ಮಂಗಳವಾರ, ನವೆಂಬರ್ 24, 2020
22 °C
‘ಬಿಜೆಪಿ ಸಂಪರ್ಕದಲ್ಲಿ ಕಾಂಗ್ರೆಸ್‌ನ ಹಲವು ಶಾಸಕರು’: ನಳಿನ್‌ಕುಮಾರ್‌ ಕಟೀಲ್‌ ಮಾಹಿತಿ

ಕಾಡುಪ್ರಾಣಿ ‘ಹುಲಿ’ ಕಾಡಿಗಟ್ಟಿ ಕರ್ನಾಟಕ ರಕ್ಷಿಸಿ: ನಳಿನ್‌ಕುಮಾರ್‌ ಕಟೀಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ‘ಹುಲಿಗೆ ಮತ್ತೊಂದು ಹೆಸರೇ ಕಾಡುಪ್ರಾಣಿ. ಕರ್ನಾಟಕದಲ್ಲೂ ಒಂದು ಹುಲಿಯಿದ್ದು ಅದನ್ನು ಕಾಡಿಗಟ್ಟುವ ಮೂಲಕ ಕರ್ನಾಟಕ ರಾಜ್ಯವನ್ನು ರಕ್ಷಿಸಬೇಕಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಅವರು, ಸಿದ್ದರಾಮಯ್ಯಗೆ ಇಲ್ಲಿ ಶನಿವಾರ ತಿರುಗೇಟು ನೀಡಿದರು.

ನಗರದಲ್ಲಿ ನಡೆದ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಅವರು, ‘ಕಾಡುಪ್ರಾಣಿ, ಕಾಡುಮನುಷ್ಯ ಇವರೆಡರಲ್ಲಿ ಯಾರು ಒಳ್ಳೆಯವರು? ಸಮಾಜಕ್ಕೆ ಯಾರಿಂದ ಹೆಚ್ಚು ಆಪತ್ತು’ ಎಂದು ಕಾರ್ಯಕರ್ತರನ್ನು ಪ್ರಶ್ನಿಸಿದ ಅವರು, ‘ಧರ್ಮದ ವಿಚಾರವಾಗಿ ಸಮಾಜ ವಿಭಜಿಸಿದ ಶಾಸಕರನ್ನು ವರುಣಾ ಕ್ಷೇತ್ರದಿಂದಲೇ ಮತದಾರರು ಓಡಿಸಿದ್ದಾರೆ. ಆ ಕಾಡುಪ್ರಾಣಿಯನ್ನು ಜನರು ಊರಿಂದ ಓಡಿಸಿದರೆ, ಕಾಡು ಮನುಷ್ಯನನ್ನು ಎರಡೂವರೆ ಲಕ್ಷ ಮತಗಳ ಅಂತರದಿಂದ ಜನರು ಗೆಲ್ಲಿಸಿದ್ದಾರೆ’ ಎಂದು ಮಾರ್ಮಿಕವಾಗಿ ನುಡಿದರು.

‘ಕಾಂಗ್ರೆಸ್‌ನಲ್ಲಿ ಶಿರಾ ಕ್ಷೇತ್ರ ಉಸ್ತುವಾರಿಯನ್ನು ಸಿದ್ದರಾಮಯ್ಯ ಹಾಗೂ ಆರ್‌.ಆರ್‌ ನಗರದ ಉಸ್ತುವಾರಿಯನ್ನು ಡಿ.ಕೆ.ಶಿವಕುಮಾರ್ ವಹಿಸಿಕೊಂಡಿದ್ದಾರೆ. ಅಲ್ಲಿ ‘ಬಂಡೆ’ ಸೋಲಿಸಲು ‘ಹುಲಿ’, ‘ಹುಲಿ’ ಸೋಲಿಸಲು ‘ಬಂಡೆ’ ನಡುವೆ ಹೋರಾಟ ನಡೆಯುತ್ತಿದೆ. ಕಾಂಗ್ರೆಸ್‌ ಹೀನಾಯ ಸ್ಥಿತಿಗೆ ತಲುಪಿದ್ದು ಅಲ್ಲಿ ನಾಯಕತ್ವದ ಹೋರಾಟ ನಡೆಯುತ್ತಿದೆ’ ಎಂದು ಲೇವಡಿ ಮಾಡಿದರು.

‘ಬಂಡೆ ದೊಡ್ಡದೋ, ಹುಲಿ ದೊಡ್ಡದೋ ಎಂಬ ಹೋರಾಟದ ಪರಿಣಾಮದಿಂದ ಬೆಂಗಳೂರಿನ ಡಿ.ಜೆ ಹಳ್ಳಿಯಲ್ಲಿ ಬೆಂಕಿ ಬಿದ್ದಿತ್ತು. ಸಂಪತ್‌ ರಾಜ್‌ ಅವರು ಡಿಕೆಶಿ ಬೆಂಬಲಿಗ. ಶಾಸಕ ಅಖಂಡ ಶ್ರೀನಿವಾಸ್‌ಮೂರ್ತಿ ಅವರು ಸಿದ್ದರಾಮಯ್ಯ ಬೆಂಬಲಿಗ. ಶ್ರೀನಿವಾಸ್‌ಮೂರ್ತಿಯನ್ನು ಅಧಿಕಾರದಿಂದ ಕೆಳಗಿಳಿಸಲು ಸಂಪತ್‌ರಾಜ್ ಎಸ್‌ಡಿಪಿಐ ಕಾರ್ಯಕರ್ತರ ಜೊತೆಗೆ ಕೈಜೋಡಿಸಿರುವುದು ತನಿಖೆಯಿಂದ ಬಯಲಾಗಿದೆ’ ಎಂದು ನಳಿನ್‌ಕುಮಾರ್‌ ಹೇಳಿದರು.

‘ಮಾತಿಗೆ ತಪ್ಪಿಲ್ಲ’: ‘ನಾವು ಗೋಮಾತೆ ವಂಶಸ್ಥರು. ಕೊಟ್ಟ ಮಾತಿಗೆ ತಪ್ಪುವ ವ್ಯಕ್ತಿಗಳಲ್ಲ. ಈ ಹಿಂದೆ 17 ಮಂದಿ ಶಾಸಕರಿಗೆ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ಅವರನ್ನು ಮತ್ತೆ ಶಾಸಕರನ್ನಾಗಿಸಿ, ಸಚಿವ ಸ್ಥಾನವನ್ನೂ ನೀಡಿದ್ದೇವೆ. ಕಾಂಗ್ರೆಸ್‌ ಕಚ್ಚಾಟ ಕಂಡು ಅಲ್ಲಿನ ಶಾಸಕರು ಬೇಸತ್ತಿದ್ದಾರೆ. ಕಾಂಗ್ರೆಸ್‌ 16 ಶಾಸಕರು, ಬಿಜೆಪಿ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಕೋವಿಡ್‌ ಲಸಿಕೆ ಬಂದ ಬಳಿಕ ಹಂಚಿಕೆ ಕುರಿತು ಕೇಂದ್ರ ಸರ್ಕಾರ ನಿರ್ಧರಿಸಲಿದೆ. ಅದನ್ನು ಯಾರಿಂದಲೂ ಹೇಳಿಸಿಕೊಳ್ಳುವ ಅಗತ್ಯವಿಲ್ಲ’ ಎಂದು ಪ್ರತಿಕ್ರಿಯಿಸಿದರು.

ಶಾಸಕ ಎಂ.ಪಿ.ಅಪ್ಪಚ್ಚು ರಂಜನ್, ‘ಬಂಡೆ’ ಹಾಗೂ ‘ಹುಲಿಯಾ’ಗೆ ಟೈಂಬಾಂಬ್‌ನಂತೆ ನಳಿನ್‌ಕುಮಾರ್‌ ಕಟೀಲ್‌ ಪ್ರತಿಕ್ರಿಯಿಸುತ್ತಿದ್ದಾರೆ. ಕೊಡಗಿನಲ್ಲಿ ಹುಲಿ ಮನೆಯ ಬಳಿಗೆ ಬಂದರೆ ಜನರೇ ಬಂದೂಕು ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು