ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲು ಖರೀದಿಗೆ ವಾರಕ್ಕೆ 2 ದಿನ ರಜೆ?

ದಿನಕ್ಕೆ 88 ಲಕ್ಷ ಲೀಟರ್‌ ಸಂಗ್ರಹ: ಉಳಿಯುತ್ತಿದೆ ನಂದಿನಿ ಹಾಲು
Last Updated 27 ಮೇ 2021, 20:13 IST
ಅಕ್ಷರ ಗಾತ್ರ

ಬೆಂಗಳೂರು: ಲಾಕ್‌ಡೌನ್‌ನಿಂದ ನಂದಿನಿ ಹಾಲು ಮಾರಾಟ ಕುಸಿದಿದ್ದು, ಒಕ್ಕೂಟಗಳಿಗೆ ಬರುತ್ತಿರುವ ಹಾಲಿನ ಪ್ರಮಾಣ ಹೆಚ್ಚುತ್ತಲೇ ಇದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ವಾರದಲ್ಲಿ ಒಂದೆರಡು ದಿನ ಹಾಲು ಖರೀದಿ ರಜೆ ನೀಡಲು ಕೆಎಂಎಫ್ ಚಿಂತನೆ ನಡೆಸಿದೆ.

ಮೇ ಮೊದಲ ವಾರದಲ್ಲಿ ದಿನಕ್ಕೆ 70 ಲಕ್ಷ ಲೀಟರ್ ಹಾಲನ್ನು ಒಕ್ಕೂಟಗಳಿಗೆ ರೈತರು ಪೂರೈಸುತ್ತಿದ್ದರು. ಕಳೆದ ವಾರ ಈ ಪ್ರಮಾಣ 82 ಲಕ್ಷ ಲೀಟರ್‌ ಆಗಿತ್ತು. ಈಗ 88 ಲಕ್ಷ ಲೀಟರ್‌ಗೆ ಏರಿಕೆಯಾಗಿದೆ. ಖಾಸಗಿಯವರು ಹಾಲು ಖರೀದಿ ಕಡಿಮೆ ಮಾಡಿರುವುದು, ಮಳೆ ಆಗಿದ್ದರಿಂದ ದನಕರುಗಳಿಗೆ ಯಥೇಚ್ಛವಾಗಿ ಮೇವು ಸಿಕ್ಕುತ್ತಿರುವುದು ಹಾಲಿನ ಪ್ರಮಾಣ ಹೆಚ್ಚಳಕ್ಕೆ ಕಾರಣ ಎನ್ನಲಾಗಿದೆ.

‘ಹಾಲಿನ ಪ್ಯಾಕೇಟ್‌ ಮಾರಾಟ, ಬೆಣ್ಣೆ, ತುಪ್ಪ, ಎಲ್ಲಾ ಹಾಲಿನ ಉತ್ಪನ್ನಗಳ ತಯಾರಿಕೆ ಸೇರಿ 53 ಲಕ್ಷ ಲೀಟರ್ ಬಳಕೆಯಾಗುತ್ತಿದೆ. ಉಳಿದ 35 ಲಕ್ಷ ಲೀಟರ್ ಹಾಲನ್ನು ಪ್ರತಿನಿತ್ಯ ಪುಡಿಯಾಗಿ ಪರಿವರ್ತನೆ ಮಾಡಲಾಗುತ್ತಿದೆ. ಪರಿವರ್ತನೆಗೆ ಇರುವ ಸಾಮರ್ಥ್ಯದ ಮಿತಿಯೂ ಮೀರಿದೆ. ಹಾಲಿನ ಪೂರೈಕೆ ಇದೇ ರೀತಿ ಮುಂದುವರಿದರೆ, ಪುಡಿಯಾಗಿ ಪರಿವರ್ತನೆ ಮಾಡುವುದೂ ಕಷ್ಟ. ಅನಿವಾರ್ಯವಾಗಿ ವಾರದಲ್ಲಿ ಒಂದೆರಡು ದಿನ ರಜೆ ಕೊಡಬೇಕಾದ ಸ್ಥಿತಿಯೂ ಎದುರಾಗಲಿದೆ’ ಎಂದು ಕೆಎಂಎಫ್ ಮೂಲಗಳು ತಿಳಿಸಿವೆ.

‘ಲಾಕ್‌ಡೌನ್ ನಂತರ ಹಾಲಿನ ಪುಡಿ ತಯಾರಿಕೆ ಹೆಚ್ಚಾಗಿರುವ ಕಾರಣ ಸದ್ಯ 18 ಸಾವಿರ ಟನ್ ಹಾಲಿನ ಪುಡಿ ದಾಸ್ತಾನಿದೆ. 12 ಸಾವಿರ ಟನ್ ಬೆಣ್ಣೆ ದಾಸ್ತಾನಿದೆ. ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲದ ಕಾರಣ ದರವೂ ಕುಸಿತವಾಗಿದೆ. ಯಥೇಚ್ಛವಾಗಿ ಸಂಗ್ರಹ ಆಗುತ್ತಿರುವ ಹಾಲನ್ನು ಏನು ಮಾಡಬೇಕು ಎಂಬ ಚಿಂತೆ ಅಧಿಕಾರಿಗಳನ್ನು ಕಾಡುತ್ತಿದೆ. ವಾರದಲ್ಲಿ ಒಂದರೆರಡು ದಿನ ಹಾಲಿನ ರಜೆ ನೀಡಲು ಸಾಧ್ಯವೇ ಎಂಬ ಚಿಂತನೆಯನ್ನೂ ನಡೆಸುತ್ತಿದ್ದಾರೆ’ ಎಂದು ಮೂಲಗಳು ಹೇಳಿವೆ.

ಈ ಬಗ್ಗೆ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ. ಸತೀಶ್‌ ಅವರಿಂದ ಪ್ರತಿಕ್ರಿಯೆ ಪಡೆಯಲು ಪ್ರಯತ್ನಿಸಲಾಯಿತು. ಅವರು ಸಂಪರ್ಕಕ್ಕೆ ಸಿಗಲಿಲ್ಲ.

ಶಾಲಾ ಮಕ್ಕಳಿಗಾಗಿ ಪುಡಿ ಖರೀದಿಗೆ ಮನವಿ
‘1ರಿಂದ 10ನೇ ತರಗತಿಯ ಸರ್ಕಾರಿ ಶಾಲೆ ಮತ್ತು ಅನುದಾನಿತ ಶಾಲೆ ಮಕ್ಕಳಿಗೆ ಕೆನೆಭರಿತ ಹಾಲಿನ ಪುಡಿ ನೀಡುವ ಯೋಜನೆ ಸದ್ಯಕ್ಕೆ ಸ್ಥಗಿತಗೊಂಡಿದೆ. ಸರ್ಕಾರ ಕೆಎಂಎಫ್‌ನಿಂದ ಖರೀದಿ ಮಾಡಿ ಮಕ್ಕಳ ಮನೆಗೇ ಹಾಲಿನ ಪುಡಿ ವಿತರಿಸಬೇಕು’ ಎಂಬ ಮನವಿಯನ್ನು ಕೆಎಂಎಫ್ ಸರ್ಕಾರಕ್ಕೆ ಸಲ್ಲಿಸಿದೆ.

‘ಕೋವಿಡ್‌ನಿಂದ ಶಾಲೆಗಳು ಮುಚ್ಚಿದ ಬಳಿಕ ಹಾಲಿನ ಪುಡಿ ನೀಡುವ ಯೋಜನೆ ನಿಂತಿದೆ. ಮನೆಯಲ್ಲಿರುವ ಮಕ್ಕಳಿಗೆ ಅರ್ಧ ಕೆ.ಜಿ ಹಾಲಿನ ಪುಡಿ ನೀಡುವ ಮೂಲಕ ಮಕ್ಕಳಲ್ಲಿ ಪೌಷ್ಠಿಕಾಂಶ ಹೆಚ್ಚಳ ಮಾಡಲು ಸಾಧ್ಯವಿದೆ. ಈ ಯೋಜನೆಗೆ ಹೊಸದಾಗಿ ಹಣ ಹೊಂದಿಸುವ ಅಗತ್ಯ ಇಲ್ಲ. ಪ್ರಸಕ್ತ ಸಾಲಿನ ಈ ಯೋಜನೆಗೆ ₹653 ಕೋಟಿ ನಿಗದಿಯಾಗಿದ್ದು, ಅದನ್ನು ಬಳಿಸಿಕೊಳ್ಳಬಹುದು’ ಎಂದೂ ಮನವಿಯಲ್ಲಿ ವಿವರಿಸಿದೆ.

‘ರಾಜ್ಯದಲ್ಲಿರುವ 64 ಲಕ್ಷ ಮಕ್ಕಳಿಗೆ ಅರ್ಧ ಕೆ.ಜಿಯಂತೆ ಹಾಲಿನ ಪುಡಿ ನೀಡಲು ₹92.32 ಕೋಟಿ ಬೇಕಾಗಲಿದೆ. ಹೀಗೆ ಖರೀದಿಸುವ ಮೂಲಕ ಎರಡು ತಿಂಗಳ ಮಟ್ಟಿಗಾದರೂ ಹಾಲು ಉತ್ಪಾದಕರ ನೆರವಿಗೆ ಸರ್ಕಾರ ಬರಬೇಕು’ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT