ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಸುವರ್ಣ ವಿಧಾನಸೌಧಕ್ಕೆ ರೈತರ ಮುತ್ತಿಗೆ

Last Updated 2 ಡಿಸೆಂಬರ್ 2021, 11:00 IST
ಅಕ್ಷರ ಗಾತ್ರ

ಬೆಳಗಾವಿ: ‘ರೈತ ವಿರೋಧಿಯಾದ 3 ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ಡಿ.13ರಂದು ವಿಧಾನಮಂಡಲ ಚಳಿಗಾಲದ ಅಧಿವೇಶನದ ವೇಳೆ ಇಲ್ಲಿನ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು’ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.

‘ಕೇಂದ್ರ ಸರ್ಕಾರವು ಕಾಯ್ದೆಗಳನ್ನು ಶಾಸನಬದ್ಧವಾಗಿ ವಾಪಸ್ ಪಡೆದಿದೆ. ರಾಜ್ಯ ಸರ್ಕಾರವೂ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು’ ಎಂದು ಪತ್ರಿಕಾಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.

‘ನರೇಂದ್ರ ಮೋದಿ ಅವರು ಪ್ರಧಾನಿ ಆಗುವುದಕ್ಕಿಂತಲೂ ಮುನ್ನ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನೀಡಲಾಗುವುದು ಎಂದು ಹೇಳಿದ್ದರು. ಆದರೆ, ಅದು ಅನುಷ್ಠಾನಕ್ಕೆ ಬಂದಿಲ್ಲ. ಕೇಂದ್ರ ಸರ್ಕಾರವು ಇನ್ನಾದರೂ, ಎಂಎಸ್‌ಪಿಯನ್ನು ಶಾಸನಬದ್ಧಗೊಳಿಸಬೇಕು’ ಎಂದು ಒತ್ತಾಯಿಸಿದರು.

‘ಕಾಯ್ದೆ ವಾಪಸ್ ಪಡೆಯದಿದ್ದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರವನ್ನು ರೈತ ವಿರೋಧಿ ಸರ್ಕಾರ ಎಂದು ಪರಿಗಣಿಸಬೇಕಾಗುತ್ತದೆ. ರೈತರ ಪರ ಇರುವುದಾದರೆ ತಕ್ಷಣ ಕ್ರಮ ವಹಿಸಬೇಕು. ಇಲ್ಲದಿದ್ದರೆ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು. ಹಲವು ರೈತ ಸಂಘಟನೆಗಳು ಕೈಜೋಡಿಸಲಿವೆ’ ಎಂದರು.

‘ಮುತ್ತಿಗೆ ಹಾಕುತ್ತೇವೆ ಎಂದು ಅನುಮತಿ ಕೇಳಿದರೆ ಪೊಲೀಸರು ಕೊಡುತ್ತಾರೆಯೇ? ಪೊಲೀಸರು ತಡೆಯಲು ಪ್ರಯತ್ನಿಸಲಿ, ನಮ್ಮ ಕೆಲಸ ಮಾಡುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

‘ಹಲಗಾ–ಮಚ್ಚೆ ಬೈಪಾಸ್ ರಸ್ತೆ ಕಾಮಗಾರಿಗೆ ರೈತರು ಜಮೀನು ಕೊಡಲು ನಿರಾಕರಿಸಿದ್ದರೆ. ಹೀಗಿದ್ದರೂ ಪೊಲೀಸರನ್ನು ಬಳಸಿಕೊಂಡು ಜಿಲ್ಲಾಡಳಿತವು ದೌರ್ಜನ್ಯ ನಡೆಸಿರುವುದು ಸರಿಯಲ್ಲ. ಕೂಡಲೇ ಕಾಮಗಾರಿಯನ್ನು ನಿಲ್ಲಿಸಬೇಕು. ಇಂತಹ ವಿಚಾರಗಳಲ್ಲಿ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ರೈತರ ಮೇಲೆ ಗೂಂಡಾಗಿರಿ ಮಾಡುವುದನ್ನು ಸಹಿಸಲಾಗುವುದಿಲ್ಲ’ ಎಂದು ತಿಳಿಸಿದರು.

‘ಅತಿವೃಷ್ಟಿಯಿಂದಾಗಿ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದ್ದು, ರೈತರಿಗೆ ಆಗಿರುವ ನಷ್ಟವನ್ನು ತ್ವರಿತವಾಗಿ ಬಿಡುಗಡೆ ಮಾಡಬೇಕು. ಎನ್‌ಡಿಆರ್‌ಎಫ್‌ ಮಾರ್ಗಸೂಚಿಯಲ್ಲಿ ಮೂರ್ಕಾಸು ಕೊಟ್ಟು ಕಣ್ಣೊರೆಸುವುದನ್ನು ಬಿಡಬೇಕು. ವೈಜ್ಞಾನಿಕವಾಗಿ ಪರಿಹಾರ ಕಲ್ಪಿಸಬೇಕು’ ಎಂದು ಆಗ್ರಹಿಸಿದರು.

ಬಳಿಕ ಅವರು, ತಾಲ್ಲೂಕಿನ ಹಲಗಾ–ಮಚ್ಚೆ ಬೈಪಾಸ್ ರಸ್ತೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ್ದರು. ಕೆಲವು ರೈತರು ನಮ್ಮ ಜಮೀನು ಉಳಿಸಿಕೊಡುವಂತೆ ಕೋಡಿಹಳ್ಳಿ ಕಾಲಿಗೆ ಬಿದ್ದು ಕೋರಿಕೊಂಡರು. ಅಳಲು ತೋಡಿಕೊಂಡರು. ‘ನಮ್ಮ ಜಮೀನು ಕಸಿದುಕೊಳ್ಳಲಾಗುತ್ತಿದೆ. ಅಕ್ರಮವಾಗಿ ಕಾಮಗಾರಿ ನಡೆಸಲಾಗುತ್ತಿದೆ’ ಎಂದು ಕೆಲವರು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT