ಭಾನುವಾರ, ಮೇ 29, 2022
30 °C
8 ತಿಂಗಳುಗಳಿಂದ ಕಾಯಂ ಪರೀಕ್ಷಾ ನಿಯಂತ್ರಕರಿಲ್ಲ –

ಕೆಪಿಎಸ್‌ಸಿ: 4,078 ಹುದ್ದೆ ಆಯ್ಕೆ ನನೆಗುದಿಗೆ, ಸಿಎಂ ಬಸವರಾಜ ಬೊಮ್ಮಾಯಿಗೆ ಪತ್ರ

ರಾಜೇಶ್‌ ರೈ ಚಟ್ಲ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸುಮಾರು ಎಂಟು ತಿಂಗಳಿಂದ ಕರ್ನಾಟಕ ಲೋಕಸೇವಾ ಆಯೋಗಕ್ಕೆ (ಕೆಪಿಎಸ್‌ಸಿ) ಕಾಯಂ ಪರೀಕ್ಷಾ ನಿಯಂತ್ರಕರಿಲ್ಲ. ಹೀಗಾಗಿ, ಸರ್ಕಾರದ ನಾನಾ ಇಲಾಖೆಗಳ ವಿವಿಧ ಶ್ರೇಣಿಗಳಿಗೆ ಸೇರಿದ 4,078 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ.

ತಕ್ಷಣ ಪರೀಕ್ಷಾ ನಿಯಂತ್ರಕರನ್ನು ನಿಯೋಜಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಕೆಪಿಎಸ್‌ಸಿ ಮನವಿ ಮಾಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಈ ಸಂಬಂಧ ಪತ್ರ ಬರೆದಿರುವ ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಎಸ್‌. ಸಾಹುಕಾರ, ‘ಸದ್ಯ ಆಯೋಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಪರೀಕ್ಷಾ ನಿಯಂತ್ರಕರನ್ನು (ಎಂ. ಕನಗವಲ್ಲಿ) ಸಮವರ್ತಿ ಪ್ರಭಾರದಲ್ಲಿ ಇರಿಸಲಾಗಿದೆ. ಅವರು ಆಯೋಗದ ಕಾರ್ಯನಿರ್ವಹಣೆಯ ಜೊತೆಗೆ ರೇಷ್ಮೆ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಹುದ್ದೆಯನ್ನೂ ಹೊಂದಿದ್ದಾರೆ. ಎರಡು ಹುದ್ದೆಗಳ ಜವಾಬ್ದಾರಿಯನ್ನು ನಿರ್ವಹಿಸುವುದು ಅವರಿಗೂ ಕಷ್ಟಕರ. ಈ ಕಾರಣದಿಂದ ಆಯೋಗದ ಕಾರ್ಯನಿರ್ವಹಣೆ ವಿಳಂಬ ಆಗುತ್ತಿದೆ’ ಎಂದಿದ್ದಾರೆ.

ಮೌಲ್ಯಮಾಪನ ವಿಳಂಬ: 'ನಿಯಮಿತ ಪರೀಕ್ಷಾ ಕಂಟ್ರೋಲರ್‌ ಇಲ್ಲದ ಕಾರಣ 2020ರ ಡಿ. 21, 23, 24, 28 ರಂದು ನಡೆದ ರಾಜ್ಯ ಲೆಕ್ಕಪತ್ರ ಇಲಾಖೆಯ ಸಹಾಯಕ ನಿಯಂತ್ರಕರ ಮುಖ್ಯ ಪರೀಕ್ಷೆಯ ಮೌಲ್ಯಮಾಪನ ಪೂರ್ಣಗೊಂಡಿಲ್ಲ. 2021ರ ಫೆಬ್ರುವರಿ 13ರಿಂದ 16ರವರೆಗೆ ನಡೆದ 2017ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ ಮುಖ್ಯ ಪರೀಕ್ಷೆಯ ಮೌಲ್ಯಮಾಪನ ಆರಂಭವೇ ಆಗಿಲ್ಲ. ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳ ಆಯ್ಕೆಗೆ 2021ರ ಸೆ. 18, 19 ರಂದು ನಡೆದ ಸ್ಪರ್ಧಾತ್ಮಕ ಪರೀಕ್ಷೆಯ ನಂತರದ ಪ್ರಕ್ರಿಯೆಗಳೂ ನಡೆದಿಲ್ಲ. ವಿವಿಧ ಇಲಾಖೆಗಳ ತಾಂತ್ರಿಕೇತರ ಹುದ್ದೆಗಳ ಆಯ್ಕೆಗೆ 2021ರ ಡಿ. 4, 5, 19ರಂದು ನಡೆದ ಪರೀಕ್ಷೆ,  ಲೋಕೋಪಯೋಗಿ ಇಲಾಖೆಯ ಕಿರಿಯ ಮತ್ತು ಸಹಾಯಕ ಎಂಜಿನಿಯರ್‌ ಹುದ್ದೆಗಳ ನೇಮಕಾತಿಗೆ ಡಿ. 13, 14 ಮತ್ತು 15ರಂದು ನಡೆದ ಪರೀಕ್ಷೆಗಳ ಮೌಲ್ಯಮಾಪನವೂ ಆರಂಭವಾಗಿಲ್ಲ. 2021ರ ಫೆ. 28ರಂದು ನಡೆದ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಹುದ್ದೆಯ ಫಲಿತಾಂಶ ಪ್ರಕಟ ಆಗಿಲ್ಲ. ನೇಮಕಾತಿ ಪ್ರಕ್ರಿಯೆ ವಿಳಂಬ ಆಗುತ್ತಿರುವುದು ವ್ಯಾಪಕ ಅಸಮಾಧಾನಕ್ಕೆ ಕಾರಣವಾಗಿದೆ. ಇದರಿಂದ ಆಯೋಗಕ್ಕೆ ಮುಜುಗರ ಉಂಟಾಗುತ್ತಿದೆ’ ಎಂದು ಪತ್ರದಲ್ಲಿ ಅವರು ಉಲ್ಲೇಖಿಸಿದ್ದಾರೆ.

18 ತಿಂಗಳಿಂದ ಹೊಸ ಅಧಿಸೂಚನೆ ಶೂನ್ಯ!: ಕಳೆದ 18 ತಿಂಗಳ ಅವಧಿಯಲ್ಲಿ ಲೋಕೋಪಯೋಗಿ ಇಲಾಖೆಯ
ಕಿರಿಯ ಮತ್ತು ಸಹಾಯಕ ಎಂಜಿನಿಯರ್‌ ಹುದ್ದೆಗಳ ನೇಮಕಾತಿಗೆ ಪರಿಷ್ಕೃತ ಅಧಿಸೂಚನೆ ಹೊರತುಪಡಿಸಿದರೆ, ಯಾವುದೇ ನೇಮಕಾತಿಗೆ ಸಂಬಂಧಿಸಿದಂತೆ ಹೊಸ ಅಧಿಸೂಚನೆಯನ್ನು ಕೆಪಿಎಸ್‌ಸಿ ಹೊರಡಿಸಿಲ್ಲ. ಇದು ಕೆಪಿಎಸ್‌ಸಿ
ಮೂಲಕ ನಡೆಯುವ ನೇಮಕಾತಿಯನ್ನೇ ನಂಬಿರುವ ಸಾವಿರಾರು ಉದ್ಯೋಗಾ‌ಕಾಂಕ್ಷಿಗಳಲ್ಲಿ ನಿರಾಸೆ ಮೂಡಿಸಿದೆ. ಅನೇಕರು ವಯೋಮಿತಿ ಮೀರುವ ಆತಂಕದಲ್ಲಿದ್ದಾರೆ.  ಇಲಾಖೆಗಳು ವಿವಿಧ ಶ್ರೇಣಿಯ ಹುದ್ದೆಗಳ ಪಟ್ಟಿ ನೀಡಿ, ಅರ್ಹರನ್ನು ಆಯ್ಕೆ ಮಾಡಿಕೊಡುವಂತೆ ಕೆಪಿಎಸ್‌ಸಿಗೆ ಮನವಿ ಮಾಡಿದೆ. ಆದರೆ, ಕೆಪಿಎಸ್‌ಸಿ ಯಾವುದೇ ಪ್ರಕ್ರಿಯೆ ನಡೆಸಿಲ್ಲ. ನೇಮಕಾತಿಯ ಅಧಿಸೂಚನೆ ಹೊರಡಿಸದಿರಲು ಕೋವಿಡ್‌ ಕೂಡ ಕಾರಣ ಎಂದು ಕೆಪಿಎಸ್‌ಸಿ ಮೂಲಗಳು ಹೇಳಿವೆ.

3 ವರ್ಷದಲ್ಲಿ ನಾಲ್ವರು ಪರೀಕ್ಷಾ ನಿಯಂತ್ರಕರು!

ಕೆಪಿಎಸ್‌ಸಿಗೆ ಕಳೆದ ಮೂರು ವರ್ಷಗಳ ಅವಧಿಯಲ್ಲಿ ನಾಲ್ವರು (ಕೃಷ್ಣ ಬಾಜಪೇಯಿ, ವಿ.ವಿ. ಜ್ಯೋತ್ಸ್ನಾ, ದಿವ್ಯಾಪ್ರಭು, ಎಂ.ಕನಗವಲ್ಲಿ) ಪರೀಕ್ಷಾ ನಿಯಂತ್ರಕರು ಬಂದಿದ್ದಾರೆ. ಕೃಷ್ಣ ಬಾಜಪೇಯಿ ಅವರನ್ನು 2019ರ ಫೆ. 22ರಂದು ವರ್ಗಾವಣೆ ಮಾಡಲಾಗಿತ್ತು. ಆ ಬಳಿಕ ಬಂದ ವಿ.ವಿ. ಜ್ಯೋತ್ಸ್ನಾ ಮತ್ತು ದಿವ್ಯಾಪ್ರಭು ಕೆಲವೇ ತಿಂಗಳು ಮಾತ್ರ ಕಾರ್ಯನಿರ್ವಹಿಸಿದ್ದರು. ಇದೀಗ ಎಂ. ಕನಗವಲ್ಲಿ ಕೂಡಾ ವರ್ಗಾವಣೆಯ ನಿರೀಕ್ಷೆಯಲ್ಲಿದ್ದಾರೆ. ಕೆಪಿಎಸ್‌ಸಿ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸುಧಾರಣಾ ಪದ್ಧತಿ ಅಳವಡಿಸಿ, ನಿಷ್ಪಕ್ಷಪಾತವಾದ ಮತ್ತು ಅರ್ಹತೆ ಆಧಾರಿತ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಉದ್ದೇಶದಿಂದ ಜಾರಿಯಲ್ಲಿದ್ದ ವ್ಯವಸ್ಥೆ ಮತ್ತು ಪ್ರಕ್ರಿಯೆಗಳನ್ನು ಪರಿಷ್ಕರಿಸಲು 2013ರಲ್ಲಿ ಪಿ.ಸಿ. ಹೋಟಾ ಸಮಿತಿಯನ್ನು ಸರ್ಕಾರ ರಚಿಸಿತ್ತು. ಈ ಸಮಿತಿ ಮಾಡಿದ್ದ ಶಿಫಾರಸ್ಸಿನಂತೆ ಐಎಎಸ್‌ ಹಿರಿಯ ಶ್ರೇಣಿಯ ಪರೀಕ್ಷಾ ನಿಯಂತ್ರಕ ಹುದ್ದೆಯನ್ನು 2013 ರ ಸೆ. 24ರಿಂದ ಜಾರಿಗೆ ಬರುವಂತೆ ಸೃಜಿಸಲಾಗಿದೆ. ಈ ಹುದ್ದೆಗೆ ನಿಯೋಜಿತರಾದವರನ್ನು ಕನಿಷ್ಠ ಮೂರು ವರ್ಷಗಳವರೆಗೆ ವರ್ಗಾವಣೆ ಮಾಡಬಾರದು ಎಂದೂ ಸಮಿತಿ ಶಿಫಾರಸಿನಲ್ಲಿ ಹೇಳಿತ್ತು. ಆದರೆ, ಪರೀಕ್ಷಾ ನಿಯಂತ್ರಕರನ್ನು ಮೂರು ವರ್ಷ ಪೂರ್ಣಗೊಳ್ಳುವ ಮೊದಲೇ ಸರ್ಕಾರ ವರ್ಗಾವಣೆ ಮಾಡುತ್ತಿದೆ!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು