ಸೋಮವಾರ, ಡಿಸೆಂಬರ್ 5, 2022
19 °C
ಮೂರೂವರೆ ಸಾವಿರ ಕಿಲೊ ಮೀಟರ್‌ ಪ್ರಯಾಣ

ಕಿಸಾನ್ ಸ್ವರಾಜ್ ಸಮ್ಮೇಳನ: ಈಶಾನ್ಯ ಭಾರತೀಯರ ‘ಸಾವಯವ’ ಪ್ರೀತಿ!

ಮೋಹನ್‌ ಕುಮಾರ ಸಿ. Updated:

ಅಕ್ಷರ ಗಾತ್ರ : | |

ಮೈಸೂರು: ಈಶಾನ್ಯ ಭಾರತದ ಮಣಿಪುರ, ನಾಗಾಲ್ಯಾಂಡ್‌, ಅಸ್ಸಾಂನ 10 ಮಂದಿ ಕೃಷಿಕರು ‘ಸಾವಯವ ಕೃಷಿ’ ಪ್ರೀತಿಯನ್ನು ಹಂಚಲು ಮೂರೂವರೆ ಸಾವಿರ ಕಿ.ಮೀ ಪ್ರಯಾಣಿಸಿ ಮೈಸೂರಿಗೆ ಬಂದಿದ್ದಾರೆ. ಅವರ ಉಡಿಯಲ್ಲಿ 300ಕ್ಕೂ ತಳಿಯ ಭತ್ತ, ತರಕಾರಿ ಬೀಜಗಳು ಹಾಗೂ ಗೆಡ್ಡೆಗೆಣಸುಗಳಿವೆ. ಕಾಡಿನಲ್ಲಿ ಹೆಕ್ಕಿ ತಂದಿರುವ ಸಾಂಬಾರ ಪದಾರ್ಥಗಳಿವೆ! 

ಮುಕ್ತ ಗಂಗೋತ್ರಿಯಲ್ಲಿ ನಡೆಯುತ್ತಿರುವ ‘ಕಿಸಾನ್ ಸ್ವರಾಜ್‌ ಸಮ್ಮೇಳನ’ದಲ್ಲಿನ ‘ಬೀಜ ಜಾತ್ರೆ’ಯಲ್ಲಿ ಮಳಿಗೆಗಳನ್ನು ತೆರೆದಿರುವ ಅವರು, ದೇಶದ 23 ರಾಜ್ಯಗಳಿಂದ ಬಂದಿರುವ ಸಾವಯವ ಕೃಷಿಕರಿಗೆ ‘ಈಶಾನ್ಯ ಸೀಮೆ’ ಭತ್ತ, ತರಕಾರಿ, ಗೆಡ್ಡೆಗೆಣಸುಗಳ ಉಪಯೋಗಗಳನ್ನು ತಿಳಿಸಿ ದರು. ಮಣಿಪುರದ ಇಂಫಾಲದ ಇ.ದೇಬುಕಾಂತ್‌ ಅವರಂತೂ ಚೆನ್ನಾಗಿ ಮಾತನಾಡಿಸಿದವರ ಕೈಗೆ ತಮ್ಮ ಸೀಮೆಯ ಅವರೆ, ಬಟಾಣಿ, ಜುಮ್ಮಿ ಮರದ ಸುವಾಸಿತ ಒಣಗಿದ ಹೂ ಅನ್ನು ತಿನ್ನಲು ನೀಡಿದರು.

‘ತಂದೆ ಭತ್ತ ಕೃಷಿ ಮಾಡುತ್ತಿದ್ದರು. ಭತ್ತದ ತಳಿಯ ಬೀಜಗಳನ್ನು ಎರಡು ದಶಕದ ಹಿಂದೆ ಸಂಗ್ರಹಿಸಲು ಆರಂಭಿಸಿದೆ. ಇದೀಗ 300ಕ್ಕೂ ಹೆಚ್ಚು ವಿವಿಧ ಮಾದರಿಯ ಭತ್ತ ಸಂಗ್ರಹಿಸಿದ್ದೇನೆ. ಅವನ್ನು ಹಂಚಲು ಸುತ್ತುತ್ತೇನೆ. ಹಿರಿಯರು ಉಳಿಸಿ ನನಗೆ ನೀಡಿದ್ದನ್ನೇ, ಸಾವಯವ ಕೃಷಿ ಮಾಡುವ ಆಸಕ್ತರಿಗೆ ಕೊಡುತ್ತೇನೆ’ ಎಂದು ಇ.ದೇಬುಕಾಂತ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಮಣಿಪುರದಲ್ಲಿ ಸಾವಯವ ಕೃಷಿ ಬಗ್ಗೆ ಅರಿವು ಮೂಡಿಸಲು ಅಲೆಯುತ್ತಿದ್ದಾಗ ಹುಚ್ಚನೆಂದು ಕರೆಯುತ್ತಿದ್ದರು. ಹೆಚ್ಚು ಬಂಡವಾಳ ಹಾಕಿ ಗೊಬ್ಬರ ಬಳಸಿ ಕೃಷಿ ಮಾಡಿದಾಗೆಲ್ಲ ಮಳೆಗಾಲದ ಗಾಳಿ– ಮಳೆಗೆ ಭತ್ತ ಮಲಗಿಬಿಡುತ್ತಿತ್ತು. ಎರಡೂವರೆ ಎಕರೆಗೆ ಸಿಗುತ್ತಿದ್ದದ್ದು 1 ಟನ್‌ ಭತ್ತವಷ್ಟೇ. ಸಹಜ ಕೃಷಿ ಅಳವಡಿಸಿಕೊಂಡ ಮೇಲೆ ಇದೀಗ 3ರಿಂದ 4 ಟನ್‌ ಇಳುವರಿ ಸಿಗುತ್ತಿದೆ. ಹುಚ್ಚನೆಂದವರು ಇದೀಗ ನನ್ನ ಬಳಿ ಬರುತ್ತಿದ್ದಾರೆ’ ಎಂದು ನಕ್ಕರು. 

‘ಸರ್ಕಾರದ ನೀತಿಯೆಂದಿಗೂ ಹೈಬ್ರೀಡ್‌ ಬೀಜದ ಪರವಾಗಿರುತ್ತದೆ. ಈಶಾನ್ಯ ರಾಜ್ಯಗಳಲ್ಲಿ ಸಾವಯವ ಕೃಷಿ ಜನಪ್ರಿಯವಾಗುತ್ತಿದೆ. ಸಿಕ್ಕಿಂ ಸಾವಯವ ರಾಜ್ಯವಾಗಿ ಬದಲಾಗಿದೆ. ಮಣಿಪುರದಲ್ಲಿ ಶೇ 10ರಷ್ಟು ಮಂದಿ ನೈಸರ್ಗಿಕ ಕೃಷಿ ಅನುಸರಿಸುತ್ತಿದ್ದಾರೆ.
ಜಾಗತಿಕ ತಾಪಮಾನ ಹೆಚ್ಚಳ ನಮ್ಮ ಮುಂದಿನ ವಾಸ್ತವ. ಅದು ಎಲ್ಲವನ್ನು, ಎಲ್ಲರನ್ನೂ ಬದಲಿಸುತ್ತದೆ’ ಎಂದರು. 

‘ಮೊದಲು ರಕ್ತದೊತ್ತಡ ಇತ್ತು, ನೈಸರ್ಗಿಕ ಕೃಷಿಗೆ ಮರಳಿದ ಮೇಲೆ ಎಲ್ಲ ಹೋಗಿದೆ’ ಎಂದು ಹೇಳಿದ ಬಿಷ್ಣುಪುರದ ಅಮ್‌ಶಿಷೊ ಅವರು, ‘ತೇಮಲ್ ಚಾಂಗ್‌’, ‘ನೆಫ್ಮಾ’, ‘ಉತಿಬೂ’, ‘ಕಿಯೊ ಪೌ’, ‘ನಾಪಿ ಪೌ’ ಮೊದಲಾದ ಸಂರಕ್ಷಿಸಿದ ಭತ್ತದ ಬೀಜಗಳನ್ನು ತೋರಿ, ‘ಕಪ್ಪು ಅಕ್ಕಿ’ಯನ್ನು ರುಚಿಗೆ ನೀಡಿದರು.

ಸಾವಯವ ತರಕಾರಿ ಬೀಜ ಸಂರಕ್ಷಕಿ ‘ಪ್ರಗೊತಿ’
‘2003ರಿಂದಲೇ ಪತಿಯ ಕುಟುಂಬ ಸಾವಯವ ಕೃಷಿ ಆರಂಭಿಸಿತ್ತು. ಕಳೆದ 10 ವರ್ಷದಿಂದ ಸಾವಯವ ಬೀಜಗಳನ್ನು ಮಾರಾಟ ಮಾಡುತ್ತಿದ್ದೇವೆ. ಎಲ್ಲ ತರಕಾರಿಗಳು ಹೈಬ್ರೀಡ್‌ ಆಗಿವೆ. ಎಲೆಕೋಸು, ಹೂ ಕೋಸು, ಕ್ಯಾಪ್ಸಿಕಂ ಸೇರಿದಂತೆ ದೇಸಿ ತಳಿಗಳನ್ನು ನಾವು ಸಂಗ್ರಹಿಸಿದ್ದೇವೆ’ ಎಂದು ಬಿಸ್ವನಾಥ್‌ ಚರೈಲಿ ಜಿಲ್ಲೆಯ ಪ್ರಗೊತಿ ಕಲಿತದತ್ತ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಬ್ರಹ್ಮಪುತ್ರ ಸೀಮೆಯ ನಮ್ಮ ಜಿಲ್ಲೆಯಲ್ಲಿ ಉಷ್ಣಾಂಶ ಹೆಚ್ಚು. ಹೀಗಾಗಿ ಎತ್ತರದಲ್ಲಿರುವ ನಾಗಾಲ್ಯಾಂಡ್‌ನ ಸಾವಯವ ಹಳ್ಳಿ ಕೊನೊಮಾದಲ್ಲಿ ಬೀಜಗಳನ್ನು ಸಂರಕ್ಷಿಸುತ್ತೇವೆ. ಅದನ್ನು ದೇಶದಲ್ಲೆಲ್ಲ ಹಂಚುತ್ತಿದ್ದೇವೆ’ ಎಂದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು