ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಉದ್ಯಮಿಗಳು, ರೈತರಿಗೆ ‘ಸಂಜೀವಿನಿ’ ಬೆಂಬಲ

ಐಐಎಂ– ಬೆಂಗಳೂರು, ಸುಭಿಕ್ಷಾ ಸಹಕಾರ ಸಂಸ್ಥೆ ಜತೆ ಪ್ರತ್ಯೇಕ ಒಪ್ಪಂದಕ್ಕೆ ಸಹಿ
Last Updated 22 ಜೂನ್ 2022, 15:34 IST
ಅಕ್ಷರ ಗಾತ್ರ

ಬೆಂಗಳೂರು: ಮಹಿಳಾ ಉದ್ಯಮಿಗಳಿಗೆ ಉತ್ತೇಜನ ನೀಡುವುದು ಮತ್ತು ಸಾವಯವ ಕೃಷಿಯಲ್ಲಿ ನಿರತರಾಗಿರುವ ರೈತರಿಗೆ ಪ್ರೋತ್ಸಾಹ ನಿಡುವುದಕ್ಕೆ ಐಐಎಂ– ಬೆಂಗಳೂರು ಹಾಗೂ ಸುಭಿಕ್ಷಾ– ಬಹುರಾಜ್ಯ ಸೌಹಾರ್ದ ಸಹಕಾರಿ ಸಂಸ್ಥೆಗಳ ಜತೆ ಕರ್ನಾಟಕ ಗ್ರಾಮೀಣ ಜೀವನೋಪಾಯ ಮಿಷನ್‌ (ಕೆಎಸ್‌ಆರ್‌ಎಲ್‌ಎಂ) – ಸಂಜೀವಿನಿ ಎರಡು ಪ್ರತ್ಯೇಕ ಒಪ್ಪಂದಗಳಿಗೆ ಬುಧವಾರ ಸಹಿ ಮಾಡಿತು.

ಕೌಶಲ್ಯಾಭಿವೃದ್ಧಿ ಖಾತೆ ಸಚಿವ ಡಾ.ಸಿ.ಎನ್‌. ಅಶ್ವತ್ಥ ನಾರಾಯಣ ಉಪಸ್ಥಿತಿಯಲ್ಲಿ ಮೂರೂ ಸಂಸ್ಥೆಗಳು ಒಪ್ಪಂದದ ಪತ್ರಗಳನ್ನು ವಿನಿಮಯ ಮಾಡಿಕೊಂಡವು. ರಾಷ್ಟ್ರೀಯ ಗ್ರಾಮೀಣ ಆರ್ಥಿಕ ಪರಿವರ್ತನೆ ಯೋಜನೆ (ಎನ್‌ಆರ್‌ಇಟಿಪಿ), ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್‌ ಮತ್ತು ಕೆಎಸ್‌ಆರ್‌ಎಲ್‌ಎಂ ಸಹಯೋಗದಲ್ಲಿ ಈ ಒಪ್ಪಂದಗಳನ್ನು ಅನುಷ್ಠಾನಕ್ಕೆ ತರಲಾಗುತ್ತದೆ.

ಒಪ್ಪಂದದ ಬಳಿಕ ಮಾತನಾಡಿದ ಅಶ್ವತ್ಥ ನಾರಾಯಣ, ‘ಐಐಎಂಬಿ–ಬಿಯಲ್ಲಿ ಗ್ರಾಮೀಣ ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸಲು ವಿಶೇಷ ‘ಇನ್‌ಕ್ಯುಬೇಟರ್‌’ ಆರಂಭಿಸಲಾಗುತ್ತದೆ. ಇದಕ್ಕಾಗಿ ₹ 10 ಕೋಟಿ ಒದಗಿಸಲಾಗುವುದು. ಎರಡು ವರ್ಷಗಳ ಅವಧಿಯ ಈ ಯೋಜನೆಯಡಿ ಮಹಿಳಾ ಉದ್ಯಮಿಗಳ ನೋಂದಾಯಿತ ಉದ್ದಿಮೆ, ಗುಂಪು ಉದ್ದಿಮೆ ಮತ್ತು ವೈಯಕ್ತಿಕ ಉದ್ದಿಮೆಗಳಿಗೆ ನರವು ನೀಡಲಾಗುವುದು’ ಎಂದರು.

‘ಸುಭಿಕ್ಷಾ ಸಹಕಾರ ಸಂಸ್ಥೆ ಸಹಯೋಗದಲ್ಲಿ ಸಾವಯವ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲಾಗುವುದು. ಸಾವಯವ ಕೃಷಿ ಮೂಲಕ ಜಮೀನನ್ನು ಫಲವತ್ತವಾಗಿ ಇರಿಸಿಕೊಳ್ಳುವ ರೈತರಿಗೆ ವಿಶೇಷ ಪ್ರೋತ್ಸಾಹಧನ ನೀಡಲಾಗುವುದು. ಗ್ರಾಮೀಣ ಸ್ವಸಹಾಯ ಗುಂಪುಗಳ ವಹಿವಾಟನ್ನು ಸಂಪೂರ್ಣವಾಗಿ ಡಿಜಿಟಲೀಕರಣ ಮಾಡಲಾಗುವುದು’ ಎಂದು ತಿಳಿಸಿದರು.

ರಾಜ್ಯ ಸಾವಯವ ಕೃಷಿ ಮಿಷನ್‌ ಅಧ್ಯಕ್ಷ ಆ.ಶ್ರೀ. ಆನಂದ ಮಾತನಾಡಿ, ‘ಉಪಗ್ರಹಗಳ ನೆರವಿನಲ್ಲಿ ಜಮೀನಿನ ಫಲವತ್ತತೆ ಮತ್ತು ರಾಸಾಯನಿಕಗಳ ಪ್ರಮಾಣವನ್ನು ಅಳೆಯಲಾಗುವುದು. ಉತ್ತಮವಾಗಿ ಜಮೀನು ನಿರ್ವಹಣೆ ಮಾಡುವ ರೈತರಿಗೆ ಪ್ರೋತ್ಸಾಹಧನ ನೀಡಲಾಗುವುದು’ ಎಂದರು.

ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್‌ ನಿರ್ದೇಶಕಿ ಮಂಜುಶ್ರೀ, ಐಐಎಂ–ಬಿ ನಿರ್ದೇಶಕ ಪ್ರೊ. ವೆಂಕಟೇಶ್, ಉದ್ಯೋಗ ಮತ್ತು ತರಬೇತಿ ಇಲಾಖೆ ನಿರ್ದೇಶಕಿ ಜ್ಯೋತಿ, ಕೌಶಲ್ಯಾಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಶ್ವಿನ್‌ ಗೌಡ, ಸರ್ಕಾರಿ ತಾಂತ್ರಿಕ ತರಬೇತಿ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕ ರಾಘವೇಂದ್ರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT