದ ಅಂತ್ಯಕ್ಕೆ ಇದು ₹ 25 ಸಾವಿರ ಕೋಟಿ ತಲುಪುವ ನಿರೀಕ್ಷೆಯಿದೆ’ ಎಂದರು.
‘ಇಲಾಖೆಯ ಆರ್ಥಿಕ ಪರಿಸ್ಥಿತಿಯನ್ನು ಪರಾಮರ್ಶಿಸಿದ ಬಳಿಕ ಕೆಲವು ಸಲಹೆ, ಸೂಚನೆಗಳನ್ನು ಮುಖ್ಯಮಂತ್ರಿ ನೀಡಿದ್ದಾರೆ. ಇಲಾಖೆಯ ಅಭಿವೃದ್ಧಿಗೂ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ’ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.