ಶನಿವಾರ, ನವೆಂಬರ್ 26, 2022
23 °C

ವಿಧಾನಸಭೆ ಅಧಿವೇಶನದಲ್ಲಿ ವಿವಿಗಳ ದುಸ್ಥಿತಿಯನ್ನು ಎಳೆಎಳೆಯಾಗಿ ಬಿಡಿಸಿಟ್ಟ ಶಾಸಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಶೈಕ್ಷಣಿಕ ವಾತಾವರಣವಿಲ್ಲ, ಗುಣಮಟ್ಟ ಕುಸಿದು ಹೋಗಿದೆ. ಕಾಪಿ ಹೊಡೆಸಿ ಸ್ನಾತಕೋತ್ತರ ಮತ್ತು ಪಿಎಚ್‌ಡಿ ಪದವಿ ನೀಡುವ ಪರಿಸ್ಥಿತಿ ಇದೆ. ನೇಮಕಾತಿ ಮತ್ತು ಕಟ್ಟಡ ನಿರ್ಮಾಣ ಬಿಟ್ಟು ಹೆಚ್ಚಿನ ಚಟುವಟಿಕೆಗಳು ನಡೆಯುತ್ತಿಲ್ಲ. ಹಗರಣಗಳಲ್ಲೇ ಮುಳುಗಿವೆ.

ವಿಧಾನಸಭೆಯಲ್ಲಿ ಬುಧವಾರ ಪಕ್ಷಬೇಧ ಮರೆತು ಬಹುತೇಕ ಎಲ್ಲ ಸದಸ್ಯರು ರಾಜ್ಯದ ವಿಶ್ವವಿದ್ಯಾಯಗಳ ಸ್ಥಿತಿಗತಿಯನ್ನು ಒರೆಗೆ ಹಚ್ಚಿ, ತೀಕ್ಷ್ಣ ಮಾತುಗಳಿಂದ ತಿವಿದರು. ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ತಿದ್ದುಪಡಿ ಮಸೂದೆಯ ಮೇಲೆ ಸುದೀರ್ಘ ಚರ್ಚೆಯ ವೇಳೆ ವಿಶ್ವವಿದ್ಯಾಲಯಗಳಲ್ಲಿ ಪರಿಸ್ಥಿತಿ ಭಯಾನಕವಾಗಿದೆ ಎಂಬ ವಿಚಾರ ಎಳೆ ಎಳೆಯಾಗಿ ಬಿಡಿಸಿದರು.

ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ರಾಜ್ಯದಲ್ಲಿ ವಿಶ್ವವಿದ್ಯಾಲಯಗಳಲ್ಲಿ ಗುಣಮಟ್ಟವೂ ಇಲ್ಲ, ಮೂಲಸೌಕರ್ಯವೂ ಇಲ್ಲ. ಹೀಗಾಗಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಕೆನಡಾದಂತಹ ದೇಶಗಳಿಗೆ ಹೋಗುತ್ತಿದ್ದಾರೆ. ಶೈಕ್ಷಣಿಕ ಚಟುವಟಿಕೆಗಳಿಗೆ ಆದ್ಯತೆಯೇ ಇಲ್ಲ. ಪಿಎಚ್‌ಡಿ ವಿದ್ಯಾರ್ಥಿಗಳಿಗೆ ಇನ್ನಿಲ್ಲದ ಹಿಂಸೆ ನೀಡಲಾಗುತ್ತಿದ್ದು, ಈ ಬಗ್ಗೆ ಕುಲಪತಿಗಳ ಸಭೆ ಕರೆಯಬೇಕು ಎಂದು ಸೂಚಿಸಿದರು.

ವಿರೋಧಪಕ್ಷದ ಉಪನಾಯಕ ಯು.ಟಿ.ಖಾದರ್‌ ಮಾತನಾಡಿ, ಹಿಂದೆ ಮಂಗಳೂರು ವಿಶ್ವವಿದ್ಯಾಲಯ ‘ಎ’ ಗ್ರೇಡ್‌ ಹೊಂದಿತ್ತು. ಈಗ ‘ಬಿ’ ಗ್ರೇಡ್‌ಗೆ ಇಳಿದಿದೆ. ‘ಸಿ’ ಗೆ ಹೋದರೂ ಅಚ್ಚರಿ ಇಲ್ಲ. ಅಲ್ಲಿನ ಸಿಂಡಿಕೇಟ್‌ ಸದಸ್ಯರು ಬೆಂಗಳೂರಿನ ಪಂಚತಾರಾ ಹೋಟೆಲ್‌ಗೆ ಬಂದು ಸಭೆ ಮಾಡುತ್ತಾರೆ ಎಂದು ಹೇಳಿದರು.

ಜೆಡಿಎಸ್‌ನ ಎ.ಟಿ.ರಾಮಸ್ವಾಮಿ ಮಾತನಾಡಿ, ಒಂದು ಕಾಲದಲ್ಲಿ ಕುವೆಂಪು, ನರಸಿಂಹಯ್ಯ, ನಂಜುಂಡಪ್ಪ ಅಂತಹವರ ಮನೆಗೆ ಸರ್ಕಾರವೇ ಹೋಗಿ ಕುಲಪತಿ ಹುದ್ದೆ ಅಲಂಕರಿಸಿ ಎಂದು ಕೇಳಿಕೊಳ್ಳುತ್ತಿತ್ತು. ಈಗ ವಿ.ಸಿ ಮಾಡಿ ಎಂದು ಸರ್ಕಾರದಲ್ಲಿ ಕಂಡಕಂಡವರ ಕಾಲು ಹಿಡಿಯುತ್ತಿದ್ದಾರೆ. ಇಲ್ಲಿ ನೇಮಕಾತಿ, ಬಡ್ತಿ ಮತ್ತು ಖರೀದಿಯಲ್ಲಿ ಭಾರಿ ಅಕ್ರಮ ನಡೆಯುತ್ತಿವೆ ಎಂದು ಹರಿಹಾಯ್ದರು.

ಬಿಜೆಪಿಯ ಅರವಿಂದ್‌ ಬೆಲ್ಲದ್ ಮಾತನಾಡಿ, ವಿಶ್ವವಿದ್ಯಾಲಯಗಳಿಂದ ಕಟ್ಟಡ ನಿರ್ಮಿಸು ಮತ್ತು ನೇಮಕಾತಿ ಮಾಡುವ ಅಧಿಕಾರವನ್ನು ಹಿಂದಕ್ಕೆ ಪಡೆದು, ಶೈಕ್ಷಣಿಕ ಚಟುವಟಿಕೆಗೆ ಮಾತ್ರ ಸಿಮೀತಗೊಳಿಸಬೇಕು. ಯುಜಿಸಿ ಸಂಬಳ ಪಡೆಯುವ ಅಧ್ಯಾಪಕರು, ಪ್ರೊಫೆಸರ್‌ಗಳು ವಾರಕ್ಕೆ 40 ಗಂಟೆ ಪಾಠ ಮಾಡಬೇಕು. ಅವರು ವಾರಕ್ಕೆ ಒಂದು ಅಥವಾ ಎರಡು ಪೀರಿಯೆಡ್‌ ಮಾಡಿದರೇ ಹೆಚ್ಚು ಎಂದರು.

ಕಾಂಗ್ರೆಸ್‌ನ ಕೃಷ್ಣ ಬೈರೇಗೌಡ ಮಾತನಾಡಿ, ಕುಲಪತಿಗಳ ನೇಮಕದಲ್ಲಿ ಶಾಸಕರ ಲಾಬಿಯೂ ದೊಡ್ಡ ಮಟ್ಟದಲ್ಲಿ ನಡೆಯುತ್ತದೆ. ಕೃಷಿ ಸಚಿವನಾಗಿದ್ದಾಗ ಅದರ ಅನುಭವ ಆಗಿದೆ. ಆಗ ನನ್ನ ಬಳಿ ಎಷ್ಟು ಶಾಸಕರು ಬಂದಿದ್ದರು ಎಂಬುದು ಗೊತ್ತಿದೆ. ನಮ್ಮ ಪಾತ್ರವನ್ನು ಅಲ್ಲಗಳೆಯಬಾರದು ಎಂದರು.

ವಿಶ್ವವಿದ್ಯಾಲಯಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡದ ಕಾರಣ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ ಮತ್ತು ತೆರಿಗೆದಾರರ ಹಣವೂ ಪೋಲಾಗುತ್ತಿದೆ. ಯುಜಿಸಿ ಮತ್ತು ಸರ್ಕಾರದ ನಿಯಮಕ್ಕೆ ಬಾಹಿರವಾಗಿ ಅಪಾರ ಪ್ರಮಾಣದಲ್ಲಿ ನೇಮಕಾತಿ ನಡೆಯುತ್ತಿವೆ. ಅನುಭವ, ಅರ್ಹತೆ ಮತ್ತು ಯೋಗ್ಯತೆ ಇಲ್ಲದವರನ್ನು ನೇಮಿಸಿಕೊಳ್ಳಲಾಗುತ್ತಿದೆ ಎಂದು ದೂರಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು