ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ: ಸಾಹಿತ್ಯ ಜಾತ್ರೆಗೆ ‘ಮಂಜಿನ ನಗರಿ’ ಸಜ್ಜು

ಇಂದು ನಾಳೆ ಮಡಿಕೇರಿಯಲ್ಲಿ ನುಡಿ ಹಬ್ಬ, ಸುವರ್ಣ ಸಂಭ್ರಮದ ಅಂಗವಾಗಿ ವಿವಿಧ ಕಾರ್ಯಕ್ರಮ
Last Updated 28 ಜನವರಿ 2021, 19:30 IST
ಅಕ್ಷರ ಗಾತ್ರ

ಮಡಿಕೇರಿ: ‘ಮಂಜಿನ ನಗರಿ’ ಮಡಿಕೇರಿಯು, ಎರಡು ದಿನಗಳ ಸಾಹಿತ್ಯ ಜಾತ್ರೆಗೆ ಸಜ್ಜಾಗಿದೆ. ಜ.29 ಹಾಗೂ 30ರಂದು ಕೊಡಗು ಜಿಲ್ಲೆಯ 15ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು ನಗರದ ಪ್ರಮುಖ ರಸ್ತೆಗಳಲ್ಲಿ ಕನ್ನಡ ಬಾವುಟ ರಾರಾಜಿಸುತ್ತಿವೆ. ಜಿಲ್ಲೆಯ ಗಡಿಭಾಗದಲ್ಲಿ ಪ್ರವೇಶ ದ್ವಾರ ಉದ್ಘಾಟಿಸಲಾಗಿದೆ.

ಈ ಬಾರಿ ಜಿಲ್ಲಾ ಕೇಂದ್ರದಲ್ಲಿಯೇ ಸಮ್ಮೇಳನ ನಡೆಸಲು ನಿರ್ಧರಿಸಲಾಗಿದ್ದು, ಕಾಫಿ ಕಣಿವೆಯಲ್ಲಿ ಕನ್ನಡದ ಕಂಪು ಮನೆ ಮಾಡಲಿದೆ. ಮಡಿಕೇರಿಯ ಕಾವೇರಿ ಹಾಲ್‌ ನುಡಿ ಹಬ್ಬಕ್ಕೆ ಸಿದ್ಧವಾಗಿದೆ.

ಕನ್ನಡ ಸಾಹಿತ್ಯ ಪರಿಷತ್‌ನ ಪದಾಧಿಕಾರಿಗಳು ಜಿಲ್ಲೆಯ ವಿವಿಧೆಡೆ ಸಮ್ಮೇಳನ ನಡೆಸಿ, ಯಶಸ್ವಿಯಾಗಿದ್ದರು. ತಮ್ಮ ಆಡಳಿತಾವಧಿಯ ಕೊನೆಯಲ್ಲಿ ಜಿಲ್ಲಾ ಕೇಂದ್ರದಲ್ಲಿ ಸಮ್ಮೇಳನ ನಡೆಸುತ್ತಿದ್ದಾರೆ.

ಸುವರ್ಣ ಸಂಭ್ರಮ:ಕೊಡಗು ಜಿಲ್ಲೆಯಲ್ಲಿ 1970ರಲ್ಲಿ ಆರಂಭಗೊಂಡ ಪರಿಷತ್ತಿಗೆ 2020ಕ್ಕೆ 50 ವರ್ಷ ಪೂರ್ಣವಾಗಿದೆ. ಅದರ ಅಂಗವಾಗಿ ಸಾಹಿತ್ಯ ಸಮ್ಮೇಳನದ ಜೊತೆಗೆ ಸುವರ್ಣ ಮಹೋತ್ಸವದ ಸಂಭ್ರಮವು ಇರಲಿದೆ. ಮಂಡೇಪಂಡ ಗೀತಾ ಮಂದಣ್ಣ ಅವರು ಸಮ್ಮೇಳನದ ಸರ್ವಾಧ್ಯಕ್ಷೆಯಾಗಿ ಆಯ್ಕೆ ಆಗಿದ್ದಾರೆ.

ಕೋವಿಂಡ್‌ ಆತಂಕ ಇನ್ನೂ ದೂರವಾಗಿಲ್ಲ. ಗರಗಂದೂರು ಮೊರಾರ್ಜಿ ದೇಸಾಯಿ ಶಾಲೆಯ 25 ವಿದ್ಯಾರ್ಥಿಗಳಿಗೆ ಕೋವಿಡ್‌ ಸೋಂಕು ತಗುಲಿರುವುದು ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಸಮ್ಮೇಳನದ ಮೇಲೂ ಕೋವಿಡ್‌ ಕಾರ್ಮೋಡ ಕವಿದಿದೆ. ಹೆಚ್ಚು ಜನರನ್ನು ಸೇರಿಸದಂತೆ, ಜಿಲ್ಲಾಡಳಿತವು ಸೂಚನೆ ನೀಡಿದೆ. ಅದರ ನಡುವೆಯೂ ಕನ್ನಡ ಕಂಪು ಪಸರಿಸಲು ಸಾಹಿತ್ಯಾಸಕ್ತರು ಮುಂದಾಗಿದ್ದಾರೆ.

‘ಕೋವಿಡ್‌ ಕಾರಣದಿಂದ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮವನ್ನು ಈ ಬಾರಿ ರದ್ದು ‍ಪಡಿಸಲಾಗಿದೆ. ಉಳಿದಂತೆ ವಿಚಾರಗೋಷ್ಠಿ ಹಾಗೂ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ’ ಎಂದು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಲೋಕೇಶ್‌ ಸಾಗರ್‌ ತಿಳಿಸಿದರು.

ಮೆರವಣಿಗೆಗೆ ಮೆರುಗು:ಮಡಿಕೇರಿಯ ಕಾವೇರಿ ಟೌನ್‌ ಹಾಲ್‌ನಿಂದ ಜ.29ರಂದು ಸಮ್ಮೇಳನಾಧ್ಯಕ್ಷರ ಮೆರವಣಿಗೆ ಆರಂಭಗೊಳ್ಳಲಿದೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಚಾಲನೆ ನೀಡಲಿದ್ದಾರೆ. ಮಂಗಳವಾದ್ಯ, ಪೂರ್ಣಕುಂಭ, ವೈವಿಧ್ಯಮಯ ಕಲಾ ತಂಡಗಳು ಅಲಂಕೃತ ಸ್ತಬ್ಧಚಿತ್ರಗಳು, ಸ್ತ್ರೀಶಕ್ತಿ ಸಂಘಗಳು, ಧರ್ಮಸ್ಥಳ ಸಂಘಗಳು, ಕನ್ನಡ ಸಂಘಟನೆಗಳು, ಶಾಲಾ – ಕಾಲೇಜು ವಿದ್ಯಾರ್ಥಿಗಳು, ಆಟೋ ಚಾಲಕರು, ಸ್ವಸಹಾಯ ಸಂಘದ ಸದಸ್ಯ, ಭಾರತ್ ಸ್ಕೌಟ್‌ ಮತ್ತು ಗೈಡ್ಸ್‌ ಸಂಸ್ಥೆಯ ವಾಹನ ಚಾಲಕರು ಹಾಗೂ ವಿವಿಧ ಸಂಘ–ಸಂಸ್ಥೆಗಳು ಮೆರವಣಿಗೆಗೆ ಮೆರುಗು ನೀಡಲಿವೆ.

ಅದಾದ ಮೇಲೆ ಬೆಳಿಗ್ಗೆ 11ಕ್ಕೆ ಸಮ್ಮೇಳನ ಉದ್ಘಾಟನಾ ಸಮಾರಂಭ ನಡೆಯಲಿದೆ. ಸಭಾಂಗಣಕ್ಕೆ ಸಿ.ಎಸ್‌.ವೆಂಕಪ್ಪಯ್ಯ ಸಭಾಂಗಣವೆಂದು ಹೆಸರಿಡಲಾಗಿದೆ. ರಾವ್‌ ಬಹದ್ದೂರ್‌ ಎಂ.ಮುತ್ತಣ್ಣ ಪ್ರಧಾನ ವೇದಿಕೆಯಲ್ಲಿ ಕಾರ್ಯಕ್ರಮಗಳು, ವಿಚಾರಗೋಷ್ಠಿಗಳು ನಡೆಯಲಿವೆ.

ಭಾವಸಂಗಮ, ಶಿಕ್ಷಣ ಮತ್ತು ಸಂಸ್ಕೃತಿ ವಿಚಾರಗೋಷ್ಠಿ, ಸಂಸ್ಕೃತಿ ಮತ್ತು ಭಾಷೆ ವಿಚಾರಗೋಷ್ಠಿ ನಡೆಯಲಿದೆ. 2ನೇ ದಿನ ಕಾರ್ಯಕ್ರಮದಲ್ಲಿ ಸುವರ್ಣ ಸಂಭ್ರಮದ ಅಂಗವಾಗಿ, ಜಿಲ್ಲಾಧ್ಯಕ್ಷರಾಗಿ, ತಾಲ್ಲೂಕು ಅಧ್ಯಕ್ಷರಾಗಿ, ಹೋಬಳಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ಕಷಿಗೋಷ್ಠಿಗೆ ವಿಶೇಷವಾಗಿ ಈ ಬಾರಿ ಸಿನಿಮಾ ಸಾಹಿತಿ ಕೆ.ಕಲ್ಯಾಣ್‌ ಪಾಲ್ಗೊಳ್ಳಲಿದ್ದಾರೆ. 30ರಂದು ಬೆಳಿಗ್ಗೆ 11.30ರಿಂದ 1.30ರ ತನಕ ಕವಿಗೋಷ್ಠಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT