ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಹಲವೆಡೆ ದಿನವಿಡೀ ಮಳೆ

ದಾವಣಗೆರೆ: ಹಳ್ಳದಲ್ಲಿ ಉರುಳಿ ಬಿದ್ದ ಲಾರಿ, ನೀರುಪಾಲಾದ ರಾಗಿ
Last Updated 6 ಅಕ್ಟೋಬರ್ 2021, 19:32 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಹಲವೆಡೆ ಬುಧವಾರ ಉತ್ತಮವಾಗಿ ಮಳೆ ಸುರಿದಿದೆ. ಹಳ್ಳ–ಕೊಳ್ಳಗಳು ಭರ್ತಿಯಾಗಿವೆ.

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಸಂತೇಬೆನ್ನೂರು ಹೋಬಳಿಯದೊಡ್ಡಘಟ್ಟ–ಚಿರಡೋಣಿ ನಡುವೆ ಸೂಳೆಕೆರೆ ಹಳ್ಳದ ರಭಸಕ್ಕೆ ಸೇತುವೆ ದಾಟುತ್ತಿದ್ದ ಪಡಿತರ ರಾಗಿ ತುಂಬಿದ್ದ ಲಾರಿ ಉರುಳಿಬಿದ್ದಿದೆ. ಚಾಲಕ ಅಪಾಯದಿಂದ ಪಾರಾಗಿದ್ದಾರೆ. ಪಡಿತರರಾಗಿಯು ನೀರುಪಾಲಾಗಿದೆ.

ದಾವಣಗೆರೆ ನಗರ ಮತ್ತು ಜಿಲ್ಲೆಯಲ್ಲಿ ಗುಡುಗು, ಸಿಡಿಲು ಸಹಿತ ದಿನವಿಡೀ ಉತ್ತಮ ಮಳೆಯಾಗಿದೆ. ಸಂತೇಬೆನ್ನೂರಿನ ಕೋಟೆ ರಸ್ತೆ ಭಾಗದಲ್ಲಿ ಮೂರು ಮನೆಗಳ ಗೋಡೆ ಕುಸಿದಿದೆ. ಮಲೇಬೆನ್ನೂರು ಹೋಬಳಿ ವ್ಯಾಪ್ತಿಯ ಗುಳದಹಳ್ಳಿ, ಸಂಕ್ಲೀಪುರ, ಆದಾಪುರ, ನಿಟ್ಟೂರು ಗ್ರಾಮದ ವ್ಯಾಪ್ತಿಯಲ್ಲಿ ನೂರಾರು ಎಕರೆ ಭತ್ತದ ಗದ್ದೆಗಳು ಜಲಾವೃತವಾಗಿವೆ.

ಶಿವಮೊಗ್ಗ ಜಿಲ್ಲೆಯಲ್ಲಿ ಮೂರು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಹಲವೆಡೆ ಅಪಾರ ಹಾನಿಯಾಗಿದೆ. ಶಿವಮೊಗ್ಗ ನಗರದಲ್ಲೂ ನಿರಂತರ ಮಳೆ ಸುರಿಯುತ್ತಿದ್ದು, ಹೊಸಮನೆ ಬಡಾವಣೆ ಸೇರಿ ತಗ್ಗು ಪ್ರದೇಶಗಳು ಮತ್ತೆ ಜಲಾವೃತವಾಗಿವೆ.

ಚಿತ್ರದುರ್ಗ ಜಿಲ್ಲೆಯಲ್ಲಿ ಗುಡುಗು ಸಹಿತ ಉತ್ತಮ ಮಳೆ ಸುರಿದಿದ್ದು, ವರುಣನ ನಿರೀಕ್ಷೆಯಲ್ಲಿದ್ದ ರೈತರಿಗೆ ಖುಷಿಯಾಗಿದೆ. ಈರುಳ್ಳಿ ಹಾಗೂ ಶೇಂಗಾ ಕಟಾವಿಗೆ ಮಾತ್ರ ತೊಂದರೆಯಾಗಿದೆ. ಕೆರೆ, ಹಳ್ಳ, ಬಾವಿ ಹಾಗೂ ಚೆಕ್‌ಡ್ಯಾಂಗಳಿಗೆ ನೀರು ಹರಿದುಬಂದಿತು. ಹೊಸದುರ್ಗ, ಹೊಳಲ್ಕೆರೆ ತಾಲ್ಲೂಕಿನ ಹಲವೆಡೆ ಹಳ್ಳಗಳು ತುಂಬಿ ಹರಿದವು. ಚಿತ್ರದುರ್ಗ ನಗರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಒಂದನೇ ವಾರ್ಡ್‌ನ ಹಲವು ಮನೆಗಳು ಜಲಾವೃತವಾಗಿವೆ. ಭರಮಸಾಗರ ಸಮೀಪದ ಕಾಕಬಾಳು ಗ್ರಾಮದಲ್ಲಿ ಎರಡು ಮನೆಗಳು ಭಾಗಶಃ ಕುಸಿದಿವೆ.

ಧಾರಾಕಾರ ಮಳೆ: ಕಾಫಿನಾಡಿನ ವಿವಿಧೆಡೆ ಬುಧವಾರ ಧಾರಾಕಾರವಾಗಿ ಮಳೆ ಸುರಿದಿದೆ. ತರೀಕೆರೆ ತಾಲ್ಲೂಕಿನ ಸುಣ್ಣದಹಳ್ಳಿ, ನೇರಲಕೆರೆ ಭಾಗದಲ್ಲಿ ತೋಟ, ಜಮೀನುಗಳಲ್ಲಿ ನೀರು ಆವರಿಸಿದೆ. ಕಡೂರಿನ ಯು.ಬಿ ರಸ್ತೆಯ ಬ್ಯಾಟರಿ ಅಂಗಡಿ, ಇತರ ಮಳಿಗೆಗಳಿಗೆ ನೀರು ನುಗ್ಗಿದೆ.

ಚಿಕ್ಕಮಗಳೂರು, ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್‌.ಆರ್‌.ಪುರ ಭಾಗದಲ್ಲಿ ಬಿರುಸಾಗಿ ಸುರಿದಿದೆ. ತುಂಗಾ, ಭದ್ರಾ ನದಿಗಳಲ್ಲಿ ಹರಿವಿನ ಪ್ರಮಾಣ ತುಸು ಹೆಚ್ಚಳವಾಗಿದೆ. ಗಿರಿಶ್ರೇಣಿ ಭಾಗದಲ್ಲಿ ಹಳ್ಳಗಳಲ್ಲಿ ಹರಿವು ಸ್ವಲ್ಪ ಜಾಸ್ತಿಯಾಗಿದೆ.

ಮಂಗಳೂರಿನಲ್ಲೂ ಸಾಧಾರಣ ಮಳೆಯಾಗಿದೆ.

ಹಲವೆಡೆ ಧಾರಾಕಾರ ಮಳೆ: ಮೈಸೂರು ಭಾಗದ ವಿವಿಧೆಡೆ ಮಂಗಳವಾರ ರಾತ್ರಿ ಹಾಗೂ ಬುಧವಾರ ಧಾರಾಕಾರ ಮಳೆಯಾಗಿದೆ. ದಸರೆಗೆ ದೀಪಾಲಂಕಾರದಿಂದ ಸಜ್ಜುಗೊಂಡಿರುವ ಮೈಸೂರು ನಗರ ಹಾಗೂ ಸುತ್ತಮುತ್ತ ಸಂಜೆ ಮಳೆ ಅಬ್ಬರಿಸಿತು.

ಹುಣಸೂರು ತಾಲ್ಲೂಕಿನ ಹನಗೋಡು ಹೋಬಳಿಯಲ್ಲಿ ಮಂಗಳವಾರ ರಾತ್ರಿ ಬಿದ್ದ ಬಿರುಗಾಳಿ ಸಹಿತ ಭಾರಿ ಮಳೆಗೆ ಬಾಳೆ, ಮುಸುಕಿನ ಜೋಳದ ಬೆಳೆ ಹಾನಿಯಾಗಿದೆ. ಮರಗಳು, ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಮಣ್ಣಿನ ರಸ್ತೆಗಳು ಕೊಚ್ಚಿ ಹೋಗಿವೆ. ಹಲವೆಡೆ ಮನೆಗಳಿಗೂ ಹಾನಿಯಾಗಿದೆ.

ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನಲ್ಲಿ ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಗೆ ಕಸಬಾ ಹೋಬಳಿ ಬೈಚನಹಳ್ಳಿಯಲ್ಲಿ ಮನೆ ಕುಸಿದು ಬಿದ್ದಿದೆ. ರಾಮನಾಥಪುರ ಹೋಬಳಿಯ ಕಾಳೇನಹಳ್ಳಿಯಲ್ಲಿ ರಸ್ತೆ ಸಂಪರ್ಕ ಬಂದ್ ಆಗಿದ್ದು, ಬಸವಾಪಟ್ಟಣದಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಬಸವನಹಳ್ಳಿಕೊಪ್ಪಲಿನಲ್ಲಿ ಸಂಪರ್ಕ ರಸ್ತೆಯು ಕೊಚ್ಚಿ ಹೋಗಿದೆ.

ಬಸವಾಪಟ್ಟಣದಲ್ಲಿ 30 ಮನೆಗಳಿಗೆ, ಜಿಟ್ಟೇನಹಳ್ಳಿಯಲ್ಲಿ ಹಾರಂಗಿ ಎಡದಂಡೆ ನಾಲೆಯಲ್ಲಿ ನೀರಿನ ಹರಿವು ಹೆಚ್ಚಾಗಿ ಕಾಲುವೆ ಒಡೆದು 3 ಮನೆಗಳಿಗೆ ನೀರು ನುಗ್ಗಿದೆ. ಕೊಣನೂರು ಸಮೀಪದ ಶಿರಧನಹಳ್ಳಿಯಲ್ಲಿ ಬೃಹತ್ ಮರವೊಂದು ತಡರಾತ್ರಿ ರಸ್ತೆಗೆ ಉರುಳಿದ್ದು, ಐದು ವಿದ್ಯುತ್ ಕಂಬಗಳು ಮುರಿದಿವೆ. ಯಸಳೂರು, ಹೆತ್ತೂರು ಹೋಬಳಿಯಲ್ಲಿ ಭತ್ತ, ಕಾಫಿ, ಶುಂಠಿ ಬೆಳೆಗೆ ಅಪಾರ ಪ್ರಮಾಣದಲ್ಲಿ ಹಾನಿ ಉಂಟಾಗಿದೆ. ಕೊಡಗು ಜಿಲ್ಲೆಯ ವಿವಿಧೆಡೆ ಸಾಧಾರಣ ಮಳೆಯಾಗಿದೆ.

ರಭಸದ ಮಳೆ: ಬೆಳಗಾವಿ, ಕಾರವಾರ, ಹುಬ್ಬಳ್ಳಿ, ಧಾರವಾಡ, ಗದಗ, ಹೊಸಪೇಟೆಯಲ್ಲಿ ಮಳೆ ರಭಸದಿಂದ ಸುರಿಯಿತು. ಶಿರಸಿ ತಾಲ್ಲೂಕಿನ ಬದನಗೋಡ, ಅಂಡಗಿ ಭಗದಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಭಟ್ಕಳ, ಕುಮಟಾ, ಅಂಕೋಲಾ, ಹೊನ್ನಾವರ ಸೇರಿದಂತೆ ಕರಾವಳಿಯಾದ್ಯಂತ ಮಳೆಯಾಗಿದೆ.

ತುಮಕೂರು ಹಾಗೂ ಚಿಕ್ಕಬಳ್ಳಾಪುರದಲ್ಲಿ ಉತ್ತಮ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT