ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಸುಂದರ, ಪ್ರಯಾಣಿಕರ ಸ್ನೇಹಿ: ಮೋದಿ

ವಿಮಾನ ನಿಲ್ದಾಣದ ಟರ್ಮಿನಲ್‌–2 ಉದ್ಘಾಟಿಸಿದ ಪ್ರಧಾನಿ
Last Updated 11 ನವೆಂಬರ್ 2022, 16:57 IST
ಅಕ್ಷರ ಗಾತ್ರ

ಬೆಂಗಳೂರು: ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸುಸಜ್ಜಿತ ಮತ್ತು ಆಕರ್ಷಕ ಟರ್ಮಿನಲ್‌-2 ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಉದ್ಘಾಟಿಸಿದರು.

ಟರ್ಮಿನಲ್‌–2 ಆವರಣದಲ್ಲಿ ಸುತ್ತಾಡಿ ವೀಕ್ಷಿಸಿದ ಪ್ರಧಾನಿ, ವಿಮಾನ ನಿಲ್ದಾಣದ ಅಧಿಕಾರಿಗಳೊಂದಿಗೆ ವಿವರವಾದ ಮಾಹಿತಿ ಪಡೆದರು. ಇಲ್ಲಿನ ಸೌಲಭ್ಯಗಳನ್ನು ವೀಕ್ಷಿಸಿದ ಅವರು, ಟರ್ಮಿನಲ್‌–2 ಕುರಿತಾದ ಕಿರುಚಿತ್ರ ವೀಕ್ಷಿಸಿದರು.

‘ಟರ್ಮಿನಲ್‌–2 ಪ್ರಯಾಣಿಕರಿಗೆ ಮತ್ತಷ್ಟು ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸಿದೆ. ನಮ್ಮ ನಗರಗಳಲ್ಲಿ ಅತ್ಯುತ್ತಮ ಮೂಲಸೌಕರ್ಯಗಳನ್ನು ಕಲ್ಪಿಸಬೇಕು ಎನ್ನುವ ನಮ್ಮ ಉದ್ದೇಶದ ಭಾಗ ಇದಾಗಿದೆ. ಈ ಟರ್ಮಿನಲ್‌ ಸುಂದರ ಮತ್ತು ಪ್ರಯಾಣಿಕರ ಸ್ನೇಹಿಯಾಗಿದೆ’ ಎಂದು ಪ್ರಧಾನಿ ಟ್ವೀಟ್‌ ಮಾಡಿದ್ದಾರೆ.

‘ಉದ್ಯಾನ ನಗರಿ ಬೆಂಗಳೂರಿನ ಹಿರಿಮೆಯನ್ನು ಈ ಟರ್ಮಿನಲ್‌ ಹೆಚ್ಚಿಸಿದೆ. ಪ್ರಯಾಣಿಕರಿಗೆ ಉದ್ಯಾನದಲ್ಲಿ ನಡೆದಾಡಿದ ಅನುಭವವಾಗಲಿದೆ. ಪ್ರಯಾಣಿಕರು 10ಸಾವಿರ ಚದರ ಮೀಟರ್‌ ಹಸಿರು ಗೋಡೆಗಳ ನಡುವೆ ಸಂಚರಿಸಲಿದ್ದಾರೆ. ತೂಗು ಉದ್ಯಾನವು ಗಮನಸೆಳೆಯಲಿದೆ’ ಎಂದು ಪ್ರಧಾನಮಂತ್ರಿ ಕಚೇರಿಯ ಪ್ರಕಟಣೆ ಹೊರಡಿಸಿದೆ.

ಅಮೆರಿಕದ ‘ಗ್ರೀನ್‌ ಬಿಲ್ಡಿಂಗ್‌ ಕೌನ್ಸಿಲ್‌’ನಿಂದ (ಜಿಬಿಸಿ) ‘ಪ್ಲಾಟಿನಂ ರೇಟಿಂಗ್‌’ ಪಡೆದಿರುವವಿಶ್ವದಲ್ಲೇ ಅತ್ಯಂತ ದೊಡ್ಡದಾದ ಟರ್ಮಿನಲ್‌ ಇದಾಗಿದೆ.

ಪರಿಸರ ಸ್ನೇಹಿ ಈ ಟರ್ಮಿನಲ್‌ ಅನ್ನು ₹5 ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಬಹುತೇಕ ಬಿದಿರು ಬಳಸಲಾಗಿದೆ. ‘ಉದ್ಯಾನದಲ್ಲಿ ಟರ್ಮಿನಲ್‌’ ಎನ್ನುವ ಖ್ಯಾತಿಗೆ ಇದು ಪಾತ್ರವಾಗಿದ್ದು, ವಾರ್ಷಿಕ 2.5 ಕೋಟಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಸಾಮರ್ಥ್ಯ ಹೊಂದಿದೆ ಎಂದು ಕೆಐಎ ಅಧಿಕಾರಿಗಳು ತಿಳಿಸಿದ್ದಾರೆ.

ಟರ್ಮಿನಲ್‌– 2 ಅದ್ಭುತ ವಾಸ್ತುಶಿಲ್ಪಕ್ಕೆ ಸಾಕ್ಷಿಯಾಗಿದೆ. ಹಸಿರುಮಯ ವಾತಾವರಣ ಕಣ್ಮನ ಸೆಳೆಯಲಿದೆ.ಮೊದಲ ಟರ್ಮಿನಲ್‌ಗಿಂತಲೂ 2ನೇ ಟರ್ಮಿನಲ್‌ನಲ್ಲಿ ಅತ್ಯಾಧುನಿಕ ವ್ಯವಸ್ಥೆಗಳಿವೆ. ವಿವಿಧ ರೀತಿಯ ಅಲಂಕಾರದಿಂದ ಪ್ರಯಾಣಿಕರನ್ನು ಸೆಳೆಯುತ್ತಿದೆ.

ಒಟ್ಟಾರೆಯಾಗಿ ಉದ್ಯಾನ, ಸುಸ್ಥಿರತೆ, ತಂತ್ರಜ್ಞಾನ ಹಾಗೂ ಕಲೆ ಮತ್ತು ಸಂಸ್ಕೃತಿಯನ್ನು ಒಳಗೊಂಡಿದೆ. ಪ್ರಯಾಣಿಕರಿಗೆ ಪ್ರಕೃತಿ ಸೌಂದರ್ಯದ ಅನುಭವ ನೀಡುವಂತೆ ಟರ್ಮಿನಲ್‌ 2 ಅನ್ನು ವಿನ್ಯಾಸ ಮಾಡಲಾಗಿದೆ. ಪ್ರಯಾಣಿಕರು ವಿಶ್ರಾಂತಿ ಪಡೆಯುವ ಸ್ಥಳದಲ್ಲಿ ಉದ್ಯಾನ ನಿರ್ಮಿಸಲಾಗಿದೆ. ಹೊಸ ಟರ್ಮಿನಲ್‌ನಲ್ಲಿ ಪ್ರಯಾಣಿಕರು ಸಾಗುವಾಗ ಉದ್ಯಾನದಲ್ಲಿ ನಡೆದಾಡಿದ ಅನುಭವ ಸಿಗಲಿದೆ. ಡಿಜಿಟಲ್‌ ವ್ಯವಸ್ಥೆಯ ಮೂಲಕ ರಾಜ್ಯದ ಜಲಮೂಲಗಳು, ನೈಸರ್ಗಿಕ ಕಾಡು ತೋರಿಸಲು ವ್ಯವಸ್ಥೆ ಮಾಡಲಾಗಿದೆ. ಪ್ರಯಾಣಿಕರಿಗೆ ಪುಟ್ಟ ಕಾಡಿನಲ್ಲಿದ್ದ ಅನುಭವ ಸಿಗುವಂತೆ ಕಟ್ಟಡ ವಿನ್ಯಾಸಗೊಂಡಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT