ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಠ್ಯ ಪರಿಷ್ಕರಣೆ ವಿರೋಧಿಸಿ ಕುಪ್ಪಳಿಯಿಂದ ತೀರ್ಥಹಳ್ಳಿಗೆ ಪಾದಯಾತ್ರೆ

Last Updated 15 ಜೂನ್ 2022, 19:45 IST
ಅಕ್ಷರ ಗಾತ್ರ

ತೀರ್ಥಹಳ್ಳಿ (ಶಿವಮೊಗ್ಗ):ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಪರಿಷ್ಕರಿಸಿದ ಪಠ್ಯಪುಸ್ತಕ ಹಿಂದಕ್ಕೆ ಪಡೆಯುವಂತೆ ಅಗ್ರಹಿಸಿ, ನಾಡಗೀತೆಗೆ ಅಪಮಾನ ಆಗಿರುವುದನ್ನು ಖಂಡಿಸಿ ಬುಧವಾರ ಕುಪ್ಪಳಿಯ ಕವಿಶೈಲದಲ್ಲಿನ ರಾಷ್ಟ್ರಕವಿ ಕುವೆಂಪು ಸಮಾಧಿ ಸ್ಥಳದಿಂದ ತೀರ್ಥಹಳ್ಳಿಯವರೆಗೆ ಆಯೋಜಿಸಿದ್ದ ಸಾಂಸ್ಕೃತಿಕ ಸೌಹಾರ್ದ ನಡಿಗೆಯಲ್ಲಿ ಸಮಾನ ಮನಸ್ಕ ಗೆಳೆಯರು ಹೆಜ್ಜೆ ಹಾಕಿದರು.

ಕುವೆಂಪು ವಿಶ್ವಮಾನವ ವೇದಿಕೆಯು,ಮಾಜಿ ಸಚಿವ ಕಿಮ್ಮನೆ ರತ್ನಾಕರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಈ ನಡಿಗೆಯಲ್ಲಿ ಪಕ್ಷಾತೀತವಾಗಿ ಪಾಲ್ಗೊಂಡ ಕನ್ನಡದ ಮನಸ್ಸುಗಳು ಕನ್ನಡ ಬಾವುಟ ಹಿಡಿದು ಸಾಗಿ, ಪಠ್ಯಕ್ರಮ ಪರಿಷ್ಕರಣೆಯ ಸರ್ಕಾರದ ನಿಲುವಿಗೆ ಮೌನ ಪ್ರತಿರೋಧ ತೋರಿದವು. ಕನ್ನಡದ ಅಸ್ಮಿತೆಗೆ ಧಕ್ಕೆ
ತರುವ ಸಂಗತಿ ಹೀಗೆಯೇ ಮುಂದುವರಿದರೆ ಗೋಕಾಕ್‌ ಚಳವಳಿ ಮಾದರಿಯ ಮತ್ತೊಂದು ಹೋರಾಟಕ್ಕೆ ಸಜ್ಜಾಗುವ ಸಂದೇಶ ಸಾರಿದರು.

ಹಂಸಲೇಖ ಚಾಲನೆ: ಕುವೆಂಪು ಸಮಾಧಿಗೆ ಪುಷ್ಪಾರ್ಚನೆ ಮಾಡಿದ ಸಂಗೀತ ನಿರ್ದೇಶಕ ಹಂಸಲೇಖ ಬೆಳಿಗ್ಗೆ
7 ಗಂಟೆಗೆ ಪಾದಯಾತ್ರೆಗೆ ಚಾಲನೆ ನೀಡಿದರು. ಅಲ್ಲಿಂದ 20 ಕಿ.ಮೀ ದೂರದಲ್ಲಿನ ತೀರ್ಥಹಳ್ಳಿ ಪಟ್ಟಣಕ್ಕೆ ಮಧ್ಯಾಹ್ನ 12.30ಕ್ಕೆ ಪಾದಯಾತ್ರಿಗಳು ತಲುಪಿದರು. ಕಿಮ್ಮನೆ ರತ್ನಾಕರ, ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ, ಸಾಹಿತಿಗಳಾದ ಎಸ್.ಜಿ. ಸಿದ್ಧರಾಮಯ್ಯ, ಪ್ರೊ.ರಾಜೇಂದ್ರ ಚೆನ್ನಿ, ಶಿಕ್ಷಣ ತಜ್ಞ ಡಾ.ನಿರಂಜನಾರಾಧ್ಯ, ಪತ್ರಕರ್ತ ದಿನೇಶ ಅಮಿನ್‌ ಮಟ್ಟು, ದಲಿತ ಸಂಘರ್ಷ ಸಮಿತಿ ಸಂಚಾಲಕ ಗುರುಮೂರ್ತಿ, ರೈತ ಮುಖಂಡ ಕೆ.ಟಿ.ಗಂಗಾಧರ್, ವಕೀಲಕೆ.ಪಿ. ಶ್ರೀಪಾಲ್ ಅವರೊಂದಿಗೆ ನೂರಾರು ಮಂದಿ ಭಾಗವಹಿಸಿದರು. ಮಾರ್ಗ ಮಧ್ಯದಲ್ಲಿನ ದೇವಂಗಿ ಗ್ರಾಮದ ಬಳಿ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.

ವಿಧಾನಸಭೆ ವಿರೋಧ ಪಕ್ಷದನಾಯಕ ಸಿದ್ದರಾಮಯ್ಯ, ಮಧ್ಯಾಹ್ನ ತೀರ್ಥಹಳ್ಳಿ ಮುಖ್ಯಬಸ್ ನಿಲ್ದಾಣದ
ಬಳಿ ಪಾದಯಾತ್ರೆ ತಂಡ ಸೇರಿಕೊಂಡರು. ಈ ಸಂದರ್ಭ ಭಾರಿ ಸಂಖ್ಯೆಯಲ್ಲಿದ್ದ ಅವರ ಬೆಂಬಲಿಗರೂ ಹೆಜ್ಜೆ ಹಾಕಿದರು. ಸಂತೆ ಮೈದಾನದಲ್ಲಿ ಮಧ್ಯಾಹ್ನದ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ಶಾಸಕ ಕೆ.ಆರ್. ರಮೇಶಕುಮಾರ್, ವಿಧಾನಪರಿಷತ್ ಸದಸ್ಯ ನಜೀರ್ ಅಹಮದ್, ಮಾಜಿ ಶಾಸಕ ವೈ.ಎಸ್‌.ವಿ.ದತ್ತ, ಸಾಹಿತಿ ನಾ.ಡಿಸೋಜಾ, ರೈತ ಸಂಘದ ರಾಜ್ಯಘಟಕದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಸುಂದರೇಶ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಬೆಳಗಿದ ವಿಶ್ವಮಾನವ ಜ್ಯೋತಿ: ಮಲೆನಾಡು ಸಂಘರ್ಷ ಸಮಿತಿಯ ನೆಂಪೆ ದೇವರಾಜ್ ನೇತೃತ್ವದಲ್ಲಿ ಹೊರಟ ವಿಶ್ವಮಾನವ ಜ್ಯೋತಿಯನ್ನು ರೈತ ಮುಖಂಡ ಕೆ.ಟಿ.ಗಂಗಾಧರ್ ಬೆಳಗಿ ಹೋರಾಟದ ನಿರಂತರತೆಯ ಸೂಚನೆ ನೀಡಿದರು. ಕುಪ್ಪಳಿಯಿಂದ ಹೊರಟ ಜ್ಯೋತಿ ಜೂನ್‌ 17ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ತಲುಪಲಿದೆ.

ಅವತ್ತು ಗೋಕಾಕ್ ಚಳವಳಿ ಇವತ್ತು ಕುಪ್ಪಳಿ ಕಹಳೆ: ಹಂಸಲೇಖ

‘ಕನ್ನಡದ ನಡ (ಸೊಂಟ) ಮುರಿಯುವ ನಡೆ ಕನ್ನಡ ನಾಡಿನಲ್ಲಿ ಶುರುವಾಗಿದೆ. ನಮ್ಮನ್ನು ಭಾಷಾಂಧರು ಅಂದರೂ ಸರಿ. ಈ ನಡೆಯ ವಿರುದ್ಧ ತಮಿಳರನ್ನು ಅನುಸರಿಸಿ ಹೋರಾಟ ಸಂಘಟಿಸಬೇಕಿದೆ’ ಎಂದು ಸಂಗೀತ ನಿರ್ದೇಶಕ ಹಂಸಲೇಖ ಅವರು ಹೇಳಿದರು.

ಕುಪ್ಪಳಿಯ ಕವಿಶೈಲದಲ್ಲಿ ಬುಧವಾರ ಪಾದಯಾತ್ರೆಗೆ ಚಾಲನೆ ನೀಡಿದ ಅವರು, ‘ತಮಿಳುನಾಡಿನಲ್ಲಿ ಅವರ ಭಾಷೆಗೆ ಕೊಂಚ ಎಡವಟ್ಟಾದರೂ ಆಳುವವರು, ವಿರೋಧದವರೂ ಒಟ್ಟಾಗುತ್ತಾರೆ. ಇಲ್ಲಿಯೂ
ನಮಗೀಗ ಪಕ್ಷ ಇಲ್ಲ. ಕವಿ ಪಕ್ಷ, ಕನ್ನಡ ಪಕ್ಷದ ಹೋರಾಟದ ಹಾದಿ ಇಲ್ಲಿಂದಲೇ ಶುರುವಾಗಿದೆ’ ಎಂದು ಹೇಳಿದರು.

‘ಬಸವ ಅಂದರೆ ಕನ್ನಡ. ಕುವೆಂಪು ಅಂದರೆ ಕನ್ನಡ. ಬಸವ ಅಂದರೆ ಕರುನಾಡು. ಪುಟ್ಟಪ್ಪ (ಕುವೆಂಪು) ಅಂದರೆ ಕರ್ನಾಟಕ. ಈ ಎರಡಕ್ಕೂ ಅಪಮಾನ ಆದ ಮೇಲೆ ನಾವು ಇಲ್ಲಿದ್ದು ಏನು ಮಾಡುವುದು’ ಎಂದು ಪ್ರಶ್ನಿಸಿದ ಅವರು, ‘ಅವತ್ತು ಗೋಕಾಕ್ ಚಳವಳಿ. ಇವತ್ತು ಕುಪ್ಪಳಿ ಕಹಳೆ. ಇದು ನಾಡಿನಾದ್ಯಂತ ಮೊಳಗಲಿದೆ’ ಎಂದು ಹೇಳಿದರು.

‘ನಮ್ಮ ನಾಡೇ ಒಂದು ಗೀತೆ. ನಮ್ಮ ನಾಡೇ ಒಂದು ಧ್ವಜ. ಅವೆರಡಕ್ಕೂ ಅಪಮಾನ ಆಗಿ ಕನ್ನಡಕ್ಕೆ ಕುತ್ತು ಬಂದ ಮೇಲೆ ಸುಮ್ಮನಿರುವುದು ಹೇಗೆ?ಕನ್ನಡಕ್ಕೆ ಮಹಾಮನೆ ಕಲ್ಯಾಣ. ಕವಿಶೈಲ ಗುರುಮನೆ. ಹೀಗಾಗಿ ಗುರುಮನೆಯಿಂದಲೇ ಹೋರಾಟದ ಕಹಳೆ ಊದುತ್ತಿದ್ದೇವೆ’ ಎಂದು ಹೇಳಿದರು.

ಸಿದ್ದರಾಮಯ್ಯ ಗುಡುಗು

‘ರಾಜ್ಯ ಸರ್ಕಾರ ರೊಹಿತ್ ಚಕ್ರತೀರ್ಥ ಸಮಿತಿ ವಿಸರ್ಜಿಸಿದೆ. ಆದರೆ, ಆ ಸಮಿತಿ ರೂಪಿಸಿದ್ದ ಪಠ್ಯಪುಸ್ತಕ ತಿರಸ್ಕರಿಸಿಲ್ಲ. ಹೀಗಾಗಿ ಅದರ ವಿರುದ್ಧ ಗೋಕಾಕ್ ಚಳವಳಿ ಮಾದರಿಯಲ್ಲಿ ರಾಜ್ಯದಾದ್ಯಂತ ಪಕ್ಷಾತೀತ ಹೋರಾಟ ಕೈಗೆತ್ತಿಕೊಳ್ಳುವುದು ಅನಿವಾರ್ಯ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗುಡುಗಿದರು.

ಪಾದಯಾತ್ರೆ ಸಮಾರೋಪದಲ್ಲಿ ಮಾತನಾಡಿದ ಅವರು, ‘ಪಠ್ಯಕ್ರಮ ಪರಿಷ್ಕರಣೆ ಹೆಸರಲ್ಲಿ ಬಸವಣ್ಣ, ಕುವೆಂಪು, ನಾರಾಯಣ ಗುರು, ಅಂಬೇಡ್ಕರ್ ಅವರ ಚರಿತ್ರೆ ತಿರುಚುವ ಕೆಲಸ ಆಗಿದೆ. ಇದೊಂದು ಸಾಂಸ್ಕೃತಿಕ ಭಯೋತ್ಪಾದನೆ. ಕನ್ನಡದ ಅಸ್ಮಿತೆಗೆ ಧಕ್ಕೆ ಬಂದಿರುವಾಗ ಕನ್ನಡದ ಮನಸ್ಸುಗಳು ಒಂದಾಗಿ ಹೋರಾಡಬೇಕಿದೆ’ ಎಂದರು.

‘ಬಸವಣ್ಣ ವೈದಿಕ ಧರ್ಮಕ್ಕೆ ಪರ್ಯಾಯವಾಗಿ ಮನುಷ್ಯತ್ವದ ಧರ್ಮ ಹುಟ್ಟುಹಾಕಿದರು. ಅದೇ ಲಿಂಗಾಯತ ಧರ್ಮ. ಆದರೆ, ಬಸವಣ್ಣನ ಅನುಯಾಯಿಗಳನ್ನು ಬಿಜೆಪಿಯವರು ಮತ್ತೆ ವೈದಿಕ ಧರ್ಮದ ಕಡೆ ಸೆಳೆ
ಯುತ್ತಿದ್ದಾರೆ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT