ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರುಬರ ಪಾದಯಾತ್ರೆ ಸಮಾರೋಪಕ್ಕೆ ಸಿದ್ಧತೆ: ವೇದಿಕೆ ನಿರ್ಮಾಣಕ್ಕೆ ಭೂಮಿ ಪೂಜೆ

ಕುರುಬರ ಪಾದಯಾತ್ರೆ ಸಮಾರೋಪಕ್ಕೆ ಸಿದ್ಧತೆ
Last Updated 28 ಜನವರಿ 2021, 17:08 IST
ಅಕ್ಷರ ಗಾತ್ರ

ಬೆಂಗಳೂರು: ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಗಳ (ಎಸ್‌.ಟಿ) ಪಟ್ಟಿಗೆ ಸೇರಿಸುವಂತೆ ಆಗ್ರಹಿಸಿ ನಡೆಯುತ್ತಿರುವ ಪಾದಯಾತ್ರೆಯ ಸಮಾರೋಪ ಸಮಾರಂಭ ತುಮಕೂರು ರಸ್ತೆಯ ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರ(ಬಿಐಇಸಿ)ದ ಸಮೀಪದಲ್ಲಿ ನಡೆಯಲಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ಅವರು ವೇದಿಕೆ ನಿರ್ಮಾಣಕ್ಕೆ ಗುರುವಾರ ಭೂಮಿಪೂಜೆ ನೆರವೇರಿಸಿದರು.

ಕಾಗಿನೆಲೆ ಕನಕ ಗುರುಪೀಠದಿಂದ ಆರಂಭವಾಗಿರುವ ಪಾದಯಾತ್ರೆ ಫೆಬ್ರುವರಿ 7ರಂದು ಬೆಂಗಳೂರಿನಲ್ಲಿ ಸಮಾರೋಪಗೊಳ್ಳಲಿದೆ. ಇದಕ್ಕಾಗಿ ಮಾದಾವರದ ಬಿಐಇಸಿ ಸಮೀಪದಲ್ಲಿ ಬೃಹತ್‌ ವೇದಿಕೆ ನಿರ್ಮಿಸಲಾಗುತ್ತಿದೆ. ಸಮಾರೋಪ ಸಮಾರಂಭದಲ್ಲಿ ಸಾವಿರಾರು ಜನರು ಭಾಗವಹಿಸುವ ಸಾಧ್ಯತೆ ಇದ್ದು, ಗುರುವಾರದಿಂದಲೇ ಸಿದ್ಧತೆಗಳನ್ನು ಆರಂಭಿಸಲಾಗಿದೆ.

ರಾಜ್ಯ ಕುರುಬರ ಎಸ್‌.ಟಿ. ಹೋರಾಟ ಸಮಿತಿ ಅಧ್ಯಕ್ಷ ಕೆ. ವಿರೂಪಾಕ್ಷಪ್ಪ, ಪ್ರಧಾನ ಕಾರ್ಯದರ್ಶಿ ಆನೇಕಲ್‌ ದೊಡ್ಡಯ್ಯ, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಮಾಜಿ ಸದಸ್ಯ ಬಿ.ಎಸ್‌. ಸೋಮಶೇಖರ್‌, ಕುರುಬರ ಸಂಘದ ಮಾಜಿ ಅಧ್ಯಕ್ಷ ಲಿಂಗಪ್ಪ, ಮುಖಂಡರಾದ ಯಲಹಂಕ ಮುನಿರಾಜು, ಚಿತ್ರದುರ್ಗ ಮಂಜುನಾಥ್‌ ಭೂಮಿಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಶಿರಾ: ಪಾದಯಾತ್ರೆಗೆ ಭವ್ಯ ಸ್ವಾಗತ

ಶಿರಾ: ಕುರುಬ ಜನಾಂಗಕ್ಕೆ ಪರಿಶಿಷ್ಟ ಪಂಗಡದ ಮೀಸಲಾತಿ ನೀಡುವಂತೆ ಒತ್ತಾಯಿಸಿ ಆರಂಭವಾಗಿರುವ ಬೃಹತ್ ಪಾದಯಾತ್ರೆ ಗುರುವಾರ ತುಮಕೂರು ಜಿಲ್ಲೆ ಪ್ರವೇಶಿಸಿತು. ಕುರುಬ ಸಮಾಜದ ಮುಖಂಡರು ಪಾದಯಾತ್ರೆಗೆ ಭವ್ಯ ಸ್ವಾಗತ ನೀಡಿ ಬರಮಾಡಿಕೊಂಡರು.

ಕಾಗಿನೆಲೆ ಕನಕಗುರು ಪೀಠದ ನಿರಂಜನಾನಂದ ಪುರಿ ಸ್ವಾಮೀಜಿ ನೇತೃತ್ವದಲ್ಲಿ ಜ. 15ರಿಂದ ಆರಂಭವಾದ ಪಾದಯಾತ್ರೆ ಗುರುವಾರ 14ನೇ ದಿನಕ್ಕೆ ಕಾಲಿಟ್ಟಿದೆ.

ಚಿತ್ರದುರ್ಗ ಜಿಲ್ಲೆಯ ಜವಗೊಂಡನಹಳ್ಳಿಯಿಂದ ಹೊರಟು ಶಿರಾ ತಾಲ್ಲೂಕು ಉಜ್ಜನಕುಂಟೆ ಮೂಲಕ ತುಮಕೂರು ಜಿಲ್ಲೆ ಪ್ರವೇಶಿಸಿದ ಪಾದಯಾತ್ರೆಗೆ ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು.ಚಿಕ್ಕನಾಯಕನಹಳ್ಳಿ, ಶಿರಾ ತಾಲ್ಲೂಕಿನ ಕುರುಬ ಸಮುದಾಯದವರ ಜತೆಗೆ ಕೊಡಗು, ಮೈಸೂರು ಜಿಲ್ಲೆ ಹಾಗೂ ಬಸವನಬಾಗೇವಾಡಿ ತಾಲ್ಲೂಕಿನಿಂದ ಬಂದವರು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು.

ಕಲಾ ತಂಡ: ಪಾದಯಾತ್ರೆಯಲ್ಲಿ ಡೊಳ್ಳು ಕುಣಿತ, ಕಹಳೆ, ಕೈಯಲ್ಲಿ ಡಮರುಘ ಹಿಡಿದ ಗೊರವಯ್ಯನ ಕುಣಿತ, ವೀರಗಾಸೆ ಪ್ರದರ್ಶನ ಗಮನ ಸೆಳೆಯಿತು. ‘ಕುರುಬರು ನಾವು ಕುರುಬರು’ ಗೀತೆ ಯುವಕರಲ್ಲಿ ಹೊಸ ಚೈತನ್ಯ ಮೂಡಿಸಿ ಕುಣಿದು ನಲಿಯುವಂತೆ ಮಾಡಿತು.

ಜನ ಜಾಗೃತಿ ಸಭೆ: ತಾವರೆಕೆರೆ ಗ್ರಾಮದಲ್ಲಿ ನಡೆದ ಜನಜಾಗೃತಿ ಸಭೆಯಲ್ಲಿ ಮಾತನಾಡಿದ ನಿರಂಜನಾನಂದ ಪುರಿ ಸ್ವಾಮೀಜಿ ‘ನಾವು ಯಾರನ್ನೋ ನಾಯಕರನ್ನಾಗಿ ಮಾಡಲು ಹೋರಾಟ ನಡೆಸುತ್ತಿಲ್ಲ. ಇದು ಯಾರ ವಿರುದ್ಧದ ಹೋರಾಟವೂ ಅಲ್ಲ. ಜನಾಂಗಕ್ಕೆ ಅನುಕೂಲ ಮಾಡಿಕೊಡಲು ಹೋರಾಟ ಮಾಡುತ್ತಿದ್ದೇವೆ’ ಎಂದು ಹೇಳಿದರು.

ಜನಜಾಗೃತಿ ಸಭೆಯ ನಂತರ ಪಾದಯಾತ್ರೆಯು ಶಿರಾ ನಗರಕ್ಕೆ ಬಂದು ತಲುಪಿತು. ನಗರದಲ್ಲಿ ರಾತ್ರಿ ವಾಸ್ಯವ್ಯ ಹೂಡಿ ಶುಕ್ರವಾರ ಬೆಳಗ್ಗೆ ಮುಂದುವರೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT