ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಯಂತ್ರಣಕ್ಕೆ ಸಿಗದ ಕಿಚ್ಚನ ಅಭಿಮಾನಿಗಳ ಅತಿರೇಕ

ಬಿದ್ದ ಬ್ಯಾರಿಕೇಡ್‌ಗಳು, ತುಂಡಾದ ಕುರ್ಚಿಗಳು, ಲಾಠಿ ಏಟಿಗೂ ಬಗ್ಗದ ಜನರು
Last Updated 9 ಫೆಬ್ರುವರಿ 2021, 20:10 IST
ಅಕ್ಷರ ಗಾತ್ರ

ಹರಿಹರ: ವಾಲ್ಮೀಕಿ ಜಾತ್ರೆಗೆ ಕಿಚ್ಚ ಸುದೀಪ್‌ ಬರುತ್ತಾರೆ ಎಂಬ ಕಾರಣಕ್ಕೆ ಭಾರಿ ಸಂಖ್ಯೆಯಲ್ಲಿ ಸೇರಿದ್ದ ಯುವಜನರು ಅತಿ ಅಭಿಮಾನದ, ಅತಿರೇಕದ ವರ್ತನೆ ತೋರಿದರು.

ಸುದೀಪ್‌ ಬಂದ ಹೆಲಿಕಾಪ್ಟರ್‌ನ ಸದ್ದು ಕೇಳುತ್ತಿದ್ದಂತೆ ವಿಪರೀತ ಕೇಕೆ ಹಾಕತೊಡಗಿದರು. ಸುದೀಪ್‌ ವೇದಿಕೆ ಮೇಲೆ ಬರುತ್ತಿದ್ದಂತೆ ಬ್ಯಾರಿಕೇಡ್‌ಗಳನ್ನು ನೆಲಕ್ಕೆ ಬೀಳಿಸಿದರು. ಎದುರು ಇದ್ದ ಕುರ್ಚಿಗಳನ್ನು ಎಸೆದು, ವೇದಿಕೆಯ ಮುಂಭಾಗಕ್ಕೆ ಮುನ್ನುಗ್ಗಿದರು. ಪೊಲೀಸರು ಲಾಠಿ ಬೀಸಿದರೂ ಬಗ್ಗಲಿಲ್ಲ.

ವೇದಿಕೆ ಮುಂಭಾಗದಲ್ಲಿ ಹಾಕಿದ್ದ ಎಲ್‌ಇಡಿ ಟಿವಿ ಬೀಳಿಸಿ ಅದರ ಮೇಲೆಯೇ ನಡೆದರು. ಮಹಿಳಾ ಪೊಲೀಸರು ತಮ್ಮನ್ನೇ ರಕ್ಷಿಸಿಕೊಳ್ಳಲು ಪರದಾಡುವಂತಾಯಿತು. ಅಭಿಮಾನಿಗಳ ಹುಚ್ಚಾಟಕ್ಕೆ ಗಣ್ಯರ ಆಸನಗಳು ಹಾಗೂ ಮಾಧ್ಯಮ ಗ್ಯಾಲರಿ ಹಾಳಾದವು. ಸುದೀಪ್‌ ಸನ್ಮಾನ ಸ್ವೀಕರಿಸಿ, ಸ್ವಾಮೀಜಿಯ ಮಾತು ಕೇಳಿ, ಎರಡು ನಿಮಿಷ ಮಾತನಾಡಿ, ಒಂದು ನಿಮಿಷ ಹಾಡಿ ಕೂಡಲೇ ತೆರಳಿದರು.

ಸುದೀಪ್‌ ಅತ್ತ ಹೋಗುತ್ತಿದ್ದಂತೆ ನಿರ್ಮಾಣ ಹಂತದಲ್ಲಿ ಇರುವ ಕಟ್ಟಡವನ್ನು ಏರಿದ ಅಭಿಮಾನಿಗಳು ಅಲ್ಲಿಂದ ಹೆಲಿಕಾಪ್ಟರ್‌ಗೆ ಕೈಬೀಸಿದರು. ಕೆಲವೇ ನಿಮಿಷಗಳಲ್ಲಿ ತೋರಿದ ವರ್ತನೆಗೆ ಎ‌ಲ್ಲೆಂದರಲ್ಲಿ ಬಿದ್ದಿದ್ದ ಕುರ್ಚಿಗಳು, ಬ್ಯಾರಿಕೇಡ್‌ಗಳು, ಅದರ ನಡುವಿನ ಚಪ್ಪಲಿಗಳು ಸಾಕ್ಷಿಯಾದವು.

ಸುದೀಪ್‌ಗೆ ವಾಲ್ಮೀಕಿ ರತ್ನ ಪ್ರಶಸ್ತಿ

ಚಿತ್ರರಂಗದ ಸಾಧನೆಗಾಗಿ ವಾಲ್ಮೀಕಿ ರತ್ನ ಪ್ರಶಸ್ತಿ ಪಡೆದಿರುವ ಸುದೀಪ್‍ ಸಮಾಜದ ಹೆಮ್ಮೆಯ ಪುತ್ರ ಎಂದು ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಬಣ್ಣಿಸಿದರು.ತಾಲ್ಲೂಕಿನ ರಾಜನಹಳ್ಳಿ ಗ್ರಾಮದ ಮಹರ್ಷಿ ವಾಲ್ಮೀಕಿ ಗುರುಪೀಠದ ಆವರಣದಲ್ಲಿ ಮಹರ್ಷಿ ವಾಲ್ಮೀಕಿ ಜಾತ್ರೆಯಲ್ಲಿ ವಾಲ್ಮೀಕಿ ರತ್ನ ಪ್ರಶಸ್ತಿ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಕನ್ನಡ ಚಿತ್ರರಂಗದಲ್ಲಿ 25 ವರ್ಷಗಳ ಅಮೂಲ್ಯ ಸೇವೆ ಸಲ್ಲಿಸಿರುವ ಸುದೀಪ್ ಅವರು ಕನ್ನಡ ಮಾತ್ರವಲ್ಲದೆ ಹಿಂದಿ, ತೆಲುಗು, ತಮಿಳು ಚಿತ್ರರಂಗ ಸೇರಿ ಭಾರತೀಯ ಚಿತ್ರರಂಗದಲ್ಲಿ ಹೆಸರು ಗಳಿಸಿದ್ದಾರೆ. ಇಂತಹ ವ್ಯಕ್ತಿಯನ್ನು ಪಡೆದ ಸಮಾಜ ಧನ್ಯ ಎಂದರು.

ನಟ ಕಿಚ್ಚ ಸುದೀಪ, ‘ಶ್ರೀ ಮಠದಿಂದ ದೊರೆತ ಗೌರವ ಜೀವನದ ಅತಿ ದೊಡ್ಡ ಗೌರವವಾಗಿದೆ. ಈ ಗೌರವಕ್ಕೆ ನನ್ನನ್ನು ಆಯ್ಕೆ ಮಾಡಿದ ಸ್ವಾಮೀಜಿ ಹಾಗೂ ಸಮಾಜಕ್ಕೆ ಋಣಿಯಾಗಿದ್ದೇನೆ’ ಎಂದು ಭಾವುಕರಾದರು.ಅಭಿಮಾನಿಗಳ ಒತ್ತಾಯಕ್ಕೆ ಮಣಿದ ಸುದೀಪ್ ಚಲನಚಿತ್ರ ಗೀತೆ ಹಾಡಿ ಜನರನ್ನು ರಂಜಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT