ಸೋಮವಾರ, ನವೆಂಬರ್ 29, 2021
20 °C
ರಾಜ್ಯ ಬಿಜೆಪಿ ಒಬಿಸಿ ಮೋರ್ಚಾ ಕಾರ್ಯಕರ್ತರ ಸಮಾವೇಶ ಸಮಾರಂಭ

ಜಾತಿ ಸಂಘಟನೆಯಿಂದ ಹಿಂದುತ್ವ ಗಟ್ಟಿ: ಕೆ.ಎಸ್. ಈಶ್ವರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಜಾತಿ ಸಂಘಟನೆ ಮೂಲಕ ಹಿಂದುತ್ವ ಮತ್ತು ಹಿಂದೂ ಸಮಾಜ ಗಟ್ಟಿಯಾಗುತ್ತದೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ ಅವರು ಅಭಿಪ್ರಾಯಪಟ್ಟರು.

ನಗರದ ಅಂಬೇಡ್ಕರ್‌ ಭವನದಲ್ಲಿ ಬುಧವಾರ ಬಿಜೆಪಿ ಒಬಿಸಿ ಮೋರ್ಚಾದ ಜಿಲ್ಲಾ ಪ್ರಮುಖರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಒಬಿಸಿ ಮೋರ್ಚಾ ಕಾರ್ಯಕರ್ತರು ಜಾತಿ ಸಂಘಟನೆಗಳಲ್ಲಿ ಹಿಂಜರಿಕೆ ಇಲ್ಲದೇ ತೊಡಗಿಸಿಕೊಳ್ಳಬೇಕು. ಇದರಿಂದ ಆಯಾ ಜಾತಿಗಳ ಸಬಲೀಕರಣಕ್ಕೆ ಅನುಕೂಲವಾಗುತ್ತದೆ ಎಂದರು.

‘ಹಿಂದುಳಿದ ವರ್ಗಗಳಿಗೆ ಸೇರಿದ ಶೇ 80 ರಷ್ಟು ಜನ ಈಗ ಬಿಜೆಪಿಗೆ ಮತ ಹಾಕುತ್ತಾರೆ. ರಾಷ್ಟ್ರವಾದಿ ಮುಸ್ಲಿಮರೂ ಬಿಜೆಪಿಗೇ ಮತ ಹಾಕುತ್ತಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಒಳ್ಳೆಯ ಕೆಲಸಗಳನ್ನು ಮೆಚ್ಚಿಕೊಂಡಿದ್ದಾರೆ. ಹಿಂದುಳಿದ ವರ್ಗಕ್ಕೆ ಸೇರಿದ ಸಣ್ಣ– ಪುಟ್ಟ ಜಾತಿಗಳ ಬೇಡಿಕೆಗಳನ್ನು ಆಲಿಸಿ ನಮಗೆ ತಿಳಿಸಿ, ಅದು ಹಾಸ್ಟೆಲ್‌, ಶಾಲಾ– ಕಾಲೇಜು ಆರಂಭಿಸುವ ವಿಚಾರ ಇರಬಹುದು, ಆ ವರ್ಗಗಳಿಗೆ ಸಹಾಯ ಮಾಡೋಣ’ ಎಂದು ಈಶ್ವರಪ್ಪ ಹೇಳಿದರು.

‘ಬಿಜೆಪಿ ಈ ಹಿಂದೆ ಆಡಳಿತ ನಡೆಸಿದಾಗ ಹಿಂದುಳಿದ ಮತ್ತು ದಲಿತ ವರ್ಗಕ್ಕೆ ಸೇರಿದ ಮಠಗಳಿಗೆ ₹100 ಕೋಟಿ ಅನುದಾನ ನೀಡಿತ್ತು. ಇದರಿಂದ ಆ ಸಮುದಾಯಗಳ ಮಠಗಳು ಶಿಕ್ಷಣ ಸಂಸ್ಥೆಗಳು ಹಾಸ್ಟೆಲ್‌, ಆಸ್ಪತ್ರೆ ಸೇರಿ ಅನೇಕ ಅಭಿವೃದ್ಧಿ ಕಾರ್ಯ ಮಾಡಿವೆ. ಆ ಬಳಿಕ ಬಂದ ಸರ್ಕಾರಗಳು ಈ ಮಠಗಳಿಗೆ ಒಂದು ಪೈಸೆಯೂ ಕೊಟ್ಟಿಲ್ಲ’ ಎಂದು ಕಿಡಿ ಕಾರಿದರು.

‘ನಾವು ನಂಬಿಕಸ್ಥರು ಎಂಬ ಕಾರಣಕ್ಕೇ ಜನ ನಮಗೆ ಚುನಾವಣೆಯಲ್ಲಿ ಮತ ಹಾಕುತ್ತಾರೆ. ದೇಶ ಮತ್ತು ಧರ್ಮವನ್ನು ಉಳಿಸುತ್ತಾರೆ ಎಂಬುದೇ ಜನರಿಗಿರುವ ನಂಬಿಕೆ’ ಎಂದು ಈಶ್ವರಪ್ಪ ಹೇಳಿದರು.

ನ. 21 ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ಹಿಂದುಳಿದ ಸಮುದಾಯಗಳ ಸಮಾವೇಶ ಏರ್ಪಡಿಸಲಾಗುವುದು. ಇದರಲ್ಲಿ 224 ವಿಧಾನಸಭಾ ಕ್ಷೇತ್ರಗಳ ಪಕ್ಷದ 8 ಜನ ಪ್ರಮುಖರು ಭಾಗವಹಿಸುವರು. ಹಿಂದುಳಿದ ಸಮಾಜಗಳ ಮಾಜಿ ಸಂಸದರು, ಮಾಜಿ ಶಾಸಕರು, ವಿಧಾನಪರಿಷತ್‌ ಮಾಜಿ ಸದಸ್ಯರ ಭಾಗವಹಿಸಲಿದ್ದಾರೆ ಎಂದು ಈಶ್ವರಪ್ಪ ತಿಳಿಸಿದರು.

ಕಾರ್ಯಕ್ರಮದಲ್ಲಿ ಹಿಂದುಳಿದ ಮೋರ್ಚಾದ ರಾಜ್ಯ ಅಧ್ಯಕ್ಷ ನೆ.ಲ.ನರೇಂದ್ರಬಾಬು, ಬಿಜೆಪಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್‌ ಕುಮಾರ್‌ ಮುಂತಾದವರು ಇದ್ದರು.

---

‘ಕುರುಬರು ಕೈಬಿಟ್ಟಿದ್ದರಿಂದ ಕಂಬಳಿ ಪ್ರಸ್ತಾಪ’

ಉಪಚುನಾವಣೆಯಲ್ಲಿ ಕಂಬಳಿ ವಿಷಯವನ್ನು ಮಾಜಿ ಮುಖ್ಯಮಂತ್ರಿ ಪ್ರಸ್ತಾಪಿಸಿದ್ದಾರೆ. ಅವರಿಗೆ ನಾಚಿಗೆ ಆಗಬೇಕು. ಕುರುಬರೂ ಅವರ ಕೈಬಿಟ್ಟಿರುವು ದರಿಂದ ಅವರಿಗೆ ಕಂಬಳಿ ನೆನಪು ಬಂದಿದೆ. ಕನಕದಾಸರು, ಸಂಗೊಳ್ಳಿ ರಾಯಣ್ಣನ ನೆನಪೇ ಇವರಿಗೆ ಇರಲಿಲ್ಲ. ಬಿಜೆಪಿ ಸರ್ಕಾರ ಬಂದ ಮೇಲೆ ಅವರ ಹೆಸರಿನಲ್ಲಿ ಕಾರ್ಯಕ್ರಮಗಳನ್ನು ಆರಂಭಿಸಿತು. ಕನಕದಾಸರ ಜಯಂತಿ ದಿನ ಸರ್ಕಾರಿ ರಜೆಯನ್ನೂ ಘೋಷಿಸಿತು. ಕನಕದಾಸರ ಸಿದ್ಧಾಂತವೇ ನಮ್ಮ ಪರಿವಾರದ ಸಿದ್ಧಾಂತ ಎಂದು ಈಶ್ವರಪ್ಪ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು