ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಷ್ಕರ: ಸಾರಿಗೆ ಸಂಚಾರ ಅಸ್ತವ್ಯಸ್ತ, ಪರ್ಯಾಯ ವ್ಯವಸ್ಥೆಯತ್ತ ಚಿತ್ತ

ಕರ್ತವ್ಯಕ್ಕೆ ಹಾಜರಾಗಲು ಟ್ರೈನಿ ಸಿಬ್ಬಂದಿಗೆ ಸೂಚನೆ
Last Updated 7 ಏಪ್ರಿಲ್ 2021, 19:51 IST
ಅಕ್ಷರ ಗಾತ್ರ

ಬೆಂಗಳೂರು: ಆರನೇ ವೇತನ ಆಯೋಗದ ಶಿಫಾರಸಿನಂತೆ ವೇತನ ಪರಿಷ್ಕರಣೆಗೆ ಪಟ್ಟು ಹಿಡಿದಿರುವ ನಾಲ್ಕು ಸಾರಿಗೆ ನಿಗಮಗಳ ನೌಕರರು ಬುಧವಾರದಿಂದ ಮುಷ್ಕರ ಆರಂಭಿಸಿದ್ದಾರೆ. ಮೊದಲ ದಿನವೇ ಸಾರಿಗೆ ನಿಗಮಗಳ ಬಹುತೇಕ ಬಸ್‌ಗಳು ಸಂಚಾರ ಸ್ಥಗಿತಗೊಳಿಸಿದ ಪರಿಣಾಮ ಸಾರ್ವಜನಿಕರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ.

ರಾಜಧಾನಿಯಲ್ಲಿ ಕೂಲಿ–ಕಾರ್ಮಿಕರು ಹತ್ತಾರು ಕಿಲೋಮೀಟರ್‌ ದೂರವನ್ನು ನಡಿಗೆಯಲ್ಲೇ ಕ್ರಮಿಸುತ್ತಿದ್ದ ದೃಶ್ಯಗಳು ಕಂಡುಬಂದವು. ವಿದ್ಯಾರ್ಥಿಗಳು, ಬಡವರು, ರೋಗಿಗಳು ಬಸ್ಸುಗಳಿಲ್ಲದೇ ಪರದಾಡಿದರು. ಕೆಂಪೇಗೌಡ ಬಸ್‌ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ವೃದ್ಧರೊಬ್ಬರು ಮೃತಪಟ್ಟರು.

ಸಾರಿಗೆ ಸಂಸ್ಥೆಯಲ್ಲಿ ತರಬೇತಿ ಅವಧಿಯಲ್ಲಿರುವ (ಟ್ರೈನಿ) ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗದಿದ್ದರೆ, ಕೆಲಸದಿಂದ ತೆಗೆದು ಹಾಕಲಾಗುವುದು ಎಂದೂ ಸಾರಿಗೆ ಸಂಸ್ಥೆ ಎಚ್ಚರಿಕೆ ನೀಡಿದೆ. ಈ ಸಂಬಂಧ ಎಲ್ಲ ಟ್ರೈನಿಗಳಿಗೆ ಸಾರಿಗೆ ನಿಗಮಗಳು ಬುಧವಾರ ರಾತ್ರಿ ನೋಟಿಸ್‌ ಜಾರಿ ಮಾಡಿವೆ.

ಸಾರ್ವಜನಿಕರ ತೊಂದರೆ ಬಗೆಹರಿಸಲು ಅಧಿಕಾರಿಗಳು ಬೆಳಗ್ಗಿನಿಂದಲೇ ತಿಣುಕಾಡಿದರು. ಹೆಚ್ಚಿನ ಜಿಲ್ಲೆಗಳಲ್ಲಿ ಜಿಲ್ಲೆಯ ಒಳಗಿನ ಸಂಚಾರಕ್ಕೆ ಸಾರಿಗೆ ಇಲಾಖೆಯೇ ಖಾಸಗಿ ಬಸ್‌ಗಳನ್ನು ರಸ್ತೆಗೆ ಇಳಿಸಿದೆ. ರಸ್ತೆ ತೆರಿಗೆ ಪಾವತಿ ವಿನಾಯಿತಿಯನ್ನೂ ನೀಡಿದ ಕಾರಣ ಖಾಸಗಿ ಬಸ್‌ಗಳೂ ಸೇವೆಗೆ ಲಭಿಸಿವೆ. ಇದರಿಂದ ಬಹುತೇಕ ಕಡೆಗಳಲ್ಲಿ ಸ್ಥಳೀಯ ಪ್ರಯಾಣಕ್ಕೆ ಹೆಚ್ಚು ತೊಂದರೆ ಆಗಿಲ್ಲ. ಆದರೆ, ದೂರದ ಊರುಗಳಿಗೆ ತೆರಳಬೇಕಿರುವ ಅಂತರ ಜಿಲ್ಲಾ ಪ್ರಯಾಣಿಕರು ಬಹುತೇಕ ಜಿಲ್ಲೆಗಳಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮುಷ್ಕರ ಮುಂದುವರಿಸುವುದಾಗಿ ಹೋರಾಟದ ನೇತೃತ್ವ ವಹಿಸಿರುವ ಸಾರಿಗೆ ನೌಕರರ ಒಕ್ಕೂಟ ಪ್ರಕಟಿಸಿದೆ. ಪರಿಸ್ಥಿತಿ ನಿಯಂತ್ರಿಸಲು ಸಾರಿಗೆ ನಿಗಮಗಳ ಅಧಿಸೂಚಿತ ಮಾರ್ಗಗಳಲ್ಲೂ ಖಾಸಗಿ ಬಸ್‌ಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ. ಸಾರಿಗೆ ನಿಗಮಗಳ ಬಸ್‌ ನಿಲ್ದಾಣಗಳನ್ನೂ ಖಾಸಗಿ ಬಸ್‌ಗಳ ಬಳಕೆಗೆ ಮುಕ್ತಗೊಳಿಸಿದ್ದು, ಮುಷ್ಕರನಿರತ ನೌಕರರ ವಿರುದ್ಧ ಅಗತ್ಯ ಸೇವೆಗಳ ಕಾಯ್ದೆ (ಎಸ್ಮಾ) ಜಾರಿಯ ಎಚ್ಚರಿಕೆ ರವಾನಿಸಿದೆ.

ಅಲ್ಲದೆ, ಮುಷ್ಕರ ನಿರತ ನೌಕರರ ವೇತನ ಕಡಿತ ಮಾಡುವ ಸಾಧ್ಯತೆಯ ಬಗ್ಗೆ ಸಾರಿಗೆ ಸಂಸ್ಥೆ ಆಡಳಿತ ಪರಿಶೀಲನೆ ನಡೆಸಿದೆ.

ಪ್ರಯಾಣಿಕರ ಪರದಾಟ: ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್‌ಗಳು ರಸ್ತೆಗೆ ಇಳಿಯದ ಕಾರಣ ಜನತೆ ಅಕ್ಷರಶಃ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಬಿಎಂಟಿಸಿಯ 145 ಬಸ್‌ಗಳು ಮಾತ್ರ ಬುಧವಾರ ಬೆರಳೆಣಿಕೆಯಷ್ಟು ಟ್ರಿಪ್ ಸಂಚರಿಸಿವೆ. ಮೆಟ್ರೊ ರೈಲಿನಲ್ಲಿ ಕೋವಿಡ್‌ ಮಾರ್ಗಸೂಚಿಯನ್ನು ಲೆಕ್ಕಿಸದೇ ನೂಕು ನುಗ್ಗಲಿನಲ್ಲಿ ಜನರು ಪ್ರಯಾಣಿಸಿದರು. ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಸ್‌ ಸೇವೆ ಸಂಪೂರ್ಣ ಸ್ಥಗಿತವಾಗಿತ್ತು.

ಆಟೊ ರಿಕ್ಷಾ, ಟ್ಯಾಕ್ಸಿಗಳಿಗೆ ಭಾರೀ ಬೇಡಿಕೆ ಸೃಷ್ಟಿಯಾಗಿತ್ತು. ಬಿಎಂಟಿಸಿ ಮಾರ್ಗಗಳಲ್ಲೂ ಖಾಸಗಿ ಬಸ್‌ಗಳನ್ನು ಓಡಿಸಲು ಸಾರಿಗೆ ಇಲಾಖೆ ಪ್ರಯತ್ನಿಸುತ್ತಿದೆ. ಆದರೆ, ಮೊದಲ ದಿನ ಖಾಸಗಿ ಬಸ್‌ಗಳ ಮಾಲೀಕರಿಂದ ನಿರೀಕ್ಷಿತ ಸ್ಪಂದನೆ ದೊರಕಿಲ್ಲ. ಕೆಲವೆಡೆ ಖಾಸಗಿ ಬಸ್‌ಗಳು ಸಂಚರಿಸಿದರೂ ಬಿಎಂಟಿಸಿ ಟಿಕೆಟ್‌ ದರವನ್ನು ಪಾಲಿಸಿಲ್ಲ ಎಂಬ ದೂರುಗಳಿವೆ.

ಸರ್ಕಾರಿ ಸಾರಿಗೆ ನಿಗಮಗಳ ಬಸ್‌ಗಳ ಸೌಲಭ್ಯ ಹೆಚ್ಚಿನ ಪ್ರಮಾಣದಲ್ಲಿ ಇರುವ ಜಿಲ್ಲೆಗಳಲ್ಲಿ ಮೊದಲ ದಿನವೇ ಸಮಸ್ಯೆ ಗೋಚರಿಸಿದೆ. ಕರಾವಳಿ ಜಿಲ್ಲೆಗಳು ಸೇರಿದಂತೆ ಖಾಸಗಿ ಬಸ್‌ಗಳ ಸೇವೆಯ ಪ್ರಾಬಲ್ಯ ಇರುವ ಜಿಲ್ಲೆಗಳಲ್ಲಿ ಹೆಚ್ಚೇನೂ ತೊಂದರೆ ಎದುರಾಗಿಲ್ಲ.

ವಿದ್ಯಾರ್ಥಿಗಳಿಗೆ ಸಂಕಷ್ಟ: ಸಾರಿಗೆ ನೌಕರರ ಮುಷ್ಕರ ಇರುವುದರಿಂದ ರಾಜ್ಯದ ಕೆಲವು ವಿಶ್ವವಿದ್ಯಾಲಯಗಳು ಮೊದಲೇ ನಿಗದಿಯಾಗಿದ್ದ ಪರೀಕ್ಷೆಗಳನ್ನು ಮುಂದೂಡಿವೆ. ಆದರೆ, ಮೈಸೂರು ವಿಶ್ವವಿದ್ಯಾಲಯ ಬುಧವಾರವೂ ಪರೀಕ್ಷೆಗಳನ್ನು ನಡೆಸಿತು. ಸಕಾಲಕ್ಕೆ ಬಸ್‌ ಸೌಲಭ್ಯ ಇಲ್ಲದೇ ವಿದ್ಯಾರ್ಥಿಗಳು ತೊಂದರೆ ಎದುರಿಸಿದರು. ಬೆಂಗಳೂರು ವಿಶ್ವವಿದ್ಯಾಲಯದ ಮೊದಲ ಮತ್ತು ಮೂರನೇ ವರ್ಷದ ಪದವಿ ತರಗತಿಗಳ ಪರೀಕ್ಷೆಗಳು ಗುರುವಾರದಿಂದ ಆರಂಭವಾಗಲಿವೆ. ಸಾರಿಗೆ ನೌಕರರ ಮುಷ್ಕರವಿದ್ದರೂ ಪರೀಕ್ಷೆಗಳು ನಿಗದಿಯಂತೆ ನಡೆಯಲಿವೆ ಎಂದು ವಿಶ್ವವಿದ್ಯಾಲಯದ ಆಡಳಿತ ಪ್ರಕಟಿಸಿದೆ.

ವಿಶೇಷ ರೈಲು ಸೇವೆಗೆ ಮನವಿ
ಯುಗಾದಿ ಹಬ್ಬದ ನಡುವೆಯೇ ಸಾರಿಗೆ ನೌಕರರು ಮುಷ್ಕರ ಆರಂಭಿಸಿರುವುದರಿಂದ ಸಾರ್ವಜನಿಕರಿಗೆ ನೆರವಾಗಲು ಬೆಂಗಳೂರಿನಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ಏಪ್ರಿಲ್‌ 9 ಮತ್ತು 10ರಂದು ವಿಶೇಷ ರೈಲುಗಳನ್ನು ಓಡಿಸುವಂತೆ ನೈರುತ್ಯ ರೈಲ್ವೆ ಅಧಿಕಾರಿಗಳಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಪತ್ರ ಬರೆದಿದ್ದಾರೆ.

ಬೆಂಗಳೂರಿನಿಂದ ಬೆಳಗಾವಿ, ಕಲಬುರ್ಗಿ, ಕಾರವಾರಕ್ಕೆ ತಲಾ ಎರಡು ಹಾಗೂ ಬೀದರ್‌, ವಿಜಯಪುರ ಮತ್ತು ಶಿವಮೊಗ್ಗಕ್ಕೆ ತಲಾ ಒಂದು ವಿಶೇಷ ರೈಲು ಓಡಿಸುವಂತೆ ಮನವಿ ಮಾಡಿದ್ದಾರೆ. ಬೆಂಗಳೂರು– ಮೈಸೂರು ನಡುವಣ ಇಂಟರ್‌ಸಿಟಿ ರೈಲುಗಳ ಸಂಚಾರವನ್ನೂ ಹೆಚ್ವಿಸುವಂತೆ ಕೋರಿದ್ದಾರೆ.

ರಾಜ್ಯ ಸರ್ಕಾರದ ಮನವಿಗೆ ಸ್ಪಂದಿಸಿರುವ ರೈಲ್ವೆ ಇಲಾಖೆ ಕೆಲವು ವಿಶೇಷ ರೈಲುಗಳನ್ನು ಓಡಿಸಲು ಒಪ್ಪಿಕೊಂಡಿದೆ.

₹ 17 ಕೋಟಿ ನಷ್ಟ?
ಸಾರಿಗೆ ನೌಕರರ ಮುಷ್ಕರದಿಂದ ರಾಜ್ಯ ಸರ್ಕಾರಿ ಸ್ವಾಮ್ಯದ ನಾಲ್ಕು ಸಾರಿಗೆ ನಿಗಮಗಳಿಗೆ ಮೊದಲ ದಿನವೇ ₹ 17 ಕೋಟಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ₹ 7 ಕೋಟಿ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ₹ 3 ಕೋಟಿ ಹಾಗೂ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಮತ್ತು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳಿಗೆ ತಲಾ ₹ 3.5 ಕೋಟಿ ನಷ್ಟವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಪರ್ಯಾಯ ಸಾರಿಗೆ ವ್ಯವಸ್ಥೆಗೆ ಸಿದ್ಧ’
ವೇತನ ಹೆಚ್ಚಳಕ್ಕೆ ಕ್ರಮ ಪ್ರಕ್ರಿಯೆ ಆರಂಭಿಸಿದ್ದರೂ, ಸಾರಿಗೆ ನಿಗಮಗಳ ನೌಕರರು ಕೆಲವರ ಚಿತಾವಣೆಯಿಂದ ಮುಷ್ಕರ ಆರಂಭಿಸಿದ್ದಾರೆ. ಜನರಿಗೆ ತೊಂದರೆಯಾಗುವುದನ್ನು ತಪ್ಪಿಸಲು ಪರ್ಯಾಯ ಸಾರಿಗೆ ವ್ಯವಸ್ಥೆ ಕಲ್ಪಿಸಲು ಸಾರಿಗೆ ಇಲಾಖೆ ಸಿದ್ಧವಾಗಿದೆ ಎಂದು ಸಾರಿಗೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

ಪರವಾನಗಿ ಹಿಂದಿರುಗಿಸಿದ್ದ ಖಾಸಗಿ ಪ್ರಯಾಣಿಕ ವಾಹನಗಳಿಗೆ ತೆರಿಗೆ ವಿನಾಯಿತಿಯೊಂದಿಗೆ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಮುಷ್ಕರದ ಅವಧಿಯಲ್ಲಿ ಸಾರಿಗೆ ಸೌಲಭ್ಯ ಒದಗಿಸುವ ಖಾಸಗಿ ಪ್ರಯಾಣಿಕ ವಾಹನಗಳಿಗೆ ರಹದಾರಿ (ಪರ್ಮಿಟ್‌) ಪಡೆಯುವುದರಿಂದಲೂ ವಿನಾಯಿತಿ ನೀಡಲಾಗಿದೆ. ಖಾಸಗಿ ಬಸ್‌ಗಳು ಸರ್ಕಾರಿ ಬಸ್‌ ನಿಲ್ದಾಣಗಳ ಬಳಕೆಗೂ ಅನುಮತಿ ನೀಡಿ ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ. ಟ್ಯಾಕ್ಸಿ, ಮಿನಿ ಬಸ್‌ ಮತ್ತು ಖಾಸಗಿ ಬಸ್‌ಗಳ ಮಾಲೀಕರ ಸಂಘದೊಂದಿಗೆ ಮಾತುಕತೆ ನಡೆಸಿದ್ದು, ಪರ್ಯಾಯ ಸಾರಿಗೆ ಒದಗಿಸಲು ಮನವಿ ಮಾಡಲಾಗಿದೆ. ಬೆಂಗಳೂರಿನಲ್ಲಿ ಮೆಟ್ರೊ ರೈಲು ಸಂಚಾರ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.

ಮುಷ್ಕರ ಮುಂದವರಿಯಲಿದೆ: ಕೋಡಿಹಳ್ಳಿ ಚಂದ್ರಶೇಖರ್‌
ಸಾರಿಗೆ ನೌಕರರ ಮುಷ್ಕರ ಗುರುವಾರವೂ ಮುಂದುವರಿಯಲಿದೆ. ಕೋವಿಡ್‌ ಮಾರ್ಗಸೂಚಿಗಳನ್ನು ಪಾಲಿಸಿಕೊಂಡೇ ಹೋರಾಟ ಮುಂದುವರಿಸಲಾಗುವುದು ಎಂದು ಸಾರಿಗೆ ನೌಕರರ ಒಕ್ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಠ, ಮಂದಿರಗಳಿಗೆ ಕೋಟಿಗಟ್ಟಲೆ ಹಣ ನೀಡುವ ಸರ್ಕಾರ, ಸಾರಿಗೆ ನೌಕರರ ವೇತನ ಹೆಚ್ಚಳಕ್ಕೆ ಕೋವಿಡ್‌ ಸಂಕಷ್ಟದ ಕಾರಣ ಹೇಳುತ್ತಿದೆ. ನೌಕರರಿಗೆ ಮಾರ್ಚ್‌ ತಿಂಗಳ ವೇತನವನ್ನೂ ನೀಡಿಲ್ಲ. ಬೇಡಿಕೆ ಈಡೇರುವವರೆಗೂ ಹೋರಾಟ ಮುಂದುವರಿಯಲಿದೆ’ ಎಂದರು.

ಮಾತುಕತೆಗೆ ಆಗ್ರಹ: ರಾಜ್ಯ ಸರ್ಕಾರ ನೌಕರರನ್ನು ತಕ್ಷಣವೇ ಮಾತುಕತೆಗೆ ಆಹ್ವಾನಿಸಿ, ಸಮಸ್ಯೆ ಇತ್ಯರ್ಥಪಡಿಸಬೇಕು ಎಂದು ಕೆಎಸ್‌ಆರ್‌ಟಿಸಿ ಸ್ಟಾಫ್‌ ಅಂಡ್‌ ವರ್ಕರ್ಸ್‌ ಫೆಡರೇಷನ್‌ ಅಧ್ಯಕ್ಷ ಎಚ್‌.ವಿ. ಅನಂತ ಸುಬ್ಬರಾವ್‌ ಒತ್ತಾಯಿಸಿದ್ದಾರೆ.

*
ಸಾರಿಗೆ ನೌಕರರ ವೇತನ ಹೆಚ್ಚಳಕ್ಕೆ ಪ್ರಕ್ರಿಯೆ ಆರಂಭಿಸಲಾಗಿದೆ. ಚುನಾವಣಾ ಆಯೋಗ ಅನುಮತಿ ನೀಡಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
-ಲಕ್ಷ್ಮಣ ಸವದಿ, ಉಪ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT