ಸೋಮವಾರ, ಜುಲೈ 4, 2022
22 °C

164 ಕೃಷಿ ಸಂಜೀವಿನಿ ವಾಹನ ಶೀಘ್ರ ಸೇವೆಗೆ: ಕೃಷಿ ಸಚಿವ ಬಿ.ಸಿ.ಪಾಟೀಲ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರೈತರ ಹೊಲಕ್ಕೆ ಹೋಗಿ ನೀರು, ಮಣ್ಣು ಮತ್ತು ಬೆಳೆಯನ್ನು ಪರೀಕ್ಷಿಸುವ ಸಂಚಾರಿ ಪ್ರಯೋಗಾಲಯದ ಸೌಲಭ್ಯ ಹೊಂದಿರುವ 164 ‘ಕೃಷಿ ಸಂಜೀವಿನಿ’ ವಾಹನಗಳನ್ನು ಶೀಘ್ರದಲ್ಲಿ ಸೇವೆಗೆ ಒದಗಿಸಲಾಗುವುದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ತಿಳಿಸಿದರು.

ವಿಧಾನ ಪರಿಷತ್‌ನಲ್ಲಿ ಜೆಡಿಎಸ್‌ನ ಗೋವಿಂದರಾಜು ಅವರು ಮಂಗಳವಾರ ಮಂಡಿಸಿದ ಗಮನ ಸೆಳೆಯವ ಸೂಚನೆಗೆ ಉತ್ತರಿಸಿದ ಸಚಿವರು, ‘ಕೊಪ್ಪಳದಲ್ಲಿ ಜಿಲ್ಲಾ ಖನಿಜ ನಿಧಿ ಹಣವನ್ನು ಬಳಸಿಕೊಂಡು ಪ್ರಾಯೋಗಿಕವಾಗಿ 20 ಕೃಷಿ ಸಂಜೀವಿನಿ ವಾಹನಗಳನ್ನು ಸೇವೆಗೆ ಒದಗಿಸಲಾಗಿತ್ತು. ಈಗ ಅದನ್ನು ರಾಜ್ಯದಾದ್ಯಂತ ವಿಸ್ತರಿಸಲಾಗುವುದು’ ಎಂದರು.

ಮಾರ್ಚ್‌ ಅಂತ್ಯದೊಳಗೆ 100 ವಾಹನಗಳನ್ನು ಖರೀದಿಸಿ, ಸೇವೆಗೆ ಒದಗಿಸಲು ಆರ್ಥಿಕ ಇಲಾಖೆ ಒಪ್ಪಿಗೆ ನೀಡಿದೆ. ನಂತರ 64 ವಾಹನ ಖರೀದಿಸಲಾಗುವುದು. ಎರಡನೇ ಹಂತದಲ್ಲಿ ಎಲ್ಲ ರೈತ ಸೇವಾ ಕೇಂದ್ರಗಳಿಗೂ ತಲಾ ಒಂದು ವಾಹನ ಒದಗಿಸಲಾಗುವುದು. ಸಹಾಯವಾಣಿ ಸಂಖ್ಯೆ 155313 ಜತೆ ಅವುಗಳನ್ನು ಜೋಡಿಸಲಾಗುವುದು ಎಂದು ತಿಳಿಸಿದರು.

‘ರಾಜ್ಯದಲ್ಲಿ ನಕಲಿ ಕೀಟನಾಶಕಗಳ ಹಾವಳಿ ಹೆಚ್ಚಾಗಿದೆ. ರೈತರು ಸರಿಯಾದ ಮಾಹಿತಿ ಇಲ್ಲದೇ ಕೀಟನಾಶಕ ಬಳಸಿ ಅಪಾಯಕ್ಕೆ ಸಿಲುಕುತ್ತಿದ್ದಾರೆ. ಕೃಷಿ ಇಲಾಖೆ ಮೂಲಕ ಕೀಟನಾಶಕ ಮಾರಾಟಕ್ಕೆ ವ್ಯವಸ್ಥೆ ಮಾಡಬೇಕು’ ಎಂದು ಗೋವಿಂದರಾಜು ಆಗ್ರಹಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ಬಿ.ಸಿ. ಪಾಟೀಲ್, ‘ಕಳಪೆ ಕೀಟನಾಶಕ ಮಾರಾಟಕ್ಕೆ ಸಂಬಂಧಿಸಿದಂತೆ ಮೂರು ವರ್ಷಗಳಲ್ಲಿ 169 ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು