ಸೋಮವಾರ, ಸೆಪ್ಟೆಂಬರ್ 20, 2021
22 °C

ಕುಶಾಲನಗರ: ದುರ್ಷ್ಕಮಿಗಳಿಂದ ಯುವಕರ ಮೇಲೆ ಮಾರಣಾಂತಿಕ ಹಲ್ಲೆ; ಆಸ್ಪತ್ರೆಗೆ ದಾಖಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಶಾಲನಗರ: ಕಾರಿನಲ್ಲಿ ಬಂದ ದುರ್ಷ್ಕಮಿಗಳ ಗುಂಪೊಂದು ಭಾನುವಾರ ಮಧ್ಯರಾತ್ರಿ ಬೈಕ್‌ಗೆ ಡಿಕ್ಕಿ ಪಡಿಸಿ ನಂತರ ಸವಾರರ ಮೇಲೆ ಕತ್ತಿಯಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿ ಸೀನಿಮಿಯ ರೀತಿಯಲ್ಲಿ ಪರಾರಿಯಾಗಿದ್ದಾರೆ.

ಮುಳ್ಳುಸೋಗೆ ಗ್ರಾಮದ ಸಾಗರ್ ಹಲ್ಲೆಗೆ ಒಳಗಾಗಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಚೇತನ್ ಎಂಬಾತ ಸಣ್ಣ ಪುಟ್ಟ ಗಾಯಗೊಳೊಂದಿಗೆ ಪಾರಾಗಿದ್ದಾರೆ. ಇಬ್ಬರನ್ನು ಮೈಸೂರಿನ‌ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ‌ ದಾಖಲಿಸಲಾಗಿದ್ದು, ಸಾಗರ್ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಅಪಘಾತ ಹಾಗೂ ಹಲ್ಲೆ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು,ಆರೋಪಿಗಳ ಪತ್ತೆಗೆ ಇದು ಅನುಕೂಲವಾಗಿದೆ.

ಘಟನೆಯ ವಿವರ: ಭಾನುವಾರ ಮಧ್ಯರಾತ್ರಿ ಕೊಪ್ಪ ಕಡೆಯಿಂದ ಮಾರುಕಟ್ಟೆ ರಸ್ತೆಯ ಮೂಲಕ ವೇಗವಾಗಿ ಬಂದ ಕಾರೊಂದಲ್ಲಿ ಬಂದ ದುರ್ಷ್ಕಮಿಗಳು ಎದುರುಗಡೆಯಿಂದ‌ ಬರುತ್ತಿದ್ದ ಬೈಕ್ ಗೆ ಮಾರುಕಟ್ಟೆ ರಸ್ತೆಯ ಅಂಕನಾರ್ಥೇಶ್ವರ ಇಂಜಿನಿಯರಿಂಗ್ ವರ್ಕ್ಸ್ ಮುಂಭಾಗ ಡಿಕ್ಕಿ ಪಡಿಸಿದ್ದಾರೆ.ಬೈಕ್ ನಿಂದ ಕೆಳಗೆ ಬಿದ್ದ ಇಬ್ಬರು ಯುವಕರ ಮೇಲೆ ಕಾರಿನಿಂದ ಕೆಳಗಿಳಿದ ವ್ಯಕ್ತಿಯೊಬ್ಬ ಕತ್ತಿಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ನಂತರ ಕಾರಿನಲ್ಲಿದ್ದ ಮೂವರು ಕಾರನ್ನು ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ.

ಹಲ್ಲೆಗೆ ಒಳಗಾದ ಸಾಗರನ ಮುಖ, ಕುತ್ತಿಗೆ ,ಎದೆ ಭಾಗಕ್ಕೆ ತೀವ್ರವಾಗಿ ಗಾಯವಾಗಿದ್ದು,ರಕ್ತದ ಮಡುವಿನಲ್ಲಿ ಒದ್ದಾಡಿ ಬಿದ್ದಿದ್ದಾನೆ. ಆತನ ಸ್ನೇಹಿತ ಚೇತನ್ ಕೂಡ ಡಿಕ್ಕಿಯಿಂದ ಗಾಯಗೊಂಡಿದ್ದಾನೆ. ಜೋರಾದ ಶಬ್ದ ಕೇಳಿ ಮನೆಯಿಂದ ಹೊರಗೆ ಬಂದ  ಎಂಜಿನಿಯರಿಂಗ್ ವರ್ಕ್ಸ್ ಮಾಲೀಕ ಸುರೇಶ್, ತಕ್ಷಣ ಪೊಲೀಸರು ಹಾಗೂ ಆಂಬುಲೆನ್ಸ್‌ಗೆ ಮಾಹಿತಿ ನೀಡಿದೆ ಎಂದು ತಿಳಿಸಿದರು. ಸ್ಥಳಕ್ಕೆ ಬಂದ ಪೊಲೀಸರು ಇಬ್ಬರನ್ನೂ ಮೈಸೂರು ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ.

ಹಳೆಯ ದ್ವೇಷ: ಕಳೆದ ಕೆಲವು ದಿನಗಳ ಹಿಂದೆ ಸಾಗರ್‌ನಿಂದ ಚಾಕು ಇರಿತಕ್ಕೆ ಒಳಗಾಗಿದ್ದ ಯುವಕ ಹಾಗೂ ಆತನ ಸ್ನೇಹಿತರು ಸೇರಿ ಹಳೆ ದ್ವೇಷ ಸಾಧನೆಗೊಸ್ಕರ ಈ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಸ್ಥಳಕ್ಕೆ ಡಿವೈಎಸ್ಪಿ ಶೈಲೇಂದ್ರ,ವೃತ್ತ ನಿರೀಕ್ಷಕ ಮಹೇಶ್, ಠಾಣಾಧಿಕಾರಿ ಚಂದ್ರಶೇಖರ್, ಎಎಸ್ಐ ಎಚ್.ಟಿ.ಗೀತಾ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಿಸಿಟಿವಿ ಡಿಸ್ಕ್ ಹಾಗೂ ಕಾರನ್ನು ವಶಕ್ಕೆ ತೆಗೆದುಕೊಂಡು ತನಿಖೆ ಮುಂದುವರೆಸಿದ್ದಾರೆ. ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಪೊಲೀಸರು ಪ್ರತ್ಯೇಕ ತಂಡ ರಚಿಸಿ ಕಾರ್ಯಾಚರಣೆ ಕೈಗೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.