ಸೋಮವಾರ, ಜುಲೈ 4, 2022
24 °C
ಆಯ್ಕೆ ಪರಿಷ್ಕರಣೆ ಪಟ್ಟಿ ಪ್ರಶ್ನಿಸಿದ ಅರ್ಜಿಯ ವಿಚಾರಣೆ

1998ರ ನೇಮಕಾತಿ: ಯಥಾಸ್ಥಿತಿಗೆ ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಮೂಲಕ ಆಯ್ಕೆಯಾಗಿದ್ದ 1998ನೇ ಸಾಲಿನ 383 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಪಟ್ಟಿಯನ್ನು 2021ರ ಜನವರಿ 30ರಂದು ಪರಿಷ್ಕರಿಸಿರುವ ಸರ್ಕಾರದ ನಿರ್ಧಾರ ಪ್ರಶ್ನಿಸಿ ಏಳು ಜನ ಐಎಎಸ್‌ ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ವಜಾಗೊಳಿಸಿದ ಬೆನ್ನಲ್ಲೇ, ಕೆಎಟಿಯ ಆದೇಶಕ್ಕೆ ಹೈಕೋರ್ಟ್‌ ಮಧ್ಯಂತರ ತಡೆ ನೀಡಿದೆ.

ಕೆಎಟಿ ಆದೇಶ ಪ್ರಶ್ನಿಸಿ ಐಎಎಸ್‌ ಅಧಿಕಾರಿಗಳಾದ ಎಚ್‌.ಎನ್‌.ಗೋಪಾಲಕೃಷ್ಣ (ವಯಸ್ಸು 48), ಕವಿತಾ ಎಸ್‌.ಮನ್ನಿಕೇರಿ (47), ಶಿವಾನಂದ ಕಾಪಸಿ (53), ಎಚ್‌.ಬಸವರಾಜೇಂದ್ರ (53) ಮತ್ತು ಪಿ.ವಸಂತಕುಮಾರ್ (46) ರಿಟ್‌ ಅರ್ಜಿ ಸಲ್ಲಿಸಿದ್ದರು.

ನ್ಯಾಯಮೂರ್ತಿ ಆರ್.ದೇವದಾಸ್‌ ಹಾಗೂ ಕೆ.ಎಸ್‌.ಹೇಮಲೇಖಾ ಅವರಿದ್ದ ರಜಾಕಾಲದ ವಿಭಾಗೀಯ ನ್ಯಾಯಪೀಠ ಗುರುವಾರ (ಮಾ.28) ವಿಚಾರಣೆ ನಡೆಸಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿತು. 

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಎಂ.ಎಸ್.
ಭಾಗವತ್‌, ‘ಈ ಪ್ರಕರಣದ ಅರ್ಜಿ ದಾರರ ಮನವಿಯನ್ನೇ ಪುನರಾವರ್ತಿ ಸುವಂತಹ ಮತ್ತೊಂದು ರಿಟ್‌ ಅರ್ಜಿಯ ವಿಚಾರಣೆ ನ್ಯಾಯಮೂರ್ತಿ ಜಿ.ನರೇಂದರ್‌ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯುತ್ತಿದೆ. ಕರ್ನಾಟಕ ರಾಜ್ಯ ಪಾನೀಯ ನಿಗಮದ  ಕಾರ್ಯನಿರ್ವಾಹಕ ನಿರ್ದೇಶಕಿ (ಹಣಕಾಸು ಮತ್ತು ಆಡಳಿತ ವಿಭಾಗ) ಎಂ.ಸುನೀತಾ ಸಲ್ಲಿಸಿರುವ ಈ ಅರ್ಜಿಯಲ್ಲಿ (5056/2022) ಯಥಾಸ್ಥಿತಿ ಕಾಯ್ದುಕೊಂಡು ಹೋಗು ವಂತೆ ನ್ಯಾಯಪೀಠ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ. ಹೀಗಾಗಿ, ಈ ಪ್ರಕರಣದಲ್ಲೂ ಅದೇ ಆದೇಶವನ್ನು ಪರಿಗಣಿ ಸಬೇಕು’ ಎಂದು ಕೋರಿದರು.

ಈ ಮನವಿಯನ್ನು ಮಾನ್ಯ ಮಾಡಿದ ನ್ಯಾಯಪೀಠ, ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಕೆಪಿಎಸ್‌ಸಿ ಕಾರ್ಯದರ್ಶಿಗೆ ನೋಟಿಸ್ ಜಾರಿಗೆ ಆದೇಶಿಸಿದ್ದು, ವಿಚಾರಣೆಯನ್ನು ಮೇ 25ಕ್ಕೆ ನಿಗದಿಪಡಿಸಿದೆ. ಕೆಪಿಎಸ್‌ಸಿ ಸಲ್ಲಿಸಿರುವ ಮತ್ತೊಂದು ರಿಟ್‌ ಅರ್ಜಿ (2855/2021) ಜೊತೆಗೆ ಈ ಅರ್ಜಿ ವಿಚಾರಣೆಯನ್ನೂ ನಿಗದಿಗೊಳಿಸಿದೆ.

ಅರ್ಜಿದಾರರ ಅಳಲು: 1998ನೇ ಸಾಲಿನ 383 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬ ಕಾರಣಕ್ಕೆ ಹಲವು ಹಂತದ ಕಾನೂನು ಹೋರಾಟ ನಡೆದ ಪರಿಣಾಮ ಸರ್ಕಾರ ಈ ಅಂತಿಮ ಆಯ್ಕೆ ಪಟ್ಟಿಯನ್ನು ಪರಿಷ್ಕರಿಸಿದೆ. ‘ಪರಿಷ್ಕೃತ ಆಯ್ಕೆಪಟ್ಟಿಯಿಂದಾಗಿ ನಾವು ಈಗಿನಹುದ್ದೆಗಳಿಂದ ಹಿಂಬಡ್ತಿ ಪಡೆಯುತ್ತೇವೆ‘ ಎಂಬುದು ಅರ್ಜಿದಾರರ ಅಳಲು. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು