ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸುವಂತೆ ಆಗ್ರಹಿಸಿ ಕುರುಬರ ಶಕ್ತಿ ಪ್ರದರ್ಶನ

ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸುವಂತೆ ಆಗ್ರಹ
Last Updated 7 ಫೆಬ್ರುವರಿ 2021, 21:34 IST
ಅಕ್ಷರ ಗಾತ್ರ

ಬೆಂಗಳೂರು: ಕುರುಬ ಸಮುದಾಯ ವನ್ನು ಪರಿಶಿಷ್ಟ ಪಂಗಡಗಳ (ಎಸ್‌.ಟಿ) ಪಟ್ಟಿಗೆ ಸೇರಿಸುವಂತೆ ಆಗ್ರಹಿಸಿ ಕಾಗಿನೆಲೆಯ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಭಾನುವಾರ ನಡೆದ ಸಮಾವೇಶ ಕುರುಬರ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಯಿತು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸಂಪುಟದ ಮೂವರು ಸಚಿವರು ಸೇರಿ ಹಲವು ಜನ ಪ್ರತಿನಿಧಿಗಳು ಸಮಾವೇಶದಲ್ಲಿ ಪಾಲ್ಗೊಂಡು, ಕುರುಬರನ್ನು ಎಸ್‌.ಟಿ ಪಟ್ಟಿಗೆ ಸೇರಿಸಲು ಶಿಫಾರಸು ಮಾಡು ವಂತೆ ಒಕ್ಕೊರಲಿನಿಂದ ಆಗ್ರಹಿಸಿದರು.

ಕುರುಬರನ್ನು ಎಸ್‌.ಟಿ ಪಟ್ಟಿಗೆ ಸೇರಿಸುವಂತೆ ಆಗ್ರಹಿಸಿ ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಜನವರಿ 15 ರಂದು ಕಾಗಿನೆಲೆಯಿಂದ ಆರಂಭವಾಗಿದ್ದ ಪಾದಯಾತ್ರೆ ಮಾದಾವರದ ಬೆಂಗಳೂರು ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ(ಬಿಐಇಸಿ) ಮೈದಾನದಲ್ಲಿ ಬೃಹತ್‌ ಸಮಾವೇಶದೊಂದಿಗೆ ಅಂತ್ಯಗೊಂಡಿತು. ರಾಜ್ಯದ ಮೂಲೆ ಮೂಲೆಯಿಂದ ಬಂದಿದ್ದ ಸಮುದಾಯದ ಲಕ್ಷಾಂತರ ಜನರು, ಕುರುಬರನ್ನು ಎಸ್‌.ಟಿ ಪಟ್ಟಿಗೆ ಸೇರಿಸಬೇಕೆಂಬ ಬೇಡಿಕೆಯ ಪರವಾಗಿ ದನಿ ಮೊಳಗಿಸಿದರು.

ಸಮಾವೇಶದುದ್ದಕ್ಕೂ ಮಾತ ನಾಡಿದ ಮಠಾಧೀಶರು, ಸಚಿವರು, ಶಾಸಕರು, ಸಮುದಾಯದ ಮುಖಂಡರು, ‘ಕುರುಬರನ್ನು ಹೊಸದಾಗಿ ಎಸ್‌.ಟಿ ಪಟ್ಟಿಗೆ ಸೇರಿಸುವಂತೆ ಕೇಳುತ್ತಿಲ್ಲ. ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮ ಸಮುದಾಯ ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿತ್ತು. ಈಗಲೂ ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಕುರುಬರಿಗೆ ಎಸ್‌.ಟಿ ಸ್ಥಾನಮಾನ ಇದೆ. ಅದನ್ನು ರಾಜ್ಯದಾದ್ಯಂತ ವಿಸ್ತರಿಸುವಂತೆ ಕೇಳುತ್ತಿದ್ದೇವೆ’ ಎಂದರು.

ಶಿಫಾರಸಿಗೆ ಆಗ್ರಹ

‘ಯಡಿಯೂರಪ್ಪ ಅವರು ಕುರುಬ ಸಮುದಾಯ ವನ್ನು ಪ್ರೀತಿಸುತ್ತಾರೆ. ಈ ಕಾರಣಕ್ಕಾಗಿಯೇ ನಮ್ಮ ಸಮುದಾಯದವರೂ ಸೇರಿದಂತೆ 17 ಮಂದಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅವರ ನಾಯಕತ್ವವನ್ನು ಬೆಂಬಲಿಸಿ ದರು. ಈಗ ಅವರು ಕೊಡುವ ಸ್ಥಾನ ದಲ್ಲಿದ್ದಾರೆ. ನಾವು ಬೇಡುವ ಸ್ಥಾನ ದಲ್ಲಿದ್ದೇವೆ. ನಾವು ಬೇರೆ ಸ್ವಾಮೀಜಿಗಳಂತೆ ಮುಖ್ಯಮಂತ್ರಿಯನ್ನು ಬ್ಲ್ಯಾಕ್‌ಮೇಲ್‌ ಮಾಡುವುದಿಲ್ಲ. ಕುಲಶಾಸ್ತ್ರೀಯ ಅಧ್ಯಯನವನ್ನು ಬೇಗ ಮುಗಿಸಿ ಕುರುಬರನ್ನು ಎಸ್‌.ಟಿ ಪಟ್ಟಿಗೆ ಸೇರಿಸುವಂತೆ ಶಿಫಾರಸು ಮಾಡಲು ಯಡಿಯೂರಪ್ಪಅವರನ್ನು ಆಗ್ರಹಿಸು ತ್ತೇನೆ’ ಎಂದು ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.

ಯಡಿಯೂರಪ್ಪ ಅವರು ಕನಕದಾಸ ಜಯಂತಿಗೆ ಸರ್ಕಾರಿ ರಜೆ ಘೋಷಣೆ ಮತ್ತು ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರಕ್ಕೆ ₹ 40 ಕೋಟಿ ಅನುದಾನ ನೀಡಿದ್ದರು. ಈ ಎರಡೂ ಉಪ್ಪಿನಕಾಯಿ ಇದ್ದಂತೆ. ಈಗ ಕುರುಬರು ‘ಎಸ್‌.ಟಿ ಸ್ಥಾನಮಾನ’ ಎಂಬ ಊಟ ಕೇಳುತ್ತಿದ್ದಾರೆ. ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದರೆ, ಪ್ರಧಾನಿ ಮೋದಿ ಮತ್ತು ಕೇಂದ್ರ ಸಚಿವ ಅಮಿತ್‌ ಶಾ ಅವರನ್ನು ಮನವೊಲಿಸುವುದು ತಮ್ಮ ಜವಾಬ್ದಾರಿ ಎಂದರು.

ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿ, ‘ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸುವಂತೆ ಒಕ್ಕೊರಲಿನ ಬೇಡಿಕೆ ಮಂಡಿಸುತ್ತಿದ್ದೇವೆ’ ಎಂದು ಹಿಂದಿಯಲ್ಲಿ ಪ್ರಧಾನಿಗೆ ಬರೆದ ಪತ್ರವನ್ನು ಓದಿದರು.

ಈಗ ಧ್ವನಿ ಸಿಕ್ಕಿದೆ

ಸಚಿವ ಕೆ.ಎಸ್‌. ಈಶ್ವರಪ್ಪ ಮಾತನಾಡಿ, ‘ಕೇಂದ್ರ ಮತ್ತು ರಾಜ್ಯ ಎರಡೂ ಕಡೆ ಬಿಜೆಪಿ ಸರ್ಕಾರಗಳೇ ಇವೆ. ಮತ್ತೇಕೆ ಈ ಹೋರಾಟ ಎಂದು ಕೆಲ
ವರು ಪ್ರಶ್ನಿಸುತ್ತಿದ್ದಾರೆ. ಹಿಂದೆ ಹಲವು ವರ್ಷಗಳ ಕಾಲ ಎರಡೂ ಕಡೆ ಕಾಂಗ್ರೆಸ್‌ ಸರ್ಕಾರವೇ ಇತ್ತು. ಆದರೆ, ಆಗ ನಮ್ಮ ಸಮುದಾಯವನ್ನು ಎಚ್ಚರಿ ಸುವ ಸ್ವಾಮೀಜಿ ಇರಲಿಲ್ಲ. ಈಗ ಮಾರ್ಗ ದರ್ಶನಕ್ಕೆ ಸ್ವಾಮೀಜಿ ಇದ್ದಾರೆ. ಅವರ ನೇತೃತ್ವದಲ್ಲಿ ಎಸ್‌.ಟಿ ಮೀಸಲಾತಿಯ ಹೋರಾಟ ಆರಂಭವಾಗಿದೆ’ ಎಂದರು.

ಸಚಿವರಾದ ಎಂ.ಟಿ.ಬಿ. ನಾಗರಾಜ್, ಆರ್‌. ಶಂಕರ್‌, ಶಾಸಕ ಬಂಡೆಪ್ಪ ಕಾಶೆಂಪುರ, ವಿಧಾನ ಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌, ಮಾಜಿ ಸಚಿವರಾದ ವಿಜಯಶಂಕರ್‌, ಎಚ್‌.ಎಂ. ರೇವಣ್ಣ ಸೇರಿದಂತೆ ಹಲವರು ಸಮುದಾಯದ ಬೇಡಿಕೆ ಬೆಂಬಲಿಸಿ ಮಾತನಾಡಿದರು.

ಮನವಿ ಸ್ವೀಕರಿಸಿದ ಆರ್‌. ಅಶೋಕ

ಕಂದಾಯ ಸಚಿವ ಆರ್‌. ಅಶೋಕ ಅವರು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಪರವಾಗಿ ಕುರುಬರ ಎಸ್.ಟಿ ಹೋರಾಟ ಸಮಿತಿಯ ಪದಾಧಿಕಾರಿಗಳು ಮತ್ತು ಮಠಾಧೀಶರಿಂದ ಮನವಿ ಸ್ವೀಕರಿಸಿದರು. ಸಮಾವೇಶದ ಕುರಿತು ಮುಖ್ಯಮಂತ್ರಿಯವರಿಗೆ ಸಮಗ್ರ ಮಾಹಿತಿ ನೀಡುವುದಾಗಿ ತಿಳಿಸಿದರು.

‘ಕುರುಬರ ಸುನಾಮಿ ಬಂದಿದೆ ಎಂದು ಮುಖ್ಯಮಂತ್ರಿಯವರಿಗೆ ತಿಳಿಸಿ. ರಾಜ್ಯದ ಎಲ್ಲ ಕುರುಬರಿಗೂ ಎಸ್‌.ಟಿ ಮೀಸಲಾತಿಯ ಸೌಲಭ್ಯ ದೊರಕುವುದಕ್ಕೆ ಪೂರಕವಾಗಿ ಕೆಲಸ ಮಾಡುವಂತೆ ಮುಖ್ಯಮಂತ್ರಿಯವರ ಮನವೊಲಿಸಿ’ ಎಂದು ನಿರಂಜನಾನಂದಪುರಿ ಸ್ವಾಮೀಜಿ ಕಂದಾಯ ಸಚಿವರಿಗೆ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT